ಮೋಡ ಸಿಡಿತ: ಇದು ಏನು ಮತ್ತು ಹೇಗೆ ಉಂಟಾಗುತ್ತದೆ?

– ನಿತಿನ್ ಗೌಡ.

ಮಳೆಗಾಲ ಬಂತೆಂದರೆ ಕೆಲವರ ಮುಕ‌ ಅರಳುವುದು; ಇದರ ಸಲುವಾಗಿಯೇ ಸಿನಿಮಾಗಳಲ್ಲಿ ಮಳೆ-ಮೋಡ-ಒಲುಮೆ ಇದನ್ನು ತಳಕು‌ಹಾಕಿ ಒಲುಮೆಯ ಮೇಲಿನ ಹಾಡುಗಳನ್ನು ಕಾಣಬಹುದು. ಅಂತೆಯೇ ಮಳೆ ಎಂದ ಕೂಡಲೇ ಕೆಲವರ ಮುಕ ಸಪ್ಪೆಯಾಗುವುದು. ಅದು ತಂದಿಡುವ ಪಜೀತಿಯೇ ಇದಕ್ಕೆ ಕಾರಣ. ಅದೇನೇ ಇರಲಿ‌ ಈ‌ ಮಳೆ ಬರುವುದಕ್ಕೆ ಕಾರಣ ಕಾರ‌್ಮೋಡಗಳು ಎಂಬುದು ಹೆಚ್ಚಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಅಲ್ಲದೇ ನಾವು ಆಗ್ಗಾಗ್ಗೆ ಮೋಡ ಸಿಡಿತದ(cloud burst) ಬಗೆಗೆ ಮತ್ತು ಅದರಿಂದಾಗುವ ಕೆಡುಕುಗಳ ಬಗೆಗೆ ಕೇಳುತ್ತಿರುತ್ತೇವೆ. ಹಾಗಿದ್ದರೆ ಏನಿದು ಮೋಡ ಸಿಡಿತ ? ಇದು ಹೇಗೆ ಮತ್ತು ಎಲ್ಲೆಲ್ಲಿ‌ ಆಗಬಹುದು‌? ಹೀಗೆ ನಿಮ್ಮಲ್ಲಿ ಕೇಳ್ವಿಗಳಿದ್ದರೆ, ಅವುಗಳನ್ನು ಅರಿಯುವ ಮೊಗಸು ಮಾಡೋಣ.

ಮೋಡ ಸಿಡಿತ:

ಹೆಸರೇ ಹೇಳುವಂತೆ ಮೋಡಗಳು ಸಿಡಿಯುವುದನ್ನೇ ಮೋಡ ಸಿಡಿತ ಎನ್ನುವರು. ಹೀಗಾಗುವಾಗ ಚಿಕ್ಕ ಸ್ತಳದಲ್ಲಿ, ಅತಿ ಕಡಿಮೆ ಹೊತ್ತಲ್ಲಿ, ಅತಿ ಹೆಚ್ಚಿನ‌ ಮಟ್ಟದ ಆಲಿಕಲ್ಲು, ಬೋರ‌್ಗರೆಯುವ ಮಳೆ ಬೀಳಬಹುದು. ಇದು ಹೆಚ್ಚಾಗಿ ಮಲೆ-ಬೆಟ್ಟಗಳಂತಹ ಎಡೆಗಳಲ್ಲಿ ಆಗುತ್ತದೆ. ಕಾರಣ, ಬೆಟ್ಟಗಳು ಹೆಚ್ಚಾಗಿ ಮೋಡಗಳಿಗೆ ಹತ್ತಿರದಲ್ಲಿ ಇರುತ್ತವೆ. ಪಡುವಣ ಗಟ್ಟಗಳು, ಹಿಮಾಲಯ, ಉತ್ತರಾಕಾಂಡ್, ಹಿಮಾಚಲ ಪ್ರದೇಶ ಅಂತಹ ಎಡೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.

ಮೋಡ ಸಿಡಿತವನ್ನು ಅರಿಯುವ ಮುನ್ನ ಮೋಡಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎಂದು ಚುಟುಕಾಗಿ ಅರಿಯೋಣ.

ನೇಸರನ ಕಾವಿಗೆ ನಮ್ಮ ಸುತ್ತಣ, ಕಡಲು ಬಿಸಿಗೊಂಡು ಗಾಳಿ ಬಿಸಿಯಾಗುತ್ತದೆ. ಹೀಗೆ ಬಿಸಿಯಾದ ಗಾಳಿಯಲ್ಲಿ ತೇವಾಂಶ ಹೆಚ್ಚುತ್ತದೆ ಮತ್ತು ಗಾಳಿ ಹಿಗ್ಗುತ್ತಾ ಕಡಿಮೆ ಒತ್ತಡವಿರುವ ಜಾಗ, ಅಂದರೆ ಮೇಲೇರುತ್ತದೆ( ಮೇಲೇರಿದಂತೆ ನಮ್ಮ ಸುತ್ತಣದ ಒತ್ತಡ ಇಳಿಯುತ್ತಾ ಸಾಗುತ್ತದೆ). ಕಾವರಿಮೆಯ (Thermodynamics) ಎರಡನೇ ಕಟ್ಟಳೆಯ ಪ್ರಕಾರ ಕಾವು ಬಿಸಿ ಹೆಚ್ಚಿರುವ ಎಡೆಯಿಂದ ಕಡಿಮೆಯಿರುವ ಎಡೆಗೆ ಸಾಗುತ್ತದೆ. ಹೀಗೆ ಮೇಲೇರಿದ ಗಾಳಿ, ತನ್ನ ಕಾವು ಕಳೆದುಕೊಂಡು, ಅದರಲ್ಲಿನ ತೇವಾಂಶ ಗಟ್ಟಿಗೊಳ್ಳುತ್ತದೆ (Condensation). ಹೀಗೆ ಗಟ್ಟಿಗೊಂಡ ನೀರು ಸೇರಿ ಮೋಡಗಳನ್ನು ಹುಟ್ಟುಹಾಕುತ್ತದೆ. ಹೀಗೆ ಉಂಟಾದ ಮೋಡಗಳಲ್ಲಿನ ಸಾಂದ್ರತೆ (Density) ಹೆಚ್ಚಾದಲ್ಲಿ ಮಳೆ, ಆಲಿಕಲ್ಲು, ತುಂತುರು ರೂಪದಲ್ಲಿ ಮೋಡ ಇಳೆಗೆ ಇಳಿಯುತ್ತದೆ (Precipitation).

ಇನ್ನು ಬೆಟ್ಟದ ಬಳಿ ಆಗುವ ಮೋಡ ಮತ್ತು ಮಳೆಯ (orographic rain) ಬಗೆಗೆ ತಿಳಿಯೋಣ. ಈಗ ಒಂದು ಬೆಟ್ಟ ತೆಗೆದು ಕೊಂಡರೆ; ಯಾವ ಬದಿಯ ಬೆಟ್ಟದ ಕಡೆಗೆ ಗಾಳಿ ಬೀಸುತ್ತದೋ ಆ ಬದಿಯನ್ನು ಗಾಳಿ ಬೀಸುವ ಬದಿ ( Windward side) ಎನ್ನುವರು ಮತ್ತು ಯಾವ ಬದಿ ಗಾಳಿಗೆ ಮರೆಯಾಗಿರುವುದೋ ಅದನ್ನು ಗಾಳಿಮರೆ ಬದಿ (Leeward side) ಎನ್ನುವರು. ಗಾಳಿಬೀಸುವ ಬದಿಯಲ್ಲಿ ಬಿಸಿ ತೇವಬರಿತ ಗಾಳಿ ನೆಲಮಟ್ಟದಿಂದ ಮೇಲೇರುತ್ತಾ ಸಾಗಿ, ಮೋಡಗಳನ್ನು ಮಾಡುತ್ತದೆ. ಆದ್ದರಿಂದ ಈ ಬದಿ ಹೆಚ್ಚು ಮಳೆಯನ್ನು ಪಡೆಯುತ್ತದೆ (orographic rain). ಗಾಳಿಮರೆ ಬದಿಯು ಒಣ ಹವೆ ಹೊಂದಿರಲಿದ್ದು, ಗಾಳಿ ಬೆಟ್ಟದ ಮೇಲಿಂದ ಕೆಳಗೆ ಸಾಗುತ್ತದೆ . ಇದರಿಂದ ಇಲ್ಲಿ ಮಳೆ ಉಂಟು ಮಾಡೋ ಮೋಡಗಳಾಗದೆ ಇರುವುದರಿಂದ, ಮಳೆಯಾಗುವುದಿಲ್ಲ.

ಮೋಡಸಿಡಿತದ ಹಿಂದಿರುವ ಕಾರಣ ಏನು?

ಈಗ ಅರಿಮೆಯ ನೆಲಗಟ್ಟಿನಲ್ಲಿ ಮೋಡ ಸಿಡಿತಕ್ಕೆ ಕಾರಣ ನೋಡಿದರೆ, ಬೆಟ್ಟದೇರಿಯ ಮೇಲೆ ಸಾಗುವ ಬಿಸಿ ತೇವಬರಿತ ಗಾಳಿ (Orographic lift) ಗಟ್ಟಿಗೊಂಡು ಬಿಳಿ-ಕಾರ‍್ಮೋಡಗಳನ್ನು(Cumulonimbus clouds) ಹುಟ್ಟುಹಾಕುತ್ತದೆ. ಒಂದೇ ಸಮನೆ ಬರುವ ತೇವದ ಗಾಳಿಯಿಂದ ಮೋಡಗಳು ಅತ್ತಿತ್ತ ಸಾಗಲಾರದೆ, ಒತ್ತಡ ಹೆಚ್ಚಾಗಿ ಸಿಡಿಯುತ್ತವೆ. ಹೀಗೆ ಅತಿ ಎತ್ತರದಲ್ಲಿ ಬೆಟ್ಟದಮೇಲೆ ಸಿಡಿಯುವುದರಿಂದ ಬೋರ‍್ಗರೆಯುವ ಮಳೆ, ಮಣ್ಣು, ದೂಳನ್ನು ತನ್ನೊಡನೆ ಬೆಟ್ಟದ ತಪ್ಪಲಿನೆಡೆಗೆ ಹೊತ್ತು ತರುತ್ತವೆ.

ಬಿಳಿಕಾರ‍್ಮೋಡಗಳು (Cumulonimbus clouds) ಮೋಡಗಳು ಹೆಚ್ಚಾಗಿ ಅಂದಾಜು 3-5 ಕೀ.ಮೀ ಎತ್ತರದಲ್ಲಿ ಹುಟ್ಟಿಕೊಳ್ಳುತ್ತವೆ. ಹಿಮಾಚಲ ಪ್ರದೇಶದ ದರಮ್ ಶಾಲಾದಲ್ಲಿ ಮೋಡ ಸಿಡಿತ ಆಗಿದ್ದು ಗೊತ್ತಿರಬಹುದು. ದರಮ್ ಶಾಲಾ ಕಾಂಗ್ರಾ ಕಣಿವೆಯಲ್ಲಿ, ದೋಲಾದಾರ್ ಬೆಟ್ಟದ ತಪ್ಪಲಿನಲ್ಲಿದೆ. ದೋಲಾದಾ‍ರ್ ಬೆಟ್ಟಗಳ ಎತ್ತರ 3-5 ಕೀ.ಮೀ ಅಂದಾಜಿನಶ್ಟಿದ್ದು ಇದು ಬಿಳಿಕಾರ‍್ಮೋಡಗಳ ಎತ್ತರದ ಅಂದಾಜಿಗೆ ಹೋಲುತ್ತದೆ ಮತ್ತು ಇದೇ ಮೋಡ ಸಿಡಿತವಾಗಲು ಕಾರಣವಾಗಿದೆ.

ಇನ್ನು ಮರಳಿ ಮಳೆಯ ಬಗೆಗೆ ಬರುವುದಾದರೆ, ಆ ಊರಿನಲ್ಲಿ ಅಶ್ಟು ಮಿಲಿ ಮೀಟರ್ ಮಳೆಯಾಯಿತು, ಈ ಊರಿನಲ್ಲಿ ಇಶ್ಟು ಮಿಲಿ ಮೀಟರ್ ಮಳೆಯಾಯಿತು ಎನ್ನುವುದನ್ನು ನಾವು ಕೇಳುತ್ತಿರುತ್ತೇವೆ.  ಎಲ್ಲಿ ಎಶ್ಟು ಮಳೆಯಾಯಿತು ಎಂದು ಸರಿಯಾಗಿ ಅಳೆಯುವುದು ಬಹಳ ನಾಜೂಕಿನ ಕೆಲಸ. ಏಕೆಂದರೆ, ಒಂದೂರಿನಲ್ಲಿ ಮಳೆಯಾದಲ್ಲಿ, ಅದು ಊರಿನ ಎಲ್ಲಾ ಬಾಗದಲ್ಲೂ ಒಂದೇ ಮಟ್ಟಕ್ಕೆ ಸುರಿಯಬೇಕೆಂದೇನಿಲ್ಲ,  ಹೊತ್ತೊತ್ತಿಗೂ ಮಳೆ ಸುರಿಯುವ ಅಂದಾಜು ಬೇರೆಯಾಗಬಹುದು. ಒಂದು ವರುಶದಲ್ಲಿ ಅತಿ ಹೆಚ್ಚು ಮಳೆಯಾಗುವ ಮಳೆಯ ತಿಂಗಳೂ ಇರುತ್ತದೆ ಮತ್ತು ಕಡಿಮೆ ಮಳೆಯಾಗುವ ತಿಂಗಳೂ ಇರುತ್ತದೆ. ಆದ್ದರಿಂದ ಒಂದು ಸ್ತಳವನ್ನು ತೆಗೆದುಕೊಂಡರೆ; ಆ ಸ್ತಳದಲ್ಲಿ ಗಂಟೆ, ದಿನ, ವಾರ, ತಿಂಗಳು ಮತ್ತು ವರುಶದ ಲೆಕ್ಕದಲ್ಲಿ ಅಂದಾಜು ಸರಾಸರಿ ಮಳೆಯಾಗುವುದರ ಬಗೆಗೆ ಹೇಳುವುದನ್ನು ಕಾಣಬಹುದು. ಇಶ್ಟೊಂದು ಏರಿಳಿತಗಳನ್ನು ಮಳೆಯು ತೋರುವುದರಿಂದ, ಅದನ್ನು ಅಳೆಯಲೂ ಸಹ ಅಶ್ಟೇ ನಾಜೂಕಿನ ದಾರಿಗಳನ್ನು ಅರಿವಿಗರು ಕಂಡುಕೊಂಡಿದ್ದಾರೆ. ಅದರಲ್ಲಿ ತೀರ ಸೋಬಿಯಾಗಿರುವ(ಸುಳುವಾಗಿರುವ) ಬಗೆಯೊಂದಿದ್ದು, ಇದನ್ನು ನಾವೇ ಮನೆಯಲ್ಲಿ ಕೂಡಾ ಮಾಡಬಹುದು. 

ಮನೆಯಲ್ಲೇ ಮಾಡಿ ನೋಡಿ ಮಳೆಯನ್ನಳೆಯುವ ಬಳಕವನ್ನು

ಮೊದಲಿಗೆ ಒಂದು ಬಾಟಲಿ ತೆಗೆದುಕೊಂಡು, ಅದರ ಮುಚ್ಚಳದ ಬದಿಯನ್ನು ಕುಯ್ದು ತೆಗೆಯಿರಿ. ಈಗ ಆಲಿಕೆಯಂತೆ ಕಾಣುವ ಈ ಬದಿಯನ್ನು, ತಿರುಗಿಸಿ ಬಾಟಲಿಯಲ್ಲಿ ತುರುಕಿಸಿ. ಈಗ ಬಾಟಲಿಗೆ ಒಂದು ಅಳೆತೆಗೋಲನ್ನು ಅಂಟಿಸಿ. ಅಲ್ಲದೇ ಬಾಟಲಿಯ ತಳ ಉಬ್ಬು ತಗ್ಗಿನಿಂದ ಕೂಡಿರಬಹುದಾದ ಕಾರಣ, ಅದಕ್ಕೆ ಅಳತೆಗೋಲಿನ ಸೊನ್ನೆಯ ಮಟ್ಟದೊರೆಗೆ ನೀರನ್ನು ತುಂಬಿಸಿ. ಈಗ ಈ ಬಳಕವನ್ನು ಅಂಗಳಕ್ಕೆ ಒಯ್ಯಿರಿ. ಒಂದೊಮ್ಮೆ, ಬೇಸಿಗೆಯಲ್ಲಿ ನೀವು ಈ ಕೆಲಸ ಮಾಡಲು ಬಯಸಿದರೆ, ನೀರಿಗೆ ಕೊಂಚ ಎಣ್ಣೆಯನ್ನು ಹಾಕಿ. ಹೀಗೆ ಮಾಡುವುದರಿಂದ ನೀರು ಆವಿಯಾಗುವುದಿಲ್ಲ. ಈಗ ಪ್ರತಿ ದಿನ ಒಂದು ಗೊತ್ತುಮಾಡಿಕೊಂಡ ಹೊತ್ತಿಗೆ, ಬಾಟಲಿಯಲ್ಲಿ ಬಿದ್ದ ಮಳೆನೀರಿನ ಮಟ್ಟದ ಅಳತೆಯನ್ನು ಬರೆದಿಟ್ಟುಕೊಳ್ಳಿರಿ. ಹೀಗೆ ಒಂದು ವಾರ, ತಿಂಗಳು ಮಾಡಿ. ಈಗ ಆ ಅಳತೆಗಳನ್ನು ಬಳಸಿ. ದಿನದ ಲೆಕ್ಕದಲ್ಲಿ ಮಳೆ ಬಿದ್ದಿರುವ ಮಾರ‍್ಪಾಡು ತಿಟ್ಟವನ್ನು( graph) ಕಂಡುಕೊಳ್ಳಬಹುದು. ಇದೇ ಮಾದರಿಯಲ್ಲಿ ಗಂಟೆಯ ಲೆಕ್ಕದಲ್ಲೂ ಕೂಡ ಅಳತೆಗಳನ್ನು ಬರೆದಿಟ್ಟುಕೊಳ್ಳಬಹುದು.

 

( ಚಿತ್ರಸೆಲೆ ಮತ್ತು ಮಾಹಿತಿ ಸೆಲೆ: pixabay.com, youtube.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: