ಬೇಪೋರ್ ಬೀಚಿನಲ್ಲಿರುವ ತೇಲುವ ಸೇತುವೆ
– ಕೆ.ವಿ.ಶಶಿದರ.
ಕೇರಳ ‘ದೇವರ ಸ್ವಂತ ನಾಡೆಂದು’ ಪ್ರಸಿದ್ದಿ ಪಡೆದಿದೆ. ಅಲ್ಲಿನ ಅದ್ಬುತ ಪ್ರಕ್ರುತಿ ಸೌಂದರ‍್ಯವೇ ಅದನ್ನು ದೇವರ ನಾಡೆಂದು ಕರೆಯಲು ಪ್ರೇರಣೆ. ಇಂತಹ ನಾಡಿಗೆ ಪ್ರವಾಸಿಗರನ್ನು ಸೆಳೆಯಲು ಕೇರಳದ ಪ್ರವಾಸೋದ್ಯಮ ಇಲಾಕೆ ಪ್ರತಿಯೊಂದು ತಾಣವನ್ನು ಆಕರ‍್ಶಕವಾಗಿ ಅಬಿವ್ರುದ್ದಿ ಪಡಿಸುವತ್ತ ದಾಪುಗಾಲು ಹಾಕುತ್ತಿದೆ. ಈ ರೀತಿಯಲ್ಲಿ ಅಬಿವ್ರುದ್ದಿ ಪಡಿಸಿ ಮಾರ‍್ಚ್ 31 ರಂದು ಲೋಕಾರ‍್ಪಣೆಗೊಂಡ ಪ್ರವಾಸಿ ತಾಣ ಬೇಪೋರ್ ಅಲ್ಲಿರುವ ಮರೀನಾ ಬೀಚ್‍ನ ತೇಲುವ ಸೇತುವೆ. ಈ ತೇಲುವ ಸೇತುವೆಯನ್ನು ಬೇಪೋರ್ ಬಂದರಿನಲ್ಲಿ ಸ್ತಾಪಿಸಲು ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ ಹಾಗೂ ಕೋಜಿಕೋಡ್‍ನ ಬಂದರು ಇಲಾಕೆ ಶ್ರಮಿಸಿದೆ.
ಈ ತೇಲುವ ಸೇತುವೆಯು ಒಂದು ರೀತಿಯಲ್ಲಿ ಸಾಹಸ ಕ್ರೀಡೆಯಾಗಿದ್ದು, ಗಟ್ಟಿ ಗುಂಡಿಗೆ ಇರುವ ಯಾರು ಬೇಕಾದರೂ ಆನಂದಿಸಬಹುದು. ಈ ಸೇತುವೆಯ ಮೇಲೆ ನಡೆದು ಹೋಗಬಹುದು. ಇದರಡಿಯಲ್ಲಿ ಬರುವ ಅಲೆಗಳು ಸಣ್ಣದಿರಲಿ, ದೊಡ್ಡದಿರಲಿ, ಈ ಸೇತುವೆಯನ್ನು ಮೇಲಕ್ಕೆತ್ತಿ ಕೆಳಗಿಳಿಸುತ್ತದೆ. ಅಲೆಯ ರಬಸಕ್ಕೆ ಅಲೆಯಂತಯೇ ಮೇಲೇರಿ ಅದೇ ರಬಸದಲ್ಲಿ ಕೆಳಗಿಳಿದು ಬರುವ ಅನುಬವ ವರ‍್ಣಿಸಲಾಸದ್ಯ. ಇದು ಪ್ರವಾಸಿಗರಿಗೆ ಅತ್ಯಂತ ನವನವೀನ ಅನುಬವ ನೀಡುವ ಹಿನ್ನೆಲೆಯಲ್ಲಿ ಇದರ ಪ್ರಸಿದ್ದಿ ನಾಡಿನಾದ್ಯಂತ ಪಸರಿಸುತ್ತಿದೆ.
ತೇಲುವ ಸೇತುವೆಯ ಕುತೂಹಲಕಾರಿ ಸಂಗತಿಗಳು:
ಈ ಸೇತುವೆಯ ಉದ್ದ ಒಂದು ನೂರು ಮೀಟರ‍್ಗಳು. ಅಗಲ ಮೂರು ಮೀಟರ‍್ಗಳು. ಇದನ್ನು ಹೈ ಡೆನ್ಸಿಟಿ ಪಾಲಿಎತಿಲೀನ್ (HDPI) ಬ್ಲಾಕ್‍ಗಳಿಂದ ಮಾಡಲ್ಪಟ್ಟಿದೆ. ಇದರಲ್ಲಿ ಏಕಕಾಲಕ್ಕೆ ಐದು ನೂರು ಜನ ನಿಂತು ಅಲೆಯ ಏರಿಳಿತದ ಆನಂದವನ್ನು ಅನುಬವಿಸಬಹುದಾಗಿದೆ, ಸದ್ಯದಲ್ಲಿ ಸುರಕ್ಶತೆಯ ದ್ರುಶ್ಟಿಯಿಂದ ಒಂದು ಬ್ಯಾಚಿಗೆ ಕೇವಲ ಐವತ್ತು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಸೇತುವೆಯ ಎರಡೂ ಬದಿಯಲ್ಲಿ ರೈಲಿಂಗ್ಸ್ ಗಳನ್ನು ಹಾಕಲಾಗಿದೆ. ಅಲೆಯ ಏರಿಳಿತದಿಂದ ಬಯಬೀತರಾದವರು ರೈಲಿಂಗುಗಳ ಆಸರೆ ಪಡೆಯಬಹುದು. ಸಮುದ್ರದೊಳಗೆ ನೂರು ಮೀಟರ್ ನಶ್ಟು ದೂರ ತನ್ನ ನಾಲಿಗೆಯನ್ನು ಚಾಚಿಕೊಂಡಿರುವ ಈ ಸೇತುವೆಯ ತುದಿಯಲ್ಲಿ ಹದಿನೈದು ಮೀಟರ್ ಅಗಲದ ವೇದಿಕೆಯಿದೆ. ಈ ವೇದಿಕೆಯಲ್ಲಿ ನಿಂತು ಮೋಡಿ ಮಾಡುವ ಸಮುದ್ರದ ನೋಟವನ್ನು ಆನಂದಿಸಬಹುದು. ಕೆಲವರಂತೂ ಸಮಯದ ಪರಿವೆಯನ್ನೇ ಮರೆತು ಸಮುದ್ರದ ಮಾಂತ್ರಿಕ ನೋಟಕ್ಕೆ ಮಂತ್ರಮುಗ್ದರಾಗಿ ಬಿಡುತ್ತಾರೆ. ಸಮುದ್ರದ ದೀಮಂತ ದ್ರುಶ್ಯವನ್ನು ನೋಡುವವರ ಅನುಕೂಲಕ್ಕಾಗಿ ಈ ವೇದಿಕೆಯ ಸುತ್ತಲೂ ರೈಲಿಂಗುಗಳನ್ನು ಅಳವಡಿಸಲಾಗಿದೆ.
ಈ ತೇಲುವ ಸೇತುವೆಯ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ, ಇದನ್ನು ಸುಲಬವಾಗಿ ಕಳಚಿಹಾಕಬಹುದು. ಅಶ್ಟೇ ಸುಲಬವಾಗಿ ಮತ್ತೆ ಜೋಡಿಸಬಹುದು. ಅಗತ್ಯ ಬಿದ್ದಲ್ಲಿ ಇದನ್ನು ತುಂಬಾ ಸರಾಗವಾಗಿ ಬೇರೆಡೆಗೆ ಸ್ತಳಾಂತರಿಸಬಹುದು. ತೇಲುವ ಈ ಸೇತುವೆಯಲ್ಲಿ ಏಳು ಕೆಜಿ ತೂಗುವ ಸಾವಿರದ ಮೂನ್ನೂರು (1300) ಹೆಚ್‍ಡಿಪಿಯಿ ಬ್ಲ್ಯಾಕುಗಳಿವೆ. ಸೇತುವೆಯ ಉದ್ದಗಲಕ್ಕೂ ನೂರು ಕೆಜಿ ಶಕ್ತಿಯ ಮೂವತ್ತೊಂದು ಲಂಗರುಗಳನ್ನು ಅಳವಡಿಸಿ, ಯಾವುದೇ ಅನಾಹುತ, ಅಪಗಾತ, ಅವಗಡ ಸಂಬವಿಸುವ ಸಾದ್ಯತೆಯನ್ನು ಸಂಪೂರ‍್ಣವಾಗಿ ನಿವಾರಿಸಲಾಗಿದೆ.
ಕೇರಳದ ಕರಾವಳಿಯ ಉದ್ದಕ್ಕೂ ಹಿನ್ನೀರಿನ ಪ್ರವಾಸೋದ್ಯಮ ಈಗಾಗಲೇ ಅತ್ಯಂತ ಆಕರ‍್ಶಬರಿತವಾಗಿದೆ. ಅದಕ್ಕೆ ಕೊಜಿಕೋಡ್‍ನ ಈ ವಿನೂತನ ತೇಲುವ ಸೇತುವೆ ಮತ್ತೊಂದು ಗರಿ. ಸಾಹಸ ಕ್ರೀಡೆ ಇಶ್ಟಪಡುವವರಿಗೆ ಇದಕ್ಕಿಂತಾ ಅತ್ಯುತ್ತಮ ಪ್ರವಾಸಿ ತಾಣ ಬೇರೊಂದಿಲ್ಲ. ಈ ತೇಲುವ ಸೇತುವೆ ಪ್ರವಾಸಿಗರಿಗೆ ಬೆಳಗಿನ ಹನ್ನೊಂದರಿಂದ ಸಂಜೆ ಆರರವರೆವಿಗೂ ತೆರೆದಿರುತ್ತದೆ. ಪ್ರತಿಯೊಬ್ಬ ಪ್ರವಾಸಿಗನಿಗೂ, ಸುರಕ್ಶತೆಯ ದ್ರುಶ್ಟಿಯಿಂದ, ಲೈಪ್ ಜಾಕೆಟ್ ನೀಡಲಾಗುತ್ತದೆ. ಸೇತುವೆಯ ಇಕ್ಕೆಲಗಳಲ್ಲಿ ನುರಿತ ಈಜುಗಾರರು ಕಾವಲಿರುತ್ತಾರೆ. ಇದರಲ್ಲಿ ಪ್ರವೇಶ ಪಡೆಯಲು ಪಾವತಿಸಬೇಕಾದ ಶುಲ್ಕ ರೂ ಒಂದು ನೂರು. ಜೀವನದಲ್ಲಿ ಒಮ್ಮೆ ಸಮುದ್ರದ ಅಲೆಗಳ ಮೇಲೆ ಸವಾರಿ ಮಾಡುವ ಮೋಜನ್ನು ಕೇವಲ ನೂರು ರೂಪಾಯಿ ಪಾವತಿಸಿ ಅನುಬವಿಸಬಹದು. ಇತ್ತೀಚಿಗಶ್ಟೇ ಲೋಕಾರ‍್ಪಣೆಗೊಂಡ ಈ ತೇಲುವ ಸೇತುವೆಯ ನಿರ‍್ಮಾಣದ ವೆಚ್ಚ, ವಾಸ್ತುಶಿಲ್ಪ, ಗುತ್ತಿಗೆದಾರರು, ನಿರ‍್ಮಾಣಕ್ಕೆ ತೆಗೆದುಕೊಂಡ ಸಮಯ ಮುಂತಾದ ವಿವರಗಳು ಇನ್ನೂ ಸಾರ‍್ವಜನಿಕಗೊಳ್ಳಬೇಕಿದೆ.
( ಮಾಹಿತಿಸೆಲೆ ಮತ್ತು ಚಿತ್ರಸೆಲೆ: thesportsgrail.com, onmanorama.com )
ಇತ್ತೀಚಿನ ಅನಿಸಿಕೆಗಳು