ಅಂಬಿಗರ ಚೌಡಯ್ಯನ ವಚನ ಓದು – 11ನೆಯ ಕಂತು

– ಸಿ.ಪಿ.ನಾಗರಾಜ.

ಅಂಬಿಗರ ಚೌಡಯ್ಯ, Ambigara Choudayya

ವಚನಾರ್ಥವ  ಕಂಡಹರೆಂದು
ರಚನೆಯ  ಮರೆಮಾಡಿ  ನುಡಿಯಲೇತಕ್ಕೆ
ದಾರಿಯಲ್ಲಿ  ಸರಕು  ಮರೆಯಲ್ಲದೆ
ಮಾರುವಲ್ಲಿ  ಮರೆ  ಉಂಟೆ
ತಾನರಿವಲ್ಲಿ  ಮರೆಯಲ್ಲದೆ
ಬೋಧೆಗೆ  ಮರೆಯಿಲ್ಲ
ಎಂದನಂಬಿಗ  ಚೌಡಯ್ಯ.

ವ್ಯಕ್ತಿಯು ಓದು ಬರಹದ ಮೂಲಕ  ತಾನು ಪಡೆದುಕೊಂಡಿರುವ  ಒಳಿತಿನ ವಿಚಾರಗಳನ್ನು ಎಲ್ಲರಿಗೂ ತಿಳಿಯ ಹೇಳುತ್ತ, ಅರಿವಿನ ನಡೆನುಡಿಗಳನ್ನು ಎಲ್ಲರೂ ತಿಳಿದುಕೊಳ್ಳುವಂತೆ  ಮಾಡಬೇಕೆ ಹೊರತು, ತನ್ನಲ್ಲಿರುವ  ವಿದ್ಯೆಯನ್ನು  ಮುಚ್ಚಿಡಬಾರದು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ವಚನ+ಅರ್ಥವ; ವಚನ=ಮಾತು/ನುಡಿ/ಬರಹದ ರೂಪದಲ್ಲಿರುವ ಸಾಹಿತ್ಯ. ಅರ್ಥ=ತಿರುಳು; ಕಂಡಹರ್+ಎಂದು; ಕಂಡಹರ್=ತಿಳಿದವರು;  ವಚನಾರ್ಥವ ಕಂಡಹರೆಂದು=ಬರಹ ರೂಪದಲ್ಲಿರುವ  ವಿಚಾರಗಳನ್ನು  ನಾವು ಚೆನ್ನಾಗಿ ಅರಿತಿದ್ದೇವೆ ಎಂದುಕೊಂಡು;

ರಚನೆ=ಬರಹದಲ್ಲಿರುವ ವಿಚಾರಗಳು/ಸಂಗತಿಗಳು; ಮರೆ=ಬೇರೆಯವರ ಕಣ್ಣಿಗೆ ಕಾಣದಂತೆ ಇಲ್ಲವೇ ತಿಳಿಯದಂತೆ ಇಡುವುದು; ಮರೆಮಾಡು=ಮುಚ್ಚಿಡು; ನುಡಿಯಲ್+ಏತಕ್ಕೆ; ನುಡಿ=ಹೇಳು;

ರಚನೆಯ  ಮರೆಮಾಡಿ  ನುಡಿಯಲೇತಕ್ಕೆ=ಬರಹ ರೂಪದಲ್ಲಿರುವ ಒಳ್ಳೆಯ ಸಂಗತಿಗಳನ್ನು ಜನರಿಗೆ ತಿಳಿಸದೆ,  ಇನ್ನಿತರ ಮಾತುಗಳನ್ನು ಆಡುವುದರಿಂದ ಪ್ರಯೋಜನವೇನು  ;

ದಾರಿ+ಅಲ್ಲಿ; ದಾರಿ=ಹಾದಿ/ಮಾರ‍್ಗ; ಸರಕು=ಸಾಮಾನು/ಸಾಮಗ್ರಿ; ಮರೆ+ಅಲ್ಲದೆ; ಅಲ್ಲದೆ=ಹೊರತು ;

ಮಾರು+ಅಲ್ಲಿ; ಮಾರು=ಹಣವನ್ನು ಪಡೆದು ಸಾಮಗ್ರಿಗಳನ್ನು ನೀಡುವುದು; ಮಾರುವಲ್ಲಿ=ಮಾರಾಟ ಮಾಡುವ ಜಾಗದಲ್ಲಿ;

ದಾರಿಯಲ್ಲಿ  ಸರಕು  ಮರೆಯಲ್ಲದೆ ಮಾರುವಲ್ಲಿ  ಮರೆ  ಉಂಟೆ=ಮಾರಾಟ ಮಾಡುವ ಸಾಮಗ್ರಿಯನ್ನು ಬಂಡಿಗಳಲ್ಲಿ  ತುಂಬಿ  ದಾರಿಯಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಸಾಗಿಸುವಾಗ ಮರೆಮಾಡಬೇಕೆ ಹೊರತು, ಮಾರಾಟ ಮಾಡುವ ಜಾಗದಲ್ಲಿ ಮುಚ್ಚಿಡುವುದು ಸರಿಯೇ;

ತಾನ್+ಅರಿವಲ್ಲಿ; ತಾನ್=ವ್ಯಕ್ತಿಯು; ಅರಿ+ಅಲ್ಲಿ; ಅರಿ=ತಿಳಿ/ಗ್ರಹಿಸು; ಅರಿವಲ್ಲಿ=ವಿದ್ಯೆಯನ್ನು ಕಲಿಯುವಾಗ/ಗಳಿಸುವಾಗ; ಮರೆ+ಅಲ್ಲದೆ;

ತಾನರಿವಲ್ಲಿ  ಮರೆಯಲ್ಲದೆ=ವ್ಯಕ್ತಿಯು ವಿದ್ಯೆಯನ್ನು ಕಲಿಯುವಾಗ,  ಅವನು ತನ್ನ ಮಯ್ ಮನಸ್ಸನ್ನು ಏಕಾಗ್ರತೆಗೆ ಒಳಪಡಿಸುತ್ತಾನೆ. ಆಗ ಅವನ ಪ್ರಯತ್ನ ಮತ್ತು ಶ್ರಮದ ಪ್ರಮಾಣ ಇತರರಿಗೆ ಕಾಣುವುದಿಲ್ಲ. ಅಂದರೆ ವಿದ್ಯೆಯನ್ನು ವ್ಯಕ್ತಿಯು ತನ್ನ ಸ್ವಂತ ಪರಿಶ್ರಮದಿಂದ ಪಡೆದುಕೊಳ್ಳುತ್ತಾನೆ;

ಬೋಧೆ=ಕಲಿಸುವಿಕೆ/ತಿಳಿಯ ಹೇಳುವಿಕೆ;

ಬೋಧೆಗೆ  ಮರೆಯಿಲ್ಲ=ಇತರರಿಗೆ ತಿಳಿಯ ಹೇಳುವಾಗ ಇಲ್ಲವೇ ಉಪದೇಶಿಸುವಾಗ ಒಳಿತಿನ ಸಂಗತಿಗಳಲ್ಲಿ ಯಾವುದೊಂದನ್ನೂ ಮುಚ್ಚಿಡಬಾರದು; ವ್ಯಕ್ತಿಯು ತನಗೆ ಗೊತ್ತಿರುವ ಒಳಿತಿನ ಎಲ್ಲ ಸಂಗತಿಗಳನ್ನು ಇತರರಿಗೆ ಹೇಳಬೇಕು;

ಎಂದನ್+ಅಂಬಿಗ; ಅಂಬಿಗ=ನದಿಯಲ್ಲಿ ದೋಣಿಯನ್ನು ನಡೆಸುವ ಕಾಯಕವನ್ನು ಮಾಡುವವನು;

“ದಾರಿಯಲ್ಲಿ  ಸರಕು  ಮರೆಯಲ್ಲದೆ ಮಾರುವಲ್ಲಿ  ಮರೆ  ಉಂಟೆ” ಎಂಬ ರೂಪಕದ ಮೂಲಕ ವಚನಕಾರನು ಬಹು ದೊಡ್ಡ ಪ್ರಶ್ನೆಯೊಂದನ್ನು ಓದುಬರಹವನ್ನು ಬಲ್ಲವರಿಗೆ ಹಾಕಿದ್ದಾನೆ.

ಕ್ರಿ.ಶ. ಹನ್ನೆರಡನೆಯ ಶತಮಾನದ ಇಂಡಿಯಾ ದೇಶದ ಸಾಮಾಜಿಕ ರಚನೆಯಲ್ಲಿ  “ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ” ಎಂಬ ವರ‍್ಣ ವ್ಯವಸ್ತೆಯಿತ್ತು. ಸಾಮಾಜಿಕ ರಚನೆಯ ಹೊರಗೆ ಚಾಂಡಾಳರೆಂಬ ಜನಸಮುದಾಯವಿತ್ತು.  ಶೂದ್ರರಿಗೆ, ಎಲ್ಲಾ ವರ‍್ಣದ ಹೆಂಗಸರಿಗೆ ಮತ್ತು ಚಾಂಡಾಲರಿಗೆ ವಿದ್ಯೆಯನ್ನು ನಿರಾಕರಿಸಲಾಗಿತ್ತು. ಒಟ್ಟು ಜನಸಮುದಾಯದಲ್ಲಿ ಶೇ 90 ಮಂದಿಯನ್ನು ಅರಿವಿನ ನೆಲೆಯಾದ  ವಿದ್ಯೆಯಿಂದ ದೂರವಿಟ್ಟಿದ್ದ  ಮೇಲು ವರ‍್ಣದವರಿಗೆ ಈ ಬಗೆಯ ಪ್ರಶ್ನೆಯ ಮೂಲಕ  “ವಿದ್ಯೆಯೆಂಬುದು ಎಲ್ಲರಿಗೂ ದೊರಕುವಂತಾಗಬೇಕೆ ಹೊರತು ಯಾರನ್ನೂ ವಿದ್ಯೆಯಿಂದ ವಂಚಿತರನ್ನಾಗಿ ಮಾಡಬಾರದು” ಎಂಬ ವಿವೇಕವನ್ನು  ವಿದ್ಯಾವಂತರಲ್ಲಿ   ಮೂಡಿಸಲು ವಚನಕಾರನು ಪ್ರಯತ್ನಿಸಿದ್ದಾನೆ.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: