ಸೀತಾಪಲ ಹಣ್ಣು
ಇತ್ತೀಚೆಗೆ ಗಣಪತಿ ಹಬ್ಬದ ಸಮಯದಲ್ಲಿ ಹಣ್ಣಿನ ಅಂಗಡಿಗಳ ಮುಂದೆ ಸೀತಾಪಲದ ಹಣ್ಣಿನ ರಾಶಿಯನ್ನು ಕಂಡು ಅಚ್ಚರಿ ಉಂಟಾಯಿತು. ಸೀತಾಪಲ ಹಣ್ಣುಗಳು ಕಾಣಿಸಿಗುವುದು ತುಂಬಾ ವಿರಳ. ಎಳವೆಯ ರಜಾದಿನಗಳಲ್ಲಿ ಅಜ್ಜಿ ತಾತನ ಊರಿಗೆ ಹೋದಾಗ ಈ ಹಣ್ಣಿನ ಗಿಡಗಳನ್ನು ನೋಡಿದ ನೆನಪು. ನಮ್ಮೂರಿನ ಚಿಕ್ಕಪುಟ್ಟ ಗುಡ್ಡಗಳ ಬುಡದಲ್ಲಿ, ಬಂಡೆಗಳ ನಡುವಿನ ಸಿರುಕಲುಗಳಲ್ಲಿಯೇ ಹೆಚ್ಚಾಗಿ ಕಣ್ಣಿಗೆ ಬೀಳುತ್ತಿದ್ದವು. ತೋಟ ಮತ್ತು ಹೊಲದ ಬದುಗಳಲ್ಲಿಯೂ ಬೆಳೆದು ಹಬ್ಬಿದ್ದವು. ಆ ಗಿಡಗಳಿಗೆ ಪ್ರತ್ಯೇಕವಾಗಿ ನೀರು ಮತ್ತು ಗೊಬ್ಬರ ಬೇಕಿರಲಿಲ್ಲ ಅವು ಮಳೆನೀರ ಮೇಲಶ್ಟೆ ಅವಲಂಬಿತವಾಗಿದ್ದವು. ಸೋಜಿಗ ಎಂದರೆ, ಇವು ತಾವಾಗಿಯೇ ಹುಟ್ಟಿ ಬೆಳೆದು ಪಲ ನೀಡುವಂತಹವು. ಈ ರೀತಿ ಬೆಟ್ಟ ಗುಡ್ಡಗಾಡು ಪ್ರದೇಶಗಳಲ್ಲಿ ಇವು ಬೆಳೆಯುವುದರಿಂದ ಸೀತಾಪಲ ಹಣ್ಣಿಗೆ ಬೆಟ್ಟದಲಸಿನ (ಬೆಟ್ಟದ ಹಲಸು) ಹಣ್ಣು ಎಂತಲೂ ವ್ಯಾವಹಾರಿಕವಾಗಿ ಕೆಲವು ಗ್ರಾಮದ ಬಾಗಗಳಲ್ಲಿ ಹೆಸರಿಸಿರುತ್ತಾರೆ.
ಸೀತಾಪಲ ಹೆಸರೇ ಹೇಳುವಂತೆ ಇದು ಸೀತೆಗೆ ಪ್ರಿಯವಾದ ಹಣ್ಣು. ಇದೇ ಗಿಡದ ಜಾತಿಗೆ ಸೇರಿದ ರಾಮಪಲ, ಲಕ್ಶ್ಮಣಪಲ, ಹನುಮಂತ ಪಲ ಎಂಬ ಹಣ್ಣುಗಳೂ ಇವೆ. ತ್ರೇತಾಯುಗದಲ್ಲಿ ರಾಮ, ಸೀತೆ, ಲಕ್ಶ್ಮಣರು ವನವಾಸದಲ್ಲಿದ್ದಾಗ ಈ ಹಣ್ಣುಗಳನ್ನು ತಿನ್ನುತ್ತಿದ್ದರೆಂಬ ಕತೆಯಿದೆ. ಹಾಗಾಗಿ ಈ ಹೆಸರುಗಳು ಬಂದಿರಬಹುದು ಎಂಬುದು ಅಬಿಪ್ರಾಯ. ರಾವಣನು ಸೀತೆಯನ್ನು ಕದ್ದೊಯ್ಯುವಾಗ ನೋವಿನಿಂದ ಸೀತೆಯು ಕಣ್ಣೀರಿಟ್ಟಳಂತೆ. ಹೀಗೆ ಆಕೆಯ ಕಣ್ಣೀರಿನ ಬಿಂದುಗಳು ಬೂಮಿಗೆ ಸ್ಪರ‍್ಶಿಸಿದ ಕಡೆಯೆಲ್ಲಾ ಸೀತಾಪಲದ ಸಸಿಗಳು ಉದ್ಬವವಾಗಿ ಪಲವನ್ನು ನೀಡಲಾರಂಬಿಸಿದವಂತೆ. ಹೀಗಾಗಿ, ಆ ಹಣ್ಣನ್ನು ಸೀತಾಪಲವೆಂದರು ಎನ್ನುವ ಮತ್ತೊಂದು ಕತೆಯಿದೆ.
ರಾಮಪಲ, ಲಕ್ಶ್ಮಣ ಪಲ, ಹನುಮಂತ ಪಲ ಈ ಮೂರು ಹೆಸರಿನ ಹಣ್ಣುಗಳು ಸಿಗುವುದು ಬಹಳ ಅಪರೂಪ. ಸೀತಾಪಲ ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವ ವಿಶೇ ವಾದ ಹಣ್ಣು ಮತ್ತು ಎಲ್ಲರಿಗೂ ಚಿರಪರಿಚಿತ. ‘ಅನೋನ ಸ್ಕ್ವಾಮೋಸ'(Annona Squamosa) ಎಂದು ಸಸ್ಯಶಾಸ್ತ್ರದಲ್ಲಿ ಕರೆಯಲಾಗುವ ಸೀತಾಪಲ ವೆಸ್ಟ್ ಇಂಡೀಸ್ ಮೂಲದ್ದಾಗಿದ್ದು, ಬಾರತದೆಲ್ಲೆಡೆ ಹರಡಿ ಕರ‍್ನಾಟಕದಲ್ಲಿ ಜನಪ್ರಿಯವಾಗಿರುವ ಪಲ. ಸೀತಾಪಲ ಪ್ರಕ್ರುತಿಯ ಅದ್ಬುತ ಕೊಡುಗೆ ಅಂತಾನೇ ಹೇಳಬಹುದು. ಬೆಟ್ಟ ಗುಡ್ಡಗಾಡು ಪ್ರದೇಶದ ಸಿರುಕಲುಗಳಲ್ಲಿ, ದಿಣ್ಣೆ ಬೂಮಿಗಳಲ್ಲಿ ನೈಸರ‍್ಗಿಕವಾಗಿ ತಾನಾಗಿಯೇ ಹುಟ್ಟಿ, ಕೇವಲ ಮಳೆನೀರನ್ನು ಬಳಸಿಕೊಂಡು ಬೆಳೆದು ಪಲ ಕೊಡುವಂತಹ ಗಿಡ. ತೋಟ ಮತ್ತು ಹೊಲದ ಬದುಗಳಲ್ಲಿಯೂ ಕಾಣಬಹುದು. ಈ ಸಸ್ಯಕ್ಕೆ ಆರೈಕೆಯ ಅವಶ್ಯಕತೆ ಕಡಿಮೆ. ಇದು ಹೆಮ್ಮರವಾಗಿ ಬೆಳೆಯದೇ ಸಾಮಾನ್ಯ ಎತ್ತರಕ್ಕೆ ಬೆಳೆಯುವುದು. ಚಳಿಗಾಲದ ಆರಂಬದಲ್ಲಿ ಈ ಹಣ್ಣುಗಳು ಕಾಣಿಸಿಕೊಳ್ಳುವ ಸಾದ್ಯತೆಯಿದೆ. ಸೀತಾಪಲ ಹಣ್ಣಿನ ಹೊರಗಿನ ಮೇಲ್ಮೈ ಒರಟಾಗಿ ಕಂಡರೂ ಒಳಗಿನ ತಿರುಳು ಮೆತ್ತಗಿರಲಿದ್ದು ಬಿಳಿಯ ಬಣ್ಣದಿಂದ ಕೂಡಿರುತ್ತದೆ. ಬೀಜಗಳಿಂದ ತುಂಬಿರುವ ಈ ಹಣ್ಣಿನ ತಿರುಳನ್ನು ತಿನ್ನುವಾಗ ಕಪ್ಪನೆಯ ಬೀಜಗಳನ್ನು ಬಿಡಿಸಿಕೊಂಡೇ ಸವಿಯಬೇಕು. ಕಾಯಿಯಾಗಿದ್ದಾಗ ಗಟ್ಟಿಯಾಗಿದ್ದರೂ, ತಿಳಿ ಹಳದಿ ಬಣ್ಣಕ್ಕೆ ತಿರುಗಿ ಹಣ್ಣಾದಾಗ ಮೆತ್ತನೆಯ ಅನುಬವ ನೀಡುವುದು. ಪ್ರಕ್ರುತಿಯ ಕೊಡುಗೆಯಾಗಿರುವ ಈ ಹಣ್ಣಿನ ಸಿಹಿಯು ಅಮ್ರುತ ಸವಿದಶ್ಟೇ ಚೆಂದ. ವರ‍್ಶಕ್ಕೊಮ್ಮೆ ಹವಾಗುಣಕ್ಕೆ ಅನುಸಾರವಾಗಿ ಇದರ ಪಲ ಸಿಗುವುದು. ಆದ್ದರಿಂದ ಇದು ಸೀಸನಲ್ ಪ್ರೂಟ್ ಎಂದು ಕರೆಸಿಕೊಳ್ಳುತ್ತದೆ. ಸೀಬೆಹಣ್ಣಿನಂತೆಯೇ ಇದು ಕೂಡ ಶೀತಪಲವೆಂಬುದೇ ನಮ್ಮ ಹಿರಿಯರ ಅಬಿಪ್ರಾಯ. ಅನೇಕ ಕಡೆ ನೀರಿನ ಪ್ರಮಾಣ ಕಡಿಮೆ ಇರುವಂತಹ ದಿಣ್ಣೆ ಜಮೀನುಗಳಲ್ಲಿ ಬೆಳೆದು ರೈತರು ಇದನ್ನು ವಾಣಿಜ್ಯ ಬೆಳೆಯಾಗಿ ಪರಿವರ‍್ತಿಸಿಕೊಂಡಿದ್ದಾರೆ. ಅಲ್ಲದೇ ಇದರಲ್ಲಿಯೂ ಹಲವಾರು ತಳಿಗಳು ಬೆಳಕಿಗೆ ಬಂದಿವೆ. ಇದರ ಎಲೆ ಮತ್ತು ಬೀಜಗಳನ್ನು ಆಯುರ‍್ವೇದದಲ್ಲಿ ಬಳಸಲಾಗಿದೆ ಎಂದು ಹೇಳಲಾಗುತ್ತದೆ.
ನಿಸರ‍್ಗದ ಕೊಡುಗೆಯಾಗಿರುವ ಈ ಹಣ್ಣಿನಲ್ಲೂ ಇತರೆ ಹಣ್ಣುಗಳಂತೆ ಪೋಶಕಾಂಶಗಳ ಆಗರವೇ ಇದ್ದು ಹಲವು ರೀತಿಯಲ್ಲಿ ನಮ್ಮ ಶರೀರಕ್ಕೆ ಆರೋಗ್ಯದ ದ್ರುಶ್ಟಿಯಿಂದ ಲಾಬಕಾರಿಯಾಗಿದೆ. ತಜ್ನರ ಪ್ರಕಾರ ದೇಹಕ್ಕೆ ಅಗತ್ಯವಾದ ಹಿಮೋಗ್ಲೋಬಿನ್ ಪೂರೈಸಲು, ಸ್ತೂಲಕಾಯದವರಿಗೆ ತೂಕ ಇಳಿಸಲು ಇದು ಸಹಕರಿಸುತ್ತದೆ. ಕರುಳುಬೇನೆ, ಚರ‍್ಮದ ಕಾಯಿಲೆ ,ಕ್ಯಾನ್ಸರ್ ಹೀಗೆ ಹಲವಾರು ಮಾರಕ ರೋಗಗಳ ವಿರುದ್ದ ಹೋರಾಡುವ ಚೈತನ್ಯವನ್ನು ದೇಹಕ್ಕೆ ಇದು ಒದಗಿಸುವುದು. ಆದರೆ ನೆಗಡಿ, ಕೆಮ್ಮು, ಅಸ್ತಮಾ ರೋಗಿಗಳಿಗೆ (ಶೀತ ಪ್ರಕ್ರುತಿಯವರಿಗೆ) ಜನವಾಡಿಕೆಯಂತೆ ಈ ಹಣ್ಣು ಈಗಲೂ ಅಶ್ಟಾಗಿ ಒಗ್ಗುವುದಿಲ್ಲ.
( ಚಿತ್ರಸೆಲೆ: wikimedia.org )
ಚೆಂದದ ಮಾಹಿಯುಕ್ತ ಬರಹ. ಅಭಿನಂದನೆಗಳು