ಪಡುವಣ ಗಟ್ಟಗಳ ಬಗೆಗೆ ನಿಮಗೆಶ್ಟು ಗೊತ್ತು?

– ನಿತಿನ್ ಗೌಡ.

‘ಪಡುವಣ ಗಟ್ಟಗಳು’, ಬೂಮಿ ತಾಯಿಗೆ ಹಸಿರ ಸೀರೆ ಉಡಿಸಿದಂತೆ, ನೋಡಲು ಕಣ್ಣಿಗೆ ಹಬ್ಬದಂತಿವೆ. ಹತ್ತಾರು ಬುಡಕಟ್ಟು ಜನಾಂಗಗಳು, ನದಿಗಳು ಮತ್ತು ಸಾವಿರಾರು ಬಗೆಯ ಗಿಡ-ಮರ ಪ್ರಾಣಿ, ಹಕ್ಕಿ, ಹುಳ, ಕೀಟಗಳನ್ನು ಒಳಗೊಂಡ ಜೀವವೈವಿದ್ಯತೆ – ಹೀಗೆ ಊಹೆಗೂ ನಿಲುಕದ ನಿಸರ‍್ಗದ ಸೋಜಿಗಗಳನ್ನು ಪಡುವಣ ಗಟ್ಟವು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ. ಪಡುವಣ ಗಟ್ಟಗಳ ಮಡಿಲಲ್ಲಿ ಹಲಬಗೆಯ ಜನರು ಜೀವನ ಸಾಗಿಸುತ್ತಿದ್ದಾರೆ. ಇಂತಹ ಪಡುವಣ ಗಟ್ಟಗಳ ಸುತ್ತಲಿರುವ, ಇನ್ನಶ್ಟು ಬೆರಗಾಗಿಸುವ ಸಂಗತಿಗಳ ಬಗ್ಗೆ ಒಂದು ಕಿರುನೋಟ ಇಲ್ಲಿದೆ.

  • ಪಡುವಣ ಗಟ್ಟದ ಬೆಟ್ಟಗಳ ಹರವು 1,60,000 ಚದರ ಕೀ.ಮೀ ನಶ್ಟಿದೆ. ಇದು ಗುಜರಾತ್, ಮಹಾರಾಶ್ಟ್ರ, ಗೋವಾ, ಕರ‍್ನಾಟಕ, ಕೇರಳ ಮತ್ತು ತಮಿಳುನಾಡು ಹೀಗೆ ಆರು ರಾಜ್ಯಗಳಲ್ಲಿ ಸುಮಾರು 1,600 ಕೀ.ಮೀ ನಶ್ಟು ಉದ್ದಕ್ಕೆ ಬಾರತದ ತೆಂಕಣ ಪ್ರಸ್ತಬೂಮಿ ಪಡುವಣ ಕರಾವಳಿಗೆ ಸಮನಾಗಿ ಹರಡಿಕೊಂಡಿದೆ.
  • ಪಡುವಣ ಗಟ್ಟಗಳನ್ನು ಯೂನೆಸ್ಕೋ ( UNSESCO ) ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿನ ಒಟ್ಟು 39 ಎಡೆಗಳನ್ನು ವಿಶ್ವ ಪಾರಂಪರಿಕ ತಾಣಗಳಾಗಿ ಗುರುತಿಸಲಾಗಿದೆ. ಇದರಲ್ಲಿ 20 ಕೇರಳದಲ್ಲಿ, 10 ಕರ‍್ನಾಟಕದಲ್ಲಿ, 5 ತಮಿಳುನಾಡಿನಲ್ಲಿ ಮತ್ತು 4 ಮಹಾರಾಶ್ಟ್ರದಲ್ಲಿವೆ.
  • ಪಡುವಣ ಗಟ್ಟಗಳು ಹಿಮಾಲಯದ ಬೆಟ್ಟಕ್ಕಿಂತ ಹಳೆಯದೆಂದು ಹೇಳಲಾಗಿದೆ. ಇದು ಗುಜರಾತ್ ಮಹಾರಾಶ್ಟ್ರದ ಗಡಿಯಲ್ಲಿ ಮೊದಲಾಗಿ, ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತವೆ.
  • ಮಹಾರಾಶ್ಟ್ರ ಮತ್ತು ಕರ‍್ನಾಟಕದಲ್ಲಿ ಇದನ್ನು ಸಹ್ಯಾದ್ರಿ ಬೆಟ್ಟಗಳು ಎಂದು ಕರೆಯಲಾಗುತ್ತದೆ. ಅನೈಮುಡಿ ಬೆಟ್ಟ 2,695 ಮೀ ಅಡಿ ಎತ್ತರವಿದ್ದು, ಪಡುವಣ ಗಟ್ಟಗಳಲ್ಲೇ ಅತ್ಯಂತ ಎತ್ತರದ ಬೆಟ್ಟವಾಗಿದ್ದು, ಇದು ಕೇರಳದ ಎರವಿಕುಲಮ್ ರಾಶ್ಟ್ರೀಯ ಉದ್ಯಾನವನದಲ್ಲಿದೆ. ಚಿಕ್ಕಮಂಗಳೂರಿನ ಮುಳ್ಳಯ್ಯನಗಿರಿ ಬೆಟ್ಟವು (1,950 m) ಕರ‍್ನಾಟಕದಲ್ಲೇ ಅತಿ ಎತ್ತರದ ಬೆಟ್ಟವಾಗಿದೆ. ದೊಡ್ಡಬೆಟ್ಟವು (2,637 m) ತಮಿಳುನಾಡಿನಲ್ಲೇ ಅತಿ ಎತ್ತರದ ಬೆಟ್ಟವಾಗಿದೆ.
  • ಪಡುವಣ ಗಟ್ಟಗಳಲ್ಲಿ ಕುರಿಂಜಿ/ ನೀಲಕುರಿಂಜಿ ಎಂಬ ಹೂ ಹನ್ನೆರಡು ವರುಶಕೊಮ್ಮೆ ಅರಳುತ್ತದೆ. ಇಡುಕ್ಕಿಯ ಶಾಲೋಮ್ ಬೆಟ್ಟದಲ್ಲಿ , ನಮ್ಮ ಕೊಡಗಿನ ಮಂಡಲಪಟ್ಟಿ(ಮುಗಿಲುಪೇಟೆ) ಮತ್ತು ಕೋಟೆಬೆಟ್ಟದಲ್ಲಿ ಕೂಡಾ ಇವನ್ನು ಕಾಣಬಹುದು. ಸುಮಾರು 45 ಬಗೆಯ ನೀಲಕುರಿಂಜಿ ಹೂಗಳನ್ನು ಕರುನಾಡಲ್ಲಿ ಕಾಣಬಹುದು.
  • ಜಗತ್ತಿನ 10 ಅತಿ ವಿರಳ ಜೀವವೈವಿದ್ಯತೆಯ ಹಾಟ್‍‍ಸ್ಪಾಟ್‍‍ಗಳಲ್ಲಿ ಇದು ಕೂಡಾ ಒಂದಾಗಿದೆ.
  • ಪಡುವಣ ಗಟ್ಟವು ಜಗತ್ತಿನಲ್ಲಿನ 5,000 ಬಗೆಯ ಹೂಬಿಡುವ ಗಿಡಗಳ ಪಂಗಡಗಳು, 139 ಬಗೆಯ ಮೊಲೆಯೂಡಿ(Mammal) ಪಂಗಡಗಳು, 508 ಬಗೆಯ ಹಕ್ಕಿಗಳ ಪಂಗಡಗಳು ಮತ್ತು 179 ಬಗೆಯ ಈರಿರುಗಗಳ(Amphibians) ಪಂಗಡಗಳಿಗೆ ನೆಲೆಯಾಗಿದೆ. ಇದರಲ್ಲಿ 84 ಬಗೆಯ ಈರಿರುಗಗಳು, 16 ಬಗೆಯ ಹಕ್ಕಿಗಳು, 7 ಬಗೆಯ ಮೊಲೆಯೂಡಿಗಳು ಮತ್ತು 1,600 ಬಗೆಯ ಹೂಬಿಡುವ ಗಿಡಗಳು ಪಡುವಣಗಟ್ಟಗಳ ಹೊರತಾಗಿ ಜಗತ್ತಿನ ಬೇರೆಲ್ಲೂ ಕಂಡು ಬಂದಿಲ್ಲ.
  • ಕರ‍್ನಾಟಕದ ಗಟ್ಟದ ಬಾಗಗಳು ಉಳಿದ ರಾಜ್ಯಗಳಿಗಿಂತ ಸರಾಸರಿ ಹೆಚ್ಚು ಮಳೆಯನ್ನು ಪಡೆಯುತ್ತವೆ. ಇದರಲ್ಲಿ ಆಗುಂಬೆ ಮುಂಚೂಣಿಯಲ್ಲಿದ್ದು, ಇಲ್ಲಿ ವರುಶಕ್ಕೆ ಸರಾಸರಿ 7,624 ಮಿಲಿ  ಮೀಟರ‍್ ನಶ್ಟು ಮಳೆಯಾಗುತ್ತದೆ. ಕಡಿದಾಗಿರುವ ಗಟ್ಟದ ದಾರಿಗಳ ಸಲುವಾಗಿ ಇಲ್ಲಿನ ಗಟ್ಟದ ಇಳಿಜಾರುಗಳು ಹೆಚ್ಚಿನ ಮಳೆಯನ್ನು ಪಡೆಯುತ್ತವೆ.
  • ಪಡುವಣ ಗಟ್ಟಗಳ ನೆಲವನ್ನು ಕೊಂಕಣ, ಕೆನರಾ(ಕನ್ನಡ), ಮಲಬಾರ‍್, ಮಲೆನಾಡು ಮತ್ತು ದೇಶ್ ಎಂಬುದಾಗಿ ಹೆಸರಿಸಲಾಗಿದೆ (ಬೌಗೋಳಿಕ ವಿಂಗಡಣೆ). ಪಡುವಣ ಗಟ್ಟಗಳು, ತಮಿಳುನಾಡಿನ ನೀಲಗಿರಿ ಬೆಟ್ಟಗಳ ಬಳಿ ಮೂಡಣದ ಬೆಟ್ಟಗಳನ್ನು( Eastern Ghats ) ಸೇರುತ್ತವೆ.
  • ಕೊಂಕಣ ರೈಲು ದಾರಿಯಲ್ಲಿನ ಪಯಣ, ಗೋವಾ, ಕರುನಾಡು ಮತ್ತು ಮಹಾರಾಶ್ಟ್ರ ರಾಜ್ಯಗಳ ಸುತ್ತಣದ ಸೊಬಗನ್ನು ಚೆಂದದಿ ಕಟ್ಟಿಕೊಡುತ್ತದೆ. ಆಗುಂಬೆ ಗಾಟಿ, ಹುಲಿಕಲ್ ಗಾಟಿ, ಶಿರಾಡಿ ಗಾಟಿ, ಚಾರ‍್ಮಡಿ ಗಾಟಿ ಮತ್ತು ಕೊಲ್ಲೂರು ಗಾಟಿ ಇವು ಕರುನಾಡಿನಲ್ಲಿರುವ ಮೈ ನವಿರೇಳಿಸುವ ಕೆಲವು ಗಾಟಿಗಳಾಗಿವೆ.

ಕವಲೇ ದುರ‍್ಗ

ಪಡುವಣ ಗಟ್ಟಗಳನ್ನು ಕಾಪಾಡುವ ಸಲುವಾಗಿ ಬಾರತದ ಆಳ್ವಿಕೆಯು, ಗಾಡ್ಗಿಲ್ ಕಮಿಟಿ ನಂತರ ಕಸ್ತೂರಿರಂಗನ್ ಕಮಿಟಿಯನ್ನು ನೇಮಿಸಿತ್ತು ಮತ್ತು ಇದರ ವರದಿಯೂ ಹೊರಬಂದಿದೆ. ಇಲ್ಲಿನ ನೆಲಮೂಲದ ಜನರ ಜೀವನದ ವಸ್ತುಸ್ತಿತಿ ಮತ್ತು ಇಲ್ಲಿನ ಸುತ್ತಣವನ್ನು ಕಾಪಾಡುವುದು ಇವೆಲ್ಲವನ್ನು ಸರಿದೂಗಿಸಿ ನಾವು ಮುಂದೆ ಹೆಜ್ಜೆಯಿಡುವುದರ ಮೂಲಕ ಪಡುವಣಗಟ್ಟಗಳನ್ನು ಉಳಿಸಿಕೊಳ್ಳಬೇಕಾಗಿದೆ.

( ಮಾಹಿತಿಸೆಲೆ : wikipedia.org, metrosaga.com, timesofindia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: