ಕ್ರಿಕೆಟ್ ನ ಕರಾಳ ಅದ್ಯಾಯಗಳು

– ರಾಮಚಂದ್ರ ಮಹಾರುದ್ರಪ್ಪ.

ಪ್ರಪಂಚದ ಕೆಲವೇ ಕೆಲವು ದೇಶಗಳು ಮಾತ್ರ ಆಡುವ ಕ್ರಿಕೆಟ್ ಆಟ ಇಂದು ಹೊಸ ಮಜುಲುಗಳನ್ನು ದಾಟಿ ಇಂದು ತನ್ನ ಜನಪ್ರಿಯತೆ ತುತ್ತ-ತುದಿ ತಲುಪಿದೆ ಎಂದರೆ ತಪ್ಪಾಗಲಾರದು. ಹೆಸರಿಗೆ ಸಬ್ಯರ ಆಟ ಎಂದು ಕರೆದರೂ ಮೊದಲಿಂದಲೂ ಮೈದಾನದಲ್ಲಿ ಆಟಗಾರರ ನಡುವಿನ ಜಟಾಪಟಿಗಳು ಕೆಲವೊಮ್ಮೆ ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ಕೂಡ ತಲುಪಿವೆ. ಆದರೆ ತೀವ್ರತೆಯಿಂದ ಎರಡೂ ತಂಡಗಳು ಸೆಣಸುವಾಗ ಇವೆಲ್ಲಾ ಹೊರಾಂಗಣ ಆಟಗಳಲ್ಲಿ ಸಹಜ ಎಂದು ಅನಿಸದೇ ಇರದು. ಕ್ರಿಕೆಟ್ ಆಟ ಇಂದಿನ ದಿನಕ್ಕೆ ಸಬ್ಯರ ಆಟ ಎಂದು ಕರೆಸಿಕೊಳ್ಳುವ ಬಗೆಯಲ್ಲಿ ಕಂಡಿತ ನಡೆಯುತ್ತಿಲ್ಲ ಎಂದು ಕಣ್ಣಿಗೆ ರಾಚುವಂತಹ ಎತ್ತುಗೆಗಳು ನಮ್ಮ ಕಣ್ಣ ಮುಂದಿವೆ. ಕೆಲವೊಮ್ಮೆ ಆಟಗಾರರು ಮತ್ತು ಅಂಪೈರ್ ನಡುವೆ ಕೂಡ ಬಿನ್ನಾಬಿಪ್ರಾಯಗಳು ಉಂಟಾಗಿ, ಕಡೆಗೆ ಅಂಪೈರ್ ರನ್ನು ಗೌರವಿಸುದದ್ದಕ್ಕೆ ಆಟಗಾರರೇ ದಂಡ ತೆರಬೇಕಾಗಿ ಬಂದಿರುವ ಪ್ರಕರಣಗಳೂ ಸಾಕಶ್ಟಿವೆ. ಅಂಪೈರ್ ತಂಟೆಗೆ ಹೋದ ಆಟಗಾರರ ಮೇಲೆ ಮಾತ್ರ ಐಸಿಸಿ ತಪ್ಪದೇ ಬಹಳ ಕಟ್ಟುನಿಟ್ಟಾಗಿ ತನ್ನ ಕಾನೂನನ್ನು ಜಾರಿಗೆ ತರುತ್ತದೆ. ಆದರೆ ಕ್ರಿಕೆಟ್ ನಲ್ಲಿ ಐಸಿಸಿಯ ನಿಯಮಾವಳಿ (Code of conduct) ಇನ್ನೂ ಅಶ್ಟು ಪ್ರಬಾವಿಯಾಗಿರದ ಕಾಲದಲ್ಲಿ ಅಂಪೈರ್ ಮತ್ತು ಆಟಗಾರರ ನಡುವೆ ನಡೆದ ಎರಡು ಪ್ರತ್ಯೇಕ ಪ್ರಕರಣಗಳು ಕ್ರಿಕೆಟ್ ವಲಯವನ್ನೇ ತಲ್ಲಣಗೊಳಿಸಿತ್ತು. ಇವುಗಳನ್ನು ಕ್ರಿಕೆಟ್ ನ ಕರಾಳ ಅದ್ಯಾಯಗಳು ಎಂದು ಇಂದಿಗೂ ಬೇಸರದಿಂದ ನೆನೆಯಲಾಗುತ್ತಿದೆ.

ಅಂಪೈರ್ ಇದ್ರೀಸ್ ಬೇಗ್ ರ ಅಪಹರಣ

1955-56 ರಲ್ಲಿ ರುತುವಿನಲ್ಲಿ ಡೊನಾಲ್ಡ್ ಕಾರ್ ಮುಂದಾಳ್ತನದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು. ಈ ನಾಲ್ಕು ಟೆಸ್ಟ್ ಗಳ ಸರಣಿಗೆ ಬಾರತದಲ್ಲಿ ಹುಟ್ಟಿ ದೆಹಲಿ ಪರ ರಣಜಿ ಟೂರ‍್ನಿ ಆಡಿದ್ದ ಇದ್ರೀಸ್ ಬೇಗ್, ಇಬ್ಬರು ಅಂಪೈರ್ ಗಳಲ್ಲಿ ಒಬ್ಬರಾಗಿದ್ದರು. 1947 ರಲ್ಲಿ ಪಾಕಿಸ್ತಾನದ ಹುಟ್ಟಿನ ಬಳಿಕ ಅಲ್ಲಿನ ಪೌರತ್ವ ಪಡೆದಿದ್ದ ಬೇಗ್ ಕೊಂಚ ಸ್ವಪ್ರತಿಶ್ಟೆಯ ವ್ಯಕ್ತಿ ಹಾಗೂ ಸಿಡುಕಿನ ಸ್ವಬಾವದವರು ಎಂದು ಕ್ರಿಕೆಟ್ ಜಗತ್ತಿಗೆ ಜಗಜ್ಜಾಹೀರಾಗಿತ್ತು. ಒಮ್ಮೆ, ಜನ ಕ್ರೀಡಾಂಗಣಕ್ಕೆ ಬರುವುದು ನನ್ನ ಅಂಪೈರಿಂಗ್ ಚಳಕ ನೋಡಲೆಂದೇ ಹೊರತು ಆಟಗಾರರನ್ನು ನೋಡಲಲ್ಲಎಂದು ಹೇಳಿ ನಗೆಪಾಟಲಿಗೂ ಬೇಗ್ ಗುರಿಯಾಗಿರುತ್ತಾರೆ. ಡಾಕಾದಲ್ಲಿ ನಡೆದ ಸರಣಿಯ ಎರಡನೇ ಟೆಸ್ಟ್ ನಲ್ಲಿಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 10 ರನ್ ಗಳ ಹೀನಾಯ ಸೋಲುಣ್ಣುತ್ತದೆ. ಆದರೆ ನಾಯಕ ಕಾರ್ ಮತ್ತು ಇಂಗ್ಲೆಂಡ್ ತಂಡ ಮಾತ್ರ ಅವರ ಸೋಲಿಗೆ ಬೇಗ್ ರ ಕಳಪೆ ಹಾಗೂ ಬದಿಯೊಲವಿನ ಅಂಪೈರಿಂಗ್ ಒಂದೇ ಕಾರಣ ಎಂದು ದೂಶಿಸುತ್ತಾರೆ. ಬಳಿಕ ಪೇಶಾವರದ ಮೂರನೇ ಟೆಸ್ಟ್ ಗೂ ಮುನ್ನಾ ದಿನ, 26 ಪೆಬ್ರವರಿ 1956 ರ ರಾತ್ರಿಯಂದು ತಮ್ಮ ಹೀನ ಕ್ರುತ್ಯದಿಂದ ಕ್ರಿಕೆಟ್ ಆಟಕ್ಕೆ ಕಳಂಕ ತರುತ್ತಾರೆ. ಕುಡಿದ ಮತ್ತಿನಲಿದ್ದ ಮುಂದಾಳು ಕಾರ್ ಮತ್ತವರ ತಂಡದ ಕೆಲ ಆಟಗಾರರು ಮುಸುಕು ದರಿಸಿ ಬೇಗ್ ತಂಗಿದ್ದ ಪೇಶಾವರದ ಸೆರ‍್ವಿಸೆಸ್ ಹೋಟೆಲ್ ಗೆ ನುಸುಳಿ ಅವರ ಬಾಯಿ ಕಟ್ಟಿ ಅಲ್ಲಿಂದ ಅವರನ್ನು ಅಪಹರಿಸಿ, ಸರಕು ಸಾಗಿಸುವ ಮೋಟಾರ್ ಬಂಡಿಯಲ್ಲಿ ಅವರ ತಂಡ ತಂಗಿದ್ದ ಡೀನ್ಸ್ ಹೋಟೆಲ್‌ಗೆ ಕೊಂಡೊಯ್ಯುತ್ತಾರೆ. ಅಲ್ಲಿ ಅಂಪೈರ್ ಬೇಗ್ ರನ್ನು ಕುರ‍್ಚಿಯೊಂದಕ್ಕೆ ಕಟ್ಟಿಹಾಕಿ ಬಲವಂತವಾಗಿ ಅವರಿಗೆ ವಿಸ್ಕಿ ಕುಡಿಸಿ, ಆ ಬಳಿಕ ಎರಡು ಬಕೆಟ್ ಐಸ್ ನೀರನ್ನು ಅವರ ತಲೆ ಮೇಲೆ ಸುರಿದು ಹಿಂಸಿಸುತ್ತಾರೆ. ಇದರಿಂದ ತಮಗೆ ಮುಂದಾಗಬಹುದಾದ ಸಮಸ್ಯೆಗಳ ಪರಿವೇ ಇಲ್ಲದೆ ಇಂಗ್ಲೆಂಡ್ ಆಟಗಾರು ವಿಕ್ರುತ ಸಂತಸ ಪಡುತ್ತಾರೆ. ಮಾರನೇ ದಿನ ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿ ಎರಡು ದೇಶಗಳ ನಡುವೆಯೇ ಕಂದಕ ಸ್ರುಶ್ಟಿಯಾಗುತ್ತದೆ. ಇದು ತಮ್ಮ ದೇಶದ ಪ್ರತಿಶ್ಟೆಗೆ ಆದ ಅವಮಾನ ಎಂದು ಪಾಕಿಸ್ತಾನದ ಮಾದ್ಯಮ ಹಾಗೂ ಕ್ರಿಕೆಟ್ ತಂಡ ಇನ್ನಿಲ್ಲದಂತೆ ಇಂಗ್ಲೆಂಡ್ ಅನ್ನು ತರಾಟೆಗೆ ತಗೆದುಕೊಳ್ಳುತ್ತವೆ. ಸರಣಿ ರದ್ದು ಮಾಡಲೇಬೇಕೆಂಬ ಕೂಗು ಹೆಚ್ಚಾದಾಗ MCC ಅದ್ಯಕ್ಶ ಹರೋಲ್ಡ್ ಅಲೆಕ್ಸಾಂಡರ್ ತಮ್ಮ ತಂಡ ಎಸಗಿದ ಅಪರಾದಕ್ಕೆ ಕ್ಶಮೆ ಕೇಳಿ ವಾತಾವರಣವನ್ನು ಕೊಂಚ ತಿಳಿ ಮಾಡುತ್ತಾರೆ. ವಿಚಾರಣೆಯ ವೇಳೆ ಕಾರ್ ಅಂಪೈರ್ ರನ್ನು ಗೋಳು ಹೊಯ್ಕೊಳ್ಳಲೆಂದು ತಮಾಶೆಗಾಗಿ ಹೀಗೆ ಮಾಡಿದೆವು ಎಂದುಸಮಜಾಯಿಶಿ ನೀಡಿದರೂ ದಿಟ ಬೇರೆಯೇ ಇದ್ದದ್ದು ಸ್ಪಶ್ಟವಾಗಿತ್ತು. ಕಂಡಿತ ಇಂತಹ ಕೆಟ್ಟ ವರ‍್ತನೆಗಾಗಿ ಅಪಹರಣದಲ್ಲಿ ಬಾಗಿಯಾಗಿದ್ದ ಎಲ್ಲಾ ಆಟಗಾರರಿಗೂ ಕ್ರಿಕೆಟ್ ನಿಂದ ಆಜೀವ ನಿಶೇದ ಹೇರಬೇಕಾದದು ನ್ಯಾಯಯುತವಾಗಿತ್ತು. ಆದರೆ ಇಂಗ್ಲೆಂಡ್ ಆ ದಿನಗಳಲ್ಲಿ ಐಸಿಸಿಯಲ್ಲಿ ಹೊಂದಿದ್ದ ಪ್ರಬಾವವನ್ನು ಬಳಸಿ ತಮ್ಮ ಆಟಗಾರರಿಗೆ ಯಾವುದೇಬಗೆಯ ಶಿಕ್ಶೆಯಾಗದಂತೆ ನೋಡಿಕೊಳ್ಳುತ್ತದೆ. ದುರಂತ ಎಂದರೆ ಇಂತಹ ಕೆಟ್ಟ ನಡವಳಿಕೆಯಿಂದ ಕ್ರಿಕೆಟ್ ನ ಮರ‍್ಯಾದೆ ಕಳೆದ ಡೊನಾಲ್ಡ್ ಕಾರ್ ಮುಂದಿನ ದಿನಗಳಲ್ಲಿ MCC ಯ ಸಹಾಯಕ ಸೆಕ್ರೆಟರಿ ಹಾಗೂ ಆ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೆಕ್ರೆಟರಿ ಆಗಿ ಕೂಡ ಬಡ್ತಿ ಪಡೆದರು. ಪಾಕಿಸ್ತಾನಿಗಳ ಗಾಯದ ಮೇಲೆ ಬರೆ ಎಳೆಯುವಂತೆ ಕಾರ್ ರನ್ನು 1972-73 ರ ಪಾಕಿಸ್ತಾನ ಪ್ರವಾಸಕ್ಕೆ ಇಂಗ್ಲೆಂಡ್ ತಂಡದ ಮ್ಯಾನೇಜರ್ ಆಗಿ ಕೂಡ ಅವರ ಕ್ರಿಕೆಟ್ ಮಂಡಳಿ ಕಳಿಸಿತ್ತು. ಕ್ರಿಕೆಟ್ ನ ಈ ಅತ್ಯಂತ ಕರಾಳ ಅದ್ಯಾಯದಲ್ಲಿ ನೋವುಂಡ ಅಂಪೈರ್ ಬೇಗ್ 1986 ರಲ್ಲಿ ಸಾವನ್ನಪ್ಪಿದರೆ ಕ್ರೌರ‍್ಯ ಮೆರೆದ ಕಾರ್ 2016 ರಲ್ಲಿ ಕೊನೆಯುಸಿರೆಳೆದರು.

ಶಾಕೂರ್ ರಾಣಾ-ಮೈಕ್ ಗ್ಯಾಟಿಂಗ್ ಜಟಾಪಟಿ

1987ರ ಇಂಗ್ಲೆಂಡ್ ಕ್ರಿಕೆಟ್ ತಂಡದ ಪಾಕಿಸ್ತಾನ ಪ್ರವಾಸದ ಪೈಸಲಾಬಾದ್ ಟೆಸ್ಟ್ ನಲ್ಲಿ ದಿನದ ಆಟದ ಕಡೇಗಳಿಗೆಗಳಲ್ಲಿ ತವರು ತಂಡ 106/5 ಕ್ಕೆ ಕುಸಿದು ಶೋಚನೀಯ ಪರಿಸ್ತಿತಿಯಲ್ಲಿರುತ್ತದೆ. ಈ ಹೊತ್ತಿನಲ್ಲಿ ಇನ್ನೂ ಹೆಚ್ಚು ಒತ್ತಡ ಹೇರಿ ಆ ದಿನದ ಆಟ ಮುಗಿಯುವ ಮುನ್ನ ಒಂದು ಹೆಚ್ಚು ಓವರ್ ಬೌಲ್ ಮಾಡಬೇಕೆನ್ನುವ ತರಾತುರಿಯಲ್ಲಿಇಂಗ್ಲೆಂಡ್ ನಾಯಕ ಮೈಕ್ ಗ್ಯಾಟಿಂಗ್ ಇರುತ್ತಾರೆ. ಹೆಮ್ಮಿಂಗ್ಸ್ ಬೌಲ್ ಮಾಡಲು ಅಣಿಯಾಗಿ ಓಡಲು ಮೊದಲುಮಾಡಿದಾಗ ಗ್ಯಾಟಿಂಗ್ ಪೈನ್ ಲೆಗ್ ಪೀಲ್ಡರ್ ಡೇವಿಡ್ ಕಪೆಲ್ ಅನ್ನು ಕೊಂಚ ಇತ್ತ ಬರುವಂತೆ ಸೂಚಿಸುತ್ತಾರೆ. ಇದನ್ನುಗಮನಿಸಿದ ಸ್ಕ್ವೇರ್ ಲೆಗ್ ಅಂಪೈರ್ ಶಾಕೂರ್ ರಾಣಾ, ಬೌಲರ್ ಬೌಲ್ ಮಾಡುವ ಪ್ರಕ್ರಿಯೆಯಲ್ಲಿರುವ ವೇಳೆ ಬ್ಯಾಟ್ಸ್ಮನ್ ಗೆ ತಿಳಿಯದಂತೆ ಪೀಲ್ಡಿಂಗ್ ಎಡೆ ಬದಲಿಸುವುದಕ್ಕೆ ಕ್ರಿಕೆಟ್ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಹೇಳಿ ‘ಡೆಡ್ ಬಾಲ್’ ಗೋಶಿಸುತ್ತಾರೆ. ಇದನ್ನು ಕಂಡು ಗ್ಯಾಟಿಂಗ್ ಅಂಪೈರ್ ಗೆ ಬೇಗ ನಿಮ್ಮ ಎಡೆಗೆ ಹೋಗಿ, ಈ ಓವರ್‌ ಪೂರ‍್ಣಗೊಳಿಸಬೇಕಿದೆ ಎನ್ನುತ್ತಾರೆ. ಆಗ ಅಂಪೈರ್ ರಾಣಾ ತಮ್ಮ ಎಡೆಗೆ ಮರಳಲು ಹೆಜ್ಜೆ ಹಾಕುತ್ತಾ ಗ್ಯಾಟಿಂಗ್ ರಿಗೆ ‘ಮೋಸಗಾರ’ ಎಂದು ಏರುದನಿಯಲ್ಲಿ ಕರೆಯುತ್ತಾರೆ. ಈ ಬೈಗುಳದಿಂದ ಸಿಟ್ಟಾಗಿ ತಾಳ್ಮೆ ಕಳೆದುಕೊಂಡ ಗ್ಯಾಟಿಂಗ್, ಅಂಪೈರ್ ರತ್ತ ದಾವಿಸಿ ಉತ್ತರ ಕೊಡಲು ಮುಂದಾಗುತ್ತಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ-ಕೈಮಿಲಾಯಿಸುವ ಮಟ್ಟಕ್ಕೆ ಪರಿಸ್ತಿತಿ ತಲುಪಿದಾಗ ಇಂಗ್ಲೆಂಡ್ ನ ಆಟಗಾರರು ಇಬ್ಬರನ್ನು ಬೇರ‍್ಪಡಿಸುತ್ತಾರೆ. ಆಟಕ್ಕೂ ಕೆಟ್ಟ ಹೆಸರು ತಂದು ನೋಡುಗರಿಗೂ ಈ ಚಕಮಕಿ ಅಕ್ಶರಶಹ ಅಸಹ್ಯಕರ ವಾತಾವರಣ ಸ್ರುಶ್ಟಿ ಮಾಡುತ್ತದೆ. ಇದರಿಂದ ತಮ್ಮ ಪ್ರತಿಶ್ಟೆಗೆ ದಕ್ಕೆ ಬಂದಿದೆ, ಹಾಗಾಗಿ ಗ್ಯಾಟಿಂಗ್ ಕ್ಶಮಾಪಣಾ ಪತ್ರ ನೀಡುವವರೆಗೂ ಈ ಪಂದ್ಯದಲ್ಲಿ ಅಂಪೈರಿಂಗ್ ಮಾಡಲೊಲ್ಲೆ ಎಂದು ರಾಣಾ ಪಂದ್ಯದಿಂದ ಹಿಂದೆ ಸರಿಯುತ್ತಾರೆ. ಇದರ ಪರಿಣಾಮವಾಗಿ ಮಾರನೇ ದಿನದ ಆಟ ನಡೆಯದೆ ಪರಿಸ್ತಿತಿ ಕೈ ಮೀರಿ ಹೋಗುವ ಹಂತ ತಲುಪುತ್ತದೆ. ಆಗ ಒಡನೇ ಈ ಪ್ರಕರಣದ ಗಂಬೀರತೆ ಅರಿತ MCC, ಇನ್ನೂ ಪರಿಸ್ತಿತಿ ಬಿಗಡಾಯಿಸಿ ವಿಕೋಪಕ್ಕೆ ಹೋಗುವ ಮುನ್ನ ತಮ್ಮ ನಾಯಕನಿಗೆ ಕ್ಶಮಾಪಣಾ ಪತ್ರ ನೀಡುವಂತೆ ಅಪ್ಪಣೆ ನೀಡುತ್ತಾರೆ. ಬೇರೆ ದಾರಿ ಕಾಣದೆ ತಮ್ಮ ಕ್ರಿಕೆಟ್ ಮಂಡಳಿಯ ಕಟ್ಟಪ್ಪಣೆಗೆ ತಲೆ ಬಾಗಿ ಗ್ಯಾಟಿಂಗ್ ಅಂಪೈರ್ ರಿಗೆ ನಾಲ್ಕನೇ ದಿನದ ಆಟಕ್ಕೆ ಮುನ್ನ ಪತ್ರದ ಮೂಲಕ ಕ್ಶಮೆ ಕೋರುತ್ತಾರೆ. ಬಳಿಕ ಪರಿಸ್ತಿತಿ ಸಹಜ ಸ್ತಿತಿಗೆ ಮರಳಿ ಆಟ ಮುಂದುವರೆಯುತ್ತದೆ. ಈ ಪ್ರಕರಣದ ವರುಶದ ಬಳಿಕ ಗ್ಯಾಟಿಂಗ್ ನಾಯಕತ್ವ ಕಳೆದುಕೊಂಡರೆ, ಆಟದಿಂದ ದೂರ ಸರಿದ ಅಂಪೈರ್ ರಾಣಾ 2001 ರಲ್ಲಿ ಕೊನೆಯುಸಿರೆಳೆಯುತ್ತಾರೆ.

ಮೇಲ್ಕಂಡ ಎರಡೂ ಪ್ರಕರಣಗಳು ಕ್ರಿಕೆಟ್ ಗೆ ಕಳಂಕ ತಂದದ್ದು ಸುಳ್ಳಲ್ಲ. ಇಂದಿನ ಕಟ್ಟುನಿಟ್ಟಾದ ಐಸಿಸಿ ನಿಯಮಗಳ ಹೊತ್ತಲ್ಲಿ ಇಂತಹ ಆಗುಹಗಳನ್ನು ಊಹಿಸಲೂ ಸಾದ್ಯವಿಲ್ಲ. ಅದರಲ್ಲೂ ಅಂಪೈರ್ ರಿಗೆ ಅಗೌರವ ತೋರುವ ಆಟಗಾರರಿಗೆ ಕಟಿಣ ಶಿಕ್ಶೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಆಟಕ್ಕೆ ಚ್ಯುತಿ ತರುವ ಇಂತಹ ವಿವಾದಗಳನ್ನು ತಡೆಯಲು ಐಸಿಸಿ ಹುಟ್ಟು ಹಾಕಿರುವ ಈಗಿನ ನಿಯಮಗಳನ್ನು ಪ್ರಶಂಶಿಸಲೇಬೇಕು. ಕ್ರಿಕೆಟ್ ಆಟವನ್ನು ಈಗ ಸಬ್ಯರ ಆಟ ಎಂದು ಕರೆಯಲಾಗದಿದ್ದರೂ ಆಟಗಾರರು ಕನಿಶ್ಟ ಸಬ್ಯತೆ ಕಾಪಾಡಿಕೊಂಡು ಆಡಬೇಕಿರುವುದು ಆಟದ ಬವಿಶ್ಯಕ್ಕೆಅನಿವಾರ‍್ಯ!

(ಚಿತ್ರ ಸೆಲೆ: telegraph.co.uk)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *