ಮರೆತು ಹೋಗಿರುವ ಕ್ರಿಕೆಟ್ ನ ಅದ್ಯಾಯಗಳು – 4
ಬೇಡಿ – ಇಂಗ್ಲೆಂಡ್ ನ ವ್ಯಾಸೆಲಿನ್ ಪ್ರಕರಣ
1976 ರಲ್ಲಿ ಇಂಗ್ಲೆಂಡ್ ತಂಡ ಐದು ಟೆಸ್ಟ್ ಗಳ ಸರಣಿಗೆ ಬಾರತಕ್ಕೆ ಬಂದಾಗ ಎಲ್ಲರೂ ನಿಬ್ಬೆರಗಾಗುವಂತೆ ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಳ್ಳುತ್ತದೆ. ಈ ಗೆಲುವುಗಳಲ್ಲಿ ಇಂಗ್ಲೆಂಡ್ ನ ಎಡಗೈ ಸ್ವಿಂಗ್ ಬೌಲರ್ ಜಾನ್ ಲಿವರ್ ರ ದೊಡ್ಡ ಕೊಡುಗೆ ಇದ್ದಿತು. ಮೊದಲ ದೆಹಲಿ ಟೆಸ್ಟ್ ನಲ್ಲಿ ಒಮ್ಮೆ ಚೆಂಡು ಬದಲಿಸಿದ ಬಳಿಕ ಅವರ ಎಸೆತಗಳು ಸ್ವಿಂಗ್ ಆಗುತ್ತಿದ್ದ ಪರಿ ನೋಡಿ ಪಂದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿದೆಯೇನೋ ಎಂದು ವಿಮರ್ಶಕರು ಕೊಂಡಾಡುತ್ತಾರೆ. ಆದರೆ ಮೂರನೇ ಮದ್ರಾಸ್ ಟೆಸ್ಟ್ ವೇಳೆ ಬಾರತದ ನಾಯಕ ಬಿಶನ್ ಸಿಂಗ್ ಬೇಡಿ ಚೆಂಡನ್ನು ಗಮನಿಸಿ ಅದರಲ್ಲಿ ವ್ಯಾಸೆಲಿನ್ ಅಂಶ ಇರುವುದನ್ನು ಕಚಿತ ಪಡಿಸಿಕೊಂಡು ಅಂಪೈರ್ ರಿಗೆ ದೂರು ನೀಡುತ್ತಾರೆ. ಆಗ ಇಂಗ್ಲೆಂಡ್ ನಾಯಕ ಟೋನಿ ಗ್ರೇ ಬೆವರು ತಡೆಯಲು ವ್ಯಾಸೆಲಿನ್ ಅನ್ನು ಬೌಲರ್ ಗಳು ಬಳಸಿದ್ದು ಎಂದು ಸಮಜಾಯಿಶಿ ನೀಡಿದರೂ, ಬೇಡಿ ಆಟದ ನಂತರ ಮಾದ್ಯಮದ ಮುಂದೆ ಇಂಗ್ಲೆಂಡ್ ತಂಡವನ್ನು ತರಾಟೆಗೆ ತಗೆದುಕೊಂಡು, ಗೆಲ್ಲಲು ಈ ಕೆಳಮಟ್ಟಕ್ಕೆ ಒಂದು ಅಂತಾರಾಶ್ಟ್ರೀಯ ತಂಡ ಇಳಿದಿರುವುದು ಆಟಕ್ಕೇ ದೊಡ್ಡ ಕಳಂಕ ಎಂದು ಕಿಡಿ ಕಾರುತ್ತಾರೆ. ಬೇಡಿ ಅವರ ಆರೋಪಕ್ಕೆ ಪುಶ್ಟಿ ನೀಡುವಂತೆ ಈ ಪಂದ್ಯದ ಬಳಿಕ ಇಂಗ್ಲೆಂಡ್ ನಾಲ್ಕನೇ ಬೆಂಗಳೂರು ಟೆಸ್ಟ್ ನಲ್ಲಿ ಸೋತು ಐದನೇ ಬಾಂಬೆ ಟೆಸ್ಟ್ ನಲ್ಲಿ ಕೂದಲೆಳೆಯಲ್ಲಿ ಸೋಲಿನಿಂದ ಪಾರಾಗುತ್ತದೆ. ಕ್ರಿಕೆಟ್ ಜಗತ್ತನ್ನು ತನ್ನ ಕಪಿಮುಶ್ಟಿಯಲ್ಲಿರಿಸಿಕೊಂಡು ಹಣಬಲ ಮತ್ತು ಕೊಲೋನಿಯಲ್ ನಿಯಮಗಳನ್ನು ಹೇರಿ ಮೆರೆಯುತ್ತಿದ್ದ ಇಂಗ್ಲೆಂಡ್ ಆಡಳಿತ ವರ್ಗಕ್ಕೆ ಬೇಡಿ ಅವರ ನೇರನುಡಿ ಹಿಡಿಸದೆ ಮೊದಲಿಗೆ ಅವರ ಬೌಲಿಂಗ್ ಶೈಲಿ ಸಂಶಯಾಸ್ಪದವಾದುದು ಎಂದು ಜರಿಯುವ ವ್ಯರ್ತ ಪ್ರಯತ್ನ ಮಾಡುತ್ತದೆ. ಅಲ್ಲಿಗೆ ಸುಮ್ಮನಾಗದೆ ತಮಗಾದ ಅವಮಾನಕ್ಕೆ ಮುಯ್ಯಿ ತೀರಿಸಿಕೊಳ್ಳಲು ಇಂಗ್ಲೆಂಡ್, ಬೇಡಿ ಅವರ ಕೌಂಟಿ ತಂಡ ನಾರ್ತಾಮ್ಟನ್ ಶೈರ್ ನ ಒಪ್ಪಂದವನ್ನು ಮುನ್ಸೂಚನೆ ನೀಡದೆ ಏಕಾಏಕಿ ವಿನಾಕಾರಣ ರದ್ದು ಮಾಡುತ್ತದೆ. ಇಂತಹ ಸಂದಿಗ್ದ ಪರಿಸ್ತಿತಿಯಲ್ಲಿ ತಮ್ಮ ನಾಯಕನ ಬೆನ್ನಿಗೆ ನಿಲ್ಲದೆ ಬಿಸಿಸಿಐ ದೂರ ಉಳಿಯುತ್ತದೆ. ಆದರೂ ಎದೆಗುಂದದ ಬೇಡಿ ಇಂಗ್ಲೆಂಡ್ ನಲ್ಲಿ ದಾವೆ ಹೂಡಿ ತಮಗಾದ ಅನ್ಯಾಯದ ಎದುರು ಹೋರಾಡುತ್ತಾರೆ. ಈ ಪ್ರಸಂಗ ಆ ಕಾಲಮಾನದಲ್ಲಿ ಇಂಗ್ಲೆಂಡ್ ನ ಉದ್ದಟತನ ಹೇಗಿತ್ತು ಎಂಬುದರ ಜೊತೆಗೆ ದಿಗ್ಗಜ ಬಿಶನ್ ಸಿಂಗ್ ಬೇಡಿ ಅವರ ನೇರ್ಮೆ ಹಾಗೂ ಕ್ರೀಡಾ ಕಾಳಜಿ ಎಂತಹುದು ಎಂಬುದನ್ನು ಸಾರಿಹೇಳುತ್ತದೆ. ಈ ಕಾರಣದಿಂದಲೇ ಬೇಡಿ ಅವರಿಗೆ ಇಂದಿಗೂ ಬಾರತದ ಕ್ರಿಕೆಟ್ ಇತಿಹಾಸದಲ್ಲಿ ಒಂದು ಗೌರವಯುತ ವಿಶೇಶ ಎಡೆ ಇದೆ.
ತಡವಾಗಿ ತಲುಪಿದ ವೆಸ್ಟ್ ಇಂಡೀಸ್ ಕಿಟ್ – ಪಂದ್ಯ ಮೊಟಕು
1994ರಲ್ಲಿ ಬಾರತಕ್ಕೆ ಮೂರು ಟೆಸ್ಟ್ ಹಾಗೂ ಐದು ಒಂದು-ದಿನದ ಪಂದ್ಯಗಳ ಸರಣಿಗೆ ಬಹುಕಾಲದ ಬಳಿಕ ವೆಸ್ಟ್ಇಂಡೀಸ್ ಆಗಮಿಸಿರುತ್ತದೆ. 1-1 ರಿಂದ ಸರಣಿ ಸಮಬಲದಲ್ಲಿದುದರಿಂದ ವಿಶಾಕಪಟ್ಟಣದ ಮೂರನೇ ಒಂದು-ದಿನದ ಪಂದ್ಯ ತೀವ್ರ ಕುತೂಹಲ ಕೆರಳಿಸಿರುತ್ತದೆ. ಆದರೆ ಆಟಗಾರರೆಲ್ಲರೂ ವಿಶಾಕಪಟ್ಟಣ ತಲುಪಿದ ಮೇಲೆ ಪಂದ್ಯದ ದಿನದಂದೂ ಸಹ ವಿಂಡೀಸ್ ಆಟಗಾರರ ಕಿಟ್ ಬ್ಯಾಗ್ ಗಳು ಅವರ ಕೈಸೇರದದ್ದು ಆಯೋಜಕರಿಗೆ ಅಂಜಿಕೆ ಉಂಟುಮಾಡುತ್ತದೆ. ಪರಿಶೀಲನೆಯ ಬಳಿಕ ಪಂದ್ಯ ನಡೆಯಬೇಕಿದ್ದ ವಿಶಾಕಪಟ್ಟಣ ಬದಲು ಆಟಗಾರರ ಕಿಟ್ ಚೆನ್ನೈ ಗೆ ಹಾರಿರುವುದಾಗಿ ತಿಳಿದುಬರುತ್ತದೆ. ಕೂಡಲೇ ಆಡಳಿತಗಾರರು ಕಾರ್ಯೋನ್ಮುಕರಾಗಿ ಕಿಟ್ ಗಳು ಕೈಸೇರುವಂತೆ ಮಾಡಿದರೂ ಪಂದ್ಯದ ದಿನದ ಬೆಳಗ್ಗೆ ಕೆಲ ಗಂಟೆಗಳ ವಿಳಂಬವಾಗುತ್ತದೆ. ಈ ಪ್ರಹಸನಕ್ಕೆ ಕೊನೆ ಹಾಡಿ ಕಡೆಗೆ ಇದ್ದ ಸಮಯದಲ್ಲಿ 44 ಓವರ್ ಗಳ ಪಂದ್ಯವನ್ನು ಆಡಿಸಲಾಗುತ್ತದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯವನ್ನು ಕೇವಲ ನಾಲ್ಕು ರನ್ ಗಳಿಂದ ಗೆದ್ದು ಆತಿತೇಯ ಬಾರತ ಸರಣಿಯಲ್ಲಿ ಮುನ್ನಡೆ ಸಾದಿಸುತ್ತದೆ. ಇಂದು ಈ ಪ್ರಕರಣ ತಮಾಶೆಯಂತೆ ಕಂಡರೂ ಆಯೋಜಕರಿಕೆ ಅಂದು ಆಗಿದ್ದ ತಲೆಬಿಸಿ ದೇವರಿಗೆ ಪ್ರೀತಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ! ಇದೇ ರೀತಿಯ ಗಟನೆ ಸುಮಾರು ಮೂರು ದಶಕಗಳ ನಂತರ ಮತ್ತೊಮ್ಮೆ 2022 ರಲ್ಲಿ ಬಾರತ-ವಿಂಡೀಸ್ ಸರಣಿಯ ವೇಳೆ ವೆಸ್ಟ್ ಇಂಡೀಸ್ ನಲ್ಲಿ ನಡೆದದ್ದು ಕಾಕತಾಳೀಯವೇ ಸರಿ!
ಆಡಲೊಲ್ಲೆ ಎಂದು ಪ್ರವಾಸದ ನಡುವೆ ತಂಡ ತೊರೆದ ನವಜೋತ್ ಸಿದು
1996 ರ ಬಾರತದ ಇಂಗ್ಲೆಂಡ್ ಪ್ರವಾಸಕ್ಕೆ ಟೆಸ್ಟ್ ಹಾಗೂ ಒಂದು ದಿನದ ತಂಡಗಳೆರಡರಲ್ಲೂ ಎಡೆ ಪಡೆದಿದ್ದ ಹಿರಿಯ ಆಟಗಾರ ನವಜೋತ್ ಸಿದು ಪ್ರವಾಸದ ನಡುವೆ ತಮ್ಮ ನಿರ್ಣಯದಿಂದ ಎಲ್ಲರಿಗೂ ದಿಗ್ಬ್ರಮೆ ಉಂಟುಮಾಡಿದ್ದು ಈಗ ಇತಿಹಾಸ. ಪ್ರವಾಸದಲ್ಲಿ ಎರಡು ಒಂದು-ದಿನದ ಪಂದ್ಯಗಳ ಬಳಿಕ ಹಟಾತ್ತನೆ ಬ್ಯಾಟ್ಸ್ಮನ್ ಸಿದು ಪ್ರವಾಸ ಕೈಬಿಟ್ಟು ತವರಿಗೆ ಹಾರಿದ್ದು ಬಾರತ ಕ್ರಿಕೆಟ್ ನ ಅತೀ ವಿಲಕ್ಶಣ ಪ್ರಕರಣಗಳಲ್ಲೊಂದು. ಲೀಡ್ಸ್ ಪಂದ್ಯದ ಸೋಲಿನ ಬಳಿಕ ತಂಡದ ಮ್ಯಾನೇಜರ್ ರಿಗೆ ಇಂತಹ ವಾತಾವರಣದಲ್ಲಿ ನಾ ಆಡಲಾರೆ ಎಂದು ತಿಳಿಸಿ ಸಿದು ತಂಡ ತೊರೆಯುತ್ತಾರೆ. ಈ ಪ್ರಕರಣದಿಂದ ಕ್ರಿಕೆಟ್ ಲೋಕದಲ್ಲಿ ತೀವ್ರ ಮುಜುಗುರಕ್ಕೊಳಗಾದ ಬಿಸಿಸಿಐ ಪ್ರವಾಸದ ಬಳಿಕ ಬಾರತದಲ್ಲಿ ವಿಚಾರಣೆಯನ್ನು ನಡೆಸುತ್ತದೆ. ವಿಚಾರಣೆ ವೇಳೆ, “ನಾಯಕ ಅಜರುದ್ದೀನ್ ನನ್ನನ್ನು ವಿನಾಕಾರಣ ನಿಂದಿಸಿದರು. ಅವಾಚ್ಯ ಪದಗಳನ್ನು ಬಳಸಿದರು. ತಂಡದ ಸದಸ್ಯರ ಮುಂದೆ ನನ್ನನ್ನು ಅವಮಾನಿಸಿದರು.” ಎಂದು ಸಿದು ಹೇಳಿಕೆ ನೀಡುತ್ತಾರೆ. ಅಜರ್ ತಮ್ಮ ಒಂದು ದಶಕದ ವ್ರುತ್ತಿ ಬದುಕಿನಲ್ಲಿ ಯಾರನ್ನೂ ನಿಂದಿಸಿಲ್ಲ. ಬೇಕಿದ್ದರೆ ತಂಡದ ಎಲ್ಲಾ ಆಟಾಗಾರರನ್ನು ಕೇಳಿ ನೋಡಿ ಎಂದು ತಮ್ಮ ವಾದವನ್ನು ಮುಂದಿಡುತ್ತಾರೆ. ಇಬ್ಬರ ಹೇಳಿಕೆಗಳನ್ನು ಆಲಿಸಿದ ನಂತರ ಸಮಿತಿಯು, ಇದು ಬಾರತದ ಬಾಶಾ ವೈವಿದ್ಯತೆಯಿಂದ ಉಂಟಾದ ಅಚಾತುರ್ಯ. ಅಜರ್ ಗಡುಸಾಗಿ ಹೈದರಾಬಾದಿ ಉರ್ದುವಿನಲ್ಲಿ ಹೇಳಿದ್ದು ಪಂಜಾಬಿ ಸಿದುಗೆ ನಿಂದನೆಯಂತೆ ಕೇಳಿಸಿದೆ ಅಶ್ಟೇ ಎಂದು ಮಾದ್ಯಮಗಳ ಮುಂದೆ ಪ್ರಕರಣಕ್ಕೆ ಅಂತ್ಯ ಹಾಡುತ್ತದೆ. ತಮ್ಮ ಮುಂಗೋಪಕ್ಕೆ ಹಾಗೂ ತಂಡದ ನಿಯಮಗಳನ್ನು ಉಲ್ಲಂಗಿಸಿದ್ದಕ್ಕೆ ಅದಿಕ್ರುತವಾಗಿ ಸಿದು ಮನ್ನಿಪು ಕೇಳಿದ ಬಳಿಕ 1997 ರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವರು ಮತ್ತೊಮ್ಮೆ ತಂಡಕ್ಕೆ ಮರಳುತ್ತಾರೆ. ಇಂತಹ ಗಟನೆ ಆ ಬಳಿಕ ಮತ್ತೆಂದೂ ನಡೆಯದದ್ದು ಸಮಾದಾನಕಾರ ಸಂಗತಿ ಎಂದೇ ಹೇಳಬೇಕು.
ಪಿಚ್ ಅಪಾಯಕಾರಿ ಎಂದು ಪಂದ್ಯ ರದ್ದು!
ಕ್ರಿಕೆಟ್ ಪಂದ್ಯಗಳು ಮಳೆಯಿಂದ, ಮಂದ ಬೆಳಕಿನಿಂದ, ಪ್ರೇಕ್ಶಕರ ದಾಂದಲೆಯಿಂದ ರದ್ದಾಗಿರುವ ಎತ್ತುಗೆಗಳು ನಮ್ಮ ಮುಂದೆ ಸಾಕಶ್ಟಿವೆ. ಆದರೆ 1997 ರ ಶ್ರೀಲಂಕಾದ ಬಾರತ ಪ್ರವಾಸದ ವೇಳೆ ಇಂದೋರ್ ನಲ್ಲಿ ನಡೆದ ಎರಡನೇ ಒಂದು-ದಿನದ ಪಂದ್ಯ ಅಪಾಯಕಾರಿ ಪಿಚ್ ಎಂಬ ಕಾರಣದಿಂದ ರದ್ದಾಗಿ ಇತಿಹಾಸದ ಪುಟ ಸೇರಿದ್ದನ್ನು ಬಹುತೇಕ ಅಬಿಮಾನಿಗಳು ಮರೆತಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಜಾವಗಲ್ ಶ್ರೀನಾತ್ ರ ವೇಗಕ್ಕೆ ಬ್ಯಾಟ್ ಮಾಡಲು ಪರದಾಡುತ್ತಿದ್ದದ್ದು ಮೇಲ್ನೋಟಕ್ಕೇ ಕಾಣುತ್ತಿತ್ತು. ಕಲುವಿತರಾಣಾ ಶ್ರೀನಾತ್ ರಿಗೆ ಬೌಲ್ಡ್ ಆದಮೇಲೆ ಬ್ಯಾಟ್ ಮಾಡಲು ರೋಶನ್ ಮಹಾನಾಮ ಕಣಕ್ಕಿಳಿಯುತ್ತಾರೆ. ಶ್ರೀನಾತ್ ಬೆಂಕಿ ಉಗುಳುತ್ತಿದ್ದದ್ದು ದಿಟವಾಗಿದ್ದರೂ ಪಿಚ್ ಕೂಡ ಸಹಕಾರಿಯಾಗಿದ್ದರಿಂದ ಬ್ಯಾಟಿಂಗ್ ಮಾಡುವುದು ಹರಸಾಹಸವಾಗಿರುತ್ತದೆ. ಒಂದು ಚೆಂಡು ಬುಜಕ್ಕೂ ಮೇಲೆ ಪುಟಿದರೆ ಅದರ ಬೆನ್ನಲ್ಲೇ ಇನ್ನೊಂದು ಚೆಂಡು ಮೊಣಕಾಲಿಗಿಂತ ಕೆಳಗೆ ಪುಟಿದು ಬ್ಯಾಟ್ಸ್ಮನ್ ಗಳಿಗೆ ದೊಡ್ಡ ಸವಾಲೊಡ್ಡುತ್ತದೆ. ಪಿಚ್ ಮರ್ಮ ಅರಿಯಲಾಗದೆ ಶ್ರೀಲಂಕಾದ ಬ್ಯಾಟ್ಸ್ಮನ್ ಗಳು ಗೊಂದಲಕ್ಕೊಳಗಾಗುತ್ತಾರೆ. ಹೀಗಿರುವಾಗ ಶ್ರೀನಾತ್ ರ ಎರಡನೇ ಓವರ್ ನಲ್ಲಿ ವೇಗದ ಎಸೆತವೊಂದು ಮಹಾನಾಮಾರ ಕೈಗೆ ಅಪ್ಪಳಿಸಿ ಅವರಿಗೆ ದೊಡ್ಡ ಪೆಟ್ಟಾಗುತ್ತದೆ. ಶ್ರೀಲಂಕಾ 17/1 ತಲುಪಿದಾಗ, ಮೂರು ಓವರ್ ಗಳಲ್ಲಿ ಪಿಚ್ ವರ್ತಿಸಿದ್ದನ್ನು ಕಂಡು ಅಂಪೈರ್ ಗಳು ಈ ಪಿಚ್ ಅನರ್ಹ ಮತ್ತು ಆಟಗಾರರಿಗೆ ಅಪಾಯಕಾರಿ ಎಂದು ತೀರ್ಮಾನಿಸಿ ಪಂದ್ಯ ರದ್ದು ಮಾಡುತ್ತಾರೆ. ಬಾರತದ ನಾಯಕ ತೆಂಡೂಲ್ಕರ್ ಮತ್ತು ಶ್ರೀಲಂಕಾದ ನಾಯಕ ರಣತುಂಗಾ ಕೂಡ ಈ ತೀರ್ಮಾನಕ್ಕೆ ಸಹಮತಿ ನೀಡುತ್ತಾರೆ. ಬಳಿಕ ಅಂಗಳದಲ್ಲಿ ನೆರೆದ್ದಿದ್ದ ಪ್ರೇಕ್ಶಕರಿಗಾಗಿ ಪಕ್ಕದ ಪಿಚ್ ಮೇಲೆ ವೇಗದ ಬೌಲಿಂಗ್ ಮಾಡದಂತೆ ನಿಯಮ ಮಾಡಿ 25 ಓವರ್ ಗಳ ಅನೌಪಚಾರಿಕ ಪಂದ್ಯ ನಡೆಸಲಾಗುತ್ತದೆ. ಈ ಪಂದ್ಯ ಶ್ರೀಲಂಕಾ ಗೆದ್ದರೂ ಸಹಜವಾಗಿಯೇ ದಾಕಲೆಯ ಪುಟ ಸೇರಲಿಲ್ಲ. ನಂತರ ಪಿಚ್ ಬಗ್ಗೆ ಚುರುಕಾದ ವಿಚಾರಣೆ ನಡೆಸಿ ಬಿಸಿಸಿಐ ಮದ್ಯಪ್ರದೇಶ ಕ್ರಿಕೆಟ್ ಸಂಸ್ತೆಗೆ ಚೀಮಾರಿ ಹಾಕುವುದರ ಜೊತೆ ನಾಲ್ಕು ವರ್ಶಗಳ ಕಾಲ ಅಲ್ಲಿ ಯಾವುದೇ ಅಂತರಾಶ್ಟ್ರೀಯ ಪಂದ್ಯವನ್ನು ಆಯೋಜಿಸದೆ ಶಿಕ್ಶೆ ನೀಡುತ್ತದೆ.
ನಿಯೋಲ್, ಯಾರು?
ಬಾರತದ 1997 ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊದಲನೇ ಪಂದ್ಯಕ್ಕೂ ಮುನ್ನವೇ ತಂಡದ ಪ್ರಮುಕ ವೇಗದ ಅಸ್ತ್ರ ಜಾವಗಲ್ ಶ್ರೀನಾತ್ ಬುಜದ ನೋವಿಗೆ ತುತ್ತಾಗಿ ಹೊರನಡೆದುದ್ದರಿಂದ ತಂಡಕ್ಕೆ ದೊಡ್ಡ ಹಿನ್ನಡೆ ಉಂಟಾಗುತ್ತದೆ. ಬಳಿಕ ಆಯ್ಕೆಗಾರರು ತಂಡದ ಮುಂದಾಳು ತೆಂಡೂಲ್ಕರ್ ರಿಗೆ ಶ್ರೀನಾತ್ ರ ಬದಲಿಗೆ ನಿಯೋಲ್ ಡೇವಿಡ್ ರನ್ನು ಪ್ರವಾಸಕ್ಕೆ ಕಳಿಸಲಿದ್ದೇವೆ ಎಂದು ಹೇಳಿದಾಗ, ಅವಾಕ್ಕಾದ ತೆಂಡೂಲ್ಕರ್, ಒಡನೆಯೇ, ನಿಯೋಲ್ ಯಾರು? ಎಂದು ಕೇಳಿದ್ದು ಮಾದ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತದೆ. ತೆಂಡೂಲ್ಕರ್ ಒಬ್ಬ ದೇಸೀ ಆಟಗಾರನನ್ನು ಅವಮಾನಿಸಿದರೆ ಎಂದೆಲ್ಲಾ ಕೇಳ್ವಿ ಏಳುತ್ತದೆ. ಹೌದು! ಹೈದರಾಬಾದ್ ನ ಆಪ್ ಸ್ಪಿನ್ನರ್ ದೇಸೀ ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇದ್ದುದರಿಂದ ತೆಂಡೂಲ್ಕರ್ ರಿಗೆ ಆ ಆಟಗಾರನ ಬಗ್ಗೆ ಏನೂ ಮಾಹಿತಿ ಇರದೆ ಹಾಗೆ ಕೇಳಿದ್ದರಲ್ಲಿ ತಪ್ಪಿಲ್ಲ ಎಂದು ಪತ್ರಕರ್ತರು ನಂತರ ವಿಶ್ಲೇಶಿಸುತ್ತಾರೆ. ಹಾಗೇ, ಒಬ್ಬ ವೇಗದ ಬೌಲರ್ ಬದಲಿಗೆ ಆಪ್ ಸ್ಪಿನ್ನರ್ ಅನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡುವುದು ಎಶ್ಟು ಸಮಂಜಸ ಎಂದೂ ಚರ್ಚೆ ನಡೆಯುತ್ತದೆ! ಇಂದು ಈ ಗಟನೆಯನ್ನು ನೆನೆದಾಗ ಎರಡೂವರೆ ದಶಕಗಳ ಹಿಂದೆ ಇದ್ದ ವಲಯವಾರು ಕೋಟಾ, ಬದಿಯೊಲವು ಎಂತದ್ದು ಎಂದು ಡಾಳಾಗಿ ಕಾಣುತ್ತದೆ. ತಂಡದ ನಾಯಕನಿಗೆ ಆಯ್ಕೆಯಾದ ಆಟಗಾರನ ಬಗ್ಗೆಯಾಗಲೀ, ಅವನ ಕೌಶಲ್ಯ, ದೇಸೀ ಕ್ರಿಕೆಟ್ ಪ್ರದರ್ಶನ ಹಾಗೂ ಅಳವಿನ ಬಗ್ಗೆಯಾಗಲೀ ಏನೂ ತಿಳಿದಿರಲಿಲ್ಲ ಎಂದರೆ ಆ ಆಟಗಾರನ ಆಯ್ಕೆ ಹೇಗೆ ನಡೆದ್ದಿರಬಹುದು ಎಂದು ಯಾರಾದರೂ ಊಹಿಸಬಹುದು. ಬಳಿಕ ವಿಂಡೀಸ್ ನ ಒಂದು-ದಿನದ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ನಿಯೋಲ್ ಡೇವಿಡ್ ಒಟ್ಟು ನಾಲ್ಕು ಪಂದ್ಯಗಳನ್ನಾಡಿ ನಾಲ್ಕು ವಿಕೆಟ್ ಪಡೆದು, ನೇಪತ್ಯಕ್ಕೆ ಸರಿದದ್ದನ್ನು ಕ್ರಿಕೆಟ್ ವಿಶ್ಲೇಶಕರು ಇಂದಿಗೂ ಒಂದು ತಮಾಶೆಯ ಪ್ರಸಂಗ ಎಂದೇ ಬಣ್ಣಿಸುತ್ತಾರೆ!
(ಚಿತ್ರಸೆಲೆ: sportskeeda.com)
ಇತ್ತೀಚಿನ ಅನಿಸಿಕೆಗಳು