ನೆನಪಿನಾಳದ ಅರಳಿ ಕಟ್ಟೆ
ಹೌದು, ಇದು ನನ್ನ ಅಜ್ಜ ಕಟ್ಟಿದ ಕಟ್ಟೆ ಎನ್ನಲು ತುಂಬಾ ಹೆಮ್ಮೆ ಅನ್ನಿಸುತ್ತಿದೆ. ಏಕೆಂದರೆ ನಾನು ಬಾಲ್ಯದಿಂದ ಯೌವನದವರೆಗೂ ಸುಂದರವಾಗಿ ಕಾಲ ಕಳೆದಂತಹ ಜಾಗ ಇದು. ಒಂದು ಶತಮಾನವಾದರೂ ಆಗಿರಬಹುದು. ಈಗಲೂ ಅದು ಹಸಿರಾಗಿಯೇ ಇದೆ. ಬಾಲ್ಯದ ಎಲ್ಲಾ ಸವಿನೆನಪುಗಳನ್ನು ನವಿರಾಗಿ ನೆನಪಿಸುವಂತಹ ಸುಂದರ ತಾಣ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಪುಟ್ಟ ಗ್ರಾಮ ‘ಕಲ್ಮನೆ’. ನಮ್ಮ ನಾಡು ಸದಾ ಹಸಿರಿನಿಂದಲೇ ಕೂಡಿರುವ ಮಲೆನಾಡು. ದಟ್ಟ ಅರಣ್ಯ ಇದ್ದರೂ ಆಗಿನ ಜನರು ಊರಿಗೊಂದು ಅರಳಿ ಮರ ಇರಲೇ ಬೇಕು ಎನ್ನುವ ಒಂದು ಸಂಸ್ಕ್ರುತಿಯಿಂದ ಆ ಸಸಿಯನ್ನು ನೆಟ್ಟು, ನೀರೆರೆದು ಪೋಶಿಸಿ ಅದನ್ನು ಪೂಜಿಸುತ್ತಾ ಉಳಿಸಿಕೊಂಡು ಬಂದರು. ದಣಿವಾದರೆ ಅದರ ಬಳಿ ಕುಳಿತು ದಣಿವಾರಿಸಿಕೊಳ್ಳಲು ಕಟ್ಟೆಯನ್ನೂ ಕಟ್ಟುತ್ತಿದ್ದರು. ಅದೇ ಅರಳಿ ಕಟ್ಟೆ.
ಸಾಮಾನ್ಯವಾಗಿ ಈ ಕಟ್ಟೆ ಊರಿನ ದೇವಸ್ತಾನದ ಎದುರಿಗೆ ಅತವಾ ಶಾಲೆಗಳ ಮುಂದೆ ಇರುತ್ತವೆ. ಇಂದಿಗೂ ಕಾಣಸಿಗುತ್ತವೆ. ಆಗಿನ ಕಾಲದ ಜನರು ಮುಂದಿನ ಪೀಳಿಗೆಗೂ ಅನುಕೂಲವಾಗುವಂತಹ ಗಿಡ, ಮರಗಳನ್ನು ಬೆಳೆಸಿ, ಕೆರೆ ಕುಂಟೆಗಳನ್ನು ಕಟ್ಟಿ ಉಳಿಸುವ ಮೂಲಕ ಹಲವಾರು ಜನೋಪಯೋಗಿ ಕೆಲಸಗಳನ್ನು ಮಾಡಿ ಅಮರರಾಗಿದ್ದಾರೆ. ಅಂತವುಗಳಲ್ಲಿ ನಮ್ಮ ಪೂರ್ವಜರು ನೆಟ್ಟು ಬೆಳಸಿಕೊಂಡು ಬಂದ ಎಶ್ಟೋ ಮರಗಳಲ್ಲಿ ಅರಳಿ ಮರ ಅತವಾ ಅಶ್ವತ್ ಮರ ಕೂಡಾ ಒಂದು.
ಈ ಸಸಿ ದೊಡ್ಡದಾಗುವ ಮುಂಚೆ, ಅದನ್ನು ನೆಟ್ಟ ಕುಟುಂಬದವರಿಂದ ಉಪನಯನದ ಸಂಸ್ಕಾರ ಮಾಡಲಾಗುತ್ತದೆ. ನಂತರ ಕಾರ್ತಿಕ ಮಾಸದ ಸಂಪೆ ಶಶ್ಟಿ ದಿವಸ ಈ ಅರಳಿ ಕಟ್ಟೆಗೆ ದೀಪಾಲಂಕಾರದೊಂದಿಗೆ ರಾತ್ರಿ ಕಾರ್ತಿಕ ಪೂಜೆಯನ್ನು ಮಾಡುವ ರೂಡಿ ಇಂದಿಗೂ ಇದೆ. ಇದು ಹೆಚ್ಚು ಪ್ರಾಣವಾಯು(ಆಮ್ಲಜನಕ) ನೀಡುವಂತಹ ವೈಶಿಶ್ಟ್ಯತೆಯನ್ನು ಹೊಂದಿರುವ ಕಾರಣ ಜನ ಪ್ರಾತಹಕಾಲ ಇದರ ಪ್ರದಕ್ಶಿಣೆ ಹಾಕುವರು. ಉಸಿರಾಟದ ಸಮಸ್ಯೆ ಇರುವವರಿಗೆ ಈ ಮರ ಸಹಕಾರಿಯಾಗಬಲ್ಲದು ಎಂದು ಜನರು ತಮ್ಮ ಅನುಬವದಿಂದಲೇ ತಿಳಿದು ಇದಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿರ ಬೇಕು. ಇದಕ್ಕೆ ವಾಯುಮಾಲಿನ್ಯವನ್ನು ತಡೆಹಿಡಿಯುವ ದಕ್ಶತೆಯೂ ಇದೆ ಎನ್ನುವುದು ತಜ್ನರ ಅಬಿಪ್ರಾಯ. ಇದು ನಿತ್ಯಹರಿದ್ವರ್ಣ ಮರ. ಬುದ್ದನಿಗೆ ಜ್ನಾನೋದಯವಾಗಿರುವುದೂ ಬೋದಿವ್ರುಕ್ಶದಡಿ. ಪೂರ್ವಜರು ಇದನ್ನು ಬೆಳೆಸಿ ಉಳಿಸಿ ಹೋಗಿದ್ದಾರೆ. ಇದರ ಸಂರಕ್ಶಣೆ ನಮ್ಮೆಲ್ಲರ ಹೊಣೆ.
ಮಕ್ಕಳು, ಸ್ನೇಹಿತರು, ವಯಸ್ಕರು, ಹೆಂಗಸರು ಮತ್ತು ಗಂಡಸರು ಎನ್ನುವ ಬೇದಬಾವವಿಲ್ಲದೆ ಆಶ್ರಯ ನೀಡುತ್ತಿರುವ ಈ ಮರಕ್ಕೆ ನಾವು ಚಿರರುಣಿಗಳಾಗಿರೋಣ. ಪ್ರೀತಿಯಿಂದ ನೀರೆರೆಯೋಣ. ಪೋಶಿಸಿ ಮುಂದಿನ ಪೀಳಿಗೆಗೂ ಇದರ ಅರಿವು ಮೂಡಿಸುವ ಪ್ರಯತ್ನ ಮಾಡೋಣ.
Suuper it’s our place❤ ….thank u chandramathi atte