ರಪೇಲ್ ನಡಾಲ್ ಎಂಬ ಚಲದಂಕಮಲ್ಲ

– ರಾಮಚಂದ್ರ ಮಹಾರುದ್ರಪ್ಪ.

ಇತ್ತೀಚಿಗೆ ಜನವರಿಯಲ್ಲಿ ಜರುಗಿದ 2022 ರ ಆಸ್ಟ್ರೇಲಿಯನ್ ಓಪನ್ ಗ್ರ‍್ಯಾಂಡ್ಸ್ಲಾಮ್ ಅನ್ನು ರೋಚಕ ಪೈನಲ್ ನಲ್ಲಿ ರಶಿಯಾದ ಮೆಡ್ವಡೇವ್ ಎದುರು ಗೆದ್ದು ಟೆನ್ನಿಸ್ ದಿಗ್ಗಜ ಸ್ಪೇನ್ ನ ರಪೇಲ್ ನಡಾಲ್ ತಮ್ಮ ಮುಡಿಗೇರಿಸಿಕೊಂಡರು. ತಮ್ಮ ಈ ಎರಡನೇ ಆಸ್ಟ್ರೇಲಿಯನ್ ಓಪನ್ ಗೆಲುವಿನಿಂದ ಗಂಡಸರ ಟೆನ್ನಿಸ್ ಪೋಟಿಯಲ್ಲಿ ರೋಜರ್ ಪೆಡೆರರ್ ಮತ್ತು ಜೋಕೋವಿಚ್ ರನ್ನು ಒಟ್ಟು ಗ್ರ‍್ಯಾಂಡ್ಸ್ಲಾಮ್ ಗೆಲುವುಗಳಲ್ಲಿ ಹಿಂದಿಕ್ಕಿ ತಮ್ಮ ಗ್ರ‍್ಯಾಂಡ್ಸ್ಲಾಮ್ ಎಣಿಕೆಯನ್ನು ನಡಾಲ್ ಟೆನ್ನಿಸ್ ಇತಿಹಾಸದಲ್ಲಿ ಅತಿಹೆಚ್ಚು, ಅಂದರೆ 21 ಕ್ಕೆ ಏರಿಸಿಕೊಂಡರು. ಪೈನಲ್ ನ ಮೊದಲೆರಡು ಸೆಟ್‍‍ಗಳನ್ನು ಸೋತು ಪಂದ್ಯವನ್ನೂ ಸೋಲುವ ಹೊಸ್ತಿಲಲ್ಲಿ ನಿಂತಿದ್ದ ನಡಾಲ್ ಅಲ್ಲಿಂದ ಚಲದಂಕಮಲ್ಲನಂತೆ ಮೇಲೆದ್ದು ಕಡೇ ಮೂರು ಸೆಟ್ಗಳನ್ನು ಗೆದ್ದು ಪಂದ್ಯವನ್ನು ತಮ್ಮದಾಗಿಸಕೊಂಡದ್ದು ಮೈನವಿರೇಳಿಸುವಂತಹ ಒಂದು ಸಾಹಸಗಾತೆ. ಗಂಡಸರ ಗ್ರ‍್ಯಾಂಡ್ಸ್ಲಾಮ್ ಹಾಗೂ ಕೆಲವು ಮುಕ್ಯ ATP ಪೋಟಿಗಳು ಐದು ಸೆಟ್‍‍ಗಳ ಪಂದ್ಯಗಳಾಗಿದ್ದು ಆಟಗಾರರ ಮೈ ಅಳವು ಹಾಗೂ ಮಾನಸಿಕ ಸ್ತೈರ‍್ಯವನ್ನು ಕೂಡ ಪರೀಕ್ಶಿಸುತ್ತದೆ. ಹಲವಾರು ಬಾರಿ ಅತ್ಯಂತ ಪ್ರತಿಬಾನ್ವಿತ ಆಟಗಾರರೂ ಸಹ ಐದು ಸೆಟ್‍‍ಗಳ ತೀವ್ರತೆಯನ್ನು ಎದುರಿಸಲಾಗದೆ ಪಂದ್ಯಗಳನ್ನು ಕೈಚೆಲ್ಲಿರುವ ಎತ್ತುಗೆಗಳು ನಮ್ಮ ಕಣ್ಣ ಮುಂದಿವೆ. ಆದರೆ ನಡಾಲ್ ಮಾತ್ರ ಇದಕ್ಕೆ ಹೊರತಾಗಿದ್ದಾರೆ. ಪಂದ್ಯದಲ್ಲಿ ಎಂತಹ ಕೆಟ್ಟ ಪರಿಸ್ತಿತಿಯಲ್ಲಿದ್ದರೂ, ಅಲ್ಲಿಂದ ಗೆಲುವು ಅಸಾದ್ಯವೆಂಬುವಂತ್ತಿದ್ದರೂ, ಕಡೇ ಪಾಯಿಂಟ್ ತನಕ ಹೋರಾಡುವ ಅವರ ಹಟ ಹಾಗೂ ಚಲ ಇನ್ಯಾವ ಆಟಗಾರನಲ್ಲೂ ಟೆನ್ನಿಸ್ ಜಗತ್ತು ಕಂಡಿಲ್ಲ. ಈ ತನ್ನಂಬಿಕೆಯಿಂದಲೇ ನಡಾಲ್ ನಾಲ್ಕು ಸರಿ ಮೊದಲೆರಡು ಸೆಟ್‍‍ಗಳನ್ನು ಸೋತ ಬಳಿಕವೂ ಮರಳಿ ಪಂದ್ಯಗಳನ್ನು ಗೆಲ್ಲಲು ಸಪಲರಾಗಿದ್ದಾರೆ!

ನಡಾಲ್ ಅವರ ಹೋರಾಟ ಮತ್ತು ಬರ‍್ಜರಿ ಗೆಲುವುಗಳು

ಎಡಗೈ ಆಟಗಾರರಾಗಿರುವ ನಡಾಲ್ ತಮ್ಮ ಎಳವೆಯ ಕೋಚ್ ಆಗಿದ್ದ ಅವರ ಚಿಕ್ಕಪ್ಪ ಟೋನಿ ನಡಾಲ್ ರಿಂದ ತಮ್ಮ ಆಟದ ಪಟ್ಟುಗಳನ್ನ ಕಲಿತರು. ಟೆನ್ನಿಸ್‍‍ನ ಇತರೆ ದಿಗ್ಗಜ ಆಟಗಾರರ ಮಟ್ಟಕ್ಕೆ ಅವರಲ್ಲಿ ಪ್ರತಿಬೆ ಇಲ್ಲದಿದ್ದರೂ ಕಟಿಣ ಪರಿಶ್ರಮ, ಶಿಸ್ತು, ತನ್ನಂಬಿಕೆ ಹಾಗೂ ವ್ರುತ್ತಿಪರತೆಯಿಂದ ಅವರು ಎಲ್ಲರನ್ನು ಮೀರಿಸಿ ಇಂದು ಗಂಡಸರ ಟೆನ್ನಿಸ್ ನಲ್ಲಿ ಯಾರೂ ಏರದ ಮಟ್ಟಕ್ಕೆ ತಲುಪಿದ್ದಾರೆ. ಟೆನ್ನಿಸ್ ಕೋರ‍್ಟ್‍‍ನಾದ್ಯಂತ ಕ್ಶಣಮಾತ್ರದಲ್ಲಿ ಪಾದರಸದಂತೆ ಸಂಚರಿಸುವ ನಡಾಲ್, ಬಲವಾದ ಪೋರ್ ಹ್ಯಾಂಡ್ ಹೊಡೆತಗಳನ್ನು ಹೊಂದಿದ್ದಾರೆ. ಹೆಚ್ಚು ವೇಗದಲ್ಲಿ ಟಾಪ್ ಸ್ಪಿನ್ ಹೊಡೆತಗಳನ್ನು ಹೊಡೆಯಬಲ್ಲ ವಿಶೇಶ ಚಳಕ ಇವರ ಬತ್ತಳಿಕೆಯಲ್ಲಿ ಮಾತ್ರ ಇರುವುದು ನಡಾಲ್‍‍ರ ದೊಡ್ಡ ಶಕ್ತಿ ಎಂದೇ ಹೇಳಬೇಕು. ಅದಲ್ಲದೆ ಅವರ ಬೇಸ್ ಲೈನ್ ಆಟ ಹಾಗೂ ಸ್ಲೈಸ್ ಹೊಡೆತಗಳು ಕೂಡ ಉನ್ನತ ದರ‍್ಜೆಯದ್ದೇ ಆಗಿವೆ. ಅವರು ಕೋರ‍್ಟ್ ನಲ್ಲಿ ಹೊಡೆತಗಳ ವೇಗ ಮಾರ‍್ಪಡಿಸಿ ಎದುರಾಳಿಗೆ ಚೆಂಡು ತಲುಪದಂತೆ ಕೋನೆಗಳನ್ನು ಬದಲಿಸೋ ಪರಿ ಮಾತ್ರ ಅದ್ವಿತೀಯ. ಹಾಗೂ ಅವರ ಪೋರ್ ಹ್ಯಾಂಡ್ ನಶ್ಟು ಅವರ ಬ್ಯಾಕ್ ಹ್ಯಾಂಡ್ ಶಕ್ತಿಶಾಲಿಯಲ್ಲದಿದ್ದರೂ ಆ ಹೊಡೆತಗಳನ್ನೂ ಅದ್ಬುತವಾಗಿ ಆಡಬಲ್ಲರು. ಹಾಗಾಗಿ ಆಟದಲ್ಲಿ ಕೊರತೆಯನ್ನುವ ಮಟ್ಟಕ್ಕೆ ಅದು ಅವರನ್ನು ಇಲ್ಲಿಯವರೆಗೂ ಬಾದಿಸಿಲ್ಲ. ಇನ್ನು ನಡಾಲ್‍‍ರ ಆಟದಲ್ಲಿ ಕುಂದು ಎಂದೇನಾದರೂ ಇದ್ದರೆ ಅದು ಅವರ ಸೆರ‍್ವ್ ಒಂದೇ! ಬೇರೆ ಅಗ್ರಮಾನ್ಯ ಆಟಗಾರರ ಮಟ್ಟಕ್ಕೆ ನಡಾಲ್ ಒತ್ತಡದಲ್ಲಿ ಬೇಕಾದಾಗ ‘ಏಸ್’ ಗಳನ್ನು ಹೊಡೆದಿರುವ ಎತ್ತುಗೆಗಳು ತೀರಾ ವಿರಳ. ಆದರೂ ಟೆನ್ನಿಸ್ ಆಟದ ಅಡಿಪಾಯವಾಗಿರುವ ಅತಿಮುಕ್ಯ ಅಂಶ ಸೆರ‍್ವ್ ನ ಕುಂದನ್ನೂ ಹಿಮ್ಮೆಟ್ಟಿ ಅವರು ಯಾರೂ ಮಾಡದ ಸಾದನೆ ಮಾಡಿದ್ದಾರೆ. ಇದೇ ದಣಿವರಿಯದ ನಡಾಲ್ ರ ತಾಕತ್ತು!

2005 ರ ಮ್ಯಾಡ್ರಿಡ್ ಪೈನಲ್‍‍ನ ಸೆಣೆಸಾಟ

ಕ್ರೊಯೇಶಿಯಾದ ಲುಬಿಚಿಚ್ ಎದುರು ಮ್ಯಾಡ್ರಿಡ್ ಪೈನಲ್‍‍ನಲ್ಲಿ ಮೊದಲೆರಡು ಸೆಟ್‍‍ಗಳನ್ನು ನಡಾಲ್ 3-6, 2-6 ರಿಂದ ಸೋತ ಬಳಿಕ ಇನ್ನು ಪಂದ್ಯದಲ್ಲಿ ಮರಳುವುದು ಅಸಾದ್ಯವೆಂಬಂತಿತ್ತು. ಹಾರ‍್ಡ್ ಕೋರ‍್ಟ್ ನ (2009 ರ ಬಳಿಕ ಮ್ಯಾಡ್ರಿಡ್ ಕ್ಲೇ ಕೋರ‍್ಟ್ ಆಗಿ ಮಾರ‍್ಪಟ್ಟಿದೆ) ಆ ಅಂಕಣದಲ್ಲಿ ಲುಬಿಚಿಚ್‍‍ರ ವೇಗದ ಸೆರ‍್ವ್ ಗಳನ್ನು ನಡಾಲ್ ಹಿಂದಿರುಗಿಸಲು ಹೆಣಗಾಡುತ್ತಿದ್ದದ್ದು ಕಣ್ಣಿಗೆ ರಾಚುವಂತಿತ್ತು. ಆದರೂ 19 ರ ಹರೆಯದ ನಡಾಲ್ ದ್ರುತಿಗೆಡದೆ ತಮ್ಮ ಆಟವನ್ನು ಕಡೆಯ ಮೂರು ಸೆಟ್‍‍ಗಳಲ್ಲಿ ಸುದಾರಿಸಿಕೊಂಡು 6-3, 6-4, 7-6 ಇಂದ ಗೆದ್ದು, ಪಂದ್ಯವನ್ನು ತಮ್ಮದಾಗಿಸಕೊಂಡರು. ಲುಬಿಚಿಚ್ ರ 32 ಏಸ್ ಗಳು ಕೂಡ ಅವರನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಮುಂದೆ ಟೆನ್ನಿಸ್ ಪ್ರಪಂಚ ಇಂತಹ ಗಟ್ಟಿಗನನ್ನು ನೋಡಲಿದೆ ಎಂಬುದಕ್ಕೆ ಈ ಪಂದ್ಯ ಮುನ್ನುಡಿ ಬರೆಯಿತು.

2006 ರ ವಿಂಬಲ್ಡನ್ : ಎದುರಾಳಿ ರಾಬರ‍್ಟ್ ಕೆಂಡ್ರಿಕ್

ವಿಂಬಲ್ಡಿನ ಹುಲ್ಲು ಹಾಸಿನ ಅಂಗಳದಲ್ಲಿ ಎರಡನೇ ಸುತ್ತಿನ ಪಂದ್ಯದಲ್ಲಿ ಅಮೇರಿಕಾದ ಕೆಂಡ್ರಿಕ್ ಎದುರು ಮೊದಲಿಗೆ 6-7, 3-6 ರಿಂದ ಹಿನ್ನಡೆ ಅನುಬವಿಸಿ ಮೂರನೇ ಸೆಟ್‍‍ನಲ್ಲೂ ಸೋಲಿನ ಸನಿಹ ಹೋಗಿದ್ದ ನಡಾಲ್ ಪವಾಡದಂತೆ ಆ ಪಂದ್ಯವನ್ನು ಗೆದ್ದರು. ಹುಲ್ಲು ಹಾಸಿನ ವೇಗಕ್ಕೆ ಅನುಗುಣವಾಗಿ ತಡವಾಗಿಯೇ ತಮ್ಮ ಹೊಡೆತಗಳನ್ನು ಮೂರನೇ ಸೆಟ್‍‍ನಲ್ಲಿ ಅಳವಡಿಸಿಕೊಂಡ ನಡಾಲ್ ಪಂದ್ಯವನ್ನು ನೋಡ ನೋಡುತ್ತಿದ್ದಂತೆಯೇ ಬುಡಮೇಲು ಮಾಡಿಯೇಬಿಟ್ಟರು. ಯಾರೂ ಎದುರು ನೋಡದಂತ ಬದಲಾವಣೆ ನಡಾಲ್ ರ ಆಟದಲ್ಲಿ ನೋಡಸಿಕ್ಕಿತು. ಹೊಸ ಹುರಿಪಿನಿಂದ ಅಲ್ಲಿಂದ ಕಡೆಯ ಮೂರು ಸೆಟ್‍‍ಗಳನ್ನು ತೀವ್ರ ಪೈಪೋಟಿಯಿಂದ ಕಾದಾಡಿ 7-6, 7-5, 6-4 ಇಂದ ಗೆದ್ದು ಆ ಸಾಲಿನ ಪೈನಲ್ ಕೂಡ ನಡಾಲ್ ತಲುಪಿದರು. ಹುಲ್ಲು ಹಾಸಿನ ಮೇಲೆ ಅವರ ಆಟ ನಡೆಯದು ಎಂದು ಮೂಗು ಮುರಿಯುತ್ತಿದ್ದವರಿಗೆಲ್ಲಾ ನಡಾಲ್ ತಕ್ಕ ಉತ್ತರ ನೀಡಿದರು.

2007 ರ ವಿಂಬಲ್ಡನ್ : ಎದುರಾಳಿ ಮಿಕೇಲ್ ಯುಜ್ನಿ

ಈ ಸಾಲಿನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಶಿಯಾದ ಯುಜ್ನಿ ಎದುರು ಮೊದಲೆರಡು ಸೆಟ್‍‍ಗಳನ್ನು 4-6, 3-6 ಇಂದ ಪೈಪೋಟಿ ಕೂಡ ನೀಡದೆ ನೀರಸವಾಗಿ ಸೋತ ನಡಾಲ್ ಆನಂತರ ಪಂದ್ಯದಾದ್ಯಂತ ಪ್ರಾಬಲ್ಯ ಮೆರೆದು ಎದುರಾಳಿಗೆ ಸಣ್ಣ ಅವಕಾಶ ಕೂಡ ನೀಡದೆ ಅಲ್ಲಿಂದ 6-1, 6-2, 6-2 ಇಂದ ಪಂದ್ಯ ಗೆದ್ದದ್ದು ಅಚ್ಚರಿಯ ಪಲಿತಾಂಶವೆಂದೆನಿಸಿದರೂ ನಡಾಲ್ ರ ಆಟದ ಪರಿಚಯವಿದ್ದವರಿಗೆ ಇದು ಸಹಜವೆಂದೇ ಅನಿಸಿತು. ಇಂತಹ ಸಂದಿಗ್ದ ಪರಿಸ್ತಿತಿಗಳಿಗಾಗಿಯೇ ಹೇಳಿ ಮಾಡಿಸಿದಂತಹ ಆಟವನ್ನು ಒತ್ತಡದಲ್ಲೂ ಆಡುವ ಅಳವನ್ನು ಹೊಂದಿರುವ ನಡಾಲ್ ಪಂದ್ಯದಿಂದ ಪಂದ್ಯಕ್ಕೆ ಬಲಗೊಳ್ಳುತ್ತಾ ಮುನ್ನಡೆದು ಮತ್ತೊಮ್ಮೆ ಈ ಸಾಲಿನ ಪೈನಲ್ ತಲುಪಿ ತಮ್ಮ ಸ್ತಿರ ಪ್ರದರ‍್ಶನವನ್ನು ಕಾಪಾಡಿಕೊಂಡರು. ಜೊತೆಗೆ ಎಲ್ಲಾ ಮಾದರಿಯ ಅಂಕಣಗಳಲ್ಲಿಯೂ ಆಡಬಲ್ಲ ಆಟಗಾರ ಎಂದು ತಮ್ಮ ವರ‍್ಚಸ್ಸನ್ನೂ ಹೆಚ್ಚಿಸಿಕೊಂಡರು.

2022 ರ ಆಸ್ಟ್ರೇಲಿಯನ್ ಓಪನ್ : ಎದುರಾಳಿ ಡೇನಿಲ್ ಮೆಡ್ವಡೇವ್

ಆಸ್ಟ್ರೇಲಿಯನ್ ಓಪನ್ ಓಪನ್ ಎರಾ ಇತಿಹಾಸದಲ್ಲೇ ಮೊದಲ ಬಾರಿಗೆ ಪೈನಲ್ ಒಂದರಲ್ಲಿ ಆಟಗಾರನೊಬ್ಬ ಎರಡು ಸೆಟ್‍‍ಗಳನ್ನು ಸೋತ ಬಳಿಕವೂ ಪಂದ್ಯ ಗೆದ್ದ ಹೆಗ್ಗಳಿಕೆ ನಡಾಲ್‍‍ರ ಪಾಲಾಯಿತು. ಮೆಡ್ವಡೇವ್ ಪಂದ್ಯದಲ್ಲಿ ಎರಡು ಸೆಟ್‍‍ಗಳನ್ನು 6-2, 7-6 ರಿಂದ ಗೆದ್ದು ಮೂರನೇ ಸೆಟ್ ನಲ್ಲೂ 3-2 (0-40) ರ ಮುನ್ನಡೆ ಸಾದಿಸಿ, ನಡಾಲ್‍‍ರ ಸೆರ‍್ವ್ ನಲ್ಲಿ ಮೂರು ಬ್ರೇಕ್ ಪಾಯಿಂಟ್ ಗಳನ್ನು ಹೊಂದಿದ್ದರು. ಆದರೆ ಅಲ್ಲಿಂದ ನಡೆದದ್ದೇ ಟೆನ್ನಿಸ್ ಜಗತ್ತು ಕಂಡರಿಯದ ಮೈನವಿರೇಳಿಸುವಂತಹ ನಡಾಲ್‍‍ರ ಹೋರಾಟದ ಸಾಹಸಗಾತೆ. ಮೊದಲಿಗೆ ಮೂರು ಬ್ರೇಕ್ ಪಾಯಿಂಟ್‍‍ಗಳನ್ನು ಗೆದ್ದು ಸೆರ‍್ವ್ ಮುರಿಯದಂತೆ ನೋಡಿಕೊಂಡ ನಡಾಲ್ ಹಂತಹಂತವಾಗಿ ಪಂದ್ಯದಲ್ಲಿ ಮರಳುತ್ತಾ ಹೋದರು. ತಮ್ಮ ಬದುಕೇ ಈ ಪಂದ್ಯದ ಮೇಲೆ ಅವಲಂಬಿತವಾಗಿದೆಯೇನೋ ಎಂಬಂತೆ ಹುರುಪಿನಿಂದ ಬೆವರು ಹರಿಸಿ ತಪ್ಪುಗಳನ್ನು ತಿದ್ದಿಕೊಂಡು ತಮ್ಮ ಅಳವಿಗೆ ತಕ್ಕಂತೆ ಆಡತೊಡಗಿದರು. ಇದಕ್ಕೆ ಅವರು ಗಳಿಸಿದ ವಿನ್ನರ್ ಗಳೇ ಸಾಕ್ಶಿ! ಕೊನೇ ಗಳಿಗೆವರೆಗೂ ನಂಬಿಕೆ ಕಳೆದುಕೊಳ್ಳದ ನಡಾಲ್ ಕಡೇ ಮೂರು ಸೆಟ್‍‍ಗಳನ್ನು 6-4, 6-4, 7-5 ರಿಂದ ಗೆದ್ದು ಆಸ್ಟ್ರೇಲಿಯನ್ ಓಪನ್ ತಮ್ಮ ಮಡಿಲಿಗೆ ಹಾಕಿಕೊಂಡು ತಾವು ಚಲದಂಕಮಲ್ಲ ಎಂದು ಮತ್ತೊಮ್ಮೆ ಸಾಬೀತು ಮಾಡಿದರು. ಇಂತಹ ಸಂದಿಗ್ದ ಪರಿಸ್ತಿತಿಯಲ್ಲಿ ನಂಬಿಕೆಯಿಂದ ಹೋರಾಡಿ ಪಂದ್ಯ ಗೆಲ್ಲಲು ನಡಾಲ್ ಒಬ್ಬರಿಗೆ ಮಾತ್ರ ಸಾದ್ಯವೆಂಬ ಮಾತನ್ನು ಈ ಸೊಗಸಾದ ಗೆಲುವಿನಿಂದ ಅಕ್ಶರಶಹ ದಿಟ ಮಾಡಿಯೇ ಬಿಟ್ಟರು!

ಈ ಬಾರಿಯ ಆಸ್ಟ್ರೇಲಿಯನ್ ಓಪನ್‍‍ಗೂ ಕೇವಲ ಐದು ತಿಂಗಳ ಮೊದಲು ಶಸ್ತ್ರಚಿಕಿತ್ಸೆಗೊಳಗಾಗಿ ನಡೆಯಲೂ ತ್ರಾಸು ಪಡುತ್ತಿದ್ದ ನಡಾಲ್‍‍ರ ನಿವ್ರುತ್ತಿಯ ಬಗ್ಗೆ ಊಹಾಪೋಹಗಳು ಬುಗಿಲೆದ್ದಿದ್ದವು! ಇನ್ನು ಅವರ ಆಟದ ದಿನಗಳು ಮುಗಿದೇ ಹೋದವು ಎಂದೇ ಟೆನ್ನಿಸ್ ಜಗತ್ತು ಎಣಿಸಿತ್ತು. ಆದರೆ ನಡಾಲ್ ಸದಾ ಮಾಡುವುದನ್ನೇ ಮತ್ತೊಮ್ಮೆ ಮಾಡಿದರು. ಪೀನಿಕ್ಸ್ ನಂತೆ ಮೇಲೆದ್ದು ತಮ್ಮಲ್ಲಿ ಇನ್ನೂ ಆಡು ಅಳವಿದೆ ಎಂಬುದನ್ನು ಕಾತ್ರಿ ಪಡೆಸುವುದರ ಜೊತೆಗೆ 35 ರ ಹರೆಯದಲ್ಲೂ ಯುವಕರ ಎದುರು ಗ್ರ‍್ಯಾಂಡ್ಸ್ಲಾಮ್ ಗೆಲ್ಲುವಂತ ಆಟ ಆಡಬಲ್ಲೆನು ಎಂಬುದನ್ನು ನಿರೂಪಿಸಿದರು. ಈ 21ನೇ ಗ್ರ‍್ಯಾಂಡ್ಸ್ಲಾಮ್ ನಿಂದ ಓಪನ್ ಎರಾದಲ್ಲಿ ಜೋಕೋವಿಚ್ ರ ಬಳಿಕ ಪ್ರತೀ ಗ್ರ‍್ಯಾಂಡ್ಸ್ಲಾಮ್ ಅನ್ನು ಕನಿಶ್ಟ ಎರಡು ಬಾರಿ ಗೆದ್ದ ಎರಡನೇ ಆಟಗಾರ ಎಂಬ ಹಿರಿಮೆ ಕೂಡ ಪಡೆದರು. ನಡಾಲ್ ರ ಬದುಕು, ಹೋರಾಟ, ಆಟ ನಮ್ಮೆಲ್ಲರ ಬದುಕಿನಲ್ಲೂ ಮಾದರಿಯಾಗಬಹುದು ಎಂದರೆ ತಪ್ಪಾಗಲಾರದು. ಇವರ ಹಟ, ಚಲ, ತನ್ನಂಬಿಕೆ ಹಾಗೂ ಹೋರಾಟದ ಗುಣಗಳನ್ನು ಬದುಕಿನ ಬೇರೆ ಆಯಾಮಗಳಲ್ಲೂ ಅಳವಡಿಸಿಕೊಂಡು ಯಶಸ್ಸು ಕಾಣಬಹುದು. ಅಂತಹ ನಂಬಿಕೆಯ ಸ್ಪೂರ‍್ತಿ ನಡಾಲ್! ಸುಮಾರು ಎರಡು ದಶಕಗಳ ವ್ರುತ್ತಿ ಬದುಕಿನಲ್ಲಿ ವಿವಾದಗಳೇ ಇಲ್ಲದ ಇಂತಹ ಸೌಮ್ಯ ಸ್ವಬಾವದ ದಿಗ್ಗಜ ಆಟಗಾರನ ರ‍್ಯಾಕೆಟ್ (racket) ಚಳಕವನ್ನು ನೋಡಿ ಕಣ್ಣು ತುಂಬಿಸಿಕೊಂಡ ಈ ಪೀಳಿಗೆ ನಿಜಕ್ಕೂ ದನ್ಯ! ನಡಾಲ್ ಇನ್ನಶ್ಟು ಗ್ರ‍್ಯಾಂಡ್ಸ್ಲಾಮ್ ಗಳನ್ನು ಗೆದ್ದು ಅಬಿಮಾನಿಗಳಿಗೆ ನಲಿವು ತರಲಿ ಎಂದು ಹರಸೋಣ.

( ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: