ಅಂಬಿಗರ ಚೌಡಯ್ಯನ ವಚನ ಓದು – 5ನೆಯ ಕಂತು
– ಸಿ.ಪಿ.ನಾಗರಾಜ.
ಮಾತುಗಂಟಿತನದಿಂದ ಎಷ್ಟು ಮಾತನಾಡಿದಡೇನು
ಕಾಮಿನಿಯರ ಕಾಲದೆಸೆ ಸಿಕ್ಕಿ
ಕ್ರೋಧದ ದಳ್ಳುರಿಯಲ್ಲಿ ಬೆಂದು
ಆಸೆಯೆಂಬ ಪಾಶ ಕೊರಳಲ್ಲಿ ಸುತ್ತಿ
ಅದೇಕೊ ಅದೇತರ ಮಾತು
ಎಂದನಂಬಿಗ ಚೌಡಯ್ಯ.
ತನ್ನ ನಿತ್ಯ ಜೀವನದ ಅಂತರಂಗದಲ್ಲಿ ನೀಚತನದಿಂದ ಬಾಳುತ್ತಿರುವ ಯಾವುದೇ ಒಬ್ಬ ವ್ಯಕ್ತಿಯು ತನ್ನ ಬಹಿರಂಗದ ಬದುಕಿನ ವ್ಯವಹಾರಗಳಲ್ಲಿ ಅನಗತ್ಯವಾದ ಮಾತುಗಳನ್ನು ಒಂದೇ ಸಮನೆ ಆಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
(ಮಾತುಗಂಟಿ+ತನ+ಇಂದ; ಮಾತುಗಂಟಿ=ಅತಿಯಾಗಿ ಮಾತನಾಡುವ ವ್ಯಕ್ತಿ/ಹರಟೆಮಲ್ಲ; ಮಾತುಗಂಟಿತನ=ಯಾವುದೇ ಒಂದು ಮಾತಿನ ಸನ್ನಿವೇಶದಲ್ಲಿ ಆಡಬೇಕಾದ ಮಾತುಗಳನ್ನಾಡದೆ, ಅಗತ್ಯವಿಲ್ಲದ ಮಾತುಗಳನ್ನು ಎಡೆಬಿಡದೆ ಆಡುತ್ತಲೇ ಇರುವುದು; ಮಾತನ್+ಆಡಿದಡೆ+ಏನು; ಆಡಿದಡೆ=ಆಡಿದರೆ; ಮಾತುಗಂಟಿತನದಿಂದ ಎಷ್ಟು ಮಾತನಾಡಿದಡೇನು=ಕೆಲಸಕ್ಕೆ ಬಾರದ ಮಾತುಗಳನ್ನು ಒಂದೇ ಸಮನೆ ಆಡುವುದರಿಂದ ಯಾವುದೇ ರೀತಿಯಿಂದಲೂ ಯಾರಿಗೂ ಒಳ್ಳೆಯದಾಗುವುದಿಲ್ಲ;
ಕಾಮಿನಿ=ಹೆಣ್ಣು; ಕಾಲದೆಸೆ=ಪಾದದ ಎಡೆಯಲ್ಲಿ; ಸಿಕ್ಕಿ=ಸಿಲುಕಿ; ಕಾಮಿನಿಯರ ಕಾಲದೆಸೆ ಸಿಕ್ಕಿ=ಹೆಣ್ಣುಗಳ ಸಂಗಡ ಕಾಮದ ನಂಟನ್ನು ಹೊಂದಿ;
ಕ್ರೋಧ=ಸಿಟ್ಟು/ಕೋಪ; ದಳ್ಳುರಿ=ದಗದಗನೆ ದೊಡ್ಡ ದೊಡ್ಡ ಪ್ರಮಾಣದಲ್ಲಿ ಹತ್ತಿ ಉರಿಯುತ್ತಿರುವ ಬೆಂಕಿ; ಬೆಂದು=ಸುಟ್ಟು; ಕ್ರೋಧದ ದಳ್ಳುರಿಯಲ್ಲಿ ಬೆಂದು=ಇದೊಂದು ರೂಪಕದ ನುಡಿ. ವ್ಯಕ್ತಿಯ ಮಯ್ ಮನದಲ್ಲಿ ಕೆಟ್ಟ ಒಳಮಿಡಿತಗಳು ತುಡಿಯುತ್ತಿರುವುದರಿಂದ, ಆತನು ಇತರರ ಬಗ್ಗೆ ಅಸಹನೆ, ಅಪನಂಬಿಕೆ, ಆಕ್ರೋಶ , ಹಗೆತನ, ಸೇಡಿನ ಕಾರಣಗಳಿಂದಾಗಿ ಕೋಪದಿಂದ ಕೂಡಿರುತ್ತಾನೆ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;
ಆಸೆ+ಎಂಬ; ಪಾಶ=ಹಗ್ಗ/ಕೊರಳಿಗೆ ಬಿಗಿದಿರುವ ನೇಣಿನ ಕುಣಿಕೆ; ಸುತ್ತಿ=ಬಳಸಿಕೊಂಡು; ಆಸೆಯೆಂಬ ಪಾಶ ಕೊರಳಲ್ಲಿ ಸುತ್ತಿ= ಇದು ಒಂದು ರೂಪಕದ ನುಡಿ. ವ್ಯಕ್ತಿಯನ್ನು ಮರಣದಂಡನೆಗೆ ಗುರಿಪಡಿಸಿದಾಗ ಆತನ ಕೊರಳಲ್ಲಿ ಬಿಗಿಯುವ ನೇಣಿನ ಕುಣಿಕೆಯಂತೆ ವ್ಯಕ್ತಿಯ ದುರಂತಕ್ಕೆ ಕಾರಣವಾಗುವಂತಹ ಹತ್ತಾರು ಬಗೆಯ ಕೆಟ್ಟ ಆಸೆಗಳು ಮನದಲ್ಲಿ ಮೂಡುತ್ತಿವೆ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;
ಅದು+ಏಕೊ; ಏಕೆ=ಯಾವ ಕಾರಣಕ್ಕಾಗಿ/ಯಾವ ಉದ್ದೇಶಕ್ಕಾಗಿ; ಅದು+ಏತರ; ಏತರ=ಯಾವುದರ; ಅದೇತರ ಮಾತು=ಯಾವ ಉದ್ದೇಶದಿಂದ ಆಡುತ್ತಿರುವ ಮಾತು;
ಅದೇತರ ಮಾತು=ವ್ಯಕ್ತಿಯು ತನ್ನ ನಿತ್ಯಜೀವನದಲ್ಲಿ ಒಳ್ಳೆಯ ನಡೆನುಡಿಯನ್ನು ಹೊಂದಿರದೆ ಕೇವಲ ಮಾತಿಗೋಸ್ಕರ ಮಾತನ್ನು ಆಡತೊಡಗಿದರೆ, ಅಂತಹ ಮಾತುಗಳಿಗೆ ಯಾವುದೇ ಬೆಲೆಯಿರುವುದಿಲ್ಲ. ಏಕೆಂದರೆ ಅಂತಹ ಮಾತುಗಳು ಯಾವ ರೀತಿಯಿಂದಲೂ ಯಾರಿಗೂ ಉಪಯೋಗವಾಗದ ಪೊಳ್ಳು ಮಾತುಗಳಾಗಿರುತ್ತವೆ; ಎಂದನ್+ಅಂಬಿಗ; ಅಂಬಿಗ=ದೋಣಿಯನ್ನು ನಡೆಸುವ ಕಾಯಕದವನು;
ಕುಟುಂಬದ ನೆಲೆಯಲ್ಲಿ, ದುಡಿಮೆಯ ನೆಲೆಯಲ್ಲಿ ಮತ್ತು ಸಾರ‍್ವಜನಿಕ ನೆಲೆಯಲ್ಲಿ ಕೆಲವು ವ್ಯಕ್ತಿಗಳು ತಾವು ಕೆಟ್ಟತನದಿಂದ ಬಾಳುತ್ತಿದ್ದರೂ ಇತರರ ಮುಂದೆ ಸತ್ಯ ನೀತಿ ನ್ಯಾಯದ ನುಡಿಗಳನ್ನು ಅನಗತ್ಯವಾಗಿ ಒಂದೇ ಸಮನೆ ಆಡುತ್ತಲೇ ಇರುತ್ತಾರೆ. ಅಂತಹ ವ್ಯಕ್ತಿಗಳು ಆಡುವ ಮಾತುಗಳಿಗೆ ಯಾವುದೇ ಬೆಲೆಯಿಲ್ಲವೆಂಬುದನ್ನು ಈ ವಚನ ಸೂಚಿಸುತ್ತಿದೆ.
(ಚಿತ್ರ ಸೆಲೆ: lingayatreligion.com)
ಇತ್ತೀಚಿನ ಅನಿಸಿಕೆಗಳು