ಅರಿಶಿನದ ಹಿರಿಮೆ
ಬಾರತೀಯ ಸಂಸ್ಕ್ರುತಿಯಲ್ಲಿ ಅರಿಶಿನ ಮತ್ತು ಕುಂಕುಮಕ್ಕೆ ಶ್ರೇಶ್ಟ ಮತ್ತು ವಿಶೇಶ ಸ್ತಾನಮಾನವಿದೆ. ಹಳ್ಳಿಗಳಲ್ಲಿ ಅನಾದಿ ಕಾಲದಿಂದಲೂ ಮುಂಜಾನೆಯ ಹೊತ್ತು ಹೆಣ್ಣು ಮಕ್ಕಳು ಮನೆಯ ಮುಂಬಾಗಿಲಿನ ಹೊಸ್ತಿಲಿಗೆ ಶುದ್ದವಾದ ನೀರಿನಿಂದ ತೊಳೆದು ಅರಿಶಿನ ಕುಂಕುಮವನ್ನು ಹಚ್ಚುವಂತ ಪರಿಪಾಟ ಬೆಳೆಸಿಕೊಂಡಿದ್ದಾರೆ. ನಗರಗಳಲ್ಲಿಯೂ ಕೆಲವರು ಈ ಸಂಪ್ರದಾಯವನ್ನು ರೂಡಿಸಿಕೊಂಡಿದ್ದಾರೆ. ಹೊಸ್ತಿಲಲ್ಲಿ ಆದಿಪೂಜಿತ ಗಣೇಶನು ನೆಲೆಸಿರುವನೆಂಬ ಅಬಿಪ್ರಾಯ ಇದರ ಹಿಂದೆ ಅಡಗಿದೆ. ದೈವಕಾರ‍್ಯಗಳಿಗೆ, ಶುಬಸಮಾರಂಬಗಳಿಗೆ ಅರಿಶಿನ ಕುಂಕುಮದ ಅಲಂಕಾರವೇ ಮುಂದು. ಮುತ್ತೈದೆತನದ ಸಾಕ್ಶಿಯಾಗಿ ವಿವಾಹಿತ ಸ್ತ್ರೀಯರು ಅರಿಶಿನ ಕುಂಕುಮವನ್ನು ದರಿಸುವುದು ಸಂಪ್ರದಾಯದ ಕುರುಹು.
ಕುಂಕುಮವು ಶ್ರೇಶ್ಟತೆಯ ಸಂಕೇತವಾದರೆ, ಅರಿಶಿನವು ಪಾವಿತ್ರ‍್ಯತೆ ಹಾಗೂ ಪರಿಶುದ್ದತೆಯ ಹೆಗ್ಗುರುತು. ಹಿಂದೂ ದಾರ‍್ಮಿಕ ಕಾರ‍್ಯಗಳಲ್ಲಿ ಬಳಸಲಾಗುವ ಮಂಗಳದ್ರವ್ಯಗಳಲ್ಲಿ ಅರಿಶಿನಕ್ಕೆ ಮೊದಲ ಸ್ತಾನವಿದೆ. ಸುಮಂಗಲಿಯರಿಗೆ ತಾಂಬೂಲ ನೀಡುವ ಮೊದಲು ಅರಿಶಿನವನ್ನು ಕೊಟ್ಟು, ತದನಂತರ ಕುಂಕುಮವನ್ನು ನೀಡಲಾಗುವುದು. ಹಿಂದೂ ಸಂಪ್ರದಾಯದಂತೆ ನಡೆಸುವ ಎಲ್ಲಾ ವಿವಾಹ ಪದ್ದತಿಯಲ್ಲಿ ಮದುಮಕ್ಕಳಿಗೆ ಅರಿಶಿನ ಶಾಸ್ತ್ರ ಮಾಡುವ ಆಚರಣೆಯಿದೆ. ಮಂಗಳವಾರ ಮತ್ತು ಶುಕ್ರವಾರದಂದು ನಡೆಯುವ ದುರ‍್ಗೆ, ಶಕ್ತಿ ದೇವತೆಗಳ ಮಂದಿರಗಳಲ್ಲಿ ಆರಾದನೆಗೆ ಅರಿಶಿನದ ಲೇಪನವಿದ್ದೇ ಇರುತ್ತದೆ. ಕೆಲವೊಂದು ದೇವಾಲಯಗಳಲ್ಲಿ ಅರಿಶಿನವನ್ನು ಪ್ರಸಾದವಾಗಿ ನೀಡುವರು. ಕೇವಲ ದಾರ‍್ಮಿಕ ಚಟುವಟಿಕೆಗಳಿಗಶ್ಟೇ ಮೀಸಲಾಗದೆ ಇದರ ಹಳದಿ ಬಣ್ಣ ಹಾಗೂ ಪರಿಮಳದಿಂದ ಅರಿಶಿನದ ಪಾತ್ರ ನಮ್ಮ ಅಡುಗೆ ಮನೆಗಳಲ್ಲಿಯೂ ಬಹಳ ಹಿಂದಿನಿಂದಲೂ ಸದ್ವಿನಿಯೋಗವಾಗುತ್ತಾ ಬಂದಿದೆ. ಅರಿಶಿನ ಒಂದು ಸಾಂಬಾರ್ ಪದಾರ‍್ತ. ಚಿತ್ರಾನ್ನ, ಅವಲಕ್ಕಿ ಗೊಜ್ಜು, ಹೋಳಿಗೆ ಮತ್ತು ಹಲ್ವಾ ಹೀಗೆ ಹಲವು ಕಾದ್ಯಗಳಿಗೆ ಬಣ್ಣವನ್ನು ಕೊಡಲು ಅರಿಶಿನದ ಅಗತ್ಯವಿದೆ. ಸಾಂಬಾರ್ ಪುಡಿಗೆ ಬಣ್ಣ ಮತ್ತು ಪರಿಮಳ ನೀಡುವ ಸಲುವಾಗಿ ಅರಿಶಿನದ ಬೋಟನ್ನು ಕುಟ್ಟಿ ಪುಡಿಮಾಡಿ ಬೆರೆಸುವ ವಾಡಿಕೆಯಿದೆ. ಅಂಗಡಿಗಳಲ್ಲಿ ದೊರೆಯುವ ಕೆಲವು ಹಳದಿ ಬಣ್ಣದ ಅರಿಶಿನ ಬಾಹ್ಯವಾಗಿ ಚೆನ್ನಾಗಿ ಕಂಡರೂ ಅದರಲ್ಲಿ ರಾಸಾಯನಿಕ ಪದಾರ‍್ತಗಳ ಮಿಶ್ರಣ ಸೇರ‍್ಪಡೆಯಾಗಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಅಶ್ಟು ಒಳ್ಳೆಯದಲ್ಲ. ಇದನ್ನು ಅಡುಗೆಯಲ್ಲಿ ಬಳಸಿದಲ್ಲಿ, ಅಡುಗೆಯ ಸ್ವಾದವು ಅಶ್ಟಕಶ್ಟೆ. ನಮ್ಮ ಹಿರಿಯರು ಅರಿಶಿನದ ಬೋಟನ್ನು ಅತವಾ ಅರಿಶಿನದ ಕೊಂಬುಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ಉಪಯೋಗಿಸುತ್ತಿದ್ದರು. ಅರಿಶಿನ ಒಂದು ಬಗೆಯ ಉತ್ತಮವಾದ ಗಿಡಮೂಲಿಕೆ. ‘ಕರ್‍ಕ್ಯೂಮ ಲಾಂಗ’ (curcuma longa) ಇದರ ವೈಜ್ನಾನಿಕ ಹೆಸರು. ಬಾರತ, ಕಾಂಬೋಡಿಯಾ, ಚೀನಾ, ಜಪಾನ್ ಇದನ್ನು ಹೆಚ್ಚಾಗಿ ಬೆಳೆಯುವ ರಾಶ್ಟ್ರಗಳು. ತೇವಾಂಶ ಹೆಚ್ಚಾಗಿರುವ ಬೂಬಾಗ ಇದಕ್ಕೆ ಸೂಕ್ತ. ಕರ‍್ನಾಟಕದ ಮಲೆನಾಡಿನ ಬಾಗಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಇದರ ಎಲೆಗಳು ನೋಡಲು ಬಾಳೆಎಲೆಯಂತೆ ಬಾಸವಾಗುವುದು. ಶುಂಟಿಯ ರೀತಿಯಲ್ಲೇ ಅರಿಶಿನದ ಕೊಂಬುಗಳು ಕೂಡಾ ಅರಿಶಿನ ಗಿಡದ ಬೇರುಗಳಲ್ಲಿ ಅಂಟಿಕೊಂಡಿರಲಿದ್ದು ಬೂಮಿಯ ಒಳಗೆ ಸಿಗುವಂತಹುದಾಗಿದೆ.
ಅರಿಶಿನವನ್ನು ಕೈದೋಟಗಳಲ್ಲಿ, ಮನೆಯ ಮುಂದೆ ಕುಂಡಗಳಲ್ಲಿಯೂ ಬೆಳೆಸಬಹುದು. ರಾಸಾಯನಿಕ ಗೊಬ್ಬರವನ್ನು ಬಳಸದೇ ಸಾವಯವ ಗೊಬ್ಬರವನ್ನು ಗಿಡಕ್ಕೆ ಹಾಕಿ ಬೆಳೆಸಿದರೆ ಒಳ್ಳೆಯದು. ಈ ಅರಿಶಿನದ ಕೊಂಬುಗಳು ಆಯುರ‍್ವೇದದಲ್ಲಿ ಔಶದಿಗಳ ತಯಾರಿಕೆಯಲ್ಲಿ ಬಳಕೆಯಾಗಿ ಸಂಜೀವಿನಿ ಎನಿಸಿಕೊಂಡಿದೆ. ಅರಿಶಿನದಲ್ಲಿ ಆಂಟಿ ವೈರಲ್ ಮತ್ತು ಆಂಟಿ ಆಕ್ಸಿಡೆಂಟುಗಳು ಅದಿಕ ಪ್ರಮಾಣದಲ್ಲಿ ಇದ್ದು, ಆರೋಗ್ಯಕ್ಕೆ ಒಳ್ಳೆಯದೆಂದು ನಂಬಲಾಗಿದೆ. ಚರ‍್ಮದ ತುರಿಕೆ ಕಡಿಮೆ ಆಗಲು ಅರಿಶಿನ ಚೂರ‍್ಣದ ಲೇಪನ ಒಳ್ಳೆಯ ಪಲಿತಾಂಶ ನೀಡುತ್ತದೆ. ಅರಿಶಿನದಲ್ಲಿರುವ ಕರ್‍ಕ್ಯೂಮಿನ್ ಎಂಬ ನೈಸರ‍್ಗಿಕ ಅಂಶಕ್ಕೆ ಗಾಯಗಳಿಂದಾಗುವ ನೋವು ಉರಿಯೂತವನ್ನು ಕಡಿಮೆ ಮಾಡುವಂತಹ ಸಾಮರ‍್ತ್ಯವಿದೆ. ನಮ್ಮ ಹಿರಿಯರು ಮಕ್ಕಳು ಆಡುವಾಗ ಬಿದ್ದಗಾಯಗಳಿಗೆ ತಕ್ಶಣವೇ ಅರಿಶಿನವನ್ನು ಹಚ್ಚುತ್ತಿದ್ದರು. ಅರಿಶಿನದ ಮಹತ್ವ ಅವರಿಗೆ ತಿಳಿದಿದ್ದರಿಂದ ಅದನ್ನು ಬಳಸಿ ಅನೇ ಕ ವ್ಯಾ ದಿಗಳಿಗೆ ತಕ್ಶಣವೇ ಪರಿಹಾರ ಕಂಡುಕೊಳ್ಳುತ್ತಿದ್ದರು. ಗ್ರಾಮೀಣ ಬಾಗಗಳಲ್ಲಿ ಇರುವೆ ಮತ್ತಿತರ ಕ್ರಿಮಿಗಳು ಓಡಾಡುವ ಕಡೆಯೆಲ್ಲಅವು ನಾಶವಾಗಲು ಅರಿಶಿನವನ್ನು ಚೆಲ್ಲಿರುತ್ತಾರೆ. ಈ ರೀತಿಯಾಗಿ ತನ್ನ ವಿಶೇಶ ಗುಣಗಳಿಂದ ಅರಿಶಿಣವು ಸಾಂಸ್ಕ್ರುತಿಕ ಮತ್ತು ಔಶದೀಯ ವಲಯದಲ್ಲಿ ತನ್ನದೇ ಆದ ಚಾಪು ಮೂಡಿಸಿದೆ.
( ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು