‘ರಾಮದಾನ್ಯ ಪ್ರಸಂಗ’ದ ಓದು : ನೋಟ-1
– ಸಿ.ಪಿ.ನಾಗರಾಜ.
ಕನಕದಾಸರು
(ಕವಿಗಳು — ಹರಿದಾಸರು — ಕೀರ‍್ತನಕಾರರು)
ಹೆಸರು: 1. ತಂದೆತಾಯಿಗಳು ಇಟ್ಟಿದ್ದ ಹೆಸರು: ತಿಮ್ಮಪ್ಪ ನಾಯಕ.
2. ಬಾಡ ಗ್ರಾಮದ ಸುತ್ತಮುತ್ತಣ ಪ್ರಾಂತ್ಯದ ಒಡೆಯನಾಗಿ ಆಳುತ್ತಿದ್ದಾಗ ಪಡೆದ ಹೆಸರು:
ಕನಕ ನಾಯಕ.
3. ಹರಿದಾಸರಾಗಿ ಬಾಳಲು ತೊಡಗಿದಾಗ ಬಂದ ಹೆಸರು: ಕನಕದಾಸ.
ಕಾಲ: ಕ್ರಿ.ಶ.1508-1606
ಹುಟ್ಟಿದ ಊರು: ಬಾಡ (ಹಳ್ಳಿ), ಶಿಗ್ಗಾವಿ ತಾಲ್ಲೂಕು, ಹಾವೇರಿ ಜಿಲ್ಲೆ. ಕರ‍್ನಾಟಕ ರಾಜ್ಯ
ತಾಯಿ: ಬಚ್ಚಮ್ಮ
ತಂದೆ: ಬೀರಪ್ಪ ನಾಯಕ
ಕೃತಿಗಳು: ಕೀರ‍್ತನೆಗಳು-400
ಕಾವ್ಯಗಳು:
1. ಮೋಹನ ತರಂಗಿಣಿ
2. ನಳ ಚರಿತ್ರೆ
3. ಹರಿಭಕ್ತಿ ಸಾರ
4. ರಾಮಧಾನ್ಯ ಚರಿತ್ರೆ
***
‘ರಾಮಧಾನ್ಯ ಪ್ರಸಂಗ’ದ ಓದು
ಪಾತ್ರಗಳು:
ರಾಮ: ಅಯೋದ್ಯೆಯ ರಾಜ
ಹನುಮಂತ: ರಾಮನ ಬಂಟ
ಗೌತಮ: ಒಬ್ಬ ಮುನಿ
ವ್ರಿಹಿಗ: ಒಂದು ದಾನ್ಯ. ಬತ್ತ—ನೆಲ್ಲು ಎಂಬ ಮತ್ತೆರಡು ಬಗೆಯ ಹೆಸರಿನಿಂದಲೂ ಕರೆಯುತ್ತಾರೆ.
ನರೆದಲೆಗ: ಒಂದು ದಾನ್ಯ. ರಾಗಿ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯುತ್ತಾರೆ.
ಜಂಭಾರಿ: ದೇವತೆಗಳ ಒಡೆಯನಾದ ದೇವೇಂದ್ರ
ನಾರದ: ಒಬ್ಬ ದೇವತೆ
ಕಪಿಲ: ಒಬ್ಬ ಮುನಿ.
ಕೆಲವರು: ನರೆದಲೆಗ ಮತ್ತು ವ್ರಿಹಿಗ ನಡುವೆ ಮಾತಿನ ಕಲಹ ಉಂಟಾದ ಸನ್ನಿವೇಶದಲ್ಲಿ ಇದ್ದ ವಾನರರು, ಅಸುರರು, ಮುನಿಗಳು, ದೇವತೆಗಳು.
***
ನೋಟ – 1
ಲಂಕೆಯಲ್ಲಿ ನಡೆದ ಕಾಳೆಗದಲ್ಲಿ ರಾಮನು ರಾವಣನನ್ನು ಕೊಂದು, ಅಶೋಕವನದಲ್ಲಿ ಸೆರೆಯಾಗಿದ್ದ ಸೀತಾದೇವಿಯನ್ನು ರಣರಂಗಕ್ಕೆ ಕರೆಸಿಕೊಂಡು, ಅಯೋಧ್ಯಾ ನಗರದತ್ತ ಹೊರಡಲು ಸಿದ್ಧನಾಗಿ, ತನಗೆ ಇದುವರೆಗೂ ನೆರವಾಗಿದ್ದ ರಾವಣನ ತಮ್ಮನಾದ ವಿಭೀಷಣನನ್ನು ಕುರಿತು ಈ ರೀತಿ ಹೇಳುತ್ತಾನೆ.
ರಾಮ: ನೀನು ಪುರಕೆ ಪ್ರಯಾಣವ ಮಾಡು.
(ಎನ್ನಲು, ಆಗ ವಿಭೀಷಣನು ಲಂಕೆಯತ್ತ ತೆರಳದೆ, ಅಯೋಧ್ಯೆಗೆ ರಾಮನನ್ನು ಬಿಟ್ಟುಬರಲು ತನ್ನ ಪರಿವಾರದೊಡನೆ ಸಿದ್ಧನಾಗಿ… ನಿಜ ಮಂತ್ರಿ ಕರಿ ರಥ ತುರಗ ಪಾಯ್ದಳವ ಕರೆಸಿದನು. ಆ ಕ್ಷಣವೆ ಅಗಣಿತ ವೀರದಾನವ ಸೇನ ನಿಮಿಷದಲಿ ನೆರೆದುದು.
ವಿಭೀಷಣನು ಕುಬೇರನ ವರ ರಥವ ತರಿಸಿದ. ಹರುಷದಲಿ ಮೇಳೈಸಿ ದೇವರ ಸಿರಿಪದಾಂಬುಜಕೆ ಅರ್ಪಿಸಲು, ಶ್ರೀರಾಮ ನಸುನಗುತ ಕರೆಸಿ ಲಕ್ಷ್ಮಣ ದೇವನನು ನಿಜ ತರುಣಿ ಸಹಿತ ವರೂಥವ ಏರಿದ.
ತರಣಿಸುತ ಹನುಮಂತ ಜಾಂಬವರು ಒಗ್ಗಿನಲಿ ಐದಿತು. ಅಂಗದ, ನಳ, ನೀಲ, ಶತಬಲಿ, ತುಂಗ ವಿಕ್ರಮ ಸುಷೇಣ, ಪ್ಲವಂಗ, ಗವಯ, ಗವಾಕ್ಷ ಮೊದಲಾದ ಅಖಿಳ ವಾನರರು ಮಹಾಸಮರಂಗವೀರರು ಸಂಗಡಿಸಿ ನೆರೆದುದು. ಮೋಹಿಸಿದ ರಘುಪುಂಗವನ ರಥದೊಡನೆ ಮುಂದೆ ಸಂದಣಿಸಿ ನಡೆದುದು. ಆ ವಿಭೀಷಣನೊಡನೆ ಲಂಕೆಯ ವೀರದಾನವ ಭಟರು, ಪುರಜನ, ಪೌರಜನ ಸಹಿತ ಮೇಳೈಸಿ ಭೂರಿಬಲವು ಐತರುತಲಿರೆ, ರಣಭೇರಿ ಮಿಗೆ ದಂಧಣಧಣರೆನಲು, ಚೀರಿದವು ಕಹಳೆಗಳು ಚೀರಿದವು. ದಿಕ್ಪಾಲಕರ ಬೆದರಿಸಿತು. ಉಭಯಬಲ ತಡೆಯದೆ ಐತಂದು ಸಂಗಡಿಸಿ ಬರುತಿರೆ, ಮಡದಿಗೆ ಮುಂದೆ ಸೇತುವ ಎಲ್ಲವ ತೋರಿಸುತ ನೆರೆ ಕಡಲ ದಾಂಟಿದರು.
ನೃಪತಿ ರಾಮೇಶ್ವರದ ಬಳಿಯಲಿ ನಡೆದು, ಮೃಡನ ಪೂಜಿಸಿ ಭಕ್ತಿಭಾವದ ಸಡಗರದಿ ವಾಲ್ಮೀಕಿಯಾಶ್ರಮಕೆ ಐದಿದನು. ಜಾನಕಿವಲ್ಲಭನು ಅಲ್ಲಿ ನೆರೆದ ಮಹಾಮುನೀಶ್ವರರೆಲ್ಲರನು ಸತ್ಕರಿಸಿ ಸಡಿಲದುನ್ನತ ಬಲಸಮೇತದಿ ಮುಚುಕುಂದನ ಆಶ್ರಮಕೆ ನಡೆತಂದನು. ಪಂಚನಂದಿಯೊಳು ಬಿಡದೆ ಪಲ್ಲೈಸಿರುವ ಫಲ ವಸ್ತುಗಳ ಕಡಲ ಸಂಭ್ರಮದಿ ಕಂಡನು. ಆ ಮಹಾವನದೊಳಗೆ ಸುಭಟಸ್ತೋಮವು ಇಳಿದುದು. ಪಾಳೆಯದ ಸಂಗ್ರಾಮದ ಇದಿರಲಿ ಗುಡಿಗುಡಾರಂಗಳು ವಿರಾಜಿಸಿತು. ರಾಮಣೀಯಕ ರಚನೆಯಲಿ ಸುತ್ರಾಮನ ಓಲಗದಂತೆ ರಘುಕುಲ ರಾಮನು ಐದಿರೆ, ಸಕಲ ಮುನಿವರರು ಬಂದು ಕಂಡರು. ಕೌಶಿಕ, ಜಮದಗ್ನಿ, ಜನ್ಹು, ಪರಾಶರ, ಜಾಬಾಲಿ, ಭೃಗು, ದೂರ್ವಾಸ ಗೌತಮನಾದಿಯಾದ ಸಮಸ್ತ ಮುನಿವರರು ಭಾಸುರದ ತೇಜದಲಿ ತಮ್ಮ ನಿವೇಶನವ ಹೊರವಂಟು ಬಂದರು. ದಾಶರಥಿಯನು ಕಂಡು ಅಕ್ಷತೆಯ ತಳಿದು ಹರಸಿದರು.)
ಮುನಿಗಳು: ರಾಮ… ದಶರಥ ತನಯ… ರಘುಕುಲ ಸೋಮ… ಸನೃತ ಸನಾಮ…
ಆಹವ ಭೀಮ… ಸುಜನಪ್ರೇಮ… ಜಗದಭಿರಾಮ… ನಿಸ್ಸೀಮ… ತಾಮರಸದಳ
ನಯನ… ದೇವ ಪ್ರೇಮ… ಸುರಕುಲ ಮೌಳಿವಂದಿತ ಪ್ರೇಮದಿಂದಲಿ ಪಾಲಿಸು
(ಎನ್ನುತಲಿ ಅವರು ಪೊಗಳಿದರು. ಮುನಿಗಳು ತಮ್ಮ ಮಾತನ್ನುಮುಂದುವರಿಸುತ್ತಾ… )
ಮುನಿಗಳು: ದೇವ, ನೀವು ದೇವಿ ಜಾನಕಿಸಹಿತ ವನದಲಿ ಕಷ್ಟವ ಬಳಸಿ, ಭಕ್ತರ ಕಾವ ಹದನನು ನೆನೆದು,
ವಾನರ ಬಲಸಮೇತದಲಿ ರಾವಣನ ಸಂಹರಿಸಿ, ಲಂಕೆಯನು ಆ ವಿಭೀಷಣಗೆ ಇತ್ತು, ದೇವ, ನಮ್ಮನು ಪಾಲಿಸೆ ಬಂದೆ.
(ಎಂದು ನೃಪನ ಉಪಚರಿಸಿದರು.)
ರಾಮ: ನಮಗೆ ಉಪಚಾರವೇಕಿದು… ಸಾಕು, ಅದು ಅಂತಿರಲಿ. ನೀವು ಸಾರಹೃದಯರು. ನಮ್ಮನು ನಿಮ್ಮಡಿಯ ಕರುಣಾರಸವೆ ಸಲಹುವುದು. ಎಮಗೆ ಇಂದಿನಲಿ ನಿಮ್ಮ ದರುಶನ ಸೇರಿತು. ಇದು ಆರಿಗುಂಟು…
(ಎಂದು ಉಪಚಾರದಿಂದ ಸತ್ಕರಿಸಿ ಮುನಿವರರ ಕುಳ್ಳಿರಿಸಿದನು. ಇದಿರಲಿ ಮುನಿನಿಕರ, ಎಡದ ಕಡೆಯಲಿ ಕಪಿಕುಲೇಂದ್ರನ ಗಡಣ, ಬಲದಲಿ ರಾವಣಾನುಜ, ಹಿಂದೆ ವಾನರರು, ಮಡದಿ ಲಕ್ಷ್ಮಣ ದೇವರು ಇರ್ವರು, ಸಡಗರದಿ ಚಾಮರಂಗಳ ಬಿಡದೆ ಚಿಮ್ಮಲು ಪೊಡವಿಪತಿ ಶ್ರೀರಾಮ ಸಿಂಹಾಸನದಿ ರಂಜಿಸಿದ. ಅಲ್ಲಿ ನೆರೆದ ಮಹಾಮುನೀಶ್ವರರೆಲ್ಲ ರಾಮನೋಲಗಕೆ ಅಖಿಳ ವಸ್ತುವ ತರಿಸಿದರು. ಬೆಲ್ಲ ಸಕ್ಕರೆ ಜೇನುತುಪ್ಪ ರಸಾಯನಂಗಳಲಿ ಭುಲ್ಲವಿಸಿ ರಚಿಸಿದ ಸುಭಕ್ಷಗಳೆಲ್ಲವನು ಹೆಡಗೆಗಳಲ್ಲಿ ಜೋಡಿಸಿ ತುಂಬಿದರು. ಹೊರಿಸಿ ತಂದರು.
ಶಿಷ್ಯರು ತಂದು ಭಕ್ಷಗಳ ಮುದದಿಂದ ಸುರಿಯಲು, ರಘುಕುಲಸಾರ್ವಭೌಮನು ನೋಡಿ ನಸುನಗೆಯಿಂದ, ಕರೆಸಿ ನಿಜಬಲಕೆ ಅಂದು ಕೊಡಿಸಲು, ವಾನರರು ನೋಡಿದರು. ರುಚಿಯಿಂದ ಭೋಜ್ಯಗಳನು ಸವಿದರು. ಮುನಿವರರ ಆನಂದದಲಿ ಕೊಂಡಾಡಿದರು.)
ಪದ ವಿಂಗಡಣೆ ಮತ್ತು ಪದಗಳ ತಿರುಳು
(ರಾಮನು ಸೀತೆ ಮತ್ತು ಲಕ್ಶಣರೊಡನೆ ಅಯೋದ್ಯೆಯತ್ತ ಹೊರಟಾಗ , ಅವರೊಡನೆ ಲಂಕೆಯ ರಕ್ಕಸ ಪರಿವಾರದ ಜತೆಗೂಡಿ ವಿಬೀಶಣ ಮತ್ತು ವಾನರ ಸೇನೆಯ ಮುಂದಾಳುಗಳಾದ ಸುಗ್ರೀವ, ಹನುಮಂತ ಮುಂತಾದವರೆಲ್ಲ ಹೊರಡುತ್ತಾರೆ. ಲಂಕೆಯಿಂದ ಅಯೋದ್ಯೆಯತ್ತ ಬರುವಾಗ ಕಾಡಿನ ನಡುವೆ ಪಂಚನಂದಿ ಎಂಬ ಪ್ರಾಂತ್ಯದಲ್ಲಿದ್ದ ಮುಚುಕುಂದ ಮುನಿಯ ಆಶ್ರಮದಲ್ಲಿ ರಾಮನ ಪರಿವಾರದವರು ಬಿಡಾರ ಹೂಡುತ್ತಾರೆ. ಆಗ ಆಶ್ರಮವಾಸಿಗಳಾದ ಮುನಿಗಳು ನವದಾನ್ಯಗಳಿಂದ ತಯಾರಿಸಿದ್ದ ಉಣಸುತಿನಸುಗಳನ್ನು ನೀಡಿ ರಾಮನನ್ನು ಸತ್ಕರಿಸುತ್ತಾರೆ. ರಾಮನು ರುಚಿಕರವಾದ ಆಹಾರವನ್ನು ತನ್ನೊಡನೆ ಬಂದಿದ್ದ ವಾನರ ಮತ್ತು ರಕ್ಕಸ ಪರಿವಾರದವರಿಗೆ ಕೊಡಿಸಿದಾಗ, ಅವರೆಲ್ಲರೂ ಸಂತಸದಿಂದ ಉಂಡು ತಿಂದು ಸವಿದು ಮುನಿಗಳನ್ನು ಹಾಡಿಹೊಗಳುತ್ತಾರೆ.)
ಪುರ=ಪಟ್ಟಣ/ಲಂಕಾ ನಗರ; ನಿಜ=ತನ್ನ; ಙತುರಗ=ಕುದುರೆ; ಪಾಯ್+ದಳ; ಪಾಯ್=ಮೇಲೆ ಬೀಳು/ಆಕ್ರಮಣ ಮಾಡು; ದಳ=ಪಡೆ/ಸೇನೆ; ಪಾಯ್ದಳ=ಕಾಲಾಳುಗಳ ದಂಡು; ಅಗಣಿತ=ಲೆಕ್ಕವಿಲ್ಲದ/ಅತಿ ಹೆಚ್ಚಾದ; ದಾನವ=ರಾಕ್ಶಸ. ಹಿಂದಿನ ಕಾಲದಲ್ಲಿ ಕಾಡಿನಲ್ಲಿ ನೆಲೆಸಿದ್ದ ಬುಡಕಟ್ಟುಗಳ ಜನಸಮುದಾಯದಲ್ಲಿ ಒಂದು ಬುಡಕಟ್ಟನ್ನು ‘ರಾಕ್ಶಸ’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಲಂಕೆಯಲ್ಲಿದ್ದ ಈ ಬುಡಕಟ್ಟಿನ ಜನರಿಗೆ ರಾವಣನು ರಾಜನಾಗಿದ್ದನು. ರಾವಣನ ಸಾವಿನ ನಂತರ, ರಾವಣನ ತಮ್ಮ ವಿಬೀಶಣನು ಲಂಕೆಯ ರಾಜನಾದನು;
ನೆರೆ=ಸೇರು; ಕುಬೇರ=ಒಬ್ಬ ದೇವತೆ. ಈತ ಸಂಪತ್ತಿಗೆ ಒಡೆಯನೆಂಬ ಕಲ್ಪನೆಯು ಜನಮನದಲ್ಲಿದೆ. ಸಾವಿರಾರು ವರುಶಗಳ ಹಿಂದೆ ಇಂಡಿಯಾ ದೇಶದ ಕಾಡುಮೇಡುಗಳಲ್ಲಿ ಮತ್ತು ದೊಡ್ಡ ದೊಡ್ಡ ಪರ‍್ವತ ಪ್ರಾಂತ್ಯಗಳಲ್ಲಿ ಹತ್ತಾರು ಬಗೆಯ ಬುಡಕಟ್ಟುಗಳಿಗೆ ಸೇರಿದ ಜನರು ಬಾಳುತ್ತಿದ್ದರು. ಅವರನ್ನು ದೇವತೆಗಳು, ಕಿನ್ನರರು, ಯಕ್ಶರು, ರಾಕ್ಶಸರು, ಬುಜಂಗರು, ವಾನರರು , ಗುಹ್ಯಕರು, ವಿದ್ಯಾದರರು ಮತ್ತು ಇನ್ನಿತರ ಹೆಸರುಗಳಿಂದ ಕರೆಯುತ್ತಿದ್ದರು;
ವರ=ಕೊಡುಗೆ; ಕುಬೇರನ ವರ ರಥ=ಕುಬೇರನು ರಾವಣನಿಗೆ ಕೊಡುಗೆಯಾಗಿ ನೀಡಿದ್ದ ರತ; ಮೇಳೈಸು=ಸೇರು/ಒಟ್ಟುಗೂಡು; ದೇವರು=ರಾಮ; ಸಿರಿ+ಪದ+ಅಂಬುಜಕೆ; ಸಿರಿ=ಚೆಲುವು; ಪದ=ಪಾದ; ಅಂಬುಜ=ತಾವರೆ; ಪದಾಂಬುಜ=ತಾವರೆಯಂತಹ ಪಾದ/ಪಾದಕಮಲ; ಗುರುಹಿರಿಯರ ಮತ್ತು ದೇವತೆಗಳಿಗೆ ಒಲವು ಮತ್ತು ವಿನಯವನ್ನು ತೋರಿಸುವಾಗ ಇಂತಹ ರೂಪಕವನ್ನು ಬಳಸುತ್ತಾರೆ; ಅರ್ಪಿಸು=ಕೊಡುವುದು/ನೀಡುವುದು; ಲಕ್ಷಣದೇವ=ರಾಮನ ತಮ್ಮ;
ನಿಜ=ತನ್ನ; ತರುಣಿ=ಯುವತಿ; ನಿಜತರುಣಿ=ತನ್ನ ಹೆಂಡತಿಯಾದ ಸೀತೆ; ವರೂಥ=ರತ; ತರಣಿ=ಸೂರ‍್ಯ; ಸುತ=ಮಗ: ತರಣಿಸುತ=ಸೂರ‍್ಯನ ಮಗನಾದ ಸುಗ್ರೀವ. ವಾನರ ಬುಡಕಟ್ಟಿನ ರಾಜ; ಹನುಮಂತ=ರಾಮನ ಬಂಟ. ವಾನರ ಬುಡಕಟ್ಟಿಗೆ ಸೇರಿದ ವ್ಯಕ್ತಿ; ಜಾಂಬವ=ಕಿಶ್ಕಿಂದೆಯ ರಾಜನಾದ ಸುಗ್ರೀವನ ಸಚಿವರಲ್ಲಿ ಒಬ್ಬ.; ಒಗ್ಗು=ಹಿಗ್ಗು/ಆನಂದ; ಅಯ್ದು =ಬರು; ಒಗ್ಗಿನಲಿ ಐದಿತು=ಹಿಗ್ಗಿನಿಂದ ಬಂದರು;
ಸುಗ್ರೀವ=ದಂಡಕಾರಣ್ಯದ ನಡುವೆ ಇದ್ದ ಕಿಶ್ಕಿಂದೆಯೆಂಬ ಪ್ರಾಂತ್ಯದಲ್ಲಿ ನೆಲೆಸಿದ್ದ ವಾನರರ ಬುಡಕಟ್ಟಿನ ರಾಜ; ನಳ, ನೀಲ, ಶತಬಲಿ, ಸುಶೇಣ, ಪ್ಲವಂಗ, ಗವಯ, ಗವಾಕ್ಶ—ಇವರೆಲ್ಲರೂ ಸುಗ್ರೀವನ ವಾನರಪಡೆಯಲ್ಲಿ ಸೇನಾದಿಪತಿಗಳಾಗಿದ್ದರು; ಅಂಗದ=ಸುಗ್ರೀವನ ಅಣ್ಣನಾದ ವಾಲಿಯ ಮಗ; ತುಂಗ=ಎತ್ತರವಾದ; ವಿಕ್ರಮ=ಪರಾಕ್ರಮ; ಅಖಿಳ=ಎಲ್ಲರನ್ನು ಒಳಗೊಂಡ; ವಾನರ=ಕೋತಿ/ಮಂಗ. ಕಾಡಿನಲ್ಲಿ ವಾಸಮಾಡುತ್ತಿದ್ದ ಒಂದು ಬುಡಕಟ್ಟಿನ ಜನರನ್ನು ‘ವಾನರ ’ ಎಂದು ಕರೆಯುತ್ತಿದ್ದರು. ಏಕೆಂದರೆ ಅವರು ಪ್ರಾಣಿಯಾದ ಕೋತಿಯನ್ನು ತಮ್ಮ ಬುಡಕಟ್ಟಿನ ದೇವರನ್ನಾಗಿ ಪೂಜಿಸುತ್ತಿದ್ದರು;
ಸಮರಂಗ=ಕಾಳೆಗದ ಕಣ; ಸಂಗಡಿಸು=ಒಟ್ಟಾಗು/ಗುಂಪು ಸೇರುವುದು; ಮೋಹ=ಅಕ್ಕರೆ/ಪ್ರೀತಿ; ರಘು=ರಾಮನ ತಂದೆಯಾದ ದಶರತನ ತಾತ. ಈತನ ಹೆಸರಿನಲ್ಲಿಯೇ ರಾಮನ ರಾಜಮನೆತನದ ವಂಶಕ್ಕೆ ರಗುವಂಶ ಎಂಬ ಹೆಸರು ಬಂದಿತ್ತು; ಪುಂಗವ=ಒಡೆಯ/ನಾಯಕ; ರಘುಪುಂಗವ=ರಘುಕುಲದ ಒಡೆಯ; ಸಂದಣಿಸು=ಸಡಗರ/ಸದ್ದು/ಗದ್ದಲ;
ಲಂಕೆ=ರಾವಣನ ಆಳ್ವಿಕೆಯ ರಾಜ್ಯದ ರಾಜಧಾನಿ; ಪೌರಜನ=ಪಟ್ಟಣಿಗರು; ಭೂರಿ=ಹೆಚ್ಚು/ದೊಡ್ಡದು; ಬಲ=ದಳ/ಪಡೆ; ಭೂರಿಬಲ=ದೊಡ್ಡ ಪಡೆ; ಐತರುತಲ್+ಇರೆ; ಐತರು=ಆಗಮಿಸು/ಸಮೀಪಿಸು; ಇರೆ=ಇರಲು;
ರಣ=ಕಾಳಗ; ಭೇರಿ=ನಗಾರಿ/ದೊಡ್ಡ ಆಕಾರದಲ್ಲಿರುವ ಒಂದು ಬಗೆಯ ಚರ‍್ಮ ವಾದ್ಯ; ದಂಧಣಧಣರ್+ಎನಲು; ದಂಧಣಧಣ=ನಗಾರಿಯನ್ನು ಬಾರಿಸುವಾಗ ಉಂಟಾಗುವ ದನಿ; ಮಿಗು=ಹೆಚ್ಚಾಗು; ಚೀರು=ಕೂಗು/ಅರಚು/ಅಬ್ಬರದ ದನಿಯು ಹೊರಹೊಮ್ಮುವುದು; ಕಹಳೆ= ಲೋಹದ ಒಂದು ವಾದ್ಯ;
ದಿಕ್ಪಾಲಕರು=ದಿಕ್ಕುಗಳನ್ನು ಕಾಪಾಡುವವರು; ಮೂಡಣ ಪಡುವಣ ತೆಂಕಣ ಬಡಗಣ ಎಂಬ ನಾಲ್ಕು ದಿಕ್ಕುಗಳನ್ನು ಮತ್ತು ಈಶಾನ್ಯ, ಆಗ್ನೇಯ, ವಾಯವ್ಯ, ನೈರುತ್ಯ ಎಂಬ ನಾಲ್ಕು ಮೂಲೆ ದಿಕ್ಕುಗಳನ್ನು ಎಂಟು ಮಂದಿ ದೇವತೆಗಳು ಕಾಯುತ್ತಿರುತ್ತಾರೆ ಎಂಬ ನಂಬಿಕೆಯು ಜನಮನದಲ್ಲಿದೆ;
ತಡೆಯದೆ=ವಿಳಂಬ ಮಾಡದೆ; ಐತಂದು=ಆಗಮಿಸಿ/ಬಂದು; ಉಭಯಬಲ=ಎರಡು ಕಡೆಯ ಸೇನೆ; ಸಂಗಡಿಸು=ಗುಂಪುಗೂಡು; ಸೇತು=ಸೇತುವೆ; ನೆರೆ=ಪೂರ‍್ತಿಯಾಗಿ/ಪೂರ‍್ಣವಾಗಿ; ; ದಾಂಟು=ದಾಟು/ಹಾಯ್ದುಹೋಗು; ನೃಪತಿ=ರಾಜ;
ರಾಮೇಶ್ವರ=ತಮಿಳು ನಾಡಿನ ಕಡಲತೀರದಲ್ಲಿರುವ ಒಂದು ಪಟ್ಟಣ. ಈ ಪಟ್ಟಣದ ಬಗ್ಗೆ ವಾಲ್ಮೀಕಿ ರಾಮಾಯಣದ ಪ್ರಸಂಗವೊಂದು ಜನಮನದಲ್ಲಿ ನೆಲೆಸಿದೆ. ರಾವಣನ ಸೆರೆಯಲ್ಲಿದ್ದ ಸೀತೆಯನ್ನು ಬಿಡಿಸಿಕೊಂಡು ಬರಲು ಲಂಕೆಗೆ ವಾನರಸೇನೆಯೊಡನೆ ರಾಮನು ಹೊರಡುವಾಗ, ಹಿಂದೂ ಮಹಾಸಾಗರವನ್ನು ದಾಟಲೆಂದು ಸೇತುವೆಯನ್ನು ಕಟ್ಟಲು ಕಡಲ ಈ ತೀರದಲ್ಲಿ ತನ್ನ ಬಿಲ್ಲಿನ ತುದಿಯಿಂದ ಜಾಗವನ್ನು ಗುರುತುಹಾಕಿದನು ಎಂಬ ದಂತಕತೆಯಿದೆ. ಈ ಪಟ್ಟಣಕ್ಕೆ ಸೇತುರಾಮೇಶ್ವರ ಎಂಬ ಮತ್ತೊಂದು ಹೆಸರಿದೆ;
ಮೃಡ=ಶಿವ; ವಾಲ್ಮೀಕಿ+ಆಶ್ರಮಕೆ; ವಾಲ್ಮೀಕಿ=ಒಬ್ಬ ರಿಸಿ.ರಾಮಾಯಣ ಮಹಾಕಾವ್ಯವನ್ನು ಬರೆದವರು; ಆಶ್ರಮ=ಕಾಡಿನಲ್ಲಿ ಮುನಿಗಳು ನೆಲೆಸಿರುವ ಜಾಗ; ಐದಿದನು=ಬಂದನು; ಜಾನಕಿ=ಜನಕ ಮಹಾರಾಜನ ಮಗಳು ಜಾನಕಿ/ಸೀತೆ; ವಲ್ಲಭ=ಗಂಡ; ಜಾನಕಿವಲ್ಲಭ=ಸೀತೆಯ ಗಂಡನಾದ ರಾಮ;
ಸಡಿಲದ+ಉನ್ನತ; ಸಡಿಲ=ಬಿಗಿಯಿಲ್ಲದಿರುವುದು; ಉನ್ನತ=ಉತ್ತಮ; ಸಡಿಲದುನ್ನತ ಬಲ=ಯಾವುದೇ ಕುಂದುಕೊರತೆಯಿಲ್ಲದ ಶಕ್ತಿಯುತವಾದ ಸೇನೆ; ಮುಚುಕುಂದನ+ಆಶ್ರಮಕೆ; ಮುಚುಕುಂದ=ಒಬ್ಬ ಮುನಿ;
ಪಂಚನಂದಿ+ಒಳ್; ಪಂಚನಂದಿ=ಆಶ್ರಮ ಪ್ರಾಂತ್ಯದ ಹೆಸರು; ಪಲ್ಲೈಸು=ಹರಡಿಕೊಳ್ಳು/ಹಬ್ಬಿಕೊಳ್ಳು; ಫಲ=ಹಣ್ಣು/ಬಹುಬಗೆಯ ಬೆಳೆಗಳು; ಸಂಭ್ರಮ=ಸಡಗರ/ಉತ್ಸಾಹ; ಕಡಲು=ಸಮುದ್ರ; ಕಡಲು=ಪಂಚನಂದಿಯಲ್ಲಿ ವಿಸ್ತಾರವಾಗಿ ಹಬ್ಬಿರುವ ಹಚ್ಚಹಸಿರಿನ ಮರಗಿಡಗಳನ್ನು, ಹೂಹಣ್ಣುಕಾಯಿಗಳ ಸೊಬಗನ್ನು ಸೂಚಿಸುವ ರೂಪಕವಾಗಿ ‘ಕಡಲು’ ಎಂಬ ಪದವನ್ನು ಬಳಸಲಾಗಿದೆ/ಹಚ್ಚಹಸಿರಿನ ಕಡಲು; ಮಹಾ+ವನದ+ಒಳಗೆ; ವನ=ಕಾಡು; ಮಹಾವನ=ದೊಡ್ಡ ಕಾಡು; ಸುಭಟ+ಸ್ತೋಮವು; ಸುಭಟ=ಒಳ್ಳೆಯ ಸೈನಿಕ; ಸ್ತೋಮ=ಗುಂಪು; ಇಳಿದುದು=ಬಿಡಾರ ಹೂಡಿತು/ತಂಗಿತು; ಪಾಳೆಯ=ಪಡೆ/ದಂಡು; ಸಂಗ್ರಾಮ=ಕಾಳಗ; ಇದಿರು=ಎದುರುಗಡೆ; ಗುಡಿ=ಬಾವುಟ; ಗುಡಾರ=ಸೇನೆಯವರು ತಾತ್ಕಾಲಿಕವಾಗಿ ಬಿಡಾರ ಹೂಡುವುದಕ್ಕಾಗಿ ಬಟ್ಟೆಯಿಂದ ಕಟ್ಟಿರುವ ಡೇರೆ; ವಿರಾಜಿಸು=ಕಾಂತಿಯಿಂದ ಕಂಗೊಳಿಸು;
ರಾಮಣೀಯಕ=ಸುಂದರವಾದುದು/ಚೆಲುವಾದುದು; ರಚನೆ=ಕ್ರಮ/ರೀತಿ/ನಿರ‍್ಮಾಣ; ಸುತ್ರಾಮ=ದೇವೇಂದ್ರ; ಓಲಗದ+ಅಂತೆ; ಓಲಗ=ರಾಜನ ಸಬೆ;
ಕೌಶಿಕ, ಜಮದಗ್ನಿ, ಜನ್ಹು, ಪರಾಶರ, ಜಾಬಾಲಿ, ಬ್ರುಗು, ಗೌತಮ—ಇವರೆಲ್ಲರೂ ಕಾಡಿನಲ್ಲಿ ಆಶ್ರಮವಾಸಿಗಳಾಗಿದ್ದ ರಿಸಿಗಳು. ಗೌತಮನ್+ಆದಿ+ಆದ; ಆದಿ=ಮೊದಲಾದ; ಸಮಸ್ತ=ಎಲ್ಲ ಭಾಸುರ=ಅಂದ/ಸೊಗಸು/ಹೊಳೆಯುವ/ಪ್ರಕಾಶಿಸುವ; ತೇಜ=ಹೊಳಪು/ಕಾಂತಿ;
ನಿವೇಶನ=ಮನೆ/ನಿವಾಸ; ಹೊರವಂಟು=ಹೊರಬಂದು; ದಾಶರಥಿ=ದಶರತನ ಮಗ ರಾಮ; ಅಕ್ಷತೆ=ಅರಿಸಿನ ಸವರಿದ ಅಕ್ಕಿಯ ಕಾಳುಗಳು; ತಳಿ=ಎರಚು/ಸಿಂಪಡಿಸು; ತನಯ=ಮಗ;
ದಶರಥ ತನಯ=ದಶರತನ ಮಗ ರಾಮ; ಸೋಮ=ಚಂದ್ರ; ರಘುಕುಲ ಸೋಮ=ರಗುವಂಶದ ಚಂದ್ರ; ನೃತ=ಸತ್ಯ/ದಿಟ; ಸನೃತ=ಹೆಚ್ಚಿನ ಸತ್ಯ; ಸನಾಮ=ಒಳ್ಳೆಯ ಹೆಸರು; ಸನೃತ ಸನಾಮ=ಮಹಾಸತ್ಯವಂತನೆಂಬ ಹೆಸರಾಂತವನು; ಆಹವ=ಕಾಳಗ; ಭೀಮ=ಬಯಂಕರನಾದವನು; ಆಹವ ಭೀಮ=ಕಾಳೆಗದಲ್ಲಿ ಮಹಾ ವೀರನಾದವನು; ಸುಜನ=ಒಳ್ಳೆಯ ಜನ; ಸುಜನ ಪ್ರೇಮ=ಒಳ್ಳೆಯ ಜನರಲ್ಲಿ ಪ್ರೇಮ ಉಳ್ಳವನು; ಅಭಿರಾಮ=ಸುಂದರವಾದ; ಜಗದಭಿರಾಮ=ಜಗತ್ತಿನಲ್ಲಿಯೇ ಸುಂದರನಾದವನು; ನಿಸ್ಸೀಮ=ಅತಿ ಶೂರ; ತಾಮರಸ=ತಾವರೆಯ ಹೂ; ದಳ=ಎಸಳು; ನಯನ=ಕಣ್ಣು; ತಾಮರಸದಳ ನಯನ=ತಾವರೆಯ ದಳದಂತೆ ಕಣ್ಣುಳ್ಳವನು; ದೇವ ಪ್ರೇಮ=ದೇವತೆಗಳ ಪ್ರೇಮಕ್ಕೆ ಪಾತ್ರನಾದವನು; ಸುರ=ದೇವತೆ; ಕುಲ=ಗುಂಪು; ಮೌಳಿ=ಕಿರೀಟ; ವಂದಿತ=ನಮಸ್ಕರಿಸಲ್ಪಟ್ಟವನು; ಸುರಕುಲ ಮೌಳಿ ವಂದಿತ=ಕಿರೀಟದಾರಿಗಳಾದ ದೇವತೆಗಳಿಂದ ನಮಸ್ಕರಿಸಲ್ಪಟ್ಟವನು; ಪಾಲಿಸು=ಕಾಪಾಡು; ಪೊಗಳು=ಹೊಗಳು/ಗುಣಗಾನ ಮಾಡು;
ಕಷ್ಟವ ಬಳಸಿ=ಸಂಕಟಕ್ಕೆ ಗುರಿಯಾಗಿ; ಕಾವ=ಕಾಪಾಡುವ; ಹದನ=ರೀತಿ; ಪಾಲಿಸು=ಕಾಪಾಡು; ಸಾರ=ಉತ್ತಮವಾದ; ಹೃದಯ=ಮನಸ್ಸು; ಸಾರಹೃದಯರು=ಒಳ್ಳೆಯ ಮನಸ್ಸಿನವರು;
ಉಪಚಾರವು+ಏಕೆ+ಇದು; ಉಪಚಾರ=ಒಲವು ನಲಿವು ಮತ್ತು ಆದರದಿಂದ ಸೇವೆಯನ್ನು ಮಾಡುವುದು; ನಿಮ್ಮ+ಅಡಿಯ; ಅಡಿ=ಪಾದ;
ಕರುಣಾ=ದಯೆ; ರಸ=ರುಚಿ/ಸವಿ; ಕರುಣಾರಸ=ಒಲವು ನಲಿವು ಕರುಣೆಯಿಂದ ಕೂಡಿದ ನಡೆನುಡಿ; ಸಲಹು=ಕಾಪಾಡು; ಆರಿಗೆ=ಯಾರಿಗೆ; ಎಮಗೆ=ನಮಗೆ;
ಕಪಿ+ಕುಲ+ಇಂದ್ರ; ಕಪಿ=ಕೋತಿ; ಕುಲ=ವಂಶ/ಗುಂಪು; ಇಂದ್ರ=ಒಡೆಯ; ಕಪಿಕುಲೇಂದ್ರ=ಕಪಿಗಳ ಗುಂಪಿನ ಒಡೆಯ; ಗಡಣ=ಸಮೂಹ; ರಾವಣ+ಅನುಜ; ಅನುಜ=ತಮ್ಮ; ರಾವಣಾನುಜ=ವಿಬೀಶಣ; ನಿಕರ=ಸಮೂಹ; ಚಾಮರ=ಬೀಸಣಿಗೆ/ಚಮರೀ ಎಂಬ ಪ್ರಾಣಿಯ ಕೂದಲಿನಿಂದ ಮಾಡಿದ ಬೀಸಣಿಗೆ; ಬಿಡದೆ=ಒಂದೇ ಸಮನೆ/ನಿರಂತರವಾಗಿ; ಚಿಮ್ಮಲು=ಬೀಸುತ್ತಿರಲು; ಪೊಡವಿ+ಪತಿ; ಪೊಡವಿ=ಭೂಮಿ; ಪತಿ=ಒಡೆಯ; ಪೊಡವಿಪತಿ=ರಾಜ; ರಂಜಿಸು=ಹಿಗ್ಗುವಂತೆ ಮಾಡು/ಆನಂದ ಪಡಿಸು;
ನೆರೆ=ಸೇರು; ಮಹಾಮುನೀಶ್ವರರು=ದೊಡ್ಡದೊಡ್ಡ ಮುನಿಗಳು; ರಾಮನ+ಓಲಗಕೆ; ಓಲಗ=ರಾಜ ಸಬೆ; ಅಖಿಳ=ಎಲ್ಲಾ; ವಸ್ತು=ಪದಾರ‍್ತ; ರಸಾಯನ=ಬಾಳೆಹಣ್ಣು ಮತ್ತು ಬೆಲ್ಲವನ್ನು ಸೇರಿಸಿ ಮಾಡುವ ಒಂದು ಬಗೆಯ ಸಿಹಿಯಾದ ತಿನಿಸು; ಭುಲ್ಲವಿಸು=ಉತ್ಸಾಹಗೊಳ್ಳು; ರಚಿಸು=ಅಣಿಮಾಡು/ತಯಾರಿಸು; ಸುಭಕ್ಷ+ಗಳ್+ಎಲ್ಲವನು; ಭಕ್ಷ=ಆಹಾರ/ಉಣಿಸುತಿನಸು; ಸುಭಕ್ಷ=ರುಚಿಕರವಾದ ಆಹಾರ; ಹೆಡಗೆ=ಬಿದಿರಿನ ಕಡ್ಡಿಗಳನ್ನು ಹೆಣೆದು ಮಾಡಿರುವ ಬುಟ್ಟಿ/ಪುಟ್ಟಿ/ಮಂಕರಿ; ಮುದ=ಆನಂದ/ಹಿಗ್ಗು; ರಘುಕುಲ=ರಗುವಂಶ;
ಸಾರ್ವಭೌಮ=ಚಕ್ರವರ‍್ತಿ; ನಿಜ=ತನ್ನ; ನಿಜಬಲಕೆ=ರಾಮನು ತನ್ನ ಸೇನೆಗೆ ಅಂದರೆ ವಾನರರ ಪಡೆಗೆ; ಭೋಜ್ಯ=ರುಚಿಕರವಾದ ಉಣಿಸುತಿನಸು; ಮುನಿವರರ=ಉತ್ತಮರಾದ ಮುನಿಗಳನ್ನು;
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು