ಅಡಿಕೆ ಬೆಳೆ – ಮೊದಲ ತಯಾರಿ

   ಕಂತು-1

– ನಿತಿನ್ ಗೌಡ.

adike

ಹಿಂದಿನ ಕಂತಿನಲ್ಲಿ ಅಡಿಕೆ ಬೆಳೆಯ ಕಿರು ಪರಿಚಯ ಪಡೆದುಕೊಂಡಿದ್ದೆವು. ಈಗ ಅಡಿಕೆ ಗಿಡ ನೆಡುವ ಬಗೆಗಳು, ನೀರಿನ ಏರ‍್ಪಾಡು ಮತ್ತು ಅಡಿಕೆ ತಳಿಗಳ ಬಗೆಗೆ ತಿಳಿಯೋಣ.

ಹಂಕಲಿನಲ್ಲಿ ಅಡಿಕೆ ಗಿಡ ನಡುವ ಒಂದು ಬಗೆ:

ಸಾಮಾನ್ಯವಾಗಿ ಹಂಕಲಿನಲ್ಲಿ ಟ್ರೆಂಚ್ ಹೊಡೆಯುವ ಮೂಲಕ ಉದ್ದನೆಯ ದೊಡ್ಡದಾದ ಬದುಗಳನ್ನು ಮಾಡಲಾಗುವುದು. ಹೀಗೆ ಮಾಡುವಾಗ ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಂದು ಬದಿಯ ಗುಂಡಿಯ ಮೇಲ್ಪರದ ಮಣ್ಣನ್ನು ಪಕ್ಕದ ದಿಬ್ಬದ ಮೇಲೆ ಹಾಕುತ್ತಾ ಸಾಗಬೇಕು. ಇದೇ ರೀತಿಯಾಗಿ ಎಲ್ಲಾ ಬದುಗಳನ್ನು ಮಾಡಬೇಕು. ನೆಲದ ಮೇಲ್ಪದರದ ಮಣ್ಣಿನಲ್ಲೇ ಸಾವಯವ ಇಂಗಾಲ(Soil carbon) ಹೆಚ್ಚಾಗಿ ಇರುತ್ತದೆ. ಬೇಸಾಯದ ಹೊತ್ತಿನಲ್ಲಿ ಗಿಡಗಳಿಗೆ ಗೊಬ್ಬರ ಮಣ್ಣು ಒದಗಿಸುವಾಗ, ದಿಬ್ಬದ ಕೆಳ ಅಂಚಿನಿಂದ ಮಣ್ಣನ್ನು ಕಡಿದು ನೀಡಿದರೆ ಗಿಡಗಳಿಗೆ ಒಳ್ಳೆಯ ಸಾರ ಸಿಗುತ್ತದೆ. ಈ ರೀತಿಯಾಗಿ ಮಾಡುವುದರಿಂದ,ಒಂದು ಐದಾರು ವರುಶಗಳವರೆಗಾದರೂ ತೋಟದ ಬೇಸಾಯದ ಹೊತ್ತಿನಲ್ಲಿ ಹೊರಗಿನಿಂದ ಮಣ್ಣು ತರುವ ಅವಶ್ಯಕತೆ ಬರುವುದಿಲ್ಲ.

ಈ ಬದುಗಳ ನಡುವಣ ಗುಂಡಿಯ ಕಾಲುವೆಯಲ್ಲಿ ಅಡಿಕೆ ಮತ್ತು ಬಾಳೆಗಿಡಗಳನ್ನು ನೆಡಬಹುದು. ಬೇಕಿದ್ದರೆ, ದಿಬ್ಬದ ಮೇಲೆ ಶುಂಟಿ ಪಟ್ಟೆ ಮಾಡಿ, ಶುಂಟಿಯನ್ನೂ ಬೆಳೆಯಬಹುದು. ಈ ಮೂರು ಬೆಳೆಗಳನ್ನು ಒಟ್ಟೊಟ್ಟಿಗೇ ಬೆಳೆದಲ್ಲಿ, ಮೈಕ್ರೋ ಜೆಟ್ ಮೂಲಕ ನೀರು ಹಾಯಿಸುವುದು ಲೇಸು. ಬಾಳೆಯ ಎಲೆ-ಗಿಡಗಳು ಒಣಗಿ, ಮಣ್ಣಿನೊಂದಿಗೆ ಕಳಿತು(decompose) ಗೊಬ್ಬರದ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ತೋಟವನ್ನು ತಂಪಾಗಿರಿಸುತ್ತವೆ.

ಬದುಗಳ ನಡುವಣ ಗುಂಡಿಯ ಕಾಲುವೆಯಲ್ಲಿ ನೆಟ್ಟಿರುವ ಅಡಿಕೆ ಮತ್ತು ಬಾಳೆಗಿಡಗಳು

ಅಡಿಕೆ ಗಿಡಗಳಿಗೆ ಒಂದೆರಡು ವರುಶಗಳಾದಂತೆ, ಬಾಳೆಯನ್ನು ತೆಗೆಯುವುದು ಒಳ್ಳೆಯದು. ಹೀಗೆ ಮಾಡದಿದ್ದಲ್ಲಿ ಅಡಿಕೆ ಗಿಡಗಳು ಗಟ್ಟಿಯಾಗಿ ಬೆಳೆಯದೇ ಬಾಳೆಯ ನೆರಳಿನಿಂದ ಹೊರಬರುವ ಸಲುವಾಗಿ, ನೇಸರನ ಬೆಳಕನ್ನು ಅರಸಿ ಬೇಗನೆ ಉದ್ದವಾಗಿ/ಕೋಲು ಕೋಲಾಗಿ ಬೆಳೆದುಬಿಡುತ್ತವೆ. ಅಡಿಕೆ ಗಿಡಗಳು ಕುತ್ತು/ಕುಂತು ಬಂದರೆ ಒಳಿತು, ಅಂದರೆ ಅದರಲ್ಲಿನ ಗಣ್ಣುಗಳು ಒತ್ತೊತ್ತಾಗಿ ಬರಬೇಕು.

ಗದ್ದೆಗಳಲ್ಲಿ ಅಡಿಕೆ ಗಿಡ ನಡುವ ಒಂದು ಬಗೆ:

ಗದ್ದೆಗಳಲ್ಲಿ ಗುರುತು ಮಾಡಿ ನೆಟ್ಟಿರುವ ಅಡಿಕೆ ಗಿಡಗಳು

ಗದ್ದೆಗಳ ನೆಲವನ್ನು ಹೂಟಿ ಮಾಡಿ, ಹೆಂಟೆ ಒಡೆದು ಮಟ್ಟ ಮಾಡಿಕೊಳ್ಳಬೇಕು. ನಂತರ ಗಿಡದಿಂದ ಗಿಡಕ್ಕೆ 9-10 ಅಡಿ ಅಂತರ ಇರುವಂತೆ ಎಡೆಗಳನ್ನು ಗುರುತು ಮಾಡಿಕೊಳ್ಳಬೇಕು. ಇದನ್ನು ಐದು ಮೂಲೆ ಕಳೆದು
ಗುರುತು ಮಾಡಿಕೊಳ್ಳುವುದು ಎಂದು ಹೇಳುತ್ತಾರೆ. ಜಾಗದ ಅವಶ್ಯಕತೆಗೆ ತಕ್ಕಂತೆ ನೀರು ಹರಿಸಲು ಅನುವಾಗುವಂತೆ ಹೆಗ್ಗಪ್ಪು ಮತ್ತು ನಡುಗಪ್ಪುಗಳನ್ನು ಹೊಡೆದುಕೊಳ್ಳಬೇಕು (ಕಪ್ಪು=ಚಿಕ್ಕ ಕಾಲುವೆ). ಆಯಾ ಜಾಗದಲ್ಲಿ ನೀರು ಯಾವ ಮಟ್ಟಿಗೆ ಹರಿಯುತ್ತದೆ ಮತ್ತು ನೆಲ ಎಶ್ಟು ಜೌಗಾಗಿದೆ ಎನ್ನುವುದರ ಮೇಲೆ ಕಪ್ಪುಗಳ ಆಳ ಮತ್ತು ಸಂಕ್ಯೆ ಅಂದಾಜು ಮಾಡಬಹುದು. ಗದ್ದೆಗಳಲ್ಲೂ ಕೂಡ ಶುಂಟಿಯನ್ನು ಅಡಿಕೆಯೊಟ್ಟಿಗೆ ನೆಡಬಹುದು. ಅಡಿಕೆ ಗಿಡಗಳು 4-5 ವರುಶವಾಗುವರೆಗೆ, ವರುಶಕ್ಕೆ ಎರಡು ಬೇಸಾಯವಾದರೂ ಬೇಕಾಗುತ್ತದೆ.

ನೀರಿನ ಏರ‍್ಪಾಡು

ಆಯಾ ನೆಲಕ್ಕೆ ಅನುಗುಣವಾಗಿ ನೀರು ನೀಡಬೇಕು. ತೇವ ಹಿಡಿದಿಟ್ಟುಕೊಳ್ಳುವ ನೆಲದ ಗುಣ ಇಲ್ಲಿ ಮುಕ್ಯ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ 3-5 ದಿನಕ್ಕೆ ಇಲ್ಲವೇ ವಾರಕೊಮ್ಮೆ ನೀರು ಕೊಡುತ್ತಾರೆ. ಗಿಡದ ಅವಶ್ಯಕತೆಯನ್ನು ಅರಿತು ನೀರು ನೀಡುವುದು ಒಳ್ಳೆಯದು.

 ಹನಿ ನಿರಾವರಿ :

ಹನಿ ನಿರಾವರಿ ಏರ‍್ಪಾಡು ಬಹಳ ಒಳ್ಳೆಯ ಏರ‍್ಪಾಡಾಗಿದೆ. ಇದನ್ನು ಮಾಡುವುದರಿಂದ ನೀರು ಸುಕಾ ಸುಮ್ಮನೆ ಪೋಲಾಗುವುದಿಲ್ಲ, ಅಲ್ಲದೇ ಬೇಡದಿರುವ ಕಳೆಯೂ ಹೆಚ್ಚಾಗುವುದಿಲ್ಲ. ಇದರಿಂದ ನೀರಿನ ಸರಿಯಾದ ಬಳಕೆಯಾಗುವುದರಿಂದ, ಹೆಚ್ಚಿನ ಸಂಕ್ಯೆಯ ಗಿಡಗಳಿಗೆ ನೀರುಣಿಸಬಹುದು. ಈ  ಏರ‍್ಪಾಡು ಬಳಸಿದಲ್ಲಿ, ಪೈಪುಗಳ ಮೂಲಕ ಔಶದಿ, ಮೈಕ್ರೋ ನ್ಯುಟ್ರಿಯೆಂಟ್ಸ್ ಗಳನ್ನು ಕೂಡ ನಿಗದಿತ ಮಟ್ಟದಲ್ಲಿ ನೀಡಬಹುದಾಗಿದೆ.

 ಮೈಕ್ರೋ ಜೆಟ್:

ಇದೂ ಕೂಡ ಒಂದು ಒಳ್ಳೆಯ ಏರ‍್ಪಾಡಾಗಿದೆ. ಗಿಡಗಳು ಕೊಂಚ ದೊಡ್ಡದಾದ ಬಳಿಕ ಈ ಏರ‍್ಪಾಡನ್ನು ಅಳವಡಿಸಿಕೊಳ್ಳಬಹುದು.

ದೊಡ್ಡ ಜೆಟ್ ಮತ್ತು ಪೈಪುಗಳ ಮೂಲಕ ನೀರು ಹಾರಿಸುವುದರಲ್ಲಿ ಸಾಕಶ್ಟು ನೀರು ಪೋಲಾಗುವುದಲ್ಲದೇ, ಕಳೆಯೂ ಹೆಚ್ಚಾಗುತ್ತದೆ. ಆದ್ದರಿಂದ ಮೇಲಿನ ಎರಡು ಏರ‍್ಪಾಡು ಒಳಿತಾಗಿರುತ್ತದೆ.

ಅಡಿಕೆ ತಳಿಗಳು:

ಅಡಿಕೆಯ ದಪ್ಪ, ಇಳುವರಿ ಮತ್ತು ನೆಲದ ಮಣ್ಣಿಗೆ ಹೊಂದಾಣಿಕೆ ಹೀಗೆ ಹಲವು ವಿಶಯಗಳ ಆದಾರದ ಮೇಲೆ ಹಲವಾರು ಅಡಿಕೆ ತಳಿಗಳಿವೆ. ಅವುಗಳಿಗೆ ಅನುಗುಣವಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ತಳಿಗಳನ್ನು ಬೆಳೆಯುತ್ತಾರೆ.

ತೀರ‍್ತಹಳ್ಳಿ ತಳಿ: ಇದನ್ನು ಹೆಚ್ಚಾಗಿ ಮಲೆನಾಡಿನ ಬಾಗಗಳಲ್ಲಿ ಬೆಳೆಯುತ್ತಾರೆ. ಈ ತಳಿಯ ಗಿಡ ಎತ್ತರವಾಗಿ ಬೆಳೆಯುತ್ತದೆ. ಅಡಿಕೆ ಕೊಂಚ ಉದ್ದವಿದ್ದು, ಸಣ್ಣ ಗಾತ್ರ ಹೊಂದಿರುತ್ತದೆ. ಇದು ಕೆಂಪು ಅಡಿಕೆಗೆ ಸೂಕ್ತ.

ದಕ್ಶಿಣ ಕನ್ನಡ ತಳಿ: ಇದನ್ನು ಕಾಸರಗೋಡು ಮತ್ತು ದಕ್ಶಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ತಳಿ ಎತ್ತರ ಹಾಗೂ ಗಟ್ಟಿಯಾದ ಕಾಂಡವನ್ನು ಹೊಂದಿದ್ದು, ಯಾವಾಗಲೂ ಒಂದೇ ಮಟ್ಟದ ಇಳುವರಿ ನೀಡುತ್ತದೆ. ಇದು ಹೆಚ್ಚಿನಪಕ್ಶ ಬಾಗಿದ ಎಲೆ ಮುಂಡಾಸು ಮತ್ತು ಕೊಂಚ ದೊಡ್ಡನೆಯ ಅಡಿಕೆಗಳನ್ನು ಹೊಂದಿರುತ್ತದೆ.

ಅಡಿಕೆಯ ತಳಿಗಳ ಸುತ್ತ ಸಾಕಶ್ಟು ಅರಕೆ ನಡೆಯುತ್ತಿದ್ದು, ಹೆಚ್ಚು ಇಳುವರಿ ನೀಡುವ ಮಂಗಳ, ಸುಮಂಗಳ, ಶ್ರೀಮಂಗಳ ಹೀಗೆ ಹಲವು ಹೈಬ್ರಿಡ್ ತಳಿಗಳನ್ನು ಹೊರತರಲಾಗಿದೆ.

ಕಂತು-1

( ಚಿತ್ರಸೆಲೆ: kirehalli.com, tssindia.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: