ದಪ್ಪ ಮೆಣಸಿನ ಕಾಯಿ ಅನ್ನ

– ಸವಿತಾ.

 

ಬೇಕಾಗುವ ಸಾಮಾನುಗಳು

ಅಕ್ಕಿ – 1 ಬಟ್ಟಲು
ದಪ್ಪ ಮೆಣಸಿನಕಾಯಿ – 3
ಏಲಕ್ಕಿ – 1
ಲವಂಗ – 4
ಈರುಳ್ಳಿ – 1
ಗೋಡಂಬಿ – 4
ಒಣ ದ್ರಾಕ್ಶಿ – 10
ಚಕ್ಕೆ – 1/4 ಇಂಚು
ಕರಿಬೇವು – 10 ಎಲೆ
ಜೀರಿಗೆ – 1/2 ಚಮಚ
ಸಾಸಿವೆ – 1/2 ಚಮಚ
ಹಸಿ ಮೆಣಸಿನಕಾಯಿ – 1
ಹಸಿ ಶುಂಟಿ – 1/4 ಇಂಚು
ನಿಂಬೆ ರಸ – 1/2 ಹೋಳು
ಕಡಲೇ ಬೀಜ – 2 ಚಮಚ
ಉದ್ದಿನ ಬೇಳೆ – 1/2 ಚಮಚ
ಕಡಲೇ ಬೇಳೆ – 1/2 ಚಮಚ
ಸಾಂಬಾರ್ ಪುಡಿ – 1 ಚಮಚ
ಹಸಿ ಕೊಬ್ಬರಿ ತುರಿ – 1 ಬಟ್ಟಲು
ತುಪ್ಪ ಅತವಾ ಎಣ್ಣೆ – 3 ರಿಂದ 4 ಚಮಚ
ರುಚಿಗೆ ತಕ್ಕಶ್ಟು ಉಪ್ಪು
ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ಬಗೆ

ಅಕ್ಕಿ ತೊಳೆದು, ಇಪ್ಪತ್ತು ನಿಮಿಶ ನೆನೆಯಲು ಬಿಡಬೇಕು. ಹಸಿ ಮೆಣಸಿನಕಾಯಿ, ಸ್ವಲ್ಪ ಕೊಬ್ಬರಿ ತುರಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸರ್ ನಲ್ಲಿ ಒಂದು ಸುತ್ತು ತಿರುಗಿಸಿ ಇಟ್ಟುಕೊಳ್ಳಿ. ದಪ್ಪ ಮೆಣಸಿನಕಾಯಿ ತೊಟ್ಟು ತೆಗೆದು ಕತ್ತರಿಸಿ ಇಟ್ಟುಕೊಳ್ಳಿ. ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಶುಂಟಿ ಕತ್ತರಿಸಿ ಇಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕರಿಬೇವು, ಹಸಿ ಶುಂಟಿ ಹಾಕಿ ಹುರಿಯಿರಿ. ಉದ್ದಿನ ಬೇಳೆ, ಕಡಲೇ ಬೇಳೆ, ಕಡಲೇ ಬೀಜ, ಗೋಡಂಬಿ, ಒಣ ದ್ರಾಕ್ಶಿ ಹಾಕಿ ಹುರಿಯಿರಿ. ಚಕ್ಕೆ ಲವಂಗ, ಏಲಕ್ಕಿ ಸ್ವಲ್ಪ ಪುಡಿ ಮಾಡಿ ಹಾಕಿ ಹುರಿಯಿರಿ. ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಕತ್ತರಿಸಿದ ದಪ್ಪ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ರುಬ್ಬಿದ ಕೊಬ್ಬರಿ ಮಿಶ್ರಣ ಹಾಕಿ ಚೆನ್ನಾಗಿ ಹುರಿಯಿರಿ. ನೆನೆಸಿಟ್ಟ ಅಕ್ಕಿಯನ್ನು ಬಸಿದು ಹಾಕಿ ಹುರಿಯಿರಿ. ಈಗ ಉಪ್ಪು, ಸಾಂಬಾರ್ ಪುಡಿ ಹಾಕಿ ಎರಡೂವರೆ ಬಟ್ಟಲು ನೀರು ಹಾಕಿ (ಅನ್ನ ಆಗುವಶ್ಟು ನೋಡಿ ನೀರು ಹಾಕಿ) ಅನ್ನ ಬೇಯಿಸಿ ಇಳಿಸಿ. ದಪ್ಪ ಮೆಣಸಿನ ಕಾಯಿ ಅನ್ನ ಈಗ ಸಿದ್ದವಾಯಿತು. ನಿಂಬೆ ರಸ ಸೇರಿಸಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಸೇರಿಸಿ ಇನ್ನೊಮ್ಮೆ ಚೆನ್ನಾಗಿ ಕಲಸಿ ಬಡಿಸಿರಿ. ರುಚಿಯಾದ ದಪ್ಪ ಮೆಣಸಿನ ಕಾಯಿ ಅನ್ನ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: