ವಿಶ್ವದ ಅತಿ ಉದ್ದದ ಸುರಂಗ – ಲಾರ‍್ಡಲ್ ಸುರಂಗ

– .

ವಿಶ್ವದ ಅತಿ ಉದ್ದದ ಸುರಂಗ ಪಶ್ಚಿಮ ನಾರ‍್ವೆಯ ಲಾರ‍್ಡಲ್ ಮತ್ತು ಔಲ್ರ‍್ಯಾಂಡ್ ನಗರಗಳ ನಡುವೆ 15.2 ಮೈಲಿಗಳಿಶ್ಟಿದೆ. ಅಂದರೆ 24.5 ಕಿಲೋಮೀಟರ್ ಉದ್ದವಿದೆ. ಆಶ್ಚರ‍್ಯವೆಂದರೆ ಇಶ್ಟು ಉದ್ದದ ಸುರಂಗ ಮಾರ‍್ಗದ ನಿರ‍್ಮಾಣಕ್ಕೆ ತೆಗೆದುಕೊಂಡ ಕಾಲಾವದಿ ಕೇವಲ ಐದು ವರ‍್ಶ. 1995ರಲ್ಲಿ ಪ್ರಾರಂಬವಾದ ಲಾರ‍್ಡಲ್ ಸುರಂಗದ ನಿರ‍್ಮಾಣ ಕಾರ‍್ಯ 2000ದಲ್ಲಿ ಪೂರ‍್ಣಗೊಂಡಿತು. ಈ ಸುರಂಗದ ನಿರ‍್ಮಾಣದ ಮುನ್ನ, ವಿಶ್ವದ ಅತಿ ಉದ್ದದ ಸುರಂಗವೆಂದು ಕ್ಯಾತಿ ಹೊಂದಿದ್ದ ಸ್ವಿಟ್ಜರ‍್ಲೆಂಡಿನ ಸೆಂಟ್ ಗುಡ್ಡಾರ‍್ಡ್ ಸುರಂಗವನ್ನು, ಇದು ಐದು ಮೈಲಿಗಳಶ್ಟು (ಎಂಟು ಕಿಲೋಮೀಟರ್) ಹೆಚ್ಚು ಉದ್ದದಿಂದ ಹಿಂದಿಕ್ಕಿತು.

ನಾರ‍್ವೆಯನ್ನರ ಹೆಗ್ಗಳಿಕೆ

ನಾರ‍್ವೆ ಯೂರೋಪಿನ ಅತಿ ಉದ್ದದ ದೇಶವಾಗಿದ್ದು, ಗಟ್ಟಗಳಿಂದ ಆವ್ರುತವಾಗಿದೆ. ಹಾಗಾಗಿ ರಸ್ತೆಗಳನ್ನು ನಿರ‍್ಮಿಸುವಲ್ಲಿ ಸುರಂಗಗಳನ್ನು ಕೊರೆಯಬೇಕಾದ್ದು ಅನಿವಾರ‍್ಯ. ಸುರಂಗ ನಿರ‍್ಮಾಣದಲ್ಲಿ ನಾರ‍್ವೆಜಿಯರನ್ನು ಹಿಂದಿಕ್ಕಲು ಜಗತ್ತಿನಲ್ಲಿ ಬೇರಾರಿಗೂ ಸಾದ್ಯವಾಗಿಲ್ಲ ಎನ್ನಬಹುದು. ಸುರಂಗಗಳ ನಿರ‍್ಮಾಣದಲ್ಲಿ ಅವರು ಸಿದ್ದ ಹಸ್ತರು. ರಸ್ತೆಯ ನಿರ‍್ಮಾಣದಲ್ಲಿ ಬಂಡೆಗಳು ಅಡ್ಡ ಬಂದರೆ ಅದನ್ನು ಬಳಸಿ ರಸ್ತೆಯನ್ನು ನಿರ‍್ಮಿಸುವ ಪರಿಪಾಟ ಅವರಲ್ಲಿಲ್ಲ. ಬದಲಿಗೆ ಆ ಬಂಡೆಯನ್ನು ಕೊರೆದು ಅದ್ಬುತವಾ ಸುರಂಗ ರಸ್ತೆಯನ್ನು ನಿರ‍್ಮಿಸುತ್ತಾರೆ. ಆದ್ದರಿಂದ ನಾರ‍್ವೆ ದೇಶದ ರಸ್ತೆಯ ಮೇಲೆ ಚಾಲನೆ ಮಾಡುವುದು ರೋಮಾಂಚಕ ಅನುಬವ ನೀಡುತ್ತದೆ.

ಚಾಲಕರನ್ನ ಎಚ್ಚರವಾಗಿಡುವ ವ್ಯವಸ್ತೆ

ಲಾರ‍್ಡಾಲ್ ಸುರಂಗ ಮಾರ‍್ಗವನ್ನು ಕ್ರಮಿಸಲು ಅವಶ್ಯವಿರುವ ಸರಾಸರಿ ಸಮಯ 20 ನಿಮಿಶಗಳು. ಅಶ್ಟರಲ್ಲಿ ಚಾಲಕರಿಗೆ ಸಹಜವಾಗಿ ತೂಕಡಿಕೆ ಆವರಿಸುವ ಸಾದ್ಯತೆಯಿರುತ್ತದೆ. ಚಾಲಕರ ನಿದ್ದೆ/ತೂಕಡಿಕೆಯನ್ನು ಹೋಗಲಾಡಿಸುವ ಸಲುವಾಗಿ ವಿಶೇಶ ವಿನ್ಯಾಸದ ವೈಶಿಶ್ಟ್ಯಗಳನ್ನು ಈ ಸುರಂಗ ಮಾರ‍್ಗದಲ್ಲಿ ಅಳವಡಿಸಲಾಗಿದೆ. ಪ್ರತಿ ಲೇನ್ಗಳ ಮದ್ಯೆ ‘ರಂಬಲ್ ಸ್ಟ್ರಿಪ್‌’ಗಳನ್ನು ಅಳವಡಿಸಲಾಗಿದೆ. ಇದರ ಮೇಲೆ ಕಾರಿನ ಚಕ್ರ ಹಾದು ಹೋದಲ್ಲಿ, ಜೋರಾದ ಶಬ್ದ ಹೊರ ಹೊಮ್ಮುತ್ತದೆ. ಇದರಿಂದ ತೂಕಡಿಸುತ್ತಿರುವ ಚಾಲಕ ಎಚ್ಚರಗೊಂಡು ವಾಹನವನ್ನು ಸುರಕ್ಶಿತ ರಸ್ತೆಯ ಬದಿಗೆ ಕೊಂಡೊಯ್ಯಲು ಅನುಕೂಲವಾಗುತ್ತದೆ. ಚಾಲಕರ ಮೇಲಿನ ಮಾನಸಿಕ ಒತ್ತಡವನ್ನು ಗಣನೆಗೆ ತೆಗೆದುಕೊಂಡು, ಒತ್ತಡ ಕಡಿಮೆ ಮಾಡುವ ದ್ರುಶ್ಟಿಯಿಂದ ಸುರಂಗದ ವಿನ್ಯಾ¸ವನ್ನು ನಾಲ್ಕು ಬಾಗಗಳನ್ನಾಗಿಸಿದ್ದಾರೆ. ಲಾರ‍್ಡಲ್ ಸುರಂಗದ ಪ್ರತಿಯೊಂದು ಬಾಗವೂ ವಿಶೇಶ ಬೆಳಕಿನ ಸಂಯೋಜನೆಯನ್ನು ಹೊಂದಿದೆ. ಮುಕ್ಯ ಸುರಂಗದ ರಸ್ತೆಯಲ್ಲಿ ಬಿಳಿ ಬಣ್ಣದ ಬೆಳಕನ್ನು ನೀಡುವ ದೀಪಗಳಿದ್ದರೆ, ಕೊನೆಯಲ್ಲಿ ಸೂರ‍್ಯೋದಯದ ಪ್ರಬಾವ ನೀಡಲು ಹಳದಿ ಬಣ್ಣದ ದೀಪಗಳೊಂದಿಗೆ ನೀಲಿ ಬೆಳಕಿನ ಸಂಯೋಜನೆಯಿದೆ. ಈ ಸಂಯೋಜನೆಯು ಚಾಲಕರನ್ನು ಎಚ್ಚರಿಕೆಯಲ್ಲಿರಿಸಿ ಅನಾಹುತಗಳನ್ನು ತಪ್ಪಿಸಲು ಸಹಕಾರಿ.

ಪ್ರತಿ ಆರು ಕಿಲೋಮೀಟರ್ ಅಂತರದಲ್ಲಿ ವಿಶ್ರಾಂತಿಗಾಗಿ ಸಾಕಶ್ಟು ವಿಶಾಲವಾದ ಸ್ತಳವನ್ನು ಮೀಸಲಿಡಲಾಗಿದೆ. ಈ ವಿಶ್ರಾಂತಿ ಸ್ತಳದ ವಿಶೇಶತೆ ಏನೆಂದರೆ, ಇಲ್ಲಿ ಮದುವೆಯಂತಹ ಸಮಾರಂಬವನ್ನೂ ಮಾಡಬಹುದು, ಅಶ್ಟು ವಿಶಾಲವಾಗಿದೆ ಎಂದು ಒಂದು ಜೋಡಿ ತೋರಿಸಿಕೊಟ್ಟಿದೆ. ಅಶ್ಟು ವಿಸ್ತಾರವಾದ ವಿಶ್ರಾಂತಿಯ ಜಾಗವನ್ನು ನಿರ‍್ಮಾಣ ಮಾಡಿದ್ದಾರೆ. ಈ ಸ್ತಳಗಳಲ್ಲಿ ಯು-ಟರ‍್ನ್ ತೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಪ್ರತಿ ಕಿಲೋಮೀಟರ್ ನಂತರ ಎಶ್ಟು ಕಿಲೋಮೀಟರ್ ಕ್ರಮಿಸಲಾಗಿದೆ, ಇನ್ನೂ ಎಶ್ಟು ಕಿಲೋಮೀಟರ್ ಬಾಕಿ ಇದೆ ಎಂದು ಸೂಚಿಸುವ ಪಲಕಗಳನ್ನು ಅಳವಡಿಸಲಾಗಿದೆ. ಬಸ್ಸು ಹಾಗೂ ಟ್ರೈಲರ್ ನಂತಹ ಬಾರಿ ವಾಹನಗಳು ಯು ಟರ‍್ನ್ ತೆಗೆದುಕೊಳ್ಳಲು ಅನುಕೂಲವಾಗುವಂತೆ ಒಟ್ಟಾರೆ ಹದಿನೈದು ಕಡೆ ಸೂಕ್ತ ಜಾಗವನ್ನು ಕಲ್ಪಿಸಲಾಗಿದೆ.

ಸುರಕ್ಶತೆಗೆ ಹೆಚ್ಚು ಗಮನ

ಲಾರ‍್ಡಲ್ ಸುರಂಗ ಮಾರ‍್ಗದ ನಿರ‍್ಮಾಣದ ಸಮಯದಲ್ಲಿ 2,500,000 ಗನ ಮೀಟರ್ ಬಂಡೆಯನ್ನು ಒಡೆದು ತೆಗೆಯಲಾಯಿತು. ಲಾರ‍್ಡಲ್ ಸುರಂಗವು ತುರ‍್ತು ನಿರ‍್ಗಮನಗಳನ್ನು ಹೊಂದಿಲ್ಲ. ಅಪಗಾತ ಅತವ ಬೆಂಕಿಯ ಅವಗಡ ಸಂಬವಿಸಿದ ಸಂದರ‍್ಬಗಳಲ್ಲಿ ಅನೇಕ ಸುರಕ್ಶತಾ ಮುನ್ನೆಚ್ಚರಿಕೆಗಳಿವೆ. ಪೊಲೀಸ್, ಅಗ್ನಿಶಾಮಕ ಇಲಾಕೆ ಹಾಗೂ ಆಸ್ಪತ್ರೆಗಳನ್ನು ಸಂಪರ‍್ಕಿಸಲು “SOS“ ಎಂದು ಗುರುತಿಸಲಾದ ತುರ‍್ತು ದೂರವಾಣಿ ಸೌಕರ‍್ಯವನ್ನು ಪ್ರತಿ 250 ಮೀಟರ್ ದೂರದಲ್ಲಿ ಅಳವಡಿಸಲಾಗಿದೆ. ಪ್ರತಿ 125 ಮೀಟರ್ ಅಂತರದಲ್ಲಿ ಅಗ್ನಿಶಾಮಕಗಳಿವೆ. ಅನಾಹುತವಾದ ಸಂದರ‍್ಬದಲ್ಲಿ ಅಲ್ಲಿರುವ ಪೋನನ್ನಾಗಲಿ, ಅಗ್ನಿಶಾಮಕವನ್ನಾಗಲಿ ಬಳಸಲು ತೆಗೆದುಕೊಂಡಾಕ್ಶಣ, ಸುರಂಗದ ಉದ್ದಕ್ಕೂ ಸ್ಟಾಪ್ ದೀಪಗಳು ಬೆಳಗಲು ಶುರುವಾಗುತ್ತದೆ. ಇದರೊಂದಿಗೆ ಹಿಂದಿರುಗಿ, ನಿರ‍್ಗಮಿಸಿ ಎನ್ನುವ ಬರಹಗಳು ಎಲೆಕ್ಟ್ರಾನಿಕ್ ಪಲಕಗಳ ಮೇಲೆ ಕಾಣುತ್ತವೆ. ಸುರಂಗದ ಎರಡೂ ಕೊನೆಯಲ್ಲಿ ಟನಲ್ ಮುಚ್ಚಲಾಗಿದೆ ಎಂಬ ಎಲೆಕ್ಟ್ರಾನಿಕ್ ಬರಹಗಳು ಪ್ಲ್ಯಾಶ್ ಆಗುತ್ತವೆ. ಸುರಂಗದ ಎರಡೂ ಬದಿಯಲ್ಲಿ ಸುರಂಗದೊಳಗೆ ಹೋಗುವ ಹಾಗೂ ಸುರಂಗದಿಂದ ಹೊರ ಬರುವ ಪ್ರತಿಯೊಂದು ವಾಹನದ ಪೋಟೋ, ತಪಾಸಣೆ ಹಾಗೂ ಎಣಿಕೆಯನ್ನು ಮಾಡಲಾಗುತ್ತದೆ. ಈ ಸುರಂಗದಲ್ಲಿ ರೇಡಿಯೋ ಮತ್ತು ಮೊಬೈಲ್ ಬಳಕೆಗೆ ಅವಶ್ಯವಿರುವ ವಿಶೇಶ ವೈರಿಂಗ್ ವ್ಯವಸ್ತೆ ಸಹ ಲಬ್ಯವಿದೆ.

ಇಲ್ಲಿ ಟೋಲ್ ಕಟ್ಟಬೇಕಾಗಿಲ್ಲ

ಸುರಂಗದಲ್ಲಿ ಗಾಳಿಯ ಗುಣಮಟ್ಟವನ್ನು ವಾತಾಯನ ಮತ್ತು ಶುದ್ದೀಕರಣದಿಂದ ಸಾದಿಸಲಾಗಿದೆ. ಕಲುಶಿತ ಗಾಳಿನ್ನು ಶುದ್ದೀಕರಿಸಲು ವಾಯು ಸಂಸ್ಕರಣಾ ಗಟಕವನ್ನು ಹೊಂದಿರುವ ಮೊದಲ ಸುರಂಗ ಲಾರ‍್ಡಲ್ ಸುರಂಗ. ಈ ವಾಯು ಸಂಸ್ಕರಣಾ ಗಟಕವು ದೂಳು ಮತ್ತು ಸಾರಜನಕ ಡೈ ಆಕ್ಸೈಡ್ ಎರಡನ್ನೂ ತೆಗೆದು ಶುದ್ದಿಗೊಳಿಸುತ್ತದೆ. ಇಶ್ಟೆಲ್ಲಾ ವ್ಯವಸ್ತೆಯನ್ನು ಹೊಂದಿರುವ ಇದು ವಾಹನದವರ ಜೇಬಿಗೆ ಕತ್ತರಿ ಹಾಕುವುದಿಲ್ಲ. ಬದಲಾಗಿ ಇದರಲ್ಲಿನ ಸಂಚಾರ ಉಚಿತ. ಟೋಲ್ ಕಟ್ಟುವ ಅವಶ್ಯಕತೆಯಿಲ್ಲ. ಹಾಗಾಗಿ ಅನೇಕ ಜನ ತಮ್ಮ ಪ್ರಯಾಣಕ್ಕಾಗಿ, ಜಾಲಿ ರೈಡ್‍ಗಳಿಗಾಗಿ ಈ ಸುರಂಗವನ್ನು ಆಯ್ಕೆ ಮಾಡಿಕೊಂಡು ಇದರ ವೈಬವವನ್ನು ಆನಂದಿಸುತ್ತಾರೆ. ಈ ಸುರಂಗವನ್ನು ಪ್ರತಿದಿನ ಸುಮಾರು ಒಂದು ಸಾವಿರ ವಾಹನಗಳು ಬಳಸುತ್ತವೆ. ಹೆಚ್ಚು ದಟ್ಟಣೆಯ ಸಮಯದಲ್ಲಿ ಸುರಂಗದಲ್ಲಿ 400 ವಾಹನಗಳು ಅಡಕವಾಗಿರುತ್ತವೆ ಎಂದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಅತ್ಯಂತ ಉನ್ನತ ದರ‍್ಜೆಯ, ಮಾನವ ನಿರ‍್ಮಿತ ಈ ಸುರಂಗದ ಅದ್ಬುತ ದ್ರುಶ್ಟಾಂತವನ್ನು ನೋಡಿ ಅನುಬವಿಸಬೇಕೇ ಹೊರತು, ಅದರ ಬಗ್ಗೆ ಎಶ್ಟೇ ಓದಿದರೂ ಆ ಅನುಬವಕ್ಕೆ ಸಾಟಿಯಾಗುವುದಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: digitalnomad.nationalgeographic.com, amusingplanet.com, atlasobscura.com, theculturetrip.com, dangerousroads.org, flickr.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: