ಕವಿತೆ: ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ

– .

ಪ್ರಾಂತ್ಯ, ಬಾಶೆ, ವೇಶಗಳು ಹಲವಿದ್ದರೇನು
ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ
ಜಾತಿ ಮತ ದರ‍್ಮಗಳು ಹಲವಿದ್ದರೇನು
ಜಾತ್ಯತೀತ ಮನೋಬಾವದೊಲವೊಂದೇ

ಬಾರತೀಯರ ಒಗ್ಗಟ್ಟಿನ ಜೇನುಗೂಡಿಗೆ
ಪರಕೀಯರ ವಕ್ರದ್ರುಶ್ಟಿಯ ಕಲ್ಲು ಬಿದ್ದಿತು
ಬ್ರಿಟೀಶರ ಒಡೆದಾಳುವ ಕುತಂತ್ರ ನೀತಿಗೆ
ಬಾರತೀಯರ ಐಕ್ಯತೆಯು ಚೂರಾಯಿತು

ಪ್ಲಾಸಿ ಕದನದ ತರುವಾಯ ಬಾರತ ದೇಶ
ಪರಂಗಿಗಳ ದಾಸ್ಯ ಸಂಕೋಲೆಗೆ ಸಿಲುಕಿತು
ಚೆನ್ನಮ್ಮ, ಲಕ್ಶ್ಮೀ, ತಾತ್ಯಾ, ಪಾಂಡೆಯಂತಹವರ
ಹೋರಾಟ ಸ್ವಾತಂತ್ರ‍್ಯ ಕಹಳೆ ಮೊಳಗಿಸಿತು

ರಾನಡೆ, ನವರೋಜಿ, ಬ್ಯಾನರ‍್ಜಿ, ಗೋಕಲೆಯರ
ಪ್ರಾರ‍್ತನೆ, ಬಿನ್ನಹ, ಪ್ರತಿಬಟನೆ ನೀತಿ ತಂತ್ರ
ಲಾಲ್, ಪಾಲ್, ಬಾಲರ ಸ್ವರಾಜ್ಯ ನಮ್ಮ ಆಜನ್ಮ
ಸಿದ್ದ ಹಕ್ಕೆಂಬ ದೇಶಾಬಿಮಾನದ ತಾರಕ ಮಂತ್ರ.

ಬಗತ್, ಅಜಾದ್, ಸುಬಾಶ್, ಪಟೇಲ್
ಗಾಂದೀಜಿಯವರ ಸ್ವಾತಂತ್ರ‍್ಯ ಹೋರಾಟದ ಪಲವು
ಲಕ್ಶಾಂತರ ದೇಶಬಕ್ತರ ತ್ಯಾಗ ಬಲಿದಾನದಿಂದ
ಬಾರತಾಂಬೆಯ ಮಕ್ಕಳಿಗೆ ದೊರಕಿತು ಸ್ವಾತಂತ್ರ‍್ಯವು

ನಡುರಾತ್ರಿ ದೊರೆತ ಸ್ವಾತಂತ್ರ‍್ಯ ನಡುಬೀದಿಗೆ ತಂದು
ಮೋಜಿನಲ್ಲಿ ಯುವ ಜನತೆ ದೇಶಪ್ರೇಮ ಮರೆತಿದೆ
ನಡು ಬಗ್ಗಿ, ಕಾಯ ಕ್ರುಶವಾದ ಹಿರಿಯ ಜೀವವಿಂದು
ತ್ರಿವರ‍್ಣ ದ್ವಜವಿಡಿದು ದೇಶಾಬಿಮಾನ ಮೆರೆದಿದೆ

( ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: