ದೇವರ ನಾಡು ಕೇರಳ

– ರಾಹುಲ್ ಆರ್. ಸುವರ‍್ಣ.

ದೇವರ ನಾಡೆಂದೇ ಪ್ರಸಿದ್ದಿ ಪಡೆದಿರುವ ಕೇರಳ ಸಾಂಸ್ಕ್ರುತಿಕವಾಗಿ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಕಡಿಮೆ ಬೌಗೋಳಿಕ ವಿಸ್ತೀರ‍್ಣದಲ್ಲಿ ಸಾಕಶ್ಟು ಬಗೆಯ ಸಸ್ಯವರ‍್ಗ, ಪ್ರಾಣಿಸಂಕುಲ, ಸಾಕಶ್ಟು ಪ್ರವಾಸಿ ಸ್ತಳಗಳನ್ನು ಹೊಂದಿರುವ ಇದು ಹೆಚ್ಚಿನ ಸಂಕ್ಯೆಯಲ್ಲಿ ಪ್ರವಾಸಿಗರನ್ನು ಆಕರ‍್ಶಿಸುತ್ತದೆ.

ಅಲ್ಲೆಪ್ಪಿ

ಈ ಸ್ತಳದ ಹೆಸರು ಕೇಳುವಾಗ ಒಮ್ಮೆಯೂ ನೋಡದವರು ಮೂಗು ಮುರಿಯುವುದು ಎಶ್ಟು ಸಾಮಾನ್ಯವೋ, ಅದರಂತೆ ಈ ಸ್ತಳಕ್ಕೆ ಬೇಟಿಕೊಟ್ಟ ಮೇಲೆ ಕಣ್ಣಂಚಿನಲ್ಲಿ ಪ್ರಕ್ರುತಿಯ ಸೌಂದರ‍್ಯವನ್ನು ಕಂಡು ಮರುಳಾಗುವುದು ಅಶ್ಟೇ ಸಾಮಾನ್ಯ. ಕೇರಳ ಒಂದು ರೀತಿಯ ವಿಬಿನ್ನ ವಿಶೇಶತೆಯನ್ನು ಹೊಂದಿರುವ ಸ್ತಳ. ಅಲ್ಲೆಪ್ಪಿ, ಬದುಕಿನಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸ್ತಳ ಎನ್ನಲೂಬಹುದು. ಸುತ್ತಲೂ ನೀರಿನ ಸದ್ದು ಕಿವಿಗೆ ಕೇಳಿಸುತ್ತಲೇ ಇರುತ್ತದೆ. ಇಲ್ಲಿನ ದೋಣಿ ವಿಹಾರಕ್ಕೆ ಕಾಲಿಟ್ಟ ಮೇಲೆಯೇ ಅಲ್ಲೆಪ್ಪಿ ಯಾಕೆ ಪ್ರಸಿದ್ದ ಎಂದು ಅರ‍್ತವಾಗುವುದು. ಅತ್ತಿತ್ತ ಬಾಳೆ, ತೆಂಗು ತಲೆ ಎತ್ತಿ ನಿಂತಿದ್ದರೆ, ಅವುಗಳ ನಡುವೆ ದೋಣಿ ವಿಹಾರ ಮಾಡುವುದು ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ಆಹಾರ ಪದ್ದತಿಯೂ ಅಶ್ಟೆ, ವಿಬಿನ್ನತೆಯಿಂದ ಕೂಡಿದ್ದು ಪ್ರವಾಸಿಗರ ನಾಲಿಗೆಗಳು ಕುಣಿದಾಡುವಂತೆ ಮಾಡುತ್ತದೆ. ಪ್ರವಾಸಿಗರ ಮನಕ್ಕೆ ಸಂತೋಶ ನೀಡುವುದರೊಂದಿಗೆ, ಎಲ್ಲವನ್ನು ಮರೆತು ಮತ್ತೆ ಹೊಸ ಜೀವನ ರೂಪಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ. ತಂಪಾಗಿ ಬೀಸುವ ಗಾಳಿ ಅಲ್ಲಿನವರಿಗೆ ಉಲ್ಲಾಸ ನೀಡುವುದರೊಂದಿಗೆ, ಮೈ ಮನವನ್ನು ತಂಪಾಗಿಡುತ್ತದೆ.

ಮುನ್ನಾರ್

ಕೇರಳದ ಹೆಸರುವಾಸಿಯಾದ ಗಿರಿದಾಮಗಳಲ್ಲಿ ಇದು ಕೂಡ ಒಂದು. ಹಚ್ಚ ಹಸಿರಿನಿಂದ ಕೂಡಿದ ಈ ಸ್ತಳಕ್ಕೆ ನವ ದಂಪತಿಗಳು ಕಾಲ ಕಳೆಯಲು ಬರುತ್ತಾರೆ. ಇಲ್ಲಿ ನಮ್ಮ ಕಣ್ಣು ಬೇಡವೆಂದರೂ ಹೋಗುವುದು ಚಹಾ ತೋಟದ ಕಡೆ. ದೊಡ್ಡ ದೊಡ್ಡದಾದ ಚಹಾ ತೋಟಗಳು ಇಲ್ಲಿವೆ. ಹಸಿ ಹಸಿರಿನಿಂದ, ಚಿಗುರು ಚಿಗುರಾಗಿ ಒಂದೆ ಎತ್ತರಕ್ಕೆ ಬೆಳೆದು ನಿಂತ ಅವುಗಳನ್ನು ನೋಡುವುದೇ ಒಂದು ಕುಶಿ. ರಜಾ ದಿನಗಳಲ್ಲಿ ಬಂದರೆ ಇಲ್ಲಿ ಬಂಗಲೆಗಳನ್ನು, ಟಾಟಾ ಟೀ ಮ್ಯೂಸಿಯಂ, ಅಟಕುಲ್ ಜಲಪಾತ, ಟಾಪ್ ಸ್ಟೇಶನ್, ಕುಂಡಲ ಕೆರೆ, ಅನಾಮುಡಿ ಮತ್ತು ಎರಾವಿಕುಲಂ ನ್ಯಾಶನಲ್ ಪಾರ್‍ಕ್‌ಗಳನ್ನು ನೋಡಿ ಹೋಗಬಹುದು. ಆಗಸಕ್ಕೆ ತಾಗುತ್ತವೆಯೇನೋ ಎಂಬಂತಿರುವ ಬೆಟ್ಟಗಳೇ ಇಲ್ಲಿನ ಮುಕ್ಯ ಆಕರ‍್ಶಣೆಯೂ ಹೌದು.

ವರ‍್ಕಲ

ಇದು ಕೇರಳದಲ್ಲಿ ಸೂರ‍್ಯೋದಯ ಮತ್ತು ಸೂರ‍್ಯಾಸ್ತವನ್ನು ನೋಡಿ ಆನಂದಿಸಲು ಸೂಕ್ತವಾದ ಸ್ತಳ. ಪರಿಸರದ ಸೌಂದರ‍್ಯಕ್ಕೆ ಜೀವ ತುಂಬುವ ಸೂರ‍್ಯ ಚಂದ್ರರು ಇಲ್ಲಿ ಬಹು ಚೆಂದವಾಗಿ ಕಾಣಲು ಸಿಗುತ್ತಾರೆ. ಅಲ್ಲದೆ ಇದು ಹಿಂದೂ ಸಂಸ್ಕ್ರುತಿಯ ದಾರ‍್ಮಿಕ ಸ್ತಳವಾದ್ದುದರಿಂದ ಹೆಚ್ಚಿನ ಸಂಕ್ಯೆಯ ಹಿಂದೂಗಳೂ ಇಲ್ಲಿ ಬರುವುದರೊಂದಿಗೆ ಪಾಪನಾಶ ಬೀಚ್, ವಿಶ್ಣು ದೇವಾಲಯ, ವರ‍್ಕಲ ಸುರಂಗಕ್ಕೆ ಬೇಟಿ ನೀಡುತ್ತಾರೆ.

ಕುಮರಕೊಮ್

ಬದುಕಿನ ಜಂಜಾಟದ ನಡುವೆ ಕೆಲವೊಮ್ಮೆ ನಾವೇ ಕಟ್ಟಿದ ಮನೆಯಲ್ಲೂ ನಮಗೆ ಶಾಂತಿ ಸಿಗದೆ ಹೋಗುತ್ತದೆ ಅಂತಹ ಸಂದರ‍್ಬದಲ್ಲಿ ನಮ್ಮದಲ್ಲದ ಸ್ತಳಗಳಿಗೆ ಹೋಗಲಿಚ್ಚಿಸುತ್ತೇವೆ. ಅಂತಹ ಸ್ತಳಗಳಲ್ಲಿ ಇದೂ ಕೂಡ ಒಂದು. ಪ್ರಶಾಂತವಾದ ವಾತಾವರಣವನ್ನು ಮೈಗೂಡಿಸಿಕೊಂಡಿರುವ ಈ ಸ್ತಳದಲ್ಲಿ ಆಗಸದೆತ್ತರಕ್ಕೆ ಮರಗಿಡಗಳು ಬೆಳೆದು ನಿಂತಿವೆ. ಮೀನುಗಾರಿಕೆಗೂ ಪೂರ‍್ಣ ಪ್ರಮಾಣದ ಪ್ರೋತ್ಸಾಹ ಇಲ್ಲಿದೆಯಲ್ಲದೆ, ಬೋಟಿಂಗ್ ವ್ಯವಸ್ತೆ ಕೂಡ ಇದೆ.

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ

ಕೇರಳದಲ್ಲಿ ಅತ್ಯಂತ ಪ್ರಸಿದ್ದಿ ಪಡೆದುಕೊಂಡಿರುವ ದೇವಾಲಯಗಳಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯವು ಕೂಡಾ ಒಂದು. ಹೆಚ್ಚಿನ ಸಂಕ್ಯೆಯ ಬಕ್ತರನ್ನು ಹೊಂದಿರುವ ಈ ದೇವಾಲಯವು, ಸುತ್ತಲೂ ಕಾಡುಗಳಿಂದ ಕೂಡಿದ್ದು, ಪಶ್ಚಿಮ ಗಟ್ಟದ ಬೆಟ್ಟದ ತುದಿಯಲ್ಲಿದೆ. ಅಸಂಕ್ಯಾತ ಬಕ್ತರ ಸಂಕಶ್ಟಗಳಿಗೆ, ಸ್ವಾಮಿ ಅಯ್ಯಪ್ಪ ಪರಿಹಾರದ ದಾರಿ ತೋರಿದ ಸಾಕಶ್ಟು ನಿದರ‍್ಶನಗಳು ಇಂದಿಗೂ ನಮಗೆ ಕಾಣಲು ಸಿಗುತ್ತವೆ.

ಒಟ್ಟಿನಲ್ಲಿ ಸಂತೋಶದ ಬೊಕ್ಕಸವನ್ನೇ ನಮಗೀಯುವ ಈ ಸ್ತಳಗಳು ಪ್ರತಿದಿನವೂ ಹೊಸಬರನ್ನು ಹೊಸತನದಿಂದ ಪರಿಚಯಿಸಿಕೊಂಡು, ಸ್ವಾಗತ ಕೋರುತ್ತವೆ.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications