‘ರಾಮದಾನ್ಯ ಪ್ರಸಂಗ’ದ ಓದು : ನೋಟ-2

– ಸಿ.ಪಿ.ನಾಗರಾಜ.

‘ರಾಮದಾನ್ಯ ಪ್ರಸಂಗ’ದ ಓದು : ನೋಟ – 2

ಆಗ ರಘುನಂದನನು ಕರುಣದೊಳು…

ರಾಮ: ಅನಿಲಸುತ ಬಾರ. ಇವರ ರುಚಿ ಎಂತು.

(ಎನಲು, ಕರಗಳ ಮುಗಿದು ರಘುಪತಿಗೆ ಬಿನ್ನೈಸಿದನು.)

ಹನುಮಂತ: ಚಿತ್ತೈಸು ಇನಕುಲಾನ್ವಯತಿಲಕ, ಎನಗೆ ಸವಿಯಹುದು. ಇನ್ನು ಧಾನ್ಯದ
ತನುವನು ಈಕ್ಷಿಸಬೇಕು.
ದೇವರು, ನೀವು ತರಿಸಿ.

(ಎಂದ. ಆಗ ರಾಮನೃಪಾಲ ಗೌತಮ ಮುನಿಯನ್ನು ಕುರಿತು… )

ರಾಮ: ಧಾನ್ಯವನು ಈಕ್ಷಿಸಬೇಕು. ಸಲೆ ತರಿಸು.

(ಎನಲು, ಈ ಹದನ ಒಡನೆ ಆಲೋಚಿದರು. ಮನ ನಲಿದು, ತಂತಮ್ಮ ಶಿಷ್ಯರ ವಿನಯದಿಂದಲಿ ಕರೆಸಿ “ತಾರ” ಎಂದೆನಲು, ತಳುವದೆ ಅವರನು ತಂದು ಸಭೆಯೊಳಗೆ ಮೆರೆದರು.)

ಗೌತಮ: ಇದು ನರೆದಲೆಗ… ಇದು ನೆಲ್ಲು … ಇದು ಹಾರಕ … ಇದು ಬರಗು … ಇದು ಜೋಳ… ಇದು ಕಂಬು… ಇದು ಸಾಮೆ… ಇದು ಉರುತರದ ನವಣೆ… ಇವು ನವಧಾನ್ಯ.

(ಎಂದು ಎನಲು)

ರಾಮ: (ಮೆರೆವ ರಾಸಿಯ ಕಂಡು ಅರಸಿ…) ಇದರೊಳು ಪರಮಸಾರದ ಹೃದಯನು ಆರು.

(ಎಂದು ಅಲ್ಲಿರುತಿಹ ಮಹಾಮುನೀಶ್ವರರ ಕೇಳಿದನು.)

ಕೆಲರು: ಗೋದಿ.
ಕೆಲರು: ಸಾಮೆ.
ಕೆಲರು: ನವಣೆ.
ಕೆಲರು: ಕಂಬು
ಕೆಲರು: ಜೋಳ.
ಕೆಲರು: ಹಾರಕ
ಕೆಲರು: ನೆಲ್ಲು.
ಕೆಲರು: ನರೆದಲೆಗ

(ಎಂದು ಪತಿಕರಿಸಲು, ಅದ ನೋಡಿದ ನೃಪತಿಯು… )

ರಾಮ: ಅದರೊಳು ಹಲವು ಮತವೇಕೆ. ಒಂದನೇ ಪೇಳಿ.
ಗೌತಮ: ದಾಶರಥಿ ಚಿತ್ತೈಸು, ನಮ್ಮಯ ದೇಶಕೆ ನರೆದಲೆಗನೇ ಅತಿಶಯ. ಈತ ವಾಸಿಯುಳ್ಳವನು. ಮಿಕ್ಕಿನ ಧಾನ್ಯವೇಕೆ.

(ಎನಲು)

ವ್ರಿಹಿಗ:(ತನ್ನ ಮನದಲ್ಲಿ)ಲೇಸನಾಡಿದ ಮುನಿಪ ಗೌತಮ. ದೋಷರಹಿತನು ಈಸು ಪರಿಯಲಿ ಪಕ್ಷಪಾತವನು ಮಾಡುವರೆ… ಶಿವ…

(ಎಂದುಕೊಂಡನು ವ್ರಿಹಿಗ. ಅನಂತರ ಗೌತಮ ಮುನಿಯನ್ನು ಕುರಿತು… )

ವ್ರಿಹಿಗ: ನೀವು ಎಲ್ಲ ಧರ್ಮದ ಸಾರವನು ಬಲ್ಲಿರಿ. ಅರಿಯದೆ ಎಲ್ಲರನು, ನೀವು ಇಲ್ಲಿ ನುಡಿವ ಉಪೇಕ್ಷೆಯುಂಟೇ. ಸಾಕು ಅದಂತಿರಲಿ. ನೆಲ್ಲು ನಾನಿರೆ, ಗೋದಿ ಮೊದಲಾದೆಲ್ಲ ಧಾನ್ಯಗಳಿರಲು, ಇದರಲಿ ಬಲ್ಲಿದನು ನರೆದಲೆಗನು ಎಂಬುದು ಇದಾವ ಮತ.

(ಎಂದ. ಈಗ ನರೆದಲೆಗನತ್ತ ತಿರುಗಿ… )

ವ್ರಿಹಿಗ: ಏನೆಲವೊ ನರೆದಲೆಗ… ಎನಗಿಲ್ಲಿ ನೀನು ಸಮಾನನೇ… ನಮ್ಮನು… ಇಬ್ಬರ ಹೆಚ್ಚು ಕುಂದುಗಳ ದಾನವಾಂತಕ ಬಲ್ಲನ್… ಜಾನಕಿ ಪತಿಯ ಸನಿಹದಲಿ ನೀನು ಕುಲಹೀನ… ಪ್ರತಿಷ್ಠ ಸುಡು… ಮತಿಹೀನ ನೀನು.

(ಎಂದೆನುತ ಖತಿಯಲಿ ಬೈದು ಭಂಗಿಸಿದ.)

ಲೋಕದಲಿ ಅಧಿಕ ಭೋಜನವು ಇದೆಂದು ಆಕೆವಾಳರು ಬುಧರು ಜರೆದು ನಿರಾಕರಿಸಿ ಬಿಡಲು, ಅಂತು ನೀ ಶೂದ್ರಾನ್ನವಾದೆಯಲ…

ನಾಕನಿಳೆಯರು ಸಾಕ್ಷಿ … ನಿನ್ನ ವಿವೇಕಿಗಳು ಮೆಚ್ಚುವರೆ… ಬಾಹಿರ, ಸಾಕು ನಡೆ… ನೀನಾವ ಮಾನ್ಯನು. ಕಡೆಗೆ ತೊಲಗು… ಕ್ಷಿತಿಯ ಅಮರರು ಉಪನಯನದಲಿ…

ಸುವ್ರತ ಸುಭೋಜನ ಪರಮ ಮಂತ್ರಾಕ್ಷತೆಗಳಲಿ… ಶುಭಶೋಭನದಲಿ… ಆರತಿಗೆ ಹಿರಿಯರಲಿ… ಕ್ರತುಗಳೆಡೆಯೊಳಗೆ ಅರಮನೆಯಲಿ…

ಪ್ರತಿದಿನವು ರಂಜಿಸುತ ದೇವರಿಗೆ ಅತಿಶಯದ ನೈವೇದ್ಯ ತಾನಹೆನ್… ಜನಪರಿಗೆ… ಶಿಶುಗಳಿಗೆ… ಬಾಂಧವ ಜನರೆಡೆಗೆ… ಬ್ರಹ್ಮರ ಸಮಾರಾಧನೆಗೆ…

ವಿದ್ಯಾರಂಭ ಕಾಲಕೆ… ಸಕಲ ಭೂಸುರರ ಮನೆಗಳಲಿ… ಹರಿದಿವಸದ ಔಪಾಸನೆಗಳಲಿ ತಾ ಯೋಗ್ಯನಹುದು ಎಂದು ಎನಿಸಿಕೊಂಬೆನು…

ನೀನು ಅಯೋಗ್ಯನು. ಭ್ರಷ್ಟ ತೊಲಗು… .ಹೊಸ ಮನೆಯ ಪುಣ್ಯಾರ್ಚನೆಗೆ… ಮಿಗೆ ಎಸೆವ ಸೇಸೆಗೆ… ಮದುಮಕ್ಕಳಿಗೆ… ವಸುಮತೀಶರ ಗರುಡಿಯಲಿ ಶಸ್ತ್ರಾಸ್ತ್ರದ ಅರ್ಚನೆಗೆ…

ಎಸೆವ ವಿಪ್ರರ ಫಾಲದಲಿ ರಂಜಿಸುವ ಗಂಧಾಕ್ಷತೆ ಅಹೆನು… .ಭಾವಿಸಲು ಲೋಕದೊಳು ಇಂತು ಆರು ಸರಿ…

ಧರಣಿಯ ಅಮರರು ಮಂತ್ರ ತಂತ್ರೋಚ್ಚರಣೆಯಲಿ ಹಸ್ತಾಂಬುಜದಿ ಮಿಗೆ ಹರಸಿ ಕೊಡಲು, ಅಕ್ಷತೆಯ ಮಂಡೆಯೊಳು ಆಂತ ಮಹಿಮರಿಗೆ ದುರಿತ ದುಃಖ ವಿನಾಶ ಮಂಗಳಕರವಹುದು…

ಸಂತತ ಸಿರಿಯ ಸಂಪತ್ತಾಯುವನು ತಾನು ಈವೆ… ಪರಿಮಳದ ಚಂದನದ ತರುವಿಗೆ ಸರಿಯೆ ಒಣಗಿದ ಕಾಷ್ಠ…

ಗೋವದು ಕರೆದ ಹಾಲಿಗೆ ಕುರಿಯ ಹಾಲಂತರವೆ… ಭಾವಿಸಲು ಪರಮ ಸಾಹಸಿ ವೀರ ಹನುಮಗೆ ಮರದ ಮೇಲಣ ಕಪಿಯು ತಾನಂತರವೆ…

ಫಡ, ನೀನು ಎನಗೆ ಸರಿಯೇ… ಭ್ರಷ್ಟ ತೊಲಗು… ಸುರನದಿಗೆ ತಾ ಸರಿಯೆ ಕಾಡೊಳು ಹರಿವ ಹಳ್ಳದ ನೀರು… ಗರುಡನ ಮರಿಗೆ ಹದ್ದಂತರವೆ… ಹಂಸಗೆ ಬಕನು ಹೋಲುವುದೆ…

ಸರಸ ಮರಿ ಕೋಗಿಲೆಗೆ ವಾಯಸನು ಅಣಕಿಸುವ ತೆರನಾಯ್ತು… .ಸಾಕಿನ್ನು ನರೆದಲೆಗ, ನೀನಾವ ಮಾನ್ಯನು ಕಡೆಗೆ ತೊಲಗು.

(ಎಂದ.)

***

ಪದ ವಿಂಗಡಣೆ ಮತ್ತು ಪದಗಳ ತಿರುಳು

(ಮುನಿಗಳು ನೀಡಿದ ರುಚಿಕರವಾದ ಉಣಿಸುತಿನಸುಗಳನ್ನು ಸೇವಿಸಿ ಆನಂದಗೊಂಡು ಮುನಿಗಳನ್ನು ಕೊಂಡಾಡುತ್ತಿದ್ದ ತನ್ನ ಪರಿವಾರದವರಲ್ಲಿ ಹನುಮಂತನನ್ನು ರಾಮನು ಮುಂದಕ್ಕೆ ಕರೆದು “ಇಂತಹ ರುಚಿಕರವಾದ ಉಣಿಸುತಿನಸುಗಳಿಗೆ ಬಳಸಿದ ದಾನ್ಯಗಳು ಹೇಗಿದ್ದವು. ಅವುಗಳ ಕಸುವು ಏನು ?” ಎಂದು ಕೇಳಿದಾಗ, ಹನುಮಂತನು “ದಾನ್ಯಗಳ ಕಸುವನ್ನು ತಿಳಿಯಲು ಅವನ್ನು ಇಲ್ಲಿಗೆ ತರಿಸಬೇಕೆಂದು” ವಿನಂತಿಸಿಕೊಳ್ಳುತ್ತಾನೆ. ಮುನಿಗಳು ಅಡುಗೆಯನ್ನು ಮಾಡಲು ಬಳಸಿದ್ದ ನವದಾನ್ಯಗಳೆಲ್ಲವನ್ನೂ ತರಿಸಿ , ರಾಮನಿಗೆ ಅವುಗಳ ಹೆಸರನ್ನು ಹೇಳಿದಾಗ, ರಾಮನು “ಆ ದಾನ್ಯಗಳಲ್ಲಿ ಜನರು ಹೆಚ್ಚು ಬಳಸುವ ಯಾವುದಾದರೂ ಒಂದು ದಾನ್ಯದ ಹೆಸರನ್ನು ಹೇಳಿ” ಎಂದಾಗ, ಗವುತಮ ಮುನಿಯು “ನರೆದಲೆಗನೇ ಬಹಳ ಬೇಕಾದವನು” ಎನ್ನಲು ಕುಪಿತಗೊಂಡ ವ್ರಿಹಿಯು ನರೆದಲೆಗನನ್ನು ನಿಂದಿಸುತ್ತಾ, ತನ್ನನ್ನು ತಾನು ಹೊಗಳಿಕೊಂಡು ತಾನು ಜನಸಮುದಾಯಕ್ಕೆ ಯಾವ ಯಾವ ರೀತಿಯಲ್ಲಿ ಬಹಳ ಬೇಕಾದವನು ಎಂಬುದನ್ನು ವಿವರಿಸುತ್ತಾನೆ.)

ನಂದನ = ಮಗ ; ರಘುನಂದನ = ರಾಮ; ಅನಿಲ = ವಾಯು ; ಸುತ = ಮಗ ; ಅನಿಲಸುತ = ವಾಯುದೇವನ ಮಗ ಹನುಮಂತ;

ಇವರ = ಈ ತಿಂಡಿತಿನಸುಗಳ; ಕರ = ಕಯ್ ; ಬಿನ್ನೈಸು = ಅರಿಕೆ ಮಾಡಿಕೊಳ್ಳುವುದು/ವಿನಂತಿಸಿಕೊಳ್ಳುವುದು;

ರಘುಪತಿ = ರಗುವಂಶದ ರಾಜ ರಾಮ ; ಚಿತ್ತೈಸು = ಕೇಳುವಂತಹವನಾಗು ; ಇನ = ಸೂರ‍್ಯ; ಕುಲ = ವಂಶ; ಅನ್ವಯ = ನಂಟು/ಹೊಂದಿಕೆ; ತಿಲಕ = ಉತ್ತಮನಾದ ವ್ಯಕ್ತಿ;

ಇನಕುಲಾನ್ವಯತಿಲಕ = ಸೂರ‍್ಯವಂಶದ ರಾಜರ ಸಾಲಿನಲ್ಲಿ ಅತ್ಯುತ್ತಮನಾದವನು; ಧಾನ್ಯ = ಆಹಾರವಾಗಿ ಉಣ್ಣುವ ತಿನ್ನುವ ದಿನಸಿ;

ತನು = ದೇಹ/ಶರೀರ; ಧಾನ್ಯದ ತನು = ಕಾಳುಗಳ ಆಕಾರ ಮತ್ತು ಕಸುವು; ಈಕ್ಷಿಸು = ನೋಡು/ಪರಿಶೀಲಿಸು;

ನೃಪಾಲ = ರಾಜ; ಸಲೆ = ಸರಿಯಾಗಿ/ಪೂರ‍್ಣವಾಗಿ/ನಿಜವಾಗಿ; ಹದನು = ರೀತಿ; ಮನನಲಿದು = ಮನಸ್ಸಿನಲ್ಲಿ ಆನಂದಿಸಿ; ವಿನಯ = ನಮ್ರತೆ; ತಾರ = ತೆಗೆದುಕೊಂಡು ಬನ್ನಿ; ತಳುವು = ತಡ/ವಿಳಂಬ;

ಮೆರೆ = ಕಂಗೊಳಿಸು; ನರೆದಲೆಗ = ರಾಗಿ; ನೆಲ್ಲು = ಬತ್ತು; ಹಾರಕ = ಒಂದು ಬಗೆಯ ದವಸ; ಬರಗು = ಒಂದು ಬಗೆಯ ದವಸ; ಜೋಳ = ಒಂದು ಬಗೆಯ ದವಸ; ಕಂಬು = ಒಂದು ಬಗೆಯ ದವಸ; ಸಾಮೆ = ಒಂದು ಬಗೆಯ ದವಸ; ಉರು = ಉತ್ತಮವಾದ/ಚೆನ್ನಾಗಿರುವ; ತರ = ಬಗೆ/ರೀತಿ; ನವಣೆ = ಒಂದು ಬಗೆಯ ದವಸ; ನವ = ಒಂಬತ್ತು; ಧಾನ್ಯ = ಆಹಾರಕ್ಕಾಗಿ ಬಳಸುವ ದವಸ/ಕಾಳು;

ನವಧಾನ್ಯ = ಗೋದಿ, ಬತ್ತ, ಉದ್ದು, ಹೆಸರು, ಕಡಲೆ, ತೊಗರಿ, ಹುರುಳಿ, ಅವರೆ, ಎಳ್ಳು ಎಂಬ ಒಂಬತ್ತು ಬಗೆಯ ದವಸಗಳು;

ಅರಸು = ಹುಡುಕು; ಪರಮ = ಬಹಳ ಚೆನ್ನಾಗಿರುವ; ಸಾರ = ಸತ್ವಯುತವಾದ ತಿರುಳು; ಪರಮಸಾರ = ಬಹಳ ಸತ್ವವುಳ್ಳ; ಹೃದಯ = ಎದೆ/ತಿರುಳು; ಆರು = ಯಾರು; ಅತಿಶಯ = ಬಹಳವಾಗಿ/ದೊಡ್ಡದಾಗಿ; ಪತಿಕರಿಸು = ಹೊಗಳು/ಮೆಚ್ಚು/ಕೊಂಡಾಡು; ಮತ+ಏಕೆ; ಮತ = ಅಬಿಪ್ರಾಯ/ಅನಿಸಿಕೆ; ಏಕೆ = ಏತಕ್ಕೆ; ಪೇಳಿ = ಹೇಳಿ; ದಾಶರಥಿ = ರಾಮ;

ಚಿತ್ತೈಸು = ಕೇಳುವಂತಹವನಾಗು; ದೇಶಕೆ+ಅತಿಶಯ; ವಾಸಿ+ಉಳ್ಳವನ್+ಈತ; ವಾಸಿ = ಮೇಲು/ಉತ್ತಮ/ಹೆಚ್ಚಿನ ಗುಣಮಟ್ಟ/ಸತ್ವ; ಉಳ್ಳವನ್ = ಹೊಂದಿರುವವನು/ಪಡೆದವನು; ಈತ = ಇವನು; ಮಿಕ್ಕು = ಉಳಿದ/ಇತರ; ಧಾನ್ಯ+ಏಕೆ+ಎನಲು;

ಲೇಸನು+ಆಡಿದ; ಲೇಸು = ಒಳ್ಳೆಯದು/ಹಿತವಾದುದು; ಮುನಿಪ = ರಿಸಿ; ದೋಷ = ತಪ್ಪು/ಕುಂದು/ಕೆಟ್ಟಗುಣ; ರಹಿತ = ಇಲ್ಲದ; ದೋಷರಹಿತನು = ಕೆಟ್ಟ ನಡೆನುಡಿಗಳಿಲ್ಲದವನು; ಈಸು = ಇಶ್ಟರಮಟ್ಟಿಗೆ/ಈ ಪ್ರಮಾಣದಲ್ಲಿ; ಪರಿ = ರೀತಿ; ಪರಿಯಲಿ = ರೀತಿಯಲ್ಲಿ; ಪಕ್ಷಪಾತ = ತಾರತಮ್ಯ/ಒಬ್ಬರಲ್ಲಿ ಒಲವನ್ನು ತೋರಿಸುತ್ತಾ, ಇತರರನ್ನು ಕಡೆಗಣಿಸುವುದು; ವ್ರಿಹಿಗ = ಬತ್ತ; ಸಾರ = ಸತ್ವ; ಬಲ್ಲಿರಿ = ತಿಳಿದಿರುವಿರಿ; ಅರಿ = ತಿಳಿ/ಗ್ರಹಿಸು; ಅರಿಯಿರೆ = ತಿಳಿದಿಲ್ಲವೇ; ಉಪೇಕ್ಷೆ+ಉಂಟೇ; ಉಪೇಕ್ಷೆ = ಕಡೆಗಣಿಸುವಿಕೆ; ನೆಲ್ಲು = ಬತ್ತ; ನಾನು+ಇರೆ; ಮೊದಲಾದ+ಎಲ್ಲ; ಧಾನ್ಯಗಳು+ಇರಲು; ಬಲ್ಲಿದ = ಕಸುವುಳ್ಳವನು; ಇದು+ಆವ; ಆವ = ಯಾವ; ಮತ = ಅಬಿಪ್ರಾಯ;

ಏನ್+ಎಲವೊ; ಎನಗೆ+ಇಲ್ಲಿ; ಸಮಾನ = ಸಾಟಿ/ಎಣೆ; ಹೆಚ್ಚು = ಅತಿಶಯ; ಕುಂದು = ತಪ್ಪು/ಕೊರತೆ; ಹೆಚ್ಚುಕುಂದುಗಳು = ಒಳ್ಳೆಯದು ಮತ್ತು ಕೆಟ್ಟದ್ದು; ದಾನವ+ಅಂತಕ; ಅಂತಕ = ಯಮ; ದಾನವಾಂತಕ = ರಕ್ಕಸರನ್ನು ಕೊಂದವನು/ರಾಮ; ಬಲ್ಲನ್ = ತಿಳಿದಿದ್ದಾನೆ; ಜಾನಕಿಪತಿ = ಜಾನಕಿಯ ಗಂಡ/ರಾಮ; ಸನಿಹ = ಹತ್ತಿರ/ಸಮೀಪ; ಕುಲಹೀನ = ಕೀಳುಕುಲದವನು;

ಪ್ರತಿಷ್ಠ = ಅಹಂಕಾರಿ/ಗರ‍್ವಿ; ಸುಡು = ಬೆಂಕಿ ಹಾಕು; ಮತಿ = ಬುದ್ದಿ/ತಿಳುವಳಿಕೆ; ಮತಿಹೀನ = ತಿಳುವಳಿಕೆಯಿಲ್ಲದವನು; ಖತಿ = ಕೋಪ/ಸಿಟ್ಟು; ಬೈದು = ತೆಗಳಿ/ನಿಂದಿಸಿ; ಭಂಗಿಸು = ಅಪಮಾನಪಡಿಸು; ಲೋಕ = ಪ್ರಪಂಚ; ಅಧಿಕ = ಹೆಚ್ಚು/ಅತಿಶಯ; ಭೋಜನ = ಊಟ/ಆಹಾರ; ಇದು+ಎಂದು; ಆಕೆವಾಳ = ವೀರ/ಪರಾಕ್ರಮಿ; ಬುಧ = ಪಂಡಿತ; ಜರೆ = ನಿಂದಿಸು; ನಿರಾಕರಿಸು = ಒಪ್ಪಿಕೊಳ್ಳದೆ; ಬಿಡು = ತೊರೆಯಲು; ಅಂತು = ಹಾಗೆ; ನೀ = ನೀನು;

ಶೂದ್ರ+ಅನ್ನ+ಆದೆಯಲ; ಶೂದ್ರ = ವರ‍್ಣವ್ಯವಸ್ತೆಯ ಸಮಾಜದಲ್ಲಿ ಕಟ್ಟಕಡೆಯ ಹಂತದಲ್ಲಿರುವವನು. ಇಂಡಿಯಾ ದೇಶದ ಪ್ರಾಚೀನ ಕಾಲದ ಸಾಮಾಜಿಕ ರಚನೆಯಲ್ಲಿ “ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ” ಎಂಬ ನಾಲ್ಕು ವರ‍್ಣಗಳಿದ್ದವು. ಮೇಲು ಕೀಳಿನ ಮೆಟ್ಟಲುಗಳಿಂದ ಕೂಡಿದ್ದ ಈ ನಾಲ್ಕು ವರ‍್ಣಗಳಲ್ಲಿ ಶೂದ್ರನು ಅತ್ಯಂತ ಕೆಳಹಂತದಲ್ಲಿದ್ದನು. ಶೂದ್ರನಿಗೆ ವಿದ್ಯೆಯನ್ನು ಕಲಿಯಲು, ಸಂಪತ್ತನ್ನು ಪಡೆಯಲು ಮತ್ತು ಆಡಳಿತದ ಗದ್ದುಗೆಯನ್ನು ಏರಲು ಅವಕಾಶವಿರಲಿಲ್ಲ. ಆದ್ದರಿಂದ ಶೂದ್ರರಲ್ಲಿ ಬಹುತೇಕ ಮಂದಿ ಹಸಿವು ಮತ್ತು ಬಡತನದಿಂದ ನರಳುತ್ತಿದ್ದರು; ಅನ್ನ = ಆಹಾರ/ಉಣಿಸು/ಊಟ; ಆದೆಯಲ = ಆದೆಯಲ್ಲವೇ; ಶೂದ್ರಾನ್ನ = ಶೂದ್ರರು ಉಣ್ಣುವ ಆಹಾರ;

ಲೋಕದಲಿ ಅಧಿಕ ಭೋಜನವು ಇದೆಂದು ಆಕೆವಾಳರು ಬುಧರು ಜರೆದು ನಿರಾಕರಿಸಿ ಬಿಡಲು, ಅಂತು ನೀ ಶೂದ್ರಾನ್ನವಾದೆ = ಜಗತ್ತಿನಲ್ಲಿ ದುಡಿಯುವ ವರ‍್ಗದ ಬಡಜನರಾದ ಶೂದ್ರರು ಆಹಾರವಾಗಿ ನಿನ್ನನ್ನೇ ಹೆಚ್ಚಾಗಿ ಬಳಸುತ್ತಿದ್ದುದನ್ನು ನೋಡಿದ ಪಂಡಿತೋತ್ತಮರು ನಿನ್ನನ್ನು ಕಡೆಗಣಿಸಿದ ಕಾರಣದಿಂದ ನೀನು ಶೂದ್ರಾನ್ನವಾಗಿಯೇ ಉಳಿದಿದ್ದೀಯೆ; ಏಕೆಂದರೆ ಬಡವರು ಉಣ್ಣುವ ಆಹಾರ, ಬಡವರ ಉಡುಗೆತೊಡುಗೆ, ಬಡವರು ಆಡುವ ಮಾತಿನ ಉಚ್ಚಾರಣೆಯ ರೀತಿ ಮತ್ತು ಬಳಸುವ ನುಡಿಗಳನ್ನು ಸಿರಿವಂತರು , ಪಂಡಿತರು ಮತ್ತು ಮೇಲು ಜಾತಿಯವರು ಕೀಳಾಗಿ ಕಾಣುತ್ತಾರೆ;

ಬಡವರು ಹೆಚ್ಚಾಗಿ ರಾಗಿಯನ್ನೇಕೆ ಬಳಸುತ್ತಿದ್ದರು ಎಂಬುದನ್ನು ತಿಳಿಯಬೇಕಾದರೆ ಕನಕದಾಸರ ಕಾಲದಲ್ಲಿ ಅಂದರೆ ಹದಿನಾರನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಬೆಳೆಯುತ್ತಿದ್ದ ಬೆಳೆಗಳಲ್ಲಿ ರಾಗಿ ಮತ್ತು ಬತ್ತದ ಬೆಳೆಗಳ ಪ್ರಮಾಣವನ್ನು ಅರಿಯಬೇಕು. ಅಂದಿನ ಕಾಲದಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಏಕೆಂದರೆ ರಾಗಿಯು ಮಳೆಯನ್ನು ಅವಲಂಬಿಸಿರುವ ಬೆಳೆ. ಬತ್ತವನ್ನು ಬೆಳೆಯಬೇಕಾದರೆ ಅತಿ ಹೆಚ್ಚಾಗಿ ನೀರಿನ ಅನುಕೂಲವಿರಬೇಕು. ಆಗಿನ ಕಾಲದಲ್ಲಿ ದೊಡ್ಡ ದೊಡ್ಡ ಅಣೆಕಟ್ಟುಗಳು ಇರಲಿಲ್ಲವಾದ್ದರಿಂದ ಬತ್ತದ ಬೆಳೆಯ ಪ್ರಮಾಣ ರಾಗಿ ಬೆಳೆಯ ಪ್ರಮಾಣಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿತ್ತು. ಮಾರುಕಟ್ಟೆಯಲ್ಲಿ ಬತ್ತದ ಬೆಲೆಯು ರಾಗಿಗಿಂತ ಹೆಚ್ಚಾಗಿತ್ತು. ಆದ್ದರಿಂದ ಬತ್ತದಿಂದ ದೊರೆಯುವ ಅಕ್ಕಿಯು ಸಿರಿವಂತರಾದ ಮೇಲು ಜಾತಿ ಮತ್ತು ಮೇಲುವರ‍್ಗದವರಿಗೆ ದಕ್ಕುತ್ತಿತ್ತೇ ಹೊರತು ಬಡವರ ಪಾಲಿಗೆ ದೊರೆಯುತ್ತಿರಲಿಲ್ಲ. ಇಪ್ಪತ್ತನೆಯ ಶತಮಾನದ ಮದ್ಯಬಾಗದವರೆಗೂ ನಮ್ಮ ಹಳ್ಳಿಗಳಲ್ಲಿ ಬಡವರು ವರುಶಕ್ಕೆ ನಾಲ್ಕಾರು ಸಲ ಅನ್ನವನ್ನು ಉಣ್ಣುತ್ತಿದ್ದರೇ ಹೊರತು, ಉಳಿದೆಲ್ಲಾ ದಿನಗಳಂದು ಅವರಿಗೆ ರಾಗಿಯೇ ಆಹಾರವಾಗಿತ್ತು. ರಾಗಿಯು ಬಡವರ ಉಣಿಸಾಗಿದ್ದರೆ, ಅನ್ನವು ಸಿರಿವಂತರ ಉಣಿಸಾಗಿತ್ತು;

ನಾಕ = ಸ್ವರ‍್ಗ; ನಿಳೆಯ = ಮನೆ; ನಾಕನಿಳೆಯರು = ಸ್ವರ‍್ಗದಲ್ಲಿ ನೆಲೆಸಿರುವ ದೇವತೆಗಳು; ಸಾಕ್ಷಿ = ಪುರಾವೆ/ರುಜುವಾತು; ವಿವೇಕ = ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ಒರೆಹಚ್ಚಿ ನೋಡಿ, ಕೆಟ್ಟದನ್ನು ಕಯ್ ಬಿಟ್ಟು ಒಳ್ಳೆಯದನ್ನು ಅವಲಂಬಿಸಿ ನಡೆಯುವ ಎಚ್ಚರದ ಅರಿವು; ಮೆಚ್ಚು = ಹೊಗಳು/ಕೊಂಡಾಡು/ಒಪ್ಪು; ಬಾಹಿರ = ಹೀನ ವ್ಯಕ್ತಿ; ನೀನು+ಆವ; ಆವ = ಯಾವ; ಮಾನ್ಯ = ಮನ್ನಣೆಯನ್ನು ಪಡೆದ ವ್ಯಕ್ತಿ; ಕಡೆ = ಕೊನೆ/ಅಂತ್ಯ; ತೊಲಗು = ಹೊರಟುಹೋಗು/ಬಿಟ್ಟುಹೋಗು; ಕ್ಷಿತಿ = ಬೂಮಿ; ಅಮರ = ದೇವತೆ; ಕ್ಷಿತಿಯ ಅಮರರು = ಬ್ರಾಹ್ಮಣರನ್ನು ಈ ಬೂಮಿಯ ಮೇಲೆ ಇರುವ ದೇವತೆಗಳೆಂದು ಕರೆಯಲಾಗುತ್ತಿತ್ತು;
ಉಪನಯನ = ಮೇಲು ಜಾತಿಯ ಕೆಲವು ಕುಟುಂಬಗಳಲ್ಲಿ ಗಂಡು ಮಕ್ಕಳಿಗೆ 5/7/11 ನೆಯ ವಯಸ್ಸಿನಲ್ಲಿ ಮಾಡುವ ಒಂದು ಆಚರಣೆ. ಉಪನಯನದ ನಂತರ ವ್ಯಕ್ತಿಯು ಪ್ರತಿ ನಿತ್ಯವೂ ತನ್ನ ಜಾತಿಯ ಆಚಾರ ವಿಚಾರಗಳಿಗೆ ಒಳಪಟ್ಟು ಸಂಪ್ರದಾಯದ ಆಚರಣೆಗಳನ್ನು ಕ್ರಮಬದ್ದವಾಗಿ ಮಾಡಬೇಕು;

ವ್ರತ = ದೇವರನ್ನು ಪೂಜಿಸುವಾಗ ಕೆಲವು ಬಗೆಯ ನಿಯಮಗಳನ್ನು ಚಾಚುತಪ್ಪದೆ ಮಾಡುವುದು/ನೋಂಪಿ; ಸುವ್ರತ = ಒಳ್ಳೆಯ ವ್ರತ; ಸುಭೋಜನ = ರುಚಿಕರವಾದ ಊಟ; ಪರಮ = ಅತ್ಯುತ್ತಮ; ಮಂತ್ರಾಕ್ಷತೆ = ದೇವರ ಪೂಜೆ, ಮದುವೆ ಮತ್ತು ಇತರ ಮಂಗಳಕಾರ‍್ಯಗಳಲ್ಲಿ ದೇವರ ವಿಗ್ರಹಕ್ಕೆ ಅರ‍್ಪಿಸಲು, ಮದುಮಕ್ಕಳ ತಲೆ ಮೇಲೆ ಎರಚಲು, ಆಶೀರ‍್ವಾದ ರೂಪದಲ್ಲಿ ಹರಸುವಾಗ ದೇವರ ಹೆಸರನ್ನು ಹೇಳುತ್ತ ಹಾಕುವ ಅರಿಸಿನ ಬೆರೆತ ಅಕ್ಕಿಯ ಕಾಳುಗಳು; ಶುಭ = ಒಳ್ಳೆಯದು/ಮಂಗಳಕರವಾದುದು; ಶೋಭನ = ಮದುವೆಯಾದ ಗಂಡು ಹೆಣ್ಣು ಕಾಮದ ನಂಟನ್ನು ಪಡೆಯುವ ಮುನ್ನ ಮಾಡುವ ಆಚರಣೆ; ಆರತಿ = ದೇವರ ವಿಗ್ರಹದ ಮುಂದೆ ದೀಪವನ್ನು ಎತ್ತಿಹಿಡಿದು ಬೆಳಗುವುದು;

ಕ್ರತು+ಗಳ್+ಎಡೆ+ಒಳಗೆ; ಕ್ರತು = ಯಾಗ; ಎಡೆ = ಜಾಗ; ರಂಜಿಸು = ಕಂಗೊಳಿಸು; ನೈವೇದ್ಯ = ದೇವರ ಮುಂದೆ ಇಡುವ ಉಣಿಸು ತಿನಸು; ತಾನ್+ಅಹೆನ್; ತಾನ್ = ನಾನು; ಅಹೆನ್ = ಆಗಿದ್ದೇನೆ; ಜನಪರಿಗೆ = ರಾಜರಿಗೆ; ಶಿಶುಗಳಿಗೆ = ಮಕ್ಕಳಿಗೆ; ಬಾಂಧವ = ನೆಂಟ; ಬ್ರಹ್ಮ = ಜಗತ್ತನ್ನು ರಚನೆಮಾಡಿದ ದೇವರು ಬ್ರಹ್ಮನೆಂಬ ಕಲ್ಪನೆಯು ಜನಮನದಲ್ಲಿದೆ; ಸಮಾರಾಧನೆ = ದೇವರ ಪೂಜೆಯ ಸಮಯದಲ್ಲಿ ಮಾಡುವ ಅನ್ನ ದಾನ; ವಿದ್ಯಾ+ಆರಂಭ; ವಿದ್ಯಾರಂಭ ಕಾಲಕೆ = ಮಗುವಿಗೆ ಮೊದಲು ಅಕ್ಕರವನ್ನು ಕಲಿಸುವಾಗ; ಸಕಲ = ಎಲ್ಲ; ಭೂಸುರ = ಬ್ರಾಹ್ಮಣ; ಹರಿ = ವಿಶ್ಣು; ಹರಿದಿವಸ = ವಿಶ್ಣುವಿನ ಪೂಜೆಯ ದಿನಗಳಂದು; ಔಪಾಸನೆ = ಪೂಜೆ; ಯೋಗ್ಯನು+ಅಹುದು; ಯೋಗ್ಯ = ಉತ್ತಮನು/ತಕ್ಕವನು; ಅಯೋಗ್ಯ = ಕೆಟ್ಟವನು/ಯೋಗ್ಯತೆಯಿಲ್ಲದವನು;

ಭ್ರಷ್ಟ = ಒಳ್ಳೆಯತನವಿಲ್ಲದನು; ತೊಲಗು = ದೂರ ಸರಿ/ಇಲ್ಲಿಂದ ಹೊರಡು; ಪುಣ್ಯ+ಅರ್ಚನೆಗೆ; ಪುಣ್ಯ = ಪವಿತ್ರವಾದುದು/ಒಳಿತನ್ನುಂಟುಮಾಡುವುದು; ಅರ್ಚನೆ = ಪೂಜೆ; ಹೊಸ ಮನೆಯ ಪುಣ್ಯಾರ್ಚನೆಗೆ = ಹೊಸದಾಗಿ ಕಟ್ಟಿಸಿರುವ ಮನೆಯನ್ನು ಪ್ರವೇಶಿಸುವ ಸಮಯದಲ್ಲಿ ಮಾಡುವ ಪೂಜೆ; ಮಿಗೆ = ಹೆಚ್ಚಾಗಿ/ಅತಿಶಯವಾಗಿ; ಎಸೆ = ಎರಚುವ; ಮದುಮಕ್ಕಳಿಗೆ = ಹಸೆಮಣೆ ಮೇಲೆ ನಿಂತಿರುವ ಗಂಡುಹೆಣ್ಣಿಗೆ; ಸೇಸೆ = ಮಂಗಳವಾಗಲಿ ಎಂದು ಹರಸುವಾಗ ದೇವರ ವಿಗ್ರಹದ ಮೇಲೆ ಇಲ್ಲವೇ ಜನರ ತಲೆಯ ಮೇಲೆ ಹಾಕುವ ಅರಿಸಿನ ಸವರಿದ ಅಕ್ಕಿಯ ಕಾಳು; ವಸುಮತಿ = ಬೂಮಿ;

ಈಶ = ಒಡೆಯ; ವಸುಮತೀಶ = ರಾಜ/ದೊರೆ; ಗರುಡಿ = ವ್ಯಾಯಾಮ ಶಾಲೆ; ಶಸ್ತ್ರ+ಅಸ್ತ್ರದ; ಶಸ್ತ್ರ = ಕತ್ತಿ,ಗದೆ,ಈಟಿ ಮುಂತಾದ ಹತಾರಗಳು; ಅಸ್ತ್ರ = ಬಾಣ; ಎಸೆ = ಕಂಗೊಳಿಸು; ವಿಪ್ರ = ಬ್ರಾಹ್ಮಣ; ಫಾಲ = ಹಣೆ/ನೊಸಲು; ಗಂಧಾಕ್ಷತೆ = ತೇಯ್ದ ಗಂದದ ಹಸಿಯೊಡನೆ ಬೆರೆತಿರುವ ಅಕ್ಕಿಕಾಳುಗಳು; ಅಹೆನು = ಆಗಿರುವೆನು; ಭಾವಿಸು = ತಿಳಿದುನೋಡು/ವಿಚಾರ ಮಾಡಿ ನೋಡು;

ಇಂತು = ಈ ರೀತಿ; ಆರು = ಯಾರು; ಸರಿ = ಸಮಾನ/ಸಾಟಿ; ಧರಣಿ = ಬೂಮಿ; ಮಂತ್ರ = ದೇವರ ಮಹಿಮೆ ಮತ್ತು ಕರುಣೆಯ ಗುಣವನ್ನು ಕೊಂಡಾಡುವ ನುಡಿಗಳು; ತಂತ್ರ+ಉಚ್ಚರಣೆಯಲಿ; ತಂತ್ರ = ಪೂಜೆಯ ಸಮಯದಲ್ಲಿ ಮಾಡುವ ಬಗೆಬಗೆಯ ಕ್ರಿಯೆಗಳು; ಉಚ್ಚರಣೆ = ಹೇಳುವುದು/ನುಡಿಯುವುದು;

ಹಸ್ತ+ಅಂಬುಜದಿ; ಹಸ್ತ = ಕಯ್; ಅಂಬುಜ = ತಾವರೆ; ಮಿಗೆ = ಅತಿಶಯವಾಗಿ; ಹರಸು = ಒಳಿತಾಗಲೆಂದು ಹೇಳು; ಮಂಡೆ = ತಲೆ; ಆಂತ = ಹೊಂದಿದ/ಪಡೆದ; ಮಹಿಮ = ಹಿರಿಮೆಯುಳ್ಳವನು/ದೊಡ್ಡವನು; ದುರಿತ = ಪಾಪ/ಕೇಡು; ದುಃಖ = ಸಂಕಟ; ವಿನಾಶ = ಎಲ್ಲವೂ ಹಾಳಾಗುವುದು; ಮಂಗಳಕರ+ಅಹುದು; ಸಂತತ = ಸದಾಕಾಲ; ಸಿರಿ = ಏಳಿಗೆ; ಸಂಪತ್ತು+ಆಯುವನು;

ಆಯು = ಆಯುಸ್ಸು; ಈವೆ = ಕೊಡುತ್ತೇನೆ; ಪರಿಮಳ = ಕಂಪು/ಸುವಾಸನೆ; ಚಂದನ = ಶ್ರೀಗಂದ; ತರು = ಮರ; ಕಾಷ್ಠ = ಕಟ್ಟಿಗೆ/ಕೊರಡು; ಪರಿಮಳದ ಚಂದನದ ತರುವಿಗೆ ಸರಿಯೆ ಒಣಗಿದ ಕಾಷ್ಠ = ಸುವಾಸನೆಯಿಂದ ಕೂಡಿರುವ ಚಂದನದ ಮರಕ್ಕೆ ಒಣಗಿದ ಮರದ ತುಂಡು ಸಮಾನವೇ.;

ಗೋವು+ಅದು; ಹಾಲು+ಅಂತರವೆ; ಅಂತರ = ಸಾಟಿ/ಸಮಾನ/ಸಾಟಿ; ಗೋವದು ಕರೆದ ಹಾಲಿಗೆ ಕುರಿಯ ಹಾಲಂತರವೆ = ಗೋವಿನ ಹಾಲಿಗೆ ಕುರಿಯ ಹಾಲು ಸಮಾನವೇ; ಸಾಹಸ = ಪರಾಕ್ರಮ; ತಾನ್+ಅಂತರವೇ; ಪರಮ ಸಾಹಸಿ ವೀರ ಹನುಮಗೆ ಮರದ ಮೇಲಣ ಕಪಿಯು ತಾನಂತರವೆ = ಮಹಾವೀರನಾದ ಹನುಮಂತನಿಗೆ ಮರದ ಮೇಲಣ ಕಪಿಯು ಸಮಾನವೇ; ಫಡ = ತಿರಸ್ಕಾರ ಹಾಗೂ ಕೋಪವನ್ನು ಸೂಚಿಸುವಾಗ ಆಡುವ ಪದ;

ಸುರನದಿ = ಗಂಗಾನದಿ; ಹಳ್ಳ = ಚಿಕ್ಕ ಪ್ರಮಾಣದಲ್ಲಿ ನೀರು ಹರಿಯುವುದು/ತೊರೆ; ಸುರನದಿಗೆ ತಾ ಸರಿಯೆ ಕಾಡೊಳು ಹರಿವ ಹಳ್ಳದ ನೀರು = ಗಂಗಾನದಿಯ ನೀರಿಗೆ ಕಾಡಿನಲ್ಲಿ ಹರಿಯುವ ತೊರೆಯ ನೀರು ಸಮನವೇ: ಗರುಡ = ಒಂದು ಬಗೆಯ ಹಕ್ಕಿ. ಇದನ್ನು ದೇವರಾದ ವಿಶ್ಣುವಿನ ವಾಹನವೆಂಬ ಕಲ್ಪನೆಯು ಜನಮನದಲ್ಲಿದೆ. ಆದ್ದರಿಂದ ಈ ಹಕ್ಕಿಯನ್ನು ನೋಡಿದರೆ ಒಳಿತಾಗುವುದು ಎಂಬ ನಂಬಿಕೆಯು ಜನಮನದಲ್ಲಿದೆ;

ಹದ್ದು = ಒಂದು ಬಗೆಯ ಹಕ್ಕಿ. ಹದ್ದು+ಅಂತರವೆ; ಗರುಡನ ಮರಿಗೆ ಹದ್ದಂತರವೆ = ಗರುಡನ ಮರಿಗೆ ಹದ್ದು ಸಮಾನವೇ; ಹಂಸ = ನೀರಿನಲ್ಲಿ ಹೆಚ್ಚಾಗಿ ಜೀವಿಸುವ ಒಂದು ಹಕ್ಕಿ; ಬಕ = ಕೊಕ್ಕರೆ ವರ‍್ಗಕ್ಕೆ ಸೇರಿದ ನೀರ ಹಕ್ಕಿ; ಹೋಲು = ಅದೇ ರೀತಿ ಕಾಣುವುದು; ಹಂಸಗೆ ಬಕನು ಹೋಲುವುದೆ = ಹಂಸ ಹಕ್ಕಿಯ ಜೊತೆ ಬಕನನ್ನು ಹೋಲಿಸಬಹುದೇ; ಸರಸ = ಚೆಲುವು/ಸೊಗಸು; ವಾಯಸ = ಕಾಗೆ; ಅಣಕ = ಅಪಹಾಸ್ಯ; ತೆರನ್+ಆಯ್ತು; ತೆರ = ರೀತಿ; ಸರಸ ಮರಿ ಕೋಗಿಲೆಗೆ ವಾಯಸನು ಅಣಕಿಸುವ ತೆರನಾಯ್ತು = ಕೋಗಿಲೆಯ ಚೆಲುವಾದ ಮರಿಯನ್ನು ಕಪ್ಪನೆಯ ಬಣ್ಣದ ಕಾಗೆಯು ಅಣಕಿಸುವ ರೀತಿಯಾಯಿತು; ಪರಿಮಳದ ಚಂದನದ ತರು/ಒಣಗಿದ ಮರದ ತುಂಡು; ಹಸುವಿನ ಹಾಲು/ಕುರಿಯ ಹಾಲು;

ವೀರ ಹನುಮ/ಮರದ ಮೇಲಣ ಕೋತಿ; ಗಂಗಾನದಿಯ ನೀರು /ಕಾಡಿನ ಹಳ್ಳದ ನೀರು; ಗರುಡ/ಹದ್ದು; ಹಂಸ/ಬಕ; ಕೋಗಿಲೆಯ ಮರಿ/ಕಾಗೆ — ಈ ಎರಡು ಬಗೆಯ ವಸ್ತುಗಳನ್ನು ಮತ್ತು ಜೀವಿಗಳನ್ನು ಪರಸ್ಪರ ಹೋಲಿಸುತ್ತಾ, ಒಂದರ ರೂಪ ಮತ್ತು ಗುಣವನ್ನು ಹಾಡಿಹೊಗಳುತ್ತಾ, ಮತ್ತೊಂದರ ರೂಪ ಮತ್ತು ಗುಣವನ್ನು ಕಡೆಗಣಿಸುವ ನುಡಿಗಳು ನಮ್ಮ ಸಮಾಜದ ಮೇಲು ಕೀಳಿನ ಮೆಟ್ಟಲುಗಳಿಂದ ಕೂಡಿರುವ ಜಾತಿ ವ್ಯವಸ್ತೆಯನ್ನು ಮತ್ತು ಅದರಿಂದ ರೂಪುಗೊಂಡಿರುವ ತಾರತಮ್ಯದ ನಿಲುವನ್ನು ಸೂಚಿಸುವ ರೂಪಕಗಳಾಗಿ ಚಿತ್ರಣಗೊಂಡಿವೆ; ಮೇಲು ಕೀಳಿನ ಜಾತಿ ವ್ಯವಸ್ತೆಯಿಂದ ಕೂಡಿರುವ ಸಮಾಜದಲ್ಲಿ ಹುಟ್ಟಿ ಬೆಳೆಯುವ ಜನಸಮುದಾಯದ ಮನದಲ್ಲಿ ತಮ್ಮ ಕಣ್ಣ ಮುಂದಿನ ವಸ್ತು ಮತ್ತು ಪ್ರಾಣಿಪಕ್ಶಿಗಳ ಬಗ್ಗೆಯೂ ಜನರ ಜಾತಿಗಳ ಬಗ್ಗೆ ಇರುವಂತೆಯೇ ಮೇಲು ಕೀಳಿನ ಒಳಮಿಡಿತಗಳು ನೆಲೆಗೊಂಡಿವೆ. ಕಣ್ಣ ಮುಂದಿನ ನಿಸರ‍್ಗದಲ್ಲಿರುವ ಪ್ರತಿಯೊಂದು ವಸ್ತು ಮತ್ತು ಜೀವಿಗಳು ಒಂದಕ್ಕಿಂತ ಒಂದು ಬೇರೆಯಾದ ರೂಪ ಮತ್ತು ಗುಣವನ್ನು ಹೊಂದಿವೆ, ಪ್ರತಿಯೊಂದಕ್ಕೂ ತನ್ನದೇ ಒಂದು ಅಸ್ತಿತ್ವವಿದೆ ಎಂಬ ಅರಿವನ್ನು ಪಡೆಯದ ರೀತಿಯಲ್ಲಿ ಮೇಲು ಕೀಳಿನ ನಿಲುವು ಜನರ ಮಯ್ ಮನದಲ್ಲಿ ನೆಲೆಗೊಂಡಿದೆ. ಜಾತಿ ವ್ಯವಸ್ತೆಯನ್ನು ರೂಪಿಸಿ ವಿದ್ಯೆ, ಸಂಪತ್ತು ಮತ್ತು ಆಡಳಿತದ ಗದ್ದುಗೆಯನ್ನು ಹಿಡಿದಿರುವ ಮೇಲು ಜಾತಿ ಮತ್ತು ಮೇಲು ವರ‍್ಗದ ಜನಸಮುದಾಯವು ದುಡಿಯುವ ವರ‍್ಗಕ್ಕೆ ಸೇರಿದ ಕೆಳಜಾತಿ ಮತ್ತು ಕೆಳವರ‍್ಗದ ಜನಸಮುದಾಯದ ಬಗ್ಗೆ ಇದೇ ರೀತಿಯಾದ ತಿರಸ್ಕಾರವನ್ನು ಹೊಂದಿದೆ ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ;

ನೀನ್+ಆವ; ಮಾನ್ಯ = ಮನ್ನಣೆಯನ್ನು ಪಡೆದ ವ್ಯಕ್ತಿ; ನೀನಾವ ಮಾನ್ಯನು = ನಿನಗೆ ಎಂತಹ ಮನ್ನಣೆಯಿದೆ. ಅಂದರೆ ಯಾವುದೇ ಮನ್ನಣೆಯಿಲ್ಲದ ಅತಿ ಸಾಮಾನ್ಯನು ನೀನು;

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: