ವಿಚಿತ್ರ ಕಟ್ಟಳೆಗಳು

– ಕಿಶೋರ್ ಕುಮಾರ್

 

ಜಗತ್ತಿನಲ್ಲಿರೊ ಎಲ್ಲಾ ನಾಡುಗಳಿಗೂ ತಮ್ಮದೇ ಆದ ಕಟ್ಟಳೆಗಳಿವೆ, ಅವುಗಳಲ್ಲಿ ಕೆಲವು ತುಂಬಾ ಕಟಿಣವಾಗಿದ್ದರೆ, ಇನ್ನೂ ಕೆಲವು ಕೆಲಸಕ್ಕೆ ಬಾರದ ಕಟ್ಟಳೆಗಳಾಗಿರುತ್ತವೆ. ಆದರೆ ಕೆಲವೊಂದು ನಾಡುಗಳಲ್ಲಿರೋ ಕಟ್ಟಳೆಗಳು ನಿಜಕ್ಕೂ ವಿಚಿತ್ರ ಎನಿಸುತ್ತವೆ, ಅವುಗಳು ಇತರೆ ನಾಡುಗಳಲ್ಲಿ ಎಂದೂ ಕೇಳರಿಯದ, ಕೇಳಿದೊಡನೆ ನಗು ತರಿಸುವ ಇಲ್ಲವೇ ಹುಬ್ಬೇರಿಸುವಂತಹ ಕಟ್ಟಳೆಗಳಾಗಿರುತ್ತವೆ. ಅಂತಹ ಕೆಲವು ಕಟ್ಟಳೆಗಳನ್ನು ಇಲ್ಲಿ ನೋಡಬಹುದು.

1. ಅರಿಜೋನಾ: ನಮ್ಮ ಸುತ್ತ ಮುತ್ತ ಕಳ್ಳಿಗಿಡಯಿದ್ದರೆ, ಅದನ್ನ ಬೇಲಿಯಾಗಿ ಬಳಸೋದು ಇಲ್ಲವೇ ಕತ್ತರಿಸಿ ಸ್ವಚ್ಚ ಮಾಡೋದನ್ನ ನೋಡಿದ್ದೇವೆ. ಬೇಲಿಯಾಗಿ ಬಳಸೋರನ್ನಾಗಲಿ, ಇಲ್ಲವೇ ಕಳ್ಳಿಯನ್ನು ಕತ್ತರಿಸುವವರನ್ನಾಗಲಿ ಯಾಕೆ ಹೀಗೆ ಮಾಡ್ತೀರ ಅಂತ ಕೇಳೋರು ಸಹ ಕಡಿಮೆ ಅನ್ನಬಹುದು, ಆದರೆ ಅರಿಜೋನಾ ನಾಡಿನಲ್ಲಿ ಅಪ್ಪಿತಪ್ಪಿಯೂ ಕಳ್ಳಿಗಿಡವನ್ನು ಕತ್ತರಿಸುವಂತಿಲ್ಲ, ಹಾಗೇನಾದರು ಕತ್ತರಿಸಿದರೆ 25 ವರುಶ ಸೆರೆವಾಸ. ಕಳ್ಳಿಗಿಡ ಕತ್ತರಿಸಿ ಸೆರೆಮನೆ ಸೇರಿದ ಅನ್ನೋದು ಎಶ್ಟು ಹಾಸ್ಯಾಸ್ಪದ ಅಲ್ವಾ?

2. ಓಹಿಯೋ: ಪ್ರಾಣಿಗಳು ಬಯಪಟ್ಟಾಗ ಇಲ್ಲವೇ ರೊಚ್ಚಿಗೆದ್ದಾಗ ಮನುಶ್ಯರ ಮೇಲೆ ಎರಗುವುದು ನೋಡಿರುತ್ತೇವೆ. ಅದರಲ್ಲಿ ನಾಯಿಗಳ ಬಗ್ಗೆಯಂತೂ ಕೇಳೇ ಇರ‍್ತೀವಿ. ಇಲ್ಲೆಲ್ಲಾ ಮನುಶ್ಯನ ಮೇಲೆ ನಾಯಿ ಎರಗಲು ಬಂದಾಗ ಮನುಶ್ಯರು ಓಡಿ ಹೋಗುವುದೋ, ಇಲ್ಲವೇ ಎದುರಿಸುವುದೋ ಮಾಡುತ್ತಾರೆ ಆದರೆ ಅಮೆರಿಕಾದ ಓಹಿಯೊ ರಾಜ್ಯದಲ್ಲಿ ಪೊಲೀಸರು ನಾಯಿಯನ್ನು ಪಳಗಿಸುವಾಗ ನಾಯಿಯನ್ನು ಕಚ್ಚಬಹುದು ಎಂಬ ಕಟ್ಟಳೆ ಇದೆ. ಸಾಮಾನ್ಯವಾಗಿ ನಾಯಿಗಳು ಕಚ್ಚುತ್ತವೆ ಅಂತ ಕೇಳಿದ್ದೇವೆ ಆದ್ರೆ ಇಲ್ಲಿ ತಿರುಗು ಮುರುಗು.

3. ಆಸ್ಟ್ರೇಲಿಯಾ: ನಿಮಗಿಶ್ಟದ ಒಂದು ಪದಾರ‍್ತವನ್ನ ಕೊಂಡುಕೊಳ್ಳೋದು ಅದರಲ್ಲೂ ನಿಮಗಿಶ್ಟ ಬಂದಶ್ಟು ಕೊಂಡುಕೊಳ್ಳೋದು ಸರ‍್ವೇ ಸಾಮಾನ್ಯಾ ತಾನೇ? ಆದರೆ ಈ ನಾಡಿನಲ್ಲಿ ಹಾಗಲ್ಲ. ನೀವು ಆಲೂಗೆಡ್ಡೆ ಇಶ್ಟಪಡೋರ? ನೀವು ಆಸ್ಟ್ರೇಲಿಯಾದಲ್ಲಿದ್ದು 50 ಕಿಲೋಗಿಂತ ಹೆಚ್ಚು ಆಲೂಗಡ್ಡೆ ತಗೊಂಡ್ರೆ ಅದು ಕಾನೂನು ಬಾಹಿರ, ಅಲ್ಲಿನ ಸರ‍್ಕಾರ ನಿಮ್ಮ ಮೇಲೆ ಕ್ರಮ ತಗೋಬಹುದು. ನಿಮ್ಮ ಸಮಾರಂಬಗಳಲ್ಲಿ ಆಲೂಗಡ್ಡೆಯಿಂದ ಮಾಡೋ ತಿನಿಸುಗಳನ್ನ ಹೆಚ್ಚು ಮಾಡಿಸುವ ಮುನ್ನ ಒಮ್ಮೆ ಈ ಕಟ್ಟಳೆಯನ್ನು ನೆನೆಯದೆ ಇರಬೇಡಿ.

4. ಅಮೇರಿಕಾ: ಮನುಶ್ಯನ ಮನಸ್ಸಿನಲ್ಲಿ ನೂರಾರು ಯೋಚನೆಗಳು ಇರುತ್ತವೆ, ಗಳಿಗೆಗೊಂದು ಯೋಚನೆ ಬರಬಹುದು ಅವನ್ನ ತಮ್ಮವರೊಡನೆ/ಪರಿಚಯದವರೊಡನೆ ಹೇಳಿಕೊಳ್ಳೋರೆ ಕಡಿಮೆ, ಅಂತದರಲ್ಲಿ ಇಲ್ಲೊಂದು ಕಟ್ಟಳೆ ಇದೆ, ಅದು ನಿಮ್ಮನ್ನ ಅಶ್ಚರ‍್ಯಚಕಿತರನ್ನಾಗಿ ಮಾಡದೇ ಇರದು. ನೀವು ಅಮೇರಿಕಾದ ರಾಜದಾನಿ ವಾಶಿಂಗ್ಟನ್ ನಲ್ಲಿದ್ದು, ಅಲ್ಲಿ ಗಾಡಿ ಓಡಿಸುವಾಗ ನಿಮಗೇನಾದರು ತಪ್ಪು ಎಸಗುವ ಯೋಚನೆಯಿದ್ದರೆ, ನೀವು ಪೊಲೀಸರಿಗೆ ಮೊದಲೇ ತಿಳಿಸಬೇಕಂತೆ. ಈ ರೀತಿ ಮನಸ್ಸಿಗೆ ಬಂದ ಯೋಚನೆಗಳನ್ನೆಲ್ಲಾ ಪೊಲೀಸರಿಗೆ ತಿಳಿಸಲು ಎಲ್ಲರೂ ಮೊದಲುಮಾಡಿದರೆ ಅದರ ಮುಂದಿನ ಕತೆ ಏನಾಗಬಹುದು ಊಹಿಸಿ?

5. ಪ್ರಾನ್ಸ್: ಜಗತ್ತಿನ ಹಲವೆಡೆ ಹೊರಪ್ರದೇಶದಲ್ಲಿ ಮುತ್ತು ಕೊಡುವುದು ತಪ್ಪಲ್ಲ, ಮುಂದುವರೆದ ನಾಡುಗಳಲ್ಲಿ ಇದನ್ನ ವಯಕ್ತಿಕ ಸ್ವಾತಂತ್ರದ ಒಂದು ಬಾಗ ಎಂದೇ ತಿಳಿಯಲಾಗಿದೆ. ಆದರೆ ಮುಂದುವರೆದ ನಾಡುಗಳಲ್ಲಿ ಒಂದಾದ ಪ್ರಾನ್ಸ್ ನಲ್ಲಿನ ಈ ವಿಚಿತ್ರ ಕಟ್ಟಳೆ ಪ್ರಕಾರ ರೈಲಿನಲ್ಲಿ ಮುತ್ತು ಕೊಡುವ ಹಾಗಿಲ್ಲ, ಆದ್ರೆ ರೇಲ್ವೆ ನಿಲ್ದಾಣದಲ್ಲಿ ಮುತ್ತು ಕೊಡಬಹುದು, ಅದೂ ಸಹ ರೈಲು ಬರುವ ಮುನ್ನ. ಪ್ರೇಮಿಗಳ ನೆಚ್ಚಿನ ತಾಣ ಪ್ರಾನ್ಸ್ ಗೆ ಪಯಣಿಸಬೇಕೆಂದು ಹಾತೊರೆಯುವ ಜೋಡಿಗಳಿಗೆ ಈ ಕಟ್ಟಳೆ ಬಗ್ಗೆ ತಿಳಿಸೋದು ಒಳ್ಳೇದಲ್ವಾ?

6. ಟರ‍್ಕಿ: ಯಾವುದೇ ವಸ್ತುವಿನ ಮೇಲಿನ ಅದಿಕಾರ ಅದರ ಒಡೆಯರಿಗೆ ಇರುತ್ತೆ, ಆದರೆ ನೋಟುಗಳ/ನಾಣ್ಯಗಳ ವಿಚಾರದಲ್ಲಿ ಹೀಗೆ ಹೇಳೋದು ಕಶ್ಟ ಅನ್ಸುತ್ತೆ. ಯಾಕಂದ್ರೆ ನೋಟುಗಳು ಸರಕಾರದಿಂದ ಅಚ್ಚಾಗೋದರಿಂದ ಪ್ರಜೆಗಳಿಗೆ ಅದೊಂದು ಜವಾಬ್ದಾರಿ ಅಂತಾನು ಹೇಳಬಹುದು. ಇದನ್ನ ಹೊರತು ಪಡಿಸಿ ಜಗತ್ತಿನೆಲ್ಲೆಡೆ ನೋಟು ಹರಿದರೆ ಹೆಚ್ಚು ಅಂದ್ರೆ ಬೇಜಾರಾಗಬಹುದು. ಏನೂ ಮಾಡಕ್ಕಾಗಲ್ಲ ಅಂತ ಸ್ವಲ್ಪ ಯೋಚನೆಮಾಡಿ ಮುಂದುವರೆಯೋದು ಬಿಟ್ರೆ ಇನ್ನೇನಿರುತ್ತೆ? ಅದ್ರೇ ಟರ‍್ಕಿಯಲ್ಲಿ ಹಾಗಾಗಲ್ಲ. ನೀವೇನಾದ್ರು ಟರ‍್ಕಿಯಲ್ಲಿ ನೋಟನ್ನ ಹರಿದು ಹಾಕಿದ್ರೆ, ಬೇಜಾರಾಗೋದರ ಜೊತೆಗೆ 6 ತಿಂಗಳಿಂದ 3 ವರುಶದವರೆಗೆ ಸೆರೆವಾಸಕ್ಕೆ ಒಳಪಡಬಹುದು. ಹೌದು, ಅದಕ್ಕೆ ಯಾವುದೇ ವಸ್ತುವಾದರೂ ಜಾಗರೂಕತೆಯಿಂದ ನೋಡಿಕೊಳ್ಳೋದನ್ನ ರೂಡಿಮಾಡಿಕೊಳ್ಳೋದು ಒಳ್ಳೇದು.

7. ಪ್ರಾನ್ಸ್: ತಾವು ಸಾಕಿದ ಪ್ರಾಣಿಗೆ ಯಾವ ಹೆಸರಿಡಬೇಕು ಅನ್ನೋದನ್ನ ಅದರ ಒಡೆಯ ನಿರ‍್ದಾರ ಮಾಡೋದು ಎಲ್ಲೆಡೆ ನೋಡಿರೋದೆ. ಆದರೆ ಪ್ರಾನ್ಸ್ ನಲ್ಲಿ ಹಾಗಲ್ಲ. ಪ್ರಾನ್ಸ್ ನಲ್ಲಿ ನೀವೇನಾದ್ರು ಹಂದಿಯನ್ನು ಸಾಕುವವರಾಗಿದ್ದು, ಆ ಹಂದಿಗೆ ಹೆಸರಿಡುವಾಗ ಎಚ್ಚರದಿಂದ ಹೆಸರಿಡಬೇಕಾದ ಕಟ್ಟಳೆಯೊಂದು ಪ್ರಾನ್ಸ್ ನಲ್ಲಿದೆ. ಹೌದು ಪ್ರಾನ್ಸ್ ನಲ್ಲಿ ಹಂದಿಗಳಿಗೆ ರಾಜಕೀಯ ನಾಯಕರ ಹೆಸರಿಡುವಂತಿಲ್ಲ. ಈ ರೀತಿ ಒಂದು ಕಟ್ಟಳೆ ಬರಬೇಕು ಅಂದ್ರೆ, ಪ್ರಾನ್ಸ್ ನಲ್ಲಿ ಹಂದಿಸಾಕುವವರು ರಾಜಕಾರಣಿಗಳಿಗೆ ತುಂಬಾನೇ ನೋವು ಕೊಟ್ಟಿರಬಹುದು ಅನ್ಸುತ್ತೆ ಅಲ್ವಾ?

(ಮಾಹಿತಿ ಹಾಗೂ ಚಿತ್ರಸೆಲೆ: pixabay.com, holidify.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: