ಬಂಗುಡೆ ಮೀನಿನ ರವಾ ಪ್ರೈ

ಸೌಜನ್ಯ ದೀರಜ್.

ಬೇಕಾಗುವ ಸಾಮಗ್ರಿಗಳು

  • ಬಂಗುಡೆ ಮೀನು – 1/2 ಕೆಜಿ
  • ನಿಂಬೆರಸ – 1 ಚಮಚ
  • ಕರಿಮೆಣಸಿನ ಪುಡಿ – 1/2 ಚಮಚ
  • ಅರಿಶಿಣ ಪುಡಿ – 1/2 ಚಮಚ
  • ಕೆಂಪು ಮೆಣಸಿನಕಾಯಿ ಪುಡಿ – 2 ಚಮಚ
  • ಶುಂಟಿ-ಬೆಳ್ಳುಳ್ಳಿ ಮಿಶ್ರಣ – 1 ಚಮಚ
  • ರವೆ – 3 ಟೇಬಲ್ ಸ್ಪೂನ್
  • ಎಣ್ಣೆ – 2 ಟೇಬಲ್ ಸ್ಪೂನ್
  • ಉಪ್ಪು – ರುಚಿಗೆ ತಕ್ಕಶ್ಟು

ತಯಾರಿಸುವ ಬಗೆ

ಮೊದಲು ಬಂಗುಡೆ ಮೀನನ್ನು ಸರಿಯಾಗಿ ತೊಳೆದುಕೊಳ್ಳಿ. ಹೊಟ್ಟೆಯ ಒಳಬಾಗವನ್ನು ಸ್ವಚ್ಚಗೊಳಿಸಿದ ನಂತರ ಅದನ್ನು ಇನ್ನೊಮ್ಮೆ ಚೆನ್ನಾಗಿ ತೊಳೆದುಕೊಳ್ಳಿ. ಮೀನಿಗೆ ರುಚಿಗೆ ತಕ್ಕಶ್ಟು ಉಪ್ಪು, 1 ಚಮಚ ನಿಂಬೆ ರಸ ಅತವಾ ವಿನೆಗರ್, 1/2 ಚಮಚ ಕರಿಮೆಣಸಿನ ಪುಡಿ, 1/2 ಚಮಚ ಅರಿಶಿನ ಪುಡಿ, 2 ಚಮಚ ಕೆಂಪು ಮೆಣಸಿನಕಾಯಿ ಪುಡಿಯನ್ನು ಹಾಕಿ, ಅದಕ್ಕೆ 1 ಚಮಚ ಶುಂಟಿ-ಬೆಳ್ಳುಳ್ಳಿ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ. ಇದನ್ನು ಅರ‍್ದ ಗಂಟೆಗಳ ಕಾಲ ಹಾಗೆಯೇ ಇಡಿ.

ಒಂದು ಅಗಲವಾದ ಪಾತ್ರೆಗೆ 3 ಟೇಬಲ್ ಸ್ಪೂನ್ ಸಣ್ಣ ರವೆಯನ್ನು ಹಾಕಿ ಅದರಲ್ಲಿ ಅರ‍್ದ ಚಮಚದಶ್ಟು ಕೆಂಪು ಮೆಣಸಿನ ಹುಡಿಯನ್ನು ಸೇರಿಸಿ, ಕಲಸಿ, ನಂತರ ಒಂದೊಂದೇ ಮೀನನ್ನು ಆ ರವೆಯ ಮಿಶ್ರಣದಲ್ಲಿ ಅದ್ದಿ, ಹಾಗೆಯೇ ಪ್ರತಿಯೊಂದು ಮೀನಿಗೆ ರವೆಯ ಮಿಶ್ರಣವನ್ನು ಹಚ್ಚಿಟ್ಟುಕೊಳ್ಳಿ. ಒಂದು ಬಾಣಲೆಗೆ 2 ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿ, ಎಣ್ಣೆ ಬಿಸಿಯಾದ ನಂತರ, ಅದರಲ್ಲಿ ಜಜ್ಜಿದ ಬೆಳ್ಳುಳ್ಳಿ ಹಾಗೂ ಕರಿಬೇವಿನ ಸೊಪ್ಪನ್ನು ಹಾಕಿ, ಒಂದೊಂದಾಗಿ ಮೀನನ್ನು ಬಾಣಲೆಯಲ್ಲಿ ಜೋಡಿಸಿಡಿ. 2 ನಿಮಿಶಗಳ ಕಾಲ ಕರಿಯಿರಿ, ನಂತರ ಇನ್ನೊಂದು ಬದಿಗೆ ತಿರುವಿ, 2 ನಿಮಿಶ ಕರಿಯಿರಿ, ಈಗ ಬಂಗುಡೆ ಮೀನೀನ ರವಾ ಪ್ರೈ ಸವಿಯಲು ಸಿದ್ದ.

(ಚಿತ್ರ ಸೆಲೆ: flickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: