ಪೋಲ್ಟೆರಾಬೆಂಡ್ ಜರ‍್ಮನ್ ಮದುವೆ

– .

ಪೋಲ್ಟರಾಬೆಂಡ್ ಎಂದರೆ ಜರ‍್ಮನಿಯ ಬಹಳ ಹಳೆಯ ಮದುವೆ ಸಂಪ್ರದಾಯ. ಇದರಲ್ಲಿ ಮದುವೆಯ ಹಿಂದಿನ ದಿನ ಪಿಂಗಾಣಿ ಮತ್ತು ಮಣ್ಣಿನ ವಸ್ತುಗಳನ್ನು ಒಡೆಯುವುದು ಪ್ರಮುಕವಾದದ್ದು. ಈ ಕಾರ‍್ಯಕ್ರಮ ಹಿಂದಿನ ಕಾಲದಲ್ಲಿ ಮದುವೆಯ ಹಿಂದಿನ ದಿನ ಮದ್ಯರಾತ್ರಿಯವರೆಗೂ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮಾರ‍್ಪಾಟು ಬಂದಿದ್ದು, ಮದುವೆಯ ದಿನಕ್ಕೂ, ವಾರ ಮುನ್ನ ಆಚರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಮದುವೆಯ ಹಿಂದಿನ ದಿನ ತಡ ರಾತ್ರಿಯವರೆಗೂ ಪೋಲ್ಟರಾಬೆಂಡ್ ಕಾರ‍್ಯಕ್ರಮ ನಡೆದರೆ, ಅದರ ಗುಂಗಿನಲ್ಲೇ ಮಾರನೆಯ ದಿನ ಸಹ ಇರಬೇಕಾಗುತ್ತದೆ. ಇಡೀ ಮದುವೆಯ ಸಮಾರಂಬ ಕಳಾಹೀನವಾಗುತ್ತದೆ ಎಂಬ ಕಾರಣ ಬಲವಾಗಿದೆ.

ಹಿಂದಿನ ದಿನಗಳಲ್ಲಿ ಪೋಲ್ಟರಾಬೆಂಡ್ ಸಂಪ್ರದಾಯ ಮದುಮಗಳ ಮನೆಯ ಮುಂಬಾಗದಲ್ಲೇ ಅಯೋಜಿಸಲಾಗುತ್ತಿತ್ತು. ಮದುಮಗಳ ಮನೆಯ ಮುಂಬಾಗದಲ್ಲಿ ಸ್ತಳಾವಕಾಶವಿಲ್ಲದಿದ್ದಲ್ಲಿ ಬೇರೆ ಸ್ತಳದಲ್ಲಿ, ಎಲ್ಲಿ ಪಿಂಗಾಣಿ ಮತ್ತು ಮಣ್ಣಿನ ಚೂರುಗಳು ಹಾರಾಡುವುದರಿಂದ ಬೇರಾರಿಗೂ ತೊಂದರೆಯಾಗುವುದಿಲ್ಲವೋ ಅಲ್ಲಿ ಈ ಕಾರ‍್ಯಕ್ರಮ ನಡೆಸಲಾಗುತ್ತದೆ. ಮದುಮಗಳ ಕಡೆಯವರು ಪೋಲ್ಟರಾಬೆಂಡ್ ಕಾರ‍್ಯಕ್ರಮದ ಸಮಯ ಮತ್ತು ದಿನಾಂಕವನ್ನು ಮೊದಲೇ ಬಹಿರಂಗವಾಗಿ ಪ್ರಕಟಿಸುತ್ತಾರೆ. ಅಂದಿನ ದಿನ ಊರಿನ ಯಾರು ಬೇಕಾದರೂ ಈ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ವೈಯುಕ್ತಿಕ ಆಹ್ವಾನದ ಅಗತ್ಯವಿಲ್ಲ. ಪೋಲ್ಟರಾಬೆಂಡ್ ಕಾರ‍್ಯಕ್ರಮದಲ್ಲಿ ಪ್ರಮುಕವಾಗಿ ಪಿಂಗಾಣಿ ಮತ್ತು ಮಣ್ಣಿನಿಂದ ತಯಾರಿಸಲಾದ ಹಳೆಯ ವಸ್ತುಗಳನ್ನು ಒಡೆದು, ಚೂರು ಚೂರು ಮಾಡಲಾಗುತ್ತದೆ. ಇದರಲ್ಲಿ ಎಲ್ಲಾ ತರಹದ ಪಿಂಗಾಣಿ ವಸ್ತುಗಳು ಸೇರಿರುತ್ತವೆ. ತಟ್ಟೆಗಳು, ಪಾತ್ರೆಗಳು, ಬಾತ್ ಟಬ್ ಗಳು, ಕಮೋಡ್ ಗಳು, ಹೂ ಕುಂಡಗಳು, ಕಾಪಿ ಕಪ್ಪುಗಳು, ಸಾಸರ್ ಗಳು, ಸೆರಾಮಿಕ್ ಟೈಲ್ಸ್ ಗಳು ಹೀಗೆ ಎಲ್ಲಾ. ಇವುಗಳನ್ನು ನೆಲಕ್ಕೆ ಅಪ್ಪಳಿಸಿದಾಗ ಅವುಗಳು ಒಡೆಯವ ಸಪ್ಪಳ, ಒಡೆದಾಗ ನೆರೆದಿದ್ದವರು ಕೇಕೆ ಹಾಕುವ ಶಬ್ದ ಮುಗಿಲು ಮುಟ್ಟಿರುತ್ತದೆ.

‘ಪೋಲ್ಟರ‍್ನ್’ ಎಂದರೆ ಬಯಂಕರ ಸದ್ದು ಮಾಡು ಎಂತಲೂ, ಅಬೆಂಡ್’ ಎಂದಲ್ಲಿ ಸಂಜೆ ಎಂತಲೂ ಅರ‍್ತ. ಸಾಮಾನ್ಯವಾಗಿ ಈ ರೀತಿಯ ಆಚರಣೆಗಳು ಮುಕ್ತಾಯವಾಗುವುದು ಆಹಾರ ಪಾನೀಯಗಳನ್ನು ಸೇವಿಸಿದ ನಂತರವಶ್ಟೇ. ಪೋಲ್ಟರಾಬೆಂಡ್ ಕಾರ‍್ಯಕ್ರಮದ ವಿಶೇಶ ಅಡುಗೆ ಚಿಕನ್ ಸೂಪ್. ಇದರ ಹಿಂದೆ ಒಂದು ಸಂಕೇತವೂ ಅಡಗಿದೆ. ಹಿಂದಿನ ಕಾಲದಲ್ಲಿ ಕಾರ‍್ಯಕ್ರಮಕ್ಕೆ ಬರುವ ಅತಿತಿಗಳಿಗೆ ಮದುಮಗಳ ಪಲವತ್ತತೆಯ ಸಂಕೇತವಾಗಿ ಕೋಳಿಗಳನ್ನು ನೀಡುತ್ತಿದ್ದರಂತೆ. ಅದೇ ಇಂದು ಕೋಳಿ ಸೂಪಿಗೆ ಬದಲಾಗಿದೆ.

ಅತಿತಿಗಳು ತಮ್ಮ ಮನೆಯಲ್ಲಿ ಶೇಕರಣೆಯಾಗಿದ್ದ ಹಳೆಯ ಪಿಂಗಾಣಿ ಮತ್ತು ಮಣ್ಣಿನ ವಸ್ತುಗಳನ್ನು ಈ ಕಾರ‍್ಯಕ್ರಮದಲ್ಲಿ ಒಡೆಯುತ್ತಾರೆ. ಅವುಗಳು ಹೆಚ್ಚು ಹೆಚ್ಚು ಚೂರಾದಶ್ಟು ವದು-ವರರಿಗೆ ಅದ್ರುಶ್ಟ ತರುತ್ತದೆಂದು ನಂಬಿದ್ದಾರೆ. ಇದೇ ಈ ಕಾರ‍್ಯಕ್ರಮದ ಪ್ರಮುಕ ಗಟ್ಟ. ಇದಾದ ನಂತರ ಮತ್ತೊಂದು ಸಂಪ್ರದಾಯ ತೆರೆದುಕೊಳ್ಳುತ್ತದೆ. ಅದು ಪೂರ‍್ಣವಾಗಿ ವದು-ವರರಿಗೆ ಸಂಬಂದಿಸಿದ್ದು. ಮನೆಯ ಆವರಣದಲ್ಲಿ ಚೆಲ್ಲಾ ಪಿಲ್ಲಿಯಾಗಿ ಒಡೆದು ಹರಡಿದ್ದ ಪಿಂಗಾಣಿ ಮತ್ತು ಮಣ್ಣಿನ ಚೂರುಗಳನ್ನು ಸ್ವಚ್ಚವಾಗಿ ಗುಡಿಸುವ ಕ್ರಿಯೆ. ಇದನ್ನು ವದು-ವರರೇ ಕುದ್ದಾಗಿ ಮಾಡಬೇಕಿದೆ. ಸಾಂಕೇತಿಕವಾಗಿ ಇದು ವದು-ವರರು, ತಮ್ಮ ಜೀವನದಲ್ಲಿ ಮುಂದೆ ಒದಗಬಹುದಾದ ಸವಾಲುಗಳನ್ನು ಒಟ್ಟಾಗಿ ಕೂಡಿ ಎದುರಿಸುವ ಬಾವೈಕ್ಯತೆಯನ್ನು ಪ್ರತಿನಿದಿಸುತ್ತದೆ.

ಪೋಲ್ಟೆರಾಬೆಂಡ್ ಒಂದು ಶತಮಾನಕ್ಕೂ ಹಳೆಯದಾದ ಸಂಪ್ರದಾಯ. ಆದರೂ ಇದರ ಮೂಲ ತಿಳಿಯಲು ಸರಿಯಾದ ದಾಕಲಾತಿಗಳು ಲಬ್ಯವಿಲ್ಲ. 1800ರ ನಂತರ ಈ ಸಂಪ್ರದಾಯ ವಿಕಸನಗೊಳ್ಳಲು ಪ್ರಾರಂಬವಾಯಿತು ಎನ್ನುತ್ತಾರೆ ಇದರ ಅದ್ಯಯನ ಕೈಗೊಂಡವರು. ಶತಮಾನಗಳಿಂದಲೂ ಜನ ದೆವ್ವ ಮತ್ತು ಬೂತಗಳನ್ನು ಉಚ್ಚಾಟನೆ ಮಾಡಲು ಬಯಂಕರ ಶಬ್ದದ ಮೊರೆ ಹೋಗುತ್ತಿದ್ದದ್ದು ಸಾಮಾನ್ಯ. ಡೋಲು, ಜಾಗಟೆಯಂತೆ ಶಬ್ದ ಮಾಡುವ ತಟ್ಟೆಗಳು, ಕೂಗಾಟ ಕಿರುಚಾಟಗಳ ಶಬ್ದದಿಂದ ಹೆದರಿಸಿ ಓಡಿಸಬಹುದೆಂಬ ನಂಬಿಕೆ ಅವರಲ್ಲಿ ಮನೆಮಾಡಿತ್ತು. ಇದೇ ಕಾರಣಕ್ಕೆ ಹೊಸ ವರ‍್ಶಗಳನ್ನು ಬರಮಾಡಿಕೊಳ್ಳುವಾಗ, ಪಟಾಕಿ ಮತ್ತು ಸಿಡಿಮದ್ದುಗಳನ್ನು ಸಿಡಿಸಿ, ಕ್ಶುದ್ರ ಶಕ್ತಿಗಳನ್ನು ಓಡಿಸುತ್ತಿದ್ದರು. ಇಲ್ಲೂ ಆದೇ ವೈಚಾರಿಕತೆಯನ್ನು ಅನುಸರಿಸಿ, ಈ ಪೋಲ್ಟರಾಬೆಂಡ್ ಉಗಮವಾಗಿರಬೇಕು ಎನ್ನುತ್ತಾರೆ ಇತಿಹಾಸಕಾರರು. ನೂತನ ದಂಪತಿಗಳಿಗೆ ತಮ್ಮ ಬವಿಶ್ಯದ ಜೀವನದಲ್ಲಿ ಯಾವುದೇ ಕ್ಶುದ್ರ ಶಕ್ತಿಯ ಕಾಟ ಕಾಡದಿರಲಿ ಎಂಬ ಆಶಯವೇ ಈ ಪೋಲ್ಟರಾಬೆಂಡ್ ಕಾರ‍್ಯಕ್ರಮಕ್ಕೆ ಮೂಲ ಪ್ರೇರಣೆ.

ಇಂದಿನ ದಿನಗಳಲ್ಲಿ ಪೋಲ್ಟರಾಬೆಂಡ್ ಕಾರ‍್ಯಕ್ರಮದಲ್ಲಿ ಸಾಕಶ್ಟು ಬದಲಾವಣೆಗಳು ನುಸುಳಿವೆ. ಪಿಂಗಾಣಿ ಮತ್ತು ಮಣ್ಣಿನ ವಸ್ತಗಳನ್ನು ಒಡೆಯಲು ಅದಕ್ಕಾಗಿಯೇ ಸ್ತಳವನ್ನು ಗುರುತಿಸಲಾಗುತ್ತದೆ. ಸಾಂಕೇತಿಕವಾಗಿ ವದು-ವರರಿಂದ ಒಡೆದು, ಚೂರು ಚೂರಾದ ಪಿಂಗಾಣಿ ಮತ್ತು ಮಣ್ಣಿನ ವಸ್ತುಗಳನ್ನು ಗುಡಿಸುವ ಕಾರ‍್ಯ ಸಹ ಈಗ ನಡೆಯುತ್ತದೆ. ಆದರೂ ಸಂಪ್ರದಾಯಕ್ಕೆ ಜೋತು ಬಿದ್ದಿದ್ದು, ಇನ್ನೂ ಪೂರ‍್ಣವಾಗಿ ಹೊರ ಬಂದಿಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: weddings.traditionscustoms.com, sunnysidecircus.com, owlcation.com, theomaway.com, lifeandtrendz.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: