ಮಕ್ಕಳ ಕತೆ: ಬಾರೋ ಬಾರೋ ಮಳೆರಾಯ
– ವೆಂಕಟೇಶ ಚಾಗಿ.
ಅಂದು ತುಂಬಾ ಸೆಕೆ ಇತ್ತು . ಶಾಲೆಗೆ ರಜೆ ಇದ್ದುದರಿಂದ ರಾಮ, ರವಿ, ಕಿರಣ ಮತ್ತು ಗೋಪಿ ಒಂದು ಮರದ ಕೆಳಗೆ ಆಟವಾಡುತ್ತಿದ್ದರು. ಮದ್ಯಾಹ್ನದ ವೇಳೆ ತುಂಬಾ ಸೆಕೆ. ಮನೆಯಲ್ಲಿ ಆಟವನ್ನು ಆಡಬೇಕೆಂದರೆ ಸೆಕೆ. ಅದಕ್ಕಾಗಿ ರಾಮನ ಮನೆಯ ಮುಂದಿದ್ದ ಒಂದು ಸಣ್ಣ ಮರದ ಕೆಳಗೆ ಎಲ್ಲಾ ಗೆಳೆಯರು ತಮ್ಮ ಆಟಿಕೆಗಳನ್ನು ತಂದು ಆಟವಾಡತೊಡಗಿದ್ದರು. “ತುಂಬಾ ಸೆಕೆ ಇದೆ. ಬಹುದಿನಗಳಿಂದ ಮಳೆಯೇ ಆಗಿಲ್ಲ” ಎಂದನು ರವಿ. ಆಗ ಕಿರಣ “ಹೌದು, ಎಲ್ಲೂ ಮಳೆ ಆಗಿಲ್ಲವಂತೆ . ನಾನು ಅಜ್ಜಿಯ ಊರಿಗೆ ಹೋದಾಗ ಅಲ್ಲೂ ಮಳೆಯಾಗಿಲ್ಲ. ನಮ್ಮ ಅಜ್ಜಿ ಮಳೆಯನ್ನು ಮಳೆರಾಯ ಎಂದು ಕರೆಯುತ್ತಾರೆ . ಮಳೆರಾಯನನ್ನು ಪ್ರೀತಿಯಿಂದ ಕರೆದಾಗ ಓಡಿ ಬರುತ್ತಾನೆ ಅಂತ ಹೇಳುತ್ತಾ ಇದ್ದರು. ಅವರು ಚಿಕ್ಕವರಿದ್ದಾಗ ಎಲ್ಲಾ ಮಕ್ಕಳು ಒಂದು ಕಡೆ ಸೇರಿ ಮಳೆರಾಯನನ್ನು ಒಂದು ಹಾಡಿನ ಮೂಲಕ ಕರೆಯುತ್ತಿದ್ದರಂತೆ. ಆಗ ಮಳೆರಾಯ ಓಡೋಡಿ ಬರ‍್ತಾ ಇದ್ದನಂತೆ. ಆದರೆ ಈಗ ಮಳೆರಾಯನನ್ನು ಯಾರೂ ಕರೆಯುವುದಿಲ್ಲ. ಅದಕ್ಕಾಗಿ ಮಳೆರಾಯನಿಗೆ ಬರಬೇಕು ಅನ್ನಿಸಿದಾಗ ಅಶ್ಟೇ ಬರ‍್ತಾನಂತೆ. ಹಾಗಾಗಿ ನಾವು ಮಳೆರಾಯನನ್ನು ಕರೆಯೋಣ. ನಾವೆಲ್ಲ ಸೇರಿ ಹಾಡು ಹೇಳುತ್ತಾ ಮಳೆರಾಯನನ್ನು ಕರೆದರೆ, ಮಳೆರಾಯ ನಮ್ಮ ಹಾಡನ್ನು ಕೇಳಿ ಓಡಿ ಬಂದೇ ಬರುತ್ತಾನೆ” ಎಂದನು. ಆಗ ರಾಮನು, ” ಮಳೆರಾಯನನ್ನು ಕರೆಯಬೇಕೆಂದರೆ ಸುಮ್ಮ ಸುಮ್ಮನೆ ಹಾಗೆ ಕರೆಯೋಕ್ಕಾಗತ್ತಾ? ಅದಕ್ಕೆ ಮಳೆರಾಯನನ್ನು ಕರೆಯುವಂತಹ ಹಾಡನ್ನು ನಾವು ಕಲಿತುಕೊಳ್ಳಬೇಕು. ನಮ್ಮ ಕೇರಿಯ ಎಲ್ಲಾ ಮಕ್ಕಳು ಹಾಡನ್ನು ಕಲಿತು ಎಲ್ಲರೂ ಮಳೆರಾಯನನ್ನು ಕರೆದಾಗ ಮಳೆರಾಯ ಬಂದೇ ಬರುವನು” ಎಂದನು. ಆಗ ಕಿರಣ “ಸರಿ ಹಾಗಾದರೆ ನಾನು ಅಜ್ಜಿಗೆ ಕರೆಮಾಡಿ ಮಾತನಾಡುವೆ. ಅಜ್ಜಿಯಿಂದ ಮಳೆರಾಯನನ್ನು ಕರೆಯುವ ಹಾಡನ್ನು ಕಲಿತುಕೊಂಡು ನಿಮಗೆಲ್ಲಾ ಹೇಳಿಕೊಡುವೆ. ನಾವೆಲ್ಲಾ ನಮ್ಮ ಗೆಳೆಯರಿಗೆ ಹಾಡನ್ನು ಹೇಳಿ ಕೊಡೋಣ. ಎಲ್ಲರೂ ಕಲಿತ ನಂತರ ಒಟ್ಟಾಗಿ ಹಾಡೋಣ” ಎಂದನು.
ಅಂದು ಸಂಜೆ ಕಿರಣ ತನ್ನ ಅಜ್ಜಿ ಗೆ ಕರೆ ಮಾಡಿ ಮಳೆರಾಯನನ್ನು ಕರೆಯುವ ಹಾಡನ್ನು ಹೇಳಿಕೊಡುವಂತೆ ಹಟ ಮಾಡಿದನು. ಕಿರಣನ ಹಟಕ್ಕೆ ಸೋತು ಅಜ್ಜಿ ಕಿರಣನಿಗೆ ಮಳೆರಾಯನನ್ನು ಕರೆಯುವ ಹಾಡನ್ನು ಹೇಳಿಕೊಟ್ಟರು .
ಬಾರೋ ಬಾರೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ನಮ್ಮೂರ ಕೆರೆಗೆ ನೀರಿಲ್ಲ
ಎಂದು ಅಜ್ಜಿ ಸುಂದರವಾಗಿ ಹಾಡನ್ನು ಹೇಳಿಕೊಟ್ಟರು. ಕಿರಣ ಅಜ್ಜಿ ಹೇಳಿದ ಹಾಡನ್ನು ರೆಕಾರ‍್ಡ್ ಮಾಡಿಕೊಂಡು ಕೇಳುತ್ತಾ ಹಾಡುವುದನ್ನು ಕಲಿತನು. ಮರುದಿನ ತನ್ನ ಸ್ನೇಹಿತರ ಬಳಿ ಬಂದು ಹಾಡನ್ನು ಹೇಳಿದನು. ಎಲ್ಲರೂ “ಹಾಡು ತುಂಬಾ ಚೆನ್ನಾಗಿದೆ. ನಾವು ಕಲಿಯುತ್ತೇವೆ” ಎಂದರು. ಮದ್ಯಾಹ್ನದ ವೇಳೆಗೆ ಎಲ್ಲರೂ ಹಾಡನ್ನು ಬರೆದುಕೊಂಡರು. ಸಂಜೆಯ ವೇಳೆಗೆ ನಾವೆಲ್ಲ ಸೇರಿ ಒಟ್ಟಾಗಿ ನಿಂತು ಚಪ್ಪಾಳೆ ತಟ್ಟುತ್ತಾ ಹಾಡು ಹೇಳೋಣ. ಆಗ ಮಳೆರಾಯ ಎಲ್ಲಿದ್ದರೂ ಓಡಿ ಬರುತ್ತಾನೆ” ಎಂದು ಎಲ್ಲಾ ಮಕ್ಕಳು ಹಾಡನ್ನು ಕಲಿತುಕೊಂಡರು.
ಸಂಜೆ ಸಮಯವಾಯಿತು. ಸೂರ‍್ಯ ಕೆಂಪಾಗಿ ಬೂತಾಯಿಯ ಮಡಿಲು ಸೇರುವ ವೇಳೆ. ಎಲ್ಲಾ ಮಕ್ಕಳು ಬಯಲಿನಲ್ಲಿ ಸೇರಿದರು. ಎಲ್ಲರೂ ಒಟ್ಟಾಗಿ ಅಜ್ಜಿ ಹೇಳಿಕೊಟ್ಟ ಹಾಡನ್ನು ಹಾಡತೊಡಗಿದರು.
ಬಾರೋ ಬಾರೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ನಮ್ಮೂರ ಕೆರೆಗೆ ನೀರಿಲ್ಲ
ಮಕ್ಕಳೆಲ್ಲ ಒಟ್ಟಾಗಿ ಹಾಡು ಹೇಳುತ್ತಿದ್ದಂತೆಯೇ ಮೋಡಗಳೆಲ್ಲ ಒಂದೆಡೆ ಸೇರಿದವು. ಆಗಸದ ತುಂಬೆಲ್ಲ ಕಪ್ಪಾದ ಮೋಡಗಳು ಜಮಾವಣೆಗೊಂಡವು. ಅಲ್ಲಲ್ಲಿ ಗುಡುಗು ಮಿಂಚು ಶುರುವಾಯಿತು. ಮಕ್ಕಳಿಗೆ ಕುಶಿಯಾಗಿತು. ಸಂತೋಶದಿಂದ ಮತ್ತೆ ಜೋರಾಗಿ ಹಾಡಲು ಪ್ರಾರಂಬಿಸಿದರು. ಮಳೆಹನಿಗಳು ಮಕ್ಕಳ ಮುಕದ ಮೇಲೆ ಬಿದ್ದವು. ಬರುಬರುತ್ತಾ ಮಳೆ ಜೋರಾಗಿ ಸುರಿಯತೊಡಗಿತು. ಅಜ್ಜಿ ಹೇಳಿಕೊಟ್ಟ ಹಾಡನ್ನು ಎಲ್ಲಾ ಸ್ನೇಹಿತರು ಒಕ್ಕೊರಲಿನಿಂದ ಹಾಡುತ್ತಿದ್ದರು. ಮಕ್ಕಳಿಗಾಗಿ ಮಳೆರಾಯ ಅಂದು ಚೆನ್ನಾಗಿ ಮಳೆ ಸುರಿಸಿದ. ಮಳೆ ನಿಲ್ಲುವವರೆಗೂ ಮಕ್ಕಳು ಹಾಡನ್ನು ಹೇಳುತ್ತಲೇ ಇದ್ದರು.
( ಚಿತ್ರ ಸೆಲೆ: youtube.com )
ಇತ್ತೀಚಿನ ಅನಿಸಿಕೆಗಳು