ಶಾರೊ – ನೈಜೀರಿಯಾದ ಬುಡಕಟ್ಟಿನವರ ವಿಚಿತ್ರ ಹಬ್ಬ

– .


ನೈಜೀರಿಯಾ ಆಪ್ರಿಕಾ ಕಂಡದ ಅತಿ ದೊಡ್ಡ ದೇಶ. ಇಲ್ಲಿ 350ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿವೆ. ಇವುಗಳಲ್ಲಿ ಪ್ರಮುಕವಾದವು ಯರೂಬಾ, ಹೌಸಾ ಹಾಗೂ ಇಗ್ಬೊ. ಉತ್ತರ ನೈಜೀರಿಯಾದ ಪುಲಾನಿ ಜನಾಂಗೀಯ ಗುಂಪು ಸಹ ಮೇಲಿನ ಗುಂಪುಗಳಶ್ಟೇ ಪ್ರಮುಕ. ಪುಲಾನಿ ಗುಂಪಿನವರು ಶ್ರೀಮಂತರು. ಈ ಜನಾಂಗದವರು ತಮ್ಮದೇ ವಿಶಿಶ್ಟ ಸಂಸ್ಕ್ರುತಿ ಸಂಪ್ರದಾಯವನ್ನು ಹೊಂದಿದ್ದಾರೆ. ಈ ಸಂಪ್ರದಾಯಗಳೇ ಅವರುಗಳ ದೈನಂದಿನ ಜೀವನಕ್ಕೆ ಮಾರ‍್ಗದರ‍್ಶಿ.

ಇವರಲ್ಲಿನ ಶಾರೋ ಹಬ್ಬ ಬಹಳ ವಿಚಿತ್ರ ಹಬ್ಬವಾಗಿದೆ. ಈ ಹಬ್ಬದ ದಿನ ಪುಲಾನಿ ಹುಡುಗರನ್ನು ಬೆತ್ತದಿಂದ ತಳಿಸುವ ಮೂಲಕ ಅವರ ಶಕ್ತಿ ಮತ್ತು ಸಹಿಶ್ಣುತೆಯನ್ನು ಪರೀಕ್ಶಿಸಲಾಗುತ್ತದೆ. ಶಾದಿ ಹಬ್ಬ ಎಂದೂ ಕರೆಯಲ್ಪಡುವ ಈ ಹಬ್ಬ, ಪುಲಾನಿ ಹುಡುಗರು ಪುರುಶರಾಗಲು (manhood) ಮತ್ತು ತಮ್ಮ ಜೀವನದಲ್ಲಿ ನಾಲ್ಕು ಹೆಂಡತಿಯರನ್ನು ಪಡೆಯಲು ಮಾರ‍್ಗವಾಗಿದೆ. ಪುಲಾನಿ ಪಂಗಡದಲ್ಲಿ ಶಾರೋ ಹಬ್ಬ ವರ‍್ಶಕ್ಕೆರಡು ಬಾರಿ ನಡೆಸುವುದೊಂದು ವಿಶೇಶ. ಒಮ್ಮೆ ಗಿನಿಯಾ ಜೋಳವು ಕೊಯ್ಲಿಗೆ ಬರುವ ಒಣ ರುತುವಿನಲ್ಲಿ ಮತ್ತು ಮತ್ತೊಮ್ಮೆ ಈದ್-ಎಲ್-ಕಬೀರ್ ಆಚರಣೆಯ ಸಮಯದಲ್ಲಿ ಆಚರಿಸಲಾಗುತ್ತದೆ.

ಶಾದಿ ಹಬ್ಬ ಸಾಮಾನ್ಯವಾಗಿ ಮಾರುಕಟ್ಟೆ, ಹೊಲ, ಹಳ್ಳಿಯ ಚೌಕದಂತಹ ವಿಶಾಲವಾದ ಸ್ತಳದಲ್ಲಿ ಅಯೋಜಿಸಲಾಗುತ್ತದೆ. ಒಂದು ವಾರದ ಕಾಲ ಈ ಸಂಬ್ರಮ ನಡೆಯುತ್ತದೆ. ಈ ಕಾರ‍್ಯಕ್ರಮದಲ್ಲಿ ಪುಲಾನಿ ಸಂಪ್ರದಾಯದ ಗಣ್ಯರು, ನೈಜೀರಿಯಾದಲ್ಲಿರುವವರು ಮತ್ತು ವಿದೇಶದಲ್ಲಿ ನೆಲೆಸಿರುವವರು ಬಾಗಿಯಾಗುತ್ತಾರೆ. ಈ ಉತ್ಸವದ ಪ್ರಾರಂಬ ಕೂಡ ಅತಿ ಬವ್ಯವಾಗಿರುತ್ತದೆ. ಮ್ಯಾಜಿಕ್ ಪ್ರದರ‍್ಶನಗಳು, ನ್ರುತ್ಯಗಳು ಮತ್ತು ಮದುರವಾದ ಹಾಡುಗಳು ಈ ಹಬ್ಬದ ಆಚರಣೆಯನ್ನು ಪ್ರಾರಂಬಿಸುತ್ತವೆ. ಇವೆಲ್ಲಾ ಮುಕ್ಯ ಆಚರಣೆಗೆ ಪೂರಕವಾದವುಗಳು. ಈ ಹಬ್ಬದ ಪ್ರಮುಕ ಆಕರ‍್ಶಣೆ ಹುಡುಗರನ್ನು ಬೆತ್ತ ಇಲ್ಲವೆ ಚಾಟಿಯಿಂದ ಹೊಡೆಯುವುದು. ಪ್ರಾಯದ ಅವಿವಾಹಿತ ಹುಡುಗರ ಗುಂಪನ್ನು ಸುಂದರ ಹುಡುಗಿಯರು ತಳಿಸುವ ಅಕಾಡದ ಮದ್ಯದ ಬಾಗಕ್ಕೆ ಕರೆತರುತ್ತಾರೆ. ಹುಡುಗನ ಕುಟುಂಬ ವರ‍್ಗದವರು ತಮ್ಮ ಕರುಳಿನ ಕುಡಿ ಸೋಲದಿರಲಿ, ಬೆನ್ನಿನ ಮೇಲೆ ಬೆತ್ತ/ಚಾಟಿಯಿಂದ ಎಶ್ಟೇ ಪ್ರಬಲವಾದ ಏಟು ಬಿದ್ದರೂ ಸಹಿಸಿಕೊಳ್ಳುವ ಶಕ್ತಿ ನೀಡು ಎಂದು ದೇವರಲ್ಲಿ ಕೇಳಿಕೊಳ್ಳುತ್ತಾರೆ. ಕುಟುಂಬ ವರ‍್ಗದವರಿಗೆ ಇದು ಪ್ರತಿಶ್ಟೆಯೂ ಹೌದು. ಹುಡುಗ ಚಾಟಿಯ ಏಟನ್ನು ತಡೆಯಲಾಗದೆ ಸೋತಲ್ಲಿ ಅದು ಇಡೀ ಕುಟುಂಬಕ್ಕೆ ಅವಮಾನವಾದಂತೆ. ಕುಟುಂಬದವರ ಪ್ರಾರ‍್ತನೆಯ ನಡುವೆ, ಬರಿ ಎದೆಯ ಹುಡುಗರನ್ನು ಬೆತ್ತ/ಚಾಟಿಯಿಂದ ಬಲವಾಗಿ ಹೊಡೆಯುವ ಕಾರ‍್ಯ ಪ್ರಾರಂಬವಾಗುತ್ತದೆ. ಎಶ್ಟೇ ನೋವಾದರೂ ಕಮಕ್ ಕಿಮಕ್ ಅನ್ನದೇ ನಿಲ್ಲುವ ಹುಡುಗ ಅರ‍್ಹನಾದಂತೆ.

ಬೆತ್ತ/ಚಾಟಿ ಏಟು ತಿನ್ನಲು ಸಿದ್ದವಾಗಿ ಬಂದ ಹುಡುಗರನ್ನು ತಳಿಸಲು ಚಾಲೆಂಜರ‍್ರುಗಳು ದಪ್ಪವಾದ, ಉದ್ದದ ಮತ್ತು ಬಯಾನಕ ಬೆತ್ತ/ಚಾಟಿಗಳನ್ನು ಹಿಡಿದು ಅಕಾಡದ ಮದ್ಯ ಬಾಗಕ್ಕೆ ಬರುತ್ತಾರೆ. ಇವರ ಪ್ರಮುಕ ಉದ್ದೇಶ ಸ್ಪರ‍್ದಿಗೆ ಬಯಂಕರ ನೋವನ್ನು ಉಂಟುಮಾಡಿ, ಅರಚಾಡಿ ಸೋಲುವಂತೆ ಮಾಡುವುದು. ಸ್ಪರ‍್ದಿ ಏನಾದರೂ ಸೋತು ಶರಣಾದಲ್ಲಿ, ಅವನಲ್ಲಿ ಸಾಕಶ್ಟು ಪುರುಶತ್ವ ಇಲ್ಲ ಎಂದು ಪರಿಗಣಿಸಲ್ಪಡುತ್ತಾನೆ ಅದು ಆತ ತನ್ನದೇ ಕುಟುಂಬಕ್ಕೆ ಅವಮಾನ ಮಾಡಿದಂತೆ. ಚಾಲೆಂಜರ‍್ರುಗಳ ಹೊಡೆತವನ್ನು ಸಹಿಸಿಕೊಂಡು, ಕಣ್ಣಲ್ಲಿ ನೀರು ಬರದಂತೆ ಎದೆ ಸೆಟೆದು ನಿಂತಲ್ಲಿ, ಅವನನ್ನು ಕುಟುಂಬ ವರ‍್ಗದವರು ಕೊಂಡಾಡುತ್ತಾ ಸಂಬ್ರಮ ಆಚರಿಸುತ್ತಾರೆ. ಇದನ್ನೆಲ್ಲಾ ನೋಡಿಕೊಳ್ಳುಲು ರೆಪರಿಯೊಬ್ಬನನ್ನು ನೇಮಿಸಿರುತ್ತಾರೆ. ಆತ ಚಾಲೆಂಜರ‍್ರುಗಳು ಹೊಡೆಯುವುದನ್ನು ಸೂಕ್ಶ್ಮವಾಗಿ ಮೇಲ್ವಿಚಾರಣೆ ಮಾಡುತ್ತಿರುತ್ತಾನೆ. ಬೆತ್ತ/ಚಾಟಿಯ ಬೀಸು ಕಣ್ಣಿಗೆ ತಗುಲಿ ಕುರುಡಾಗುವಂತಹ ಅನಾಹುತಗಳನ್ನು ತಡೆಗಟ್ಟುವ ಕೆಲಸ ಮಾಡುತ್ತಾನೆ. ರೆಪರಿಯ ಸೂಚನೆಯ ನಂತರವಶ್ಟೇ ಚಾಲೆಂಜರ‍್ರು ಬೆತ್ತ/ಚಾಟಿಯನ್ನು ಮೇಲೆತ್ತಿ ಹುಡುಗನ ಬೆನ್ನಿಗೆ ಬಲವಾಗಿ ತಳಿಸಬೇಕು. ಈ ಸಮಯದಲ್ಲಿ ಹುಡುಗ ಚಾಲೆಂಜರ‍್ರುಗಳನ್ನು ಅಪಹಾಸ್ಯ ಮಾಡುತ್ತಾ, ಹಾಡುತ್ತಾ, ಕುಣಿಯುತ್ತಾ, ನ್ರುತ್ಯ ಮಾಡುತ್ತಾ ತಳಿತವನ್ನು ಸ್ವೀಕರಿಸುತ್ತಾನೆ. ಹಾಡುವುದು, ಅಪಹಾಸ್ಯ ಮಾಡುವುದು, ಕುಣಿಯುವುದರ ಹಿಂದೆ ನೋವನ್ನು ಕಡೆಗಣಿಸುವ ಇರಾದೆ ಸ್ಪಶ್ಟ.

ಅನೇಕ ಸ್ಪರ‍್ದಿಗಳು ಬೆತ್ತ/ಚಾಟಿಯಿಂದ ಬೀಳುವ ಬಯಂಕರ ಹೊಡೆತವನ್ನು ತಡೆದುಕೊಳ್ಳಲು ಮಂತ್ರಗಳನ್ನು ಪಟಿಸುವುದನ್ನು ಕಾಣಬಹುದು. ನೆರೆದಿರುವ ನೋಡುಗರು ಸ್ಪರ‍್ದಿಗೆ ಬೀಳಬಹುದಾದ ಹೊಡೆತದ ತೀವ್ರತೆಯನ್ನು ಹಾಗೂ ಸ್ಪರ‍್ದಿ ಹೇಗೆ ಅದನ್ನು ಮೆಟ್ಟಿ ನಿಲ್ಲುತ್ತಾನೋ ಎಂಬುದನ್ನು ನೋಡಲು ಕುತೂಹಲದಿಂದ ಕಾಯ್ದಿರುತ್ತಾರೆ. ಬೆತ್ತ/ಚಾಟಿಯಿಂದ ಬೆನ್ನಿನ ಮೇಲೆ ಬೀಳುವ ಹೊಡೆತ ಬರೆ ಬೀಳಿಸುವುದಲ್ಲದೆ ಬಯಂಕರ ಗಾಯವನ್ನು ಉಂಟುಮಾಡುತ್ತದೆ. ಬೆನ್ನಿನ ಮೇಲಿನ ಈ ಗಾಯದ ಗುರುತುಗಳು ದೈರ‍್ಯ ಮತ್ತು ಪುರುಶತ್ವದ ಹೆಮ್ಮೆಯ ಸಂಕೇತ ಎಂದು ಪರಿಗಣಿಸಲ್ಪಡುತ್ತದೆ. ತಳಿಸುವ ಅವದಿ ಮುಗಿದ ನಂತರ ಬದುಕುಳಿದ ಹುಡುಗರು ನಿಜ ಜೀವನದಲ್ಲೂ ಹಿರೋಗಳಾಗುತ್ತಾರೆ. ಅವರನ್ನು ಪ್ರಶಂಸಿಸಿ ಅದ್ದೂರಿ ಉಡುಗೊರೆ ನೀಡಲಾಗುತ್ತದೆ. ಈಗ ಆತ ನಾಲ್ವರು ಹೆಂಡತಿಯರನ್ನು ಮದುವೆಯಾಗಲು ಅರ‍್ಹತೆ ಗಳಿಸುತ್ತಾನೆ. ಶಾರೋ ಹಬ್ಬವು ಪುಲಾನಿ ಜನರ ಹೆಮ್ಮೆ. ನೈಜೀರಿಯಾ ದೇಶದ ಮನಮೋಹಕ ಹಬ್ಬಗಳಲ್ಲಿ ಇದೂ ಒಂದು ಎಂದು ಹೆಸರು ಗಳಿಸಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: dailynigerian.com, oldnaija.com, radionigeriaibadan.gov.ng, opinionnigeria.com, cdn.scoopernews.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: