ಮಾಡಿ ನೋಡಿ ಮೊಟ್ಟೆ ಸಾರು

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು:

 • ಮೊಟ್ಟೆ – 6
 • ಈರುಳ್ಳಿ – 2
 • ಟೊಮೋಟೋ – 2
 • ಹಸಿಮೆಣಸಿನ ಕಾಯಿ – 2
 • ಶುಂಟಿ – ಒಂದಿಚು
 • ಬೆಳ್ಳುಳ್ಳಿ – 10 ಎಸಳು
 • ಚಕ್ಕೆ – ಸ್ವಲ್ಪ
 • ಲವಂಗ – 2
 • ಏಲಕ್ಕಿ – 1
 • ದನಿಯಾ ಪುಡಿ – 1/2 ರಿಂದ 1 ಚಮಚ
 • ಕಾರದ ಪುಡಿ – 2 ರಿಂದ 3 ಚಮಚ
 • ಕಾಯಿ ತುರಿ – ಅರ‍್ದ ಹೊಳಕೆ
 • ಅರಿಶಿಣ ಸ್ವಲ್ಪ
 • ಎಣ್ಣೆ ಸ್ವಲ್ಪ
 • ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊದಲಿಗೆ 1 ಈರುಳ್ಳಿ ಮತ್ತು 1 ಟೋಮೊಟೊ ಹೆಚ್ಚಿಟ್ಟುಕೊಳ್ಳಿರಿ. ಆಮೇಲೆ ಶುಂಟಿ ಮತ್ತು ಬೆಳ್ಳುಳ್ಳಿಯನ್ನು ಜಜ್ಜಿಟ್ಟುಕೊಳ್ಳಿರಿ. ಇವಿಶ್ಟಕ್ಕೆ ಕಾಯಿ ತುರಿ, ಚಕ್ಕೆ, ಲವಂಗ, ಏಲಕ್ಕಿ, ದನಿಯಾ ಪುಡಿ, ಸ್ವಲ್ಪ ಅರಿಶಿಣ ಮತ್ತು ಕಾರದ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿರಿ. ಈಗ ಇನ್ನೊಂದು ಈರುಳ್ಳಿ, ಟೋಮೋಟೋ ಮತ್ತು 2 ಹಸಿಮೆಣಸಿನ ಕಾಯಿಯನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿರಿ. ಈಗ ಒಗ್ಗರಣೆಗೆ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ, ಕೊಂಚ ನೀರು ಮತ್ತು ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ ಕಾಯಲು ಬಿಡಿ. ಸಾರು ಕುದಿಯುತ್ತಿದ್ದಂತೆ, ಒಲೆಯನ್ನು ನಡು ಉರಿಗೆ ತನ್ನಿ. ಈಗ ಮೊಟ್ಟೆಗಳನ್ನು ಒಂದೊಂದಾಗಿ ಒಡೆದು ಸಾರಿಗೆ ಹಾಕಿ, ಗೂರಾಡಿ(ಅಲ್ಲಾಡಿಸಿ). ಮೊಟ್ಟೆಯನ್ನು ಹಾಗೆ ಹಾಕಲು ಬೇಡವೆಂದಲ್ಲಿ, ಮೊಟ್ಟೆಯನ್ನು ನೀರಿನಲ್ಲಿ ಬೇಯಿಸಿ ಕೂಡ ಹಾಕಿಕೊಳ್ಳಬಹುದು. ಈಗ ಒಲೆಯ ಉರಿ ಏರಿಸಿ, 3-5 ನಿಮಿಶ ಕುದಿಸಿ ಇಳಿಸಿ. ಸಾರನ್ನು ಚೆಂದ ಕಾಣಿಸಲು, ಸಾರಿನ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಬಹುದು.

(ಚಿತ್ರಸೆಲೆ: chefdehome.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: