ಅರಿವಿನ ಮಾರಿತಂದೆಯ ವಚನಗಳ ಓದು
– ಸಿ.ಪಿ.ನಾಗರಾಜ.
ಹೆಸರು: ಅರಿವಿನ ಮಾರಿತಂದೆ
ಕಾಲ: ಕ್ರಿ.ಶ.1200
ವಚನಗಳ ಅಂಕಿತನಾಮ: ಸದಾಶಿವಮೂರ್ತಿಲಿಂಗ
ದೊರೆತಿರುವ ವಚನಗಳು: 309
***
ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ
ಬೆಳೆಗೆ ಮುನಿದವರುಂಟೆ ಅಯ್ಯಾ
ಅರಿದಂಗವ ತಾಳಿದವರಲ್ಲಿ ಮರವೆಗೆ ಮುನಿವರಲ್ಲದೆ
ಅರಿವಿಗೆ ಮುನಿವರುಂಟೆ ಅಯ್ಯಾ
ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ
ಮೊಲೆಯ ಕಟ್ಟಿದವರುಂಟೆ ಅಯ್ಯಾ
ಗುರುವಾದಡೂ ಆಗಲಿ
ಲಿಂಗವಾದಡೂ ಆಗಲಿ
ಜಂಗಮವಾದಡೂ ಆಗಲಿ
ಅರಿವಿಂಗೆ ಶರಣು
ಮರವಿಂಗೆ ಮಥನವ ಮಾಡಿದಲ್ಲದೆ ಇರೆ
ಇದು ನೀವು ಕೊಟ್ಟ ಅರಿವಿನ ಮಾರನ ಇರವು
ಸದಾಶಿವಮೂರ್ತಿಲಿಂಗದ ಬರವು.
ವ್ಯಕ್ತಿಗಳ ನಡೆನುಡಿಯಲ್ಲಿ ಕಂಡುಬರುವ ಒಳ್ಳೆಯ ಗುಣವನ್ನು ನಾವು ಮೆಚ್ಚಿಕೊಳ್ಳುವಂತೆಯೇ ಅವರ ನಡವಳಿಕೆಯಲ್ಲಿ ಕೆಟ್ಟದ್ದು ಕಂಡುಬಂದಾಗ, ಅದನ್ನು ಸಹಿಸಿಕೊಂಡು ಸುಮ್ಮನಿರದೆ, ಅದನ್ನು ಪ್ರಶ್ನಿಸುವಂತಹ ಎದೆಗಾರಿಕೆಯನ್ನು ಹೊಂದಿರಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.
ಕೆಯ್= ಬೆಳೆಯನ್ನು ಬೆಳೆಯುವ ಬೂಮಿ; ಬೆಳೆವ+ಅಲ್ಲಿ; ಬೆಳೆವ=ಬೆಳೆಯುವ;
ಬೆಳೆವಲ್ಲಿ=ರಾಗಿ ಬತ್ತ ಜೋಳ ಮುಂತಾದ ಬೆಳೆಯನ್ನು ಒಡ್ಡಿರುವ ಹೊಲಗದ್ದೆಯಲ್ಲಿ; ಸದೆ=ಕಳೆ / ಬೇಸಾಯಗಾರನು ಒಡ್ಡಿದ ಬೆಳೆಯ ಪಯಿರುಗಳ ನಡುವೆ ತಮಗೆ ತಾವೇ ಹುಟ್ಟಿ ಬೆಳೆಯುವ ಇನ್ನಿತರ ಪಯಿರು, ಮುಳ್ಳಿನ ಗಿಡ ಮತ್ತು ಗರಿಕೆ ಹುಲ್ಲು; ಮುನಿ+ಅರ್+ಅಲ್ಲದೆ; ಮುನಿ=ಸಿಟ್ಟಾಗು/ಕಳವಳಪಡು; ಮುನಿವರ್=ಕಳವಳಗೊಳ್ಳುವರು; ಅಲ್ಲದೆ=ಹೊರತು ;
ಬೆಳೆ=ಒಳ್ಳೆಯ ಪಸಲು/ದವಸದಾನ್ಯಕಾಳು; ಮುನಿ+ಅರ್+ಉಂಟೆ; ಉಂಟು=ಇರುವುದು; ಉಂಟೆ=ಇದ್ದಾರೆಯೆ; ಮುನಿದವರುಂಟೆ=ಕಳವಳಗೊಳ್ಳುವವರು ಇದ್ದಾರೆಯೇ;
ಅಯ್ಯಾ=ಗಂಡಸನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;
ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ ಬೆಳೆಗೆ ಮುನಿದವರುಂಟೆ=ಹೊಲಗದ್ದೆಯಲ್ಲಿ ಒಡ್ಡಿದ ಬೆಳೆಗಿಂತಲೂ ಕಳೆಯ ಪಯಿರು ಮತ್ತು ಮುಳ್ಳುಗಿಡಗಳೇ ಹೆಚ್ಚಾದಾಗ ಬೆಳೆಗಾರ ಕಂಗಾಲಾಗುತ್ತಾನೆಯೇ ಹೊರತು ಒಳ್ಳೆಯ ಬೆಳೆ ಬಂದು ದವಸದಾನ್ಯಕಾಳು ಹೆಚ್ಚಿನ ಪ್ರಮಾಣದಲ್ಲಿ ದೊರೆತಾಗ ಯಾವ ಬೇಸಾಯಗಾರನು ಕಳವಳಗೊಳ್ಳುವುದಿಲ್ಲ. ಅದಕ್ಕೆ ಬದಲಾಗಿ ಆನಂದಪಡುತ್ತಾನೆ;
ಅರಿದು+ಅಂಗವ; ಅರಿ=ತಿಳಿ/ಗ್ರಹಿಸು; ಅಂಗ=ದೇಹ/ಶರೀರ ; ತಾಳಿದ+ಅವರ್+ಅಲ್ಲಿ; ತಾಳು=ಸಹಿಸು/ಹೊಂದು/ಪಡೆ; ಅರಿದಂಗವ ತಾಳಿದವರು=“ಜೀವನದಲ್ಲಿ ಯಾವುದು ಸರಿ-ಯಾವುದು ತಪ್ಪು; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು; ಯಾವುದು ನಿಸರ‍್ಗ ಸಹಜವಾದುದು-ಯಾವುದು ಮಾನವ ನಿರ‍್ಮಿತ” ಎಂಬುದನ್ನು ಅರಿತು, ಒಳ್ಳೆಯ ನಡೆನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿರುವವರು;
ಮರವು=ನೆನಪು ಇಲ್ಲದಿರುವುದು/ಮರೆಯುವುದು; ಮರವೆಗೆ ಮುನಿವರು=ವ್ಯಕ್ತಿಯು ತನ್ನಲ್ಲಿದ್ದ ಒಳ್ಳೆಯ ನಡೆನುಡಿಗಳನ್ನು ಬಿಟ್ಟು, ಕೆಟ್ಟತನದಿಂದ ವರ‍್ತಿಸತೊಡಗಿದಾಗ, ಅದನ್ನು ಕಂಡು ಜನರು ಕೋಪಗೊಳ್ಳುತ್ತಾರೆ;
ಅರಿವು=ತಿಳುವಳಿಕೆ; ಅರಿವಿಂಗೆ=ಅರಿವಿಗೆ/ತಿಳುವಳಿಕೆಗೆ; ಮುನಿ+ಅರ್+ಉಂಟೆ;
ಅರಿದಂಗವ ತಾಳಿದವರಲ್ಲಿ ಮರವೆಗೆ ಮುನಿವರಲ್ಲದೆ ಅರಿವಿಗೆ ಮುನಿವರುಂಟೆ=ಅರಿವಿನ ಮೂಲಕ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದವರು ಕಾಲಕ್ರಮೇಣ ಒಳ್ಳೆಯದನ್ನು ಮರೆತು ಕೆಟ್ಟ ನಡವಳಿಕೆಯಿಂದ ಬಾಳತೊಡಗಿದಾಗ, ಆ ವ್ಯಕ್ತಿಯ ಕೆಟ್ಟತನಕ್ಕೆ ಜನರು ಕೋಪಗೊಳ್ಳುತ್ತಾರೆಯೇ ಹೊರತು ಮೊದಲು ಅವರಲ್ಲಿದ್ದ ಒಳ್ಳೆಯ ಗುಣವನ್ನು ಯಾರೂ ಕಡೆಗಣಿಸುವುದಿಲ್ಲ;
ಕೊಲ್ಲಿ=ಪೋಲಿ/ಹತೋಟಿಗೆ ಸಿಗದ/ತುಂಟತನ; ಆವು=ಹಸು;
ಕೊಲ್ಲಿ ಆವು=ಪೋಲಿ ದನ/ಸಾಕಿದವರ ಹಿಡಿತಕ್ಕೆ ಸಿಗದೆ ಎಲ್ಲೆಂದರಲ್ಲಿ ಅಲೆಯುವ ಹಸು/ಹಾಲನ್ನು ಕರೆಯುವಾಗ ಸುಮ್ಮನೆ ನಿಂತುಕೊಳ್ಳದೆ ಮುಂದಿನಿಂದ ಕೊಂಬಿನಲ್ಲಿ ತಿವಿಯಲು ಬರುವ ಇಲ್ಲವೇ ಹಿಂದಿನ ಕಾಲುಗಳಿಂದ ಒದೆಯುವ ಹಸು;
ಆವಿಂಗೆ=ಹಸುವಿಗೆ; ಕಟ್ಟುವರ್+ಅಲ್ಲದೆ; ಕಟ್ಟು=ತೊಡಿಸು/ಬಿಗಿ;
ಕೊಲ್ಲಿ ಆವಿಂಗೆ ಕಾಲ ಕಟ್ಟುವರು= ಹಾಲನ್ನು ಕರೆಯುವಾಗ ಕೆಲವು ಹಸುಗಳು ಒದೆಯುತ್ತವೆ ಇಲ್ಲವೇ ಕೆಚ್ಚಲಿಗೆ ಕಯ್ ಹಾಕುತ್ತಿದ್ದಂತೆಯೇ ನೆಗೆದಾಡಲು ತೊಡಗುತ್ತವೆ. ಇಂತಹ ಹಸುಗಳ ಹಿಂದಿನ ಎರಡು ಕಾಲುಗಳನ್ನು ಹಗ್ಗದಿಂದ ಬಿಗಿ ಕಟ್ಟಿ, ಅನಂತರ ಹಾಲನ್ನು ಕರೆಯತೊಡಗುತ್ತಾರೆ.
ಮೊಲೆ=ಕೆಚ್ಚಲು; ಕಟ್ಟಿದರ್+ಉಂಟೆ; ಕಟ್ಟಿದರುಂಟೆ=ಕಟ್ಟಿದವರು ಇದ್ದಾರೆಯೇ;
ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ ಮೊಲೆಯ ಕಟ್ಟಿದವರುಂಟೆ=ಹಾಲನ್ನು ಕರೆಯುವಾಗ ತೊಂದರೆ ಕೊಡುವ ಹಸುವಿನ ಹಿಂಗಾಲುಗಳನ್ನು ಕಟ್ಟುತ್ತಾರೆಯೇ ಹೊರತು ಹಾಲು ಕೊಡುವ ಕೆಚ್ಚಲನ್ನು ಯಾರೂ ಕಟ್ಟುವುದಿಲ್ಲ;
ಈ ಮೂರು ರೂಪಕಗಳು “ಜನರು ಕೆಟ್ಟದ್ದನ್ನು ನಿರಾಕರಿಸುತ್ತಾರೆಯೇ ಹೊರತು , ಒಳ್ಳೆಯದನ್ನು ಒಪ್ಪಿಕೊಂಡು ಬಾಳುತ್ತಾರೆ” ಎಂಬುದನ್ನು ಸಂಕೇತಿಸುತ್ತವೆ.
ಗುರು+ಆದಡೂ; ಗುರು=ತನ್ನ ಬಳಿ ಬಂದ ವ್ಯಕ್ತಿಗಳಿಗೆ ಒಳ್ಳೆಯ ನಡೆನುಡಿಗಳನ್ನು ತಿಳಿಯಹೇಳಿ, ಅವರ ವ್ಯಕ್ತಿತ್ವವನ್ನು ಉತ್ತಮವಾದ ರೀತಿಯಲ್ಲಿ ರೂಪಿಸುವವನು; ಆದಡೂ=ಆದರೂ; ಲಿಂಗ+ಆದಡೂ; ಲಿಂಗ=ವ್ಯಕ್ತಿಯ ಒಳ್ಳೆಯ ನಡೆನುಡಿಯ ಆಚರಣೆಯ ಸಂಕೇತವಾಗಿರುವ ದೇವರಾದ ಶಿವನ ವಿಗ್ರಹ; ಲಿಂಗವಾದಡೂ=ಶಿವನೇ ಆಗಿದ್ದರೂ;
ಜಂಗಮ+ಆದಡೂ=ಜಂಗಮನಾಗಿದ್ದರೂ ; ಜಂಗಮ=ಒಳ್ಳೆಯ ನಡೆನುಡಿಗೆ ಪ್ರೇರಣೆಯಾಗುವಂತಹ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಜನಮನದಲ್ಲಿ ಮೂಡಿಸುವವನು; ಜಂಗಮವಾದಡೂ=ಜಂಗಮನೇ ಆಗಿದ್ದರೂ;
ಗುರುವಾದಡೂ ಆಗಲಿ ಲಿಂಗವಾದಡೂ ಆಗಲಿ ಜಂಗಮವಾದಡೂ ಆಗಲಿ=ಗುರುವಾಗಿರಲಿ, ಲಿಂಗವಾಗಿರಲಿ ಇಲ್ಲವೇ ಜಂಗಮವೇ ಆಗಿರಲಿ ಅಂದರೆ ವ್ಯಕ್ತಿಯು ಸಮಾಜದಲ್ಲಿ ದೊಡ್ಡ ಮನ್ನಣೆಯನ್ನು ಹೊಂದಿರಲಿ ಇಲ್ಲವೇ ಗದ್ದುಗೆಯಲ್ಲಿ ಇರಲಿ;
ಅರಿವಿಂಗೆ=ತಿಳುವಳಿಕೆಗೆ; ಶರಣು=ತಲೆಬಾಗು/ಒಪ್ಪಿಕೊಳ್ಳುವುದು ;
ಅರಿವಿಂಗೆ ಶರಣು=ಯಾರಲ್ಲಿ ಒಳ್ಳೆಯ ನಡೆನುಡಿಗಳು ಇವೆಯೋ ಅಂತಹ ವ್ಯಕ್ತಿಗಳೊಡನೆ ಮಾತ್ರ ಒಲವು ಮತ್ತು ನಲಿವಿನ ನಂಟನ್ನು ಹೊಂದಿ ಜತೆಗೂಡಿ ಬಾಳುವುದು;
ಮರವಿಂಗೆ= “ಒಳ್ಳೆಯದನ್ನು ಮರೆತು ಕೆಟ್ಟದ್ದನ್ನು ಮಾಡುವುದಕ್ಕೆ” ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ; ಮಥನ=ಕಡೆಯುವುದು; ಮಾಡಿದ+ಅಲ್ಲದೆ; ಇರೆ=ಇರುವುದಿಲ್ಲ/ಸುಮ್ಮನಾಗುವುದಿಲ್ಲ ;
ಮರವಿಂಗೆ ಮಥನವ ಮಾಡಿದಲ್ಲದೆ ಇರೆ=ಒಳ್ಳೆಯ ನಡೆನುಡಿಗಳನ್ನು ಬಿಟ್ಟು, ಈಗ ಕೆಟ್ಟ ರೀತಿಯಲ್ಲಿ ಬಾಳುತ್ತಿರುವ ವ್ಯಕ್ತಿಗಳು ಅವರು ಗುರುಗಳಾಗಿರಲಿ ಇಲ್ಲವೇ ಜಂಗಮರಾಗಿರಲಿ ಇಲ್ಲವೇ ಶಿವನನ್ನು ಪೂಜಿಸುವ ವ್ಯಕ್ತಿಯಾಗಿರಲಿ , ಅವರನ್ನು ಪ್ರಶ್ನೆ ಮಾಡದೆ ಬಿಡುವುದಿಲ್ಲ. ಅಂದರೆ ಅವರಲ್ಲಿ ಈಗ ಕಂಡುಬಂದಿರುವ ಕೆಟ್ಟತನಕ್ಕೆ ತಲೆಬಾಗದೆ ಇಲ್ಲವೇ ಬಲಿಯಾಗದೆ ಅವರನ್ನು ಎದುರಿಸುತ್ತೇನೆ;
ನೀವು=ಶಿವ; ನೀವು ಕೊಟ್ಟ ಅರಿವು=ಒಳ್ಳೆಯ ನಡೆನುಡಿಯನ್ನೇ ಶಿವನೆಂದು ತಿಳಿದು ನಡೆಯುತ್ತಿರುವುದು;
ಮಾರ=ವ್ಯಕ್ತಿಯ ಮಯ್ ಮನದಲ್ಲಿ ಬಹುಬಗೆಯ ಬಯಕೆಗಳನ್ನು ಕೆರಳಿಸಿ ಕೆಟ್ಟದ್ದರ ಕಡೆಗೆ ಸೆಳೆಯುವ ದೇವತೆ. ಈ ಬಗೆಯ ಒಂದು ಕಲ್ಪನೆ ಜನಮನದಲ್ಲಿದೆ; ಇರವು=ಇರುವಿಕೆ ;
ಇದು ನೀವು ಕೊಟ್ಟ ಅರಿವಿನ ಮಾರನ ಇರವು=ಒಳ್ಳೆಯ ನಡೆನುಡಿಯನ್ನೇ ಶಿವನೆಂದು ತಿಳಿದು ಬಾಳುತ್ತಿರುವ ವ್ಯಕ್ತಿಗಳು ಮಾರನೆಂಬ ದೇವತೆಯ ಸೆಳೆತಕ್ಕೆ ವಶರಾಗದೆ ಬಾಳುವುದನ್ನು ಕಲಿಯಬೇಕು;
ಸದಾಶಿವಮೂರ್ತಿಲಿಂಗ=ಶಿವನ ಮತ್ತೊಂದು ಹೆಸರು/ಅರಿವಿನ ಮಾರಿತಂದೆಯ ವಚನಗಳ ಅಂಕಿತನಾಮ; ಬರ=ವರ/ಅನುಗ್ರಹ;
ಸದಾಶಿವಮೂರ್ತಿಲಿಂಗದ ಬರವು=ಶಿವನ ಅನುಗ್ರಹ
( ಚಿತ್ರ ಸೆಲೆ: sugamakannada.com )
ಇತ್ತೀಚಿನ ಅನಿಸಿಕೆಗಳು