ಕಾರದ ಕೋಳಿ ಹುರುಕುಲು
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು
- ಚಿಕನ್ – 1/2 ಕಿಲೋ
- ಈರುಳ್ಳಿ – ಒಂದೂವರೆ
- ಅರಿಶಿಣ – 1/2 ಚಮಚ
- ಶುಂಟಿ – 2 ಇಂಚು
- ಹಸಿ ಮೆಣಸಿನಕಾಯಿ/ಬ್ಯಾಡಗಿ ಮೆಣಸು – 4-5
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಬೆಳ್ಳುಳ್ಳಿ – 15 -20 ಎಸಳು
- ಕಾಳುಮೆಣಸು ಪುಡಿ – 1 ರಿಂದ 2 ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
- ಎಣ್ಣೆ – 7-8 ಚಮಚ
- ಕಾರದಪುಡಿ – 1ಚಮಚ
ಮಾಡುವ ಬಗೆ
ಮೊದಲಿಗೆ ಒಂದು ಹಂಚು ಅತವಾ ಬಾಂಡಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ 1/2 ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ/ಬ್ಯಾಡಗಿ ಮೆಣಸು, ಶುಂಟಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2 ನಿಮಿಶ ನಡು ಉರಿಯ ಬೆಂಕಿಯಲ್ಲಿ ಹುರಿದುಕೊಳ್ಳಿ. ಹೀಗೆ ಹುರಿದುಕೊಂಡ ಮೇಲೆ, ಒಂದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಆಮೇಲೆ ತೊಳೆದಿಟ್ಟುಕೊಂಡ ಚಿಕನ್‍ಗೆ ಸ್ವಲ್ಪ ಹರಳುಪ್ಪು, ಸ್ವಲ್ಪ ಅರಿಶಿಣ ಮತ್ತು ರುಬ್ಬಿಟ್ಟುಕೊಂಡ ಗಸಿಯನ್ನು ಸೇರಿಸಿ ಚೆನ್ನಾಗಿ ಕಲಸಿ ಒಂದರ‍್ದಗಂಟೆ ಹಾಗೆ ಇಡಿ.
ಆಮೇಲೆ ಒಂದು ಪಾತ್ರೆಗೆ 5-6 ಚಮಚ ಎಣ್ಣೆ, 1 ಈರುಳ್ಳಿ, 1 ಹಸಿಮೆಣಸಿನಕಾಯಿ, ಜಜ್ಜಿಟ್ಟುಕೊಂಡ ಬೆಳ್ಳುಳ್ಳಿ-ಶುಂಟಿ ಹಾಕಿ ಹುರಿದುಕೊಳ್ಳಿ. ನಂತರ ಗಸಿ ಸವರಿಟ್ಟ ಚಿಕನ್ ಹಾಕಿ, ಕಾಲು ಚಮಚ ಅರಿಶಿಣ, 2 ಚಮಚ ಕಾಳುಮೆಣಸಿನ ಪುಡಿ, 1 ಚಮಚ ಕಾರದ ಪುಡಿ ಮತ್ತು ಬೇಕಾದಲ್ಲಿ ರುಚಿಗೆ ತಕ್ಕಶ್ಟು ಉಪ್ಪು ಹಾಕಿ 15-20 ನಿಮಿಶ ನಡು ಉರಿಯಲ್ಲಿ ಬೇಯಿಸಿಕೊಳ್ಳಿ. ಬೇಕಾದಲ್ಲಿ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಳ್ಳಬಹುದು. ಈಗ ಬಿಸಿ ಬಿಸಿ ಕಾರದ ಕೋಳಿ ಹುರುಕುಲು ತಯಾರಾಗಿದೆ. ಇದನ್ನು ಅನ್ನದ ಜೊತೆ ಸವಿಯಲು ಬಹಳ ಚೆನ್ನಾಗಿರುತ್ತದೆ. ಈ ಹುರುಕಲನ್ನು ಚೆಂದವಾಗಿ ಕಾಣಿಸಲು ಅದರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಉದುರಿಸಿಕೊಳ್ಳಬಹುದು.
ಇತ್ತೀಚಿನ ಅನಿಸಿಕೆಗಳು