ಅಂಬಿಗರ ಚೌಡಯ್ಯನ ವಚನಗಳ ಓದು – 10ನೆಯ ಕಂತು

– ಸಿ.ಪಿ.ನಾಗರಾಜ.

ಅಂಬಿಗರ ಚೌಡಯ್ಯ, Ambigara Choudayya

ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ
ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ
ಅರಿಯದವಂಗೆ ಅರಿಕೆಯ ಹೇಳಿದಡೆ ಅರಿವನಲ್ಲದೆ
ಅರಿದು ಮರೆದವಂಗೆ ಬೇರೊಂದೆಡೆಯ ಹೇಳಿಹೆನೆಂದಡೆ
ಕಡೆ ನಡು ಮೊದಲಿಲ್ಲ ಎಂದನಂಬಿಗ ಚೌಡಯ್ಯ.

ಅರಿವಿಲ್ಲದ ವ್ಯಕ್ತಿಗೆ ತಿಳುವಳಿಕೆಯನ್ನು ಹೇಳಿದರೆ ಅರಿತುಕೊಳ್ಳುತ್ತಾನೆ. ಆದರೆ ಅರಿತಿದ್ದರೂ ಮರೆತವನಂತೆ ಇಲ್ಲವೇ ಗೊತ್ತಿಲ್ಲದವನಂತೆ ನಟಿಸುವ ವ್ಯಕ್ತಿಗೆ ಯಾವ ರೀತಿಯಿಂದಲೂ ಹೇಳಿದರೂ ಅರಿವು ಅವನ ಮನಸ್ಸಿಗೆ ನಾಟುವುದಿಲ್ಲ. ಏಕೆಂದರೆ ಅಂತಹ ವ್ಯಕ್ತಿಯು ಉದ್ದೇಶಪೂರ‍್ವಕವಾಗಿಯೇ ಅರಿವಿನ ಸಂಗತಿಗಳನ್ನು ನಿರಾಕರಿಸುತ್ತಾನೆ ಎಂಬ ವಿಚಾರವನ್ನು ಈ ವಚನದಲ್ಲಿ ಹೇಳಲಾಗಿದೆ.

‘ಅರಿವು ’ ಎಂದರೆ “ಲೋಕಜೀವನದಲ್ಲಿ ಯಾವುದು ಸರಿ/ಯಾವುದು ತಪ್ಪು; ಯಾವುದು ನೀತಿ/ಯಾವುದು ಅನೀತಿ; ಯಾವುದು ವಾಸ್ತವ/ಯಾವುದು ಕಲ್ಪಿತ” ಎಂಬುದನ್ನು ಒರೆಹಚ್ಚಿ ನೋಡಿ, ತನ್ನನ್ನು ಒಳಗೊಂಡಂತೆ ಲೋಕದ ಜನಸಮುದಾಯಕ್ಕೆ ಒಳಿತನ್ನು ಮಾಡುವ ನುಡಿ ಮತ್ತು ದುಡಿಮೆಯ ಸ್ವರೂಪವನ್ನು ತಿಳಿಯುವುದು:

ತಟಾಕ=ಕೆರೆ; ಒಡೆ=ಬಿರಿ/ಸೀಳು; ಒಡೆದಡೆ=ಒಡೆದರೆ; ತಟಾಕ ಒಡೆದಡೆ=ಕೆರೆಗೆ ಕಟ್ಟಿರುವ ಏರಿಯು ಒಡೆದು ಹೋದರೆ/ಬಿರುಕು ಬಿಟ್ಟರೆ; ಕಟ್ಟು+ಪಡೆವುದು+ಅಲ್ಲದೆ; ಕಟ್ಟು=ಏರಿ; ಪಡೆ=ಹೊಂದು; ಕಟ್ಟುಪಡೆವುದು=ಮತ್ತೆ ಏರಿಯನ್ನು ಕಟ್ಟಬಹುದು; ಅಲ್ಲದೆ=ಹೊರತು;

ಅಂಬುಧಿ=ಸಾಗರ/ಕಡಲು; ಮೇರೆ+ತಪ್ಪಿದಲ್ಲಿ; ಮೇರೆ=ಎಲ್ಲೆ/ದಡ/ತೀರ; ತಪ್ಪು=ಮೀರು/ಅತಿಕ್ರಮಿಸು; ಅಂಬುಧಿ ಮೇರೆದಪ್ಪದಲ್ಲಿ=ಕಡಲಿನಲ್ಲಿರುವ ಅಪಾರವಾದ ನೀರು ಬಿರುಗಾಳಿಯ/ಸುಂಟರಗಾಳಿಯ ಹೊಡೆತಕ್ಕೆ ಸಿಲುಕಿ ದೊಡ್ಡ ದೊಡ್ಡ ಅಲೆಗಳಾಗಿ ಉಕ್ಕೆದ್ದು ದಡವನ್ನು ಅಪ್ಪಳಿಸಿ, ತನ್ನ ಎಲ್ಲೆಯನ್ನು ಮೀರಿ ನುಗ್ಗಿ ಹರಿದಾಗ;

ಕಟ್ಟಿಂಗೆ=ಏರಿಗೆ/ಕಟ್ಟೆಗೆ; ಹಿಂಗಿ=ಹಿಂದಕ್ಕೆ ಸರಿ/ತಗ್ಗು; ನಿಂದುದು+ಉಂಟೆ; ನಿಂದುದು=ನಿಂತುಕೊಂಡಿದ್ದು/ಮುಂದಕ್ಕೆ ಬಾರದೆ ಇರುವ ಎಡೆಯಲ್ಲಿಯೇ ಇರುವುದು; ಉಂಟೆ=ಇದೆಯೇ;

ಅರಿ=ತಿಳಿ; ಅರಿಕೆ=ಅರಿವಿನ ಸಂಗತಿಗಳು; ಅರಿಯದವಂಗೆ=ತಿಳಿಯದವನಿಗೆ; ಹೇಳಿದಡೆ=ಹೇಳಿದರೆ; ಅರಿವನ್+ಅಲ್ಲದೆ; ಅರಿವನ್=ತಿಳಿದುಕೊಳ್ಳುತ್ತಾನೆ;

ಅರಿದು=ತಿಳಿದು; ಮರೆ=ಕಡೆಗಣಿಸು/ನೆನಪಿನಿಂದ ತೆಗೆದುಹಾಕು; ಮರೆದವಂಗೆ=ಮರೆತವನಿಗೆ; ಬೇರೆ+ಒಂದು+ಎಡೆಯ; ಎಡೆ=ಚೆನ್ನಾಗಿ ಕಾಣು/ಮನದಟ್ಟಾಗು; ಹೇಳಿಹೆನ್+ಎಂದಡೆ; ಹೇಳಿಹೆನ್=ಹೇಳುತ್ತೇನೆ; ಎಂದಡೆ=ಎಂದರೆ;

ಕಡೆ=ಕೊನೆ/ಅಂತ್ಯ; ನಡು=ಮದ್ಯ; ಮೊದಲ್+ಇಲ್ಲ; ಮೊದಲು=ಆದಿ; ಎಂದನ್+ಅಂಬಿಗ; ಎಂದನ್=ಎಂದು ಹೇಳಿದನು; ಅಂಬಿಗ=ನದಿಯಲ್ಲಿ ದೋಣಿಯನ್ನು ನಡೆಸುವ ಕಾಯಕದವನು;

ಈ ವಚನದಲ್ಲಿ ಜಾತಿ, ಮತ ಮತ್ತು ದೇವರ ಹೆಸರಿನಲ್ಲಿ ಇಡೀ ಜನಸಮುದಾಯವನ್ನು ಸುಲಿಗೆ ಮಾಡಿ ವಂಚಿಸುತ್ತಿರುವ ಓದು ಬರಹವನ್ನು ಬಲ್ಲ ವ್ಯಕ್ತಿಗಳನ್ನು ಯಾವ ರೀತಿಯಿಂದಲೂ ತಿದ್ದಲಾಗುವುದಿಲ್ಲವೆಂಬ ವಿಚಾರವನ್ನು ಒಂದೊಂದು ರೂಪಕ ಮತ್ತು ನುಡಿಗಟ್ಟಿನ ಮೂಲಕ ವಚನಕಾರನು ಚಿತ್ರಿಸಿದ್ದಾನೆ.

1. ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ=ಇದೊಂದು ರೂಪಕವಾಗಿ ಬಳಕೆಗೊಂಡಿದೆ. ಮಳೆಗಾಲದಲ್ಲಿ ಕೆರೆಗೆ ಹರಿದು ಬಂದ ನೀರಿನ ಪ್ರಮಾಣ ಹೆಚ್ಚಾಗಿ ಕೆರೆಗೆ ಕಟ್ಟಿದ್ದ ಏರಿಯು ಕೊಚ್ಚಿಹೋದರೆ ಇಲ್ಲವೇ ಬಿರುಕು ಬಿಟ್ಟರೆ , ಮತ್ತೆ ಕೆರೆಗೆ ಏರಿಯನ್ನು ಕಟ್ಟಿ ನೀರನ್ನು ನಿಲ್ಲಿಸಬಹುದು; ಆದರೆ ಕಡಲಿನ ಜಲರಾಶಿಯು ಉಕ್ಕೆದ್ದು ಹರಿದು ದಡವನ್ನು ಅಪ್ಪಳಿಸಿ ಮುನ್ನುಗ್ಗಿದಾಗ ಯಾವುದೇ ಬಗೆಯ ಏರಿಯನ್ನು ಕಟ್ಟಿ, ಕಡಲಿನ ನೀರನ್ನು ಮುಂದಕ್ಕೆ ನುಗ್ಗದಂತೆ ತಡೆಯಲಾಗುವುದಿಲ್ಲ. ಅಂತೆಯೇ ತಿಳುವಳಿಕೆಯಿಲ್ಲದ ವ್ಯಕ್ತಿಗಳಿಗೆ ತಿಳಿಯ ಹೇಳಿ ಅವರ ನಡೆನುಡಿಯಲ್ಲಿ ಸಹ ಮಾನವರ ಮತ್ತು ಸಮಾಜದ ಬಗ್ಗೆ ಪ್ರೀತಿ, ಕರುಣೆ ಮತ್ತು ಗೆಳೆತನದ ಒಳಮಿಡಿತಗಳನ್ನು ಮೂಡಿಸಬಹುದು. ಆದರೆ ಓದು ಬರಹದ ಮೂಲಕ ಅಪಾರವಾದ ತಿಳುವಳಿಕೆಯನ್ನು ಪಡೆದಿದ್ದರೂ ತಮ್ಮ ತಮ್ಮ ಜಾತಿ ಮತ್ತು ಮತದ ಮಂದಿಯೇ ಸಮಾಜದ ಸಂಪತ್ತನ್ನು ಮತ್ತು ರಾಜಕೀಯ ಗದ್ದುಗೆಯನ್ನು ಪಡೆಯಬೇಕೆಂಬ ಕೆಟ್ಟ ಉದ್ದೇಶದಿಂದ ದೇವರ ಹೆಸರಿನಲ್ಲಿ ಸಹಮಾನವರಿಗೆ ಕೇಡನ್ನು ಬಗೆಯುತ್ತಿರುವ ವ್ಯಕ್ತಿಗಳ ಮನದಲ್ಲಿ ಯಾವ ರೀತಿಯಿಂದಲೂ ಮಾನವೀಯ ಗುಣಗಳನ್ನು ನೆಲೆಗೊಳಿಸಲು ಆಗುವುದಿಲ್ಲ. ಏಕೆಂದರೆ ಇಂತಹ ವ್ಯಕ್ತಿಗಳು ತಾವು ಪಡೆದ ಅರಿವಿನಿಂದ ತಮ್ಮ ತಮ್ಮ ಜಾತಿ ಮತ್ತು ವರ‍್ಗದ ಹಿತವನ್ನು ಕಾಯ್ದುಕೊಳ್ಳುತ್ತಾರೆಯೇ ಹೊರತು ದುಡಿಯುವ ವರ‍್ಗಕ್ಕೆ ಸೇರಿದ ಕೆಳಜಾತಿ ಹಾಗೂ ಇನ್ನಿತರ ಮತದ ಜನಸಮುದಾಯದ ಬದುಕನ್ನು ಹಸಿವು, ಬಡತನ ಮತ್ತು ಅಪಮಾನದ ಕಡೆಗೆ ದೂಡುತ್ತಾರೆ ಎಂಬ ತಿರುಳಿನಲ್ಲಿ ಈ ರೂಪಕ ಬಳಕೆಯಾಗಿದೆ;

2. ಕಡೆ ನಡು ಮೊದಲಿಲ್ಲ=ಇದೊಂದು ನುಡಿಗಟ್ಟು. ಕೆಟ್ಟ ನಡೆನುಡಿಗಳನ್ನೇ ತನ್ನ ಬದುಕಿನ ಉಸಿರನ್ನಾಗಿ ಮಾಡಿಕೊಂಡಿರುವ ವ್ಯಕ್ತಿಯನ್ನು ತಿದ್ದಲು ಇತರರು ಆಡುವ ಮಾತಿನಿಂದ ಇಲ್ಲವೇ ಮಾಡುವ ಕೆಲಸದಿಂದ ಏನೊಂದು ಪ್ರಯೋಜನವಿಲ್ಲ. ಏಕೆಂದರೆ ಕೆಟ್ಟ ವ್ಯಕ್ತಿಯ ಮನದಲ್ಲಿ ಸಹಮಾನವರ ಬಗ್ಗೆ ತುಸುವಾದರೂ ಕರುಣೆ, ಸಹನೆ ಮತ್ತು ಸಹಬಾಳ್ವೆಯ ಒಳಮಿಡಿತಗಳೇ ಇರುವುದಿಲ್ಲ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: