ಅರಿವಿನ ಮಾರಿತಂದೆಯ ವಚನಗಳ ಓದು – 2 ನೆಯ ಕಂತು

ಸಿ.ಪಿ.ನಾಗರಾಜ.

ವಚನಗಳು, Vachanas

ಭರಿತಾರ್ಪಣವೆಂಬುದು
ಲಿಂಗಕ್ಕೊ ನಿನಗೊ
ಲಿಂಗಕ್ಕೆ ಸಂಕಲ್ಪ
ನಿನಗೆ ಮನೋಹರ
ಈ ಗುಣ ಓಗರ ಮೇಲೋಗರದ
ಅಪೇಕ್ಷೆಯಲ್ಲದೆ
ಲಿಂಗದ ಒಡಲಲ್ಲ
ಸದಾಶಿವಮೂರ್ತಿಲಿಂಗಕ್ಕೆ ಸಲ್ಲ.

ವ್ಯಕ್ತಿಯು ಲಿಂಗದ ಮುಂದೆ ರುಚಿಕರವಾದ ಉಣಿಸು ತಿನಸುಗಳನ್ನಿಟ್ಟು ಮಾಡುವ ಪೂಜೆಯಿಂದ, ಅವನ ಬಾಯ್ ರುಚಿ ತಣಿದು, ಅವನ ಹೊಟ್ಟೆತುಂಬುತ್ತದೆಯೇ ಹೊರತು, ಮತ್ತೇನು ಆಗುವುದಿಲ್ಲವೆಂಬ ವಾಸ್ತವವನ್ನು ಈ ವಚನದಲ್ಲಿ ಹೇಳಲಾಗಿದೆ.

ಭರಿತ+ಅರ್ಪಣ+ಎಂಬುದು; ಭರಿತ=ತುಂಬಿರುವ/ಪರಿಪೂರ್‍ಣವಾಗಿರುವ; ಅರ್ಪಣ=ನೀಡುವುದು/ಸಲ್ಲಿಸುವುದು/ಒಪ್ಪಿಸುವುದು; ಭರಿತಾರ್ಪಣ=ದೇವರ ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಬಹುಬಗೆಯ ತಿಂಡಿತಿನಸುಗಳನ್ನು ಜೋಡಿಸಿ ಇಡುವುದು; ಎಂಬುದು=ಎನ್ನುವುದು ;

ಭರಿತಾರ್ಪಣವೆಂಬುದು ಲಿಂಗಕ್ಕೊ ನಿನಗೊ=ಲಿಂಗವನ್ನು ಪೂಜಿಸುವಾಗ, ಅದರ ಮುಂದೆ ನೀನು ಇಟ್ಟಿರುವ ಬಗೆಬಗೆಯ ಉಣಿಸು ತಿನಸುಗಳೆಲ್ಲವನ್ನು ಲಿಂಗ ತಿನ್ನಲೆಂದು ಇಟ್ಟಿದ್ದೀಯೋ ಇಲ್ಲವೇ ನೀನು ತಿನ್ನಲೆಂದು ಇಟ್ಟಿದ್ದೀಯೋ;

ಲಿಂಗ=ದೇವರಾದ ಶಿವನ ಸಂಕೇತದ ವಿಗ್ರಹ; ಸಂಕಲ್ಪ=ಮನಸ್ಸಿನಲ್ಲಿ ತಳೆದಿರುವ ನಿಲುವು/ನಿರ್‍ಣಯ; ಲಿಂಗಕ್ಕೆ ಸಂಕಲ್ಪ=ವ್ಯಕ್ತಿಯು ತನ್ನ ಜೀವನದಲ್ಲಿ ಬರುವ ಎಡರುತೊಡರುಗಳನ್ನು ನಿವಾರಿಸಿ ದೇವರು ತನಗೆ ಒಳಿತನ್ನುಂಟು ಮಾಡಲೆಂದು ಹರಕೆಯನ್ನು ಕಟ್ಟಿಕೊಂಡು ಮಾಡುತ್ತಿರುವ ಆಚರಣೆ; ಮನೋಹರ=ಸೊಗಸಾದುದು/ಸುಂದರವಾದುದು;

ಲಿಂಗಕ್ಕೆ ಸಂಕಲ್ಪ ನಿನಗೆ ಮನೋಹರ=ಲಿಂಗ ಪೂಜೆಯ ಹೆಸರಿನಲ್ಲಿ ವಿಗ್ರಹದ ಮುಂದೆ ಹರಡಿದಂತೆ ಜೋಡಿಸಿಟ್ಟಿರುವ ಉಣಿಸು ತಿನಸುಗಳೆಲ್ಲವೂ ನಿನ್ನ ಕಣ್ ಮನಗಳಿಗೆ ಆನಂದವನ್ನುಂಟುಮಾಡುತ್ತಿವೆ. ಏಕೆಂದರೆ ಪೂಜೆ ಮುಗಿದ ನಂತರ ಅವೆಲ್ಲವೂ ನಿನ್ನ ಪಾಲಿಗೆ ದೊರೆಯುತ್ತವೆ;

ಈ ಗುಣ=ಈ ಬಗೆಯ ಆಚರಣೆ; ಓಗರ=ಬೇಯಸಿದ ಆಹಾರ/ಅಡುಗೆ ಮಾಡಿ ತಯಾರಿಸಿದ ರುಚಿಕರವಾದ ತಿಂಡಿತಿನಿಸುಗಳು; ಮೇಲು+ಓಗರ; ಮೇಲು=ಹೆಚ್ಚಿನ/ಅತಿಶಯವಾದ; ಮೇಲೋಗರ=ಅನ್ನದ ಜತೆಗೆ ಬಡಿಸುವ ಸಾರು, ಪಲ್ಯ, ಸಂಡಿಗೆ, ಹಪ್ಪಳ ಮುಂತಾದ ವಸ್ತುಗಳು; ಅಪೇಕ್ಷೆ+ಅಲ್ಲದೆ; ಅಪೇಕ್ಷೆ=ಬಯಕೆ/ಆಸೆ; ಓಗರ ಮೇಲೋಗರದ ಅಪೇಕ್ಷೆ=ರುಚಿರುಚಿಯಾದ ತಿಂಡಿ ತಿನಸುಗಳನ್ನು ತಿನ್ನಬೇಕೆಂಬ ಆಸೆ;

ಅಲ್ಲದೆ=ಹೊರತು; ಒಡಲ್+ಅಲ್ಲ; ಒಡಲು=ಹೊಟ್ಟೆ/ದೇಹ; ಲಿಂಗದ ಒಡಲಲ್ಲ=ಲಿಂಗದ ಒಡಲಿಗೆ ಸೇರುವುದಿಲ್ಲ;

ಈ ಗುಣ ಓಗರ ಮೇಲೋಗರದ ಅಪೇಕ್ಷೆಯಲ್ಲದೆ ಲಿಂಗದ ಒಡಲಲ್ಲ=ರುಚಿಕರವಾದ ತಿಂಡಿತಿನಿಸುಗಳನ್ನು ಲಿಂಗದ ಮುಂದೆ ಇಟ್ಟು ಪೂಜಿಸುವ ಆಚರಣೆಯು ವ್ಯಕ್ತಿಯು ತನ್ನ ಬಾಯ್ ರುಚಿಯನ್ನು ತಣಿಸಿಕೊಂಡು, ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕಾಗಿಯೇ ಹೊರತು, ಅದು ಲಿಂಗದ ಒಡಲನ್ನು ತುಂಬಿಸುವುದಕ್ಕಲ್ಲ. ಏಕೆಂದರೆ ಜಡರೂಪಿಯಾದ ಲಿಂಗ ಉಣ್ಣುವುದಿಲ್ಲ ಎಂಬ ದಿಟ ಎಲ್ಲರಿಗೂ ಗೊತ್ತು;

ಸದಾಶಿವಮೂರ್ತಿಲಿಂಗ=ಶಿವ/ಅರಿವಿನ ಮಾರಿತಂದೆಯ ವಚನಗಳ ಅಂಕಿತನಾಮ; ಸಲ್ಲು=ಸೇರು;

ಸದಾಶಿವಮೂರ್ತಿಲಿಂಗಕ್ಕೆ ಸಲ್ಲ=ಶಿವನಿಗೆ ಸೇರುವುದಿಲ್ಲ/ಇಂತಹ ಆಚರಣೆಗಳು ಶಿವನಿಗೆ ಒಪ್ಪಿತವಲ್ಲ;

ವಿಗ್ರಹರೂಪದಲ್ಲಿರುವ ದೇವರಿಗೆ ಮಾಡುವ ಯಾವುದೇ ಬಗೆಯ ಆಚರಣೆಯನ್ನಾಗಲಿ ಇಲ್ಲವೇ ದೇವರ ಪೂಜೆಗೆಂದು ಬಳಸುವ ಸಾಮಗ್ರಿಗಳನ್ನಾಗಲಿ ಶಿವಶರಣಶರಣೆಯರು ದೊಡ್ಡದೆಂದು ಪರಿಗಣಿಸಿಲ್ಲ. ಅವರು ತಮ್ಮ ಅಂಗಯ್ ಮೇಲೆ ಇಟ್ಟುಕೊಂಡು ಪೂಜಿಸುತ್ತಿದ್ದ ಇಶ್ಟಲಿಂಗವೂ ಅವರ ಪಾಲಿಗೆ ಒಳ್ಳೆಯ ನಡೆನುಡಿಗಳಿಗೆ ಸಂಕೇತವಾಗಿತ್ತೇ ಹೊರತು, ಅದನ್ನೇ ದೇವರೆಂದು ಅವರು ನಂಬಿರಲಿಲ್ಲ. ವ್ಯಕ್ತಿಯು ತನಗೆ, ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವ ನಡೆನುಡಿಗಳಲ್ಲಿ ವಚನಕಾರರು ದೇವರನ್ನು ಕಾಣುತ್ತಿದ್ದರು.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: