‘ಇಂಗು ತೆಂಗು ಇದ್ರೆ…’

– ಶ್ಯಾಮಲಶ್ರೀ.ಕೆ.ಎಸ್.

ಬಾರತೀಯ ಅಡುಗೆ ಶೈಲಿ ತುಂಬಾ ವಿಶೇಶವಾದುದು. ಇದಕ್ಕೆ ಮುಕ್ಯ ಕಾರಣ ನಾವು ಅಡುಗೆ ತಯಾರಿಸುವ ಬಗೆ ಹಾಗೂ ಬಳಸುವ ವಿಶಿಶ್ಟವಾದ ಮಸಾಲೆ ಪದಾರ‍್ತಗಳು. ಅಂತಹ ಮಸಾಲೆ ಪದಾರ‍್ತಗಳಲ್ಲೊಂದು ‘ಇಂಗು’(ಹಿಂಗು). ವೈಜ್ನಾನಿಕವಾಗಿ ಪೆರುಲಾ ಅಸಪೋಟಿಡಾ (Ferula Asafoetida) ಎಂದು ಕರೆಸಿಕೊಳ್ಳುವ ಇಂಗಿನ ಮೂಲ ಇರಾನ್. ಇಂಗು ಪೆರುಲಾ ತಳಿಗೆ ಸೇರಿದ್ದು ಇದನ್ನು ಆಪ್ಗಾನಿಸ್ತಾನ ಮತ್ತು ಟೆಕ್ಸಾಸ್ – ಮೆಕ್ಸಿಕೊ ಗಡಿ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯ ಜೊತೆಗೆ ಇಂಗನ್ನು ಇರಾನಿನಿಂದ ಬಾರತಕ್ಕೆ ತರಲಾಗಿದೆ ಎಂಬುದಾಗಿ ಮೂಲಗಳು ತಿಳಿಸುತ್ತವೆ. ಸುಮಾರು 16 ನೆಯ ಶತಮಾನದಲ್ಲಿ ಇಂಗನ್ನು ಬಾರತಕ್ಕೆ ಪರಿಚಯಿಸಿದವರು ಮೊಗಲರು.

‘ಇಂಗು ತಿಂದ ಮಂಗನಂತಾಗಿದೆ’ ಎಂಬ ಗಾದೆ ಮಾತಿನಲ್ಲಿ ಇಂಗಿನ ರುಚಿ ಕಹಿಯಾಗಿರುತ್ತದೆ ಎನ್ನುವ ಒಳಾರ‍್ತವಿದೆ. ಇಂಗು ಹಾಗೆಯೇ ತಿನ್ನಲು ಹಿತಕರವಾಗಿರುವುದಿಲ್ಲ. ಆದರೆ ಒಂದು ಚಿಟಿಕೆ ಇಂಗನ್ನು ಅಡಿಗೆ ತಯಾರಿಕೆಯಲ್ಲಿ ಉಪಯೋಗಿಸಿದ ನಂತರ ಅಡಿಗೆಯ ಪರಿಮಳ ಹಿತಕರವಾಗಿಯೂ, ತಿನ್ನಲು ಸ್ವಾದಬರಿತವಾಗಿಯೂ ಇರುತ್ತದೆ. ಸಾಸಿವೆ, ಜೀರಿಗೆ, ಕರಿಬೇವಿನಂತೆ ಇಂಗು ಸಹ ಒಗ್ಗರಣೆಯಲ್ಲಿ ಬಾಗಿಯಾಗುತ್ತದೆ. ‘ಇಂಗು-ತೆಂಗು ಇದ್ದರೆ ಮಂಗನು ಅಡಿಗೆ ಮಾಡಬಲ್ಲದು’ ಎಂಬ ಇನ್ನೊಂದು ಗಾದೆ ಮಾತಿದೆ.

ಕರಾವಳಿ, ಮಲೆನಾಡಿನ ಅಡುಗೆ ಮನೆಗಳ ಅವಿಬಾಜ್ಯ ಅಂಗ ಈ ಇಂಗು. ಆ ಬಾಗದಲ್ಲಿ ಇಂಗು ಇಲ್ಲದೆ ಅವರ ಅಡುಗೆ ಪರಿಪೂರ‍್ಣವಾಗುವುದಿಲ್ಲ. ಅಶ್ಟೇ ಅಲ್ಲ, ನಮ್ಮ ಕರುನಾಡಿನ ಹಲವಾರು ಬಾಗಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿಯನ್ನು ಸೇವಿಸದವರು ಪರ‍್ಯಾಯವಾಗಿ ಇಂಗನ್ನು ಬಳಸುವವರಿದ್ದಾರೆ. ನಮ್ಮ ಅಜ್ಜಿ-ಅಮ್ಮಂದಿರು ತಯಾರಿಸುತ್ತಿದ್ದ ಬಾಯಿ ಚಪ್ಪರಿಸುವಂತಹ ಉಪ್ಪಿನಕಾಯಿಯು ವರ‍್ಶ ಪೂರ‍್ತಿ ಕೆಡದಂತೆ ಇಡಲು ಇಂಗನ್ನು ಬಳಸುವುದನ್ನು ನೋಡಿರುತ್ತೇವೆ. ಯಾವುದೇ ಪಂಗಸ್ ಅತವಾ ಹುಳುಗಳು ಉಪ್ಪಿನಕಾಯಿಯ ಬಳಿ ಸುಳಿಯದಂತೆ ಇಂಗು ಜೋಪಾನ ಮಾಡುತ್ತದೆ. ಕೆಲವೆಡೆ ಸಾಂಬಾರ್ ಪುಡಿ ತಯಾರಿಕೆಯಲ್ಲಿ ಇಂಗಿನ ಪಾತ್ರವಿರುತ್ತದೆ.

ಇಂಗಿನ ವಾಸನೆ ಕಟುವಾದ್ದರಿಂದ ಗಾಳಿಯಾಡದ ಡಬ್ಬಿಯಲ್ಲೇ ಇದನ್ನು ಶೇಕರಿಸಿಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅದರ ಕಡು ಪರಿಮಳ ಅಕ್ಕ ಪಕ್ಕದಲ್ಲಿರುವ ಇನ್ನಿತರ ಪದಾರ‍್ತಗಳ ವಾಸನೆಯನ್ನೇ ಬದಲಿಸಿಬಿಡುತ್ತದೆ. ಅಂಗಡಿಗಳಲ್ಲಿ ಇಂಗು ಎರಡು ರೂಪದಲ್ಲಿ ದೊರೆಯುತ್ತದೆ. ಒಂದು ಹಳದಿ ಮಿಶ್ರಿತ ಪುಡಿ ರೂಪ ಹಾಗೂ ಇನ್ನೊಂದು ಜಿಗುಟು ಜಿಗುಟಾದ ಕಂದು ಬಣ್ಣದ ಉಂಡೆಗಳಂತಿರುವ ಅದರ ಶುದ್ದ ರೂಪ. ಕಚ್ಚಾ ರೂಪದಲ್ಲಿರುವ ಇಂಗನ್ನು ಕುಟ್ಟಿ ಪುಡಿಮಾಡಿ ನೀರಿನಲ್ಲಿ ಬೇಯಿಸಿ ಬಳಸಬೇಕಾಗುತ್ತದೆ.

ಎಶ್ಟೋ ಬಾರಿ ದೇವಸ್ತಾನದ ಪ್ರಸಾದ ರುಚಿಯಾಗಿರುತ್ತದೆ ಎಂದೂ ಅನ್ನಿಸಿರಬಹುದು. ಇದಕ್ಕೆ ಮುಕ್ಯ ಕಾರಣ ಇಂಗು. ಏಕೆಂದರೆ ದೇವಸ್ತಾನ ಮತ್ತು ಆದ್ಯಾತ್ಮಿಕ ಕೇಂದ್ರಗಳಲ್ಲಿ ಪ್ರಸಾದದ ತಯಾರಿಕೆಯಲ್ಲಿ ಈರುಳ್ಳಿ ಬೆಳ್ಳುಳ್ಳಿಗಳನ್ನು ಬಳಸುವುದಿಲ್ಲ. ಬದಲಿಗೆ ಇಂಗನ್ನು ಬಳಸುವುದನ್ನು ಕೇಳಿರಬಹುದು.

ಇಂಗು ಸಸ್ಯಜನ್ಯವಾದ್ದರಿಂದ ನಿತ್ಯವೂ ಚಿಟಿಕೆ ಇಂಗನ್ನು ಆಹಾರದ ಮೂಲಕ ಸೇವಿಸುವುದರಿಂದ ಹೊಟ್ಟೆ ನೋವು, ಕರುಳು ಬೇನೆ ಮುಕ್ಯವಾಗಿ ಅಜೀರ‍್ಣತೆಯನ್ನು ದೂರವಿಡಬಹುದಾಗಿದೆ. ಕೆಮ್ಮು ಕಪಗಳನ್ನು ಶಮನಗೊಳಿಸಲು ಜೇನುತುಪ್ಪದಲ್ಲಿ ಚಿಟಿಕೆ ಇಂಗನ್ನು ಹಾಕಿ ಸೇವಿಸುವಂತೆ ತಜ್ನರು ಸೂಚಿಸುತ್ತಾರೆ. ಊಟದ ಬಳಿಕ ಮಜ್ಜಿಗೆಗೆ ಚಿಟಿಕೆ ಇಂಗನ್ನು ಹಾಕಿ ಕುಡಿಯುವುದರಿಂದ, ಹೊಟ್ಟೆಯಲ್ಲಿರುವ ಹುಳುಗಳನ್ನು ನಾಶಗೊಳಿಸುತ್ತದೆ. ಪದೇ ಪದೇ ಆಗುವ ವಾಕರಿಕೆ ತಡೆಯಬಹುದಾಗಿದೆ. ಹೀಗೆ ಇಂಗಿನ ಹಲವು ಉಪಯೋಗಗಳನ್ನು ನಮ್ಮ ಹಿರಿಯರು ಮನಗಂಡು ಅಡುಗೆಯಲ್ಲಿ ಇದನ್ನು ಬಳಸುವ ಪರಿಪಾಟ ಬೆಳೆಸಿಕೊಂಡು ಬಂದಿದ್ದಾರೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications