ಮೋಳಿಗೆ ಮಾರಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

ಮೋಳಿಗೆ ಮಾರಯ್ಯ, Molige Marayya

ಭೂಮಿಯಲ್ಲಿ ಪೂಜಿಸಿಕೊಂಬ ಅರುಹಿರಿಯರೆಲ್ಲರೂ
ವೇದ ಶಾಸ್ತ್ರ ಪುರಾಣ ಆಗಮ
ಶ್ರುತಿ ಸ್ಮೃತಿ ತತ್ವದಿಂದ
ಇದಿರಿಗೆ ಬೋಧಿಸಿ ಹೇಳುವ
ಹಿರಿಯರೆಲ್ಲರೂ ಹಿರಿಯರಪ್ಪರೆ
ನುಡಿದಂತೆ ನಡೆದು
ನಡೆದಂತೆ ನುಡಿದು
ನಡೆನುಡಿ ಸಿದ್ಧಾಂತವಾಗಿಯಲ್ಲದೆ
ಅರುಹಿರಿಯರಾಗಬಾರದು
ಗೆಲ್ಲ ಸೋಲಕ್ಕೆ ಹೋರಿ ಬಲ್ಲಿದರಾದೆವೆಂದು
ತನ್ನಲ್ಲಿದ್ದ ಹುಸಿಯ ಹುಸಿವ
ಕಲ್ಲೆದೆಯವನ ನೋಡಾ
ಇವರೆಲ್ಲರ ಬಲ್ಲತನವ ಕಂಡು
ನಿಲ್ಲದೆ ಹೋದ
ನಿಃಕಳಂಕ ಮಲ್ಲಿಕಾರ್ಜುನ.

***

ವ್ಯಕ್ತಿಗಳಿಗೆ ಹಿರಿಯತನವೆಂಬುದು ಒಳ್ಳೆಯ ನಡೆನುಡಿಗಳಿಂದ ಬರುತ್ತದೆಯೇ ಹೊರತು, ಕೇವಲ ವಯಸ್ಸು, ವಿದ್ಯೆ ಇಲ್ಲವೇ ಆಡಳಿತದ ಉನ್ನತ ಗದ್ದುಗೆಯಿಂದ ದೊರೆಯುವುದಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

‘ಒಳ್ಳೆಯ ನಡೆನುಡಿ’ ಎಂದರೆ ವ್ಯಕ್ತಿಯ ಆಡುವ ಮಾತು, ಮಾಡುವ ದುಡಿಮೆ ಮತ್ತು ಸಹಮಾನವರೊಡನೆ ನಡೆದುಕೊಳ್ಳುವ ರೀತಿಯು ಅವನಿಗೆ, ಅವನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ತರುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ತರುವಂತಿರುವುದು.

ಭೂಮಿ+ಅಲ್ಲಿ; ಭೂಮಿ=ಜಗತ್ತು/ಪ್ರಪಂಚ; ಪೂಜಿಸಿಕೊಂಬ=ಪೂಜಿಸಿಕೊಳ್ಳುವ; ಅಂದರೆ ಜನರಿಂದ ಅತಿ ಹೆಚ್ಚಿನ ಒಲವು ಮತ್ತು ಮೆಚ್ಚುಗೆಯನ್ನು ಪಡೆಯುವ; ಅರುಹಿರಿಯರು+ಎಲ್ಲರೂ; ಅರುಹು+ಹಿರಿಯರು=ಅರುಹಿರಿಯರು; ಅರುಹು=ತಿಳಿಸು/ಹೇಳು; ಹಿರಿಯರು=ವಯಸ್ಸಿನಲ್ಲಿ ದೊಡ್ಡವರು/ಆಡಳಿತದಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವರು/ಅಕ್ಕರದ ವಿದ್ಯೆಯಲ್ಲಿ ಪಾಂಡಿತ್ಯವನ್ನು ಪಡೆದವರು/ಜಾತಿಮತಗಳ ಉನ್ನತ ಗದ್ದುಗೆಯಲ್ಲಿ ಕುಳಿತವರು; ಅರುಹಿರಿಯರು=ಉಪದೇಶವನ್ನು ಮಾಡುವವರು/ತಿಳಿಯ ಹೇಳುವವರು;

ಭೂಮಿಯಲ್ಲಿ ಪೂಜಿಸಿಕೊಂಬ ಅರುಹಿರಿಯರೆಲ್ಲರೂ=ವಯಸ್ಸಿನ/ಆಡಳಿತದ ಗದ್ದುಗೆಯ/ಅಕ್ಕರ ವಿದ್ಯೆಯ ಪಾಂಡಿತ್ಯದ/ಜಾತಿಮತದ ಗದ್ದುಗೆಯ ಕಾರಣದಿಂದಾಗಿ ಜಗತ್ತಿನ ಜನಸಮುದಾಯದಿಂದ ಅತಿ ಹೆಚ್ಚಿನ ಮನ್ನಣೆಗೆ ಪಾತ್ರರಾಗಿ ಜನರಿಗೆ ಉಪದೇಶವನ್ನು ಮಾಡುತ್ತಿರುವ ಗುರುಹಿರಿಯರೆಲ್ಲರೂ;

ವೇದ=ಇಂಡಿಯಾ ದೇಶದಲ್ಲಿದ್ದ ಪ್ರಾಚೀನ ಜನಸಮುದಾಯದವರು ನಿಸರ್‍ಗ ದೇವತೆಗಳನ್ನು ಪೂಜಿಸುತ್ತಿದ್ದ ಆಚರಣೆಗಳ ವಿವರವನ್ನು ಒಳಗೊಂಡ ‘ರುಗ್ವೇದ-ಯಜುರ‍್ವೇದ-ಅತರ‍್ವಣ ವೇದ-ಸಾಮವೇದ ’ ಎಂಬ ನಾಲ್ಕು ಹೊತ್ತಿಗೆಗಳು ;

ಶಾಸ್ತ್ರ=ದೇವತೆಗಳ ಪೂಜೆಯಲ್ಲಿ ಅನುಸರಿಸಬೇಕಾದ ಸಂಪ್ರದಾಯಗಳನ್ನು ಮತ್ತು ವ್ಯಕ್ತಿಯ ಹುಟ್ಟು, ಮದುವೆ, ಸಾವಿನ ಸನ್ನಿವೇಶಗಳಲ್ಲಿ ಮಾಡಬೇಕಾದ ಆಚರಣೆಗಳನ್ನು ವಿವರಿಸುವ ಹೊತ್ತಿಗೆ ;

ಪುರಾಣ=ಜಗತ್ತಿನ ಹುಟ್ಟು, ಜೀವರಾಶಿಗಳ ಉಗಮ, ದೇವರ ಇರುವಿಕೆ ಮತ್ತು ಮಾನವ ಸಮುದಾಯದ ಬೆಳವಣಿಗೆಯ ಬಗ್ಗೆ ಜನಮನದ ಕಲ್ಪನೆಯಲ್ಲಿ ರೂಪುಗೊಂಡಿರುವ ಸಂಗತಿಯನ್ನೊಳಗೊಂಡ ದಂತ ಕತೆ. ಇಂಡಿಯಾದ ಜನಸಮುದಾಯದ ಮನದಲ್ಲಿ ಹದಿನೆಂಟು ಪುರಾಣಗಳು ರೂಪುಗೊಂಡಿವೆ ;

ಆಗಮ=ವೇದಗಳಲ್ಲಿನ ವಿಚಾರವನ್ನು ಒಳಗೊಂಡ ಹೊತ್ತಿಗೆ ; ಶ್ರುತಿ=ವೇದಗಳ ಮಂತ್ರಗಳನ್ನು ಕೇಳುವುದು; ಸ್ಮೃತಿ=ವೇದಗಳ ಮಂತ್ರಗಳನ್ನು ನೆನಪಿನಲ್ಲಿಟ್ಟುಕೊಂಡು ಮತ್ತೆ ಮತ್ತೆ ಉಚ್ಚರಿಸುತ್ತಿರುವುದು ; ತತ್ವ+ಇಂದ; ತತ್ವ=ತಿರುಳು/ನಿಯಮ; ಇದಿರಿಗೆ=ಇತರರಿಗೆ/ಇತರರ ಮುಂದೆ; ಬೋಧಿಸು=ತಿಳಿಸು/ಹೇಳು;

ವೇದ ಶಾಸ್ತ್ರ ಪುರಾಣ ಆಗಮ ಶ್ರುತಿ ಸ್ಮೃತಿ ತತ್ವದಿಂದ ಇದಿರಿಗೆ ಬೋಧಿಸಿ ಹೇಳುವ ಹಿರಿಯರೆಲ್ಲರೂ=ಸಂಸ್ಕ್ರುತ ನುಡಿಯಲ್ಲಿ ರಚನೆಗೊಂಡಿರುವ ವೇದ, ಶಾಸ್ತ್ರ, ಪುರಾಣ, ಆಗಮ, ಶ್ರುತಿ ಮತ್ತು ಸ್ಮ್ರುತಿಯಲ್ಲಿರುವ ಆಚರಣೆಗಳನ್ನು ಮತ್ತು ಸಂಪ್ರದಾಯಗಳನ್ನು ಇತರರ ಮುಂದೆ ಸೊಗಸಾಗಿ ಬಣ್ಣಿಸಿ ಹೇಳುವ ಹಿರಿಯರೆಲ್ಲರೂ;

ಹಿರಿಯರು+ಅಪ್ಪರೆ; ಅಪ್ಪರೆ=ಆಗುತ್ತಾರೆಯೇ;

ಹಿರಿಯರಪ್ಪರೆ=ಹಿರಿಯರಾಗುತ್ತಾರೆಯೇ; ಅಂದರೆ ಕೇವಲ ಹೊತ್ತಿಗೆಗಳಲ್ಲಿ ಬರೆದಿರುವ ಶ್ಲೋಕಗಳನ್ನು, ಮಂತ್ರಗಳನ್ನು ಮತ್ತು ಆಚರಣೆಯ ಸಂಗತಿಗಳನ್ನು ಮಾತಿನಲ್ಲಿ ಸೊಗಸಾಗಿ ಆಡಿದ ಮಾತ್ರಕ್ಕೆ ಯಾರೊಬ್ಬರೂ ಹಿರಿಯವರಾಗುವುದಿಲ್ಲ. ವ್ಯಕ್ತಿಯು ಆಡುವ ಮಾತುಗಳಿಂದಲೇ ಯಾರನ್ನೂ ಹಿರಿಯರೆಂದು ತಿಳಿಯಬಾರದು ಹಾಗೂ ನಂಬಬಾರದು;

ನುಡಿ=ಮಾತು; ನಡೆ=ವರ‍್ತನೆ; ಸಿದ್ಧಾಂತ+ಆಗಿ+ಅಲ್ಲದೆ; ಸಿದ್ಧಾಂತ=ನಿರ‍್ಣಾಯಕ ವಿಚಾರ/ನಿಯಮಗಳ ಒಟ್ಟು ಸಾರ; ಆಗಿಯಲ್ಲದೆ=ಕಾರ‍್ಯರೂಪಕ್ಕೆ ಬಾರದೆ/ನಿಜ ಜೀವನದಲ್ಲಿ ಆಚರಣೆಗೆ ತಾರದೆ; ಅರುಹಿರಿಯರು+ಆಗಬಾರದು; ಆಗಬಾರದು=ಆಗುವುದಕ್ಕೆ ಬರುವುದಿಲ್ಲ;

ನುಡಿದಂತೆ ನಡೆದು, ನಡೆದಂತೆ ನುಡಿದು, ನಡೆನುಡಿ ಸಿದ್ಧಾಂತವಾಗಿಯಲ್ಲದೆ, ಅರುಹಿರಿಯರಾಗಬಾರದು=ಇತರರಿಗೆ ಉಪದೇಶ ಮಾಡುವ ವ್ಯಕ್ತಿಯು ಮೊದಲು ತನ್ನ ನಿತ್ಯ ಜೀವನದಲ್ಲಿ ತಾನಾಡುವ ಒಳ್ಳೆಯ ನುಡಿಗೆ ತಕ್ಕಂತೆ, ಒಳ್ಳೆಯ ದುಡಿಮೆಯನ್ನು ಮಾಡಬೇಕು ಮತ್ತು ಸಹಮಾನವರೊಡನೆ ಒಲವು, ಕರುಣೆ ಮತ್ತು ಗೆಳೆತನದಿಂದ ಜತೆಗೂಡಿ ಬಾಳಬೇಕು. ಆಡುವ ಒಳ್ಳೆಯ ಮಾತಿಗೆ ತಕ್ಕಂತೆ ಸಾಮಾಜಿಕವಾಗಿ ಒಳ್ಳೆಯ ವರ‍್ತನೆಯನ್ನು ಹೊಂದಿರದ ವ್ಯಕ್ತಿಗಳು ಇತರರಿಗೆ ಉಪದೇಶವನ್ನು ಮಾಡಲು ತಕ್ಕವರಲ್ಲ ಹಾಗೂ ಯೋಗ್ಯರಲ್ಲ;

ಗೆಲ್ಲ=ಗೆಲುವು; ಸೋಲ=ಸೋಲು; ಹೋರು=ಬಡಿದಾಡು/ಗುದ್ದಾಡು; ಬಲ್ಲಿದರು+ಆದೆವು+ಎಂದು; ಬಲ್ಲಿದ=ಅತಿ ಹೆಚ್ಚಿನ ಶಕ್ತಿಯುಳ್ಳವನು; ಆದೆವು=ಆಗಿದ್ದೇವೆ;

ಗೆಲ್ಲ ಸೋಲಕ್ಕೆ ಹೋರಿ ಬಲ್ಲಿದರಾಗುವುದು=ರಾಜನ ಒಡ್ಡೋಲಗದಲ್ಲಿ ಇಲ್ಲವೇ ವಿದ್ವಾಂಸರ ಸಬೆಗಳಲ್ಲಿ ತಮ್ಮ ತಮ್ಮ ಪಾಂಡಿತ್ಯವನ್ನು ಮೆರೆಯುತ್ತಾ, ಎದುರಾಳಿಯನ್ನು ತಮ್ಮ ಮಾತಿನ ಚತುರತೆಯಿಂದಲೇ ಸೋಲಿಸಿ, ಗೆಲುವನ್ನು ಪಡೆದು, ಅಕ್ಕರದ ವಿದ್ಯೆಯಲ್ಲಿ ದೊಡ್ಡವರೆಂದು ಕೀರ‍್ತಿಯನ್ನು ಪಡೆಯುವುದು;

ತನ್ನಲ್ಲಿ+ಇದ್ದ; ತನ್ನಲ್ಲಿದ್ದ=ತನ್ನ ವ್ಯಕ್ತಿತ್ವದಲ್ಲಿರುವ; ಹುಸಿ=ಸುಳ್ಳು; ಹುಸಿವ=ಸುಳ್ಳನ್ನಾಡುವ; ಕಲ್ಲ್+ಎದೆಯವನ; ಎದೆ=ಮನಸ್ಸು; ಕಲ್ಲೆದೆಯವನು=ಇತರರ ಬಗ್ಗೆ ತುಸುವಾದರೂ ಪ್ರೀತಿ ಕರುಣೆಯಿಲ್ಲದೆ ಕ್ರೂರತನದಿಂದ ನಡೆದುಕೊಳ್ಳುವವನು; ನೋಡು=ಕಾಣು; ನೋಡಾ=ಅಂತಹ ವಂಚಕರ ಹಾಗೂ ಕ್ರೂರಿಗಳ ಮಾತಿನಲ್ಲಿ ಮತ್ತು ವರ‍್ತನೆಯಲ್ಲಿರುವ ಇಬ್ಬಗೆಯ ಸಂಗತಿಗಳನ್ನು ಒರೆಹಚ್ಚಿ ತಿಳಿ;

ತನ್ನಲ್ಲಿದ್ದ ಹುಸಿಯ ಹುಸಿವ ಕಲ್ಲೆದೆಯವನು=ಗೆಲುವನ್ನು ಪಡೆಯಲೆಂದು ಸುಳ್ಳಿನ ಸಂಗತಿಗಳನ್ನೇ ದಿಟದ ಸಂಗತಿಗಳು ಎನ್ನುವಂತೆ ನುಡಿಯುವ ವ್ಯಕ್ತಿಯು ಕಲ್ಲೆದೆಯವನಾಗಿರುತ್ತಾನೆ. ಅಂದರೆ ಅಕ್ಕರ ವಿದ್ಯೆಯನ್ನು ಕಲಿತು ಅಹಂಕಾರಿಯಾಗಿರುವ ವ್ಯಕ್ತಿಯ ಮನದಲ್ಲಿ ಸಹಮಾನವರ ಬಗ್ಗೆ ಯಾವುದೇ ಬಗೆಯ ಒಲವಾಗಲಿ ಇಲ್ಲವೇ ಕರುಣೆಯಾಗಲಿ ಇರುವುದಿಲ್ಲ. ಮಾತಿನ ಮೋಡಿಯಲ್ಲಿ ಸುಳ್ಳುಗಳನ್ನೇ ಹೆಣೆದು, ಸಹಮಾನವರನ್ನು ನಂಬಿಸಿ, ಜಗತ್ತನ್ನೇ ವಂಚಿಸುವ ಕ್ರೂರಿಯಾಗಿರುತ್ತಾನೆ;

ಬಲ್ಲತನ=ಅತಿ ಹೆಚ್ಚಾದ ಶಕ್ತಿ; ನಿಲ್ಲದೆ ಹೋದ=ಒಂದು ಕಡೆ ನೆಲಸದೆ ಹೋದನು; ನಿಃಕಳಂಕ=ಯಾವುದೇ ಬಗೆಯ ಕಳಂಕವಿಲ್ಲದ; ಮಲ್ಲಿಕಾರ್ಜುನ=ಶಿವ/ಒಳ್ಳೆಯ ನಡೆನುಡಿಗಳ ಸಂಕೇತವಾದ ದೇವರು; ನಿಃಕಳಂಕ ಮಲ್ಲಿಕಾರ್ಜುನ=ಮೋಳಿಗೆ ಮಾರಯ್ಯನವರ ವಚನಗಳ ಅಂಕಿತನಾಮ;

ಇವರೆಲ್ಲರ ಬಲ್ಲತನವ ಕಂಡು, ನಿಲ್ಲದೆ ಹೋದ ನಿಃಕಳಂಕ ಮಲ್ಲಿಕಾರ್ಜುನ=ಮನದೊಳಗೆ ಸುಳ್ಳು, ಕಪಟ ಮತ್ತು ಕ್ರೂರತನದ ಒಳಮಿಡಿತಗಳನ್ನುಳ್ಳ ಆದರೆ ಮಾತಿನಲ್ಲಿ ಮಾತ್ರ ಸತ್ಯ ನೀತಿ ನ್ಯಾಯದ ಸಂಗತಿಗಳನ್ನು ಉಪದೇಶ ಮಾಡುವ ವ್ಯಕ್ತಿಗಳೇ ಜನಸಮೂಹದ ನಡುವೆ ಹಿರಿಯರೆಂದು/ದೊಡ್ಡವರೆಂದು ಮನ್ನಣೆ ಪಡೆದು ಮೆರೆಯುತ್ತಿರುವುದನ್ನು ಕಂಡು ಮಲ್ಲಿಕಾರ‍್ಜುನ ದೇವರು ಅಂತಹ ವ್ಯಕ್ತಿಗಳಿಂದ ದೂರಸರಿದ;

ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ಪೊಳ್ಳು ಮತ್ತು ಸುಳ್ಳು ಉಪದೇಶ ಮಾಡುವ ವಂಚಕರೇ ಸಮಾಜದಲ್ಲಿ ದೊಡ್ಡ ದೊಡ್ಡ ಗದ್ದುಗೆಗಳಲ್ಲಿ ಹಿರಿಯರಾಗಿ ಮೆರೆಯುತ್ತ, ಪ್ರಾಮಾಣಿಕವಾಗಿ ದುಡಿಯುವ ಬಡವರ‍್ಗದ ಜನಸಮುದಾಯವನ್ನು ನಿರಂತರವಾಗಿ ವಂಚಿಸುತ್ತ, ಕ್ರೂರತನದಿಂದ ಜನರನ್ನು ಸುಲಿಗೆ ಮಾಡುತ್ತಿರುವ ಕಡೆಯಲ್ಲಿ ಸತ್ಯ ನೀತಿ ಮತ್ತು ಸಾಮಾಜಿಕ ನ್ಯಾಯ ಇರುವುದಿಲ್ಲ ಎಂಬ ವಾಸ್ತವವನ್ನು “ನಿಲ್ಲದೆ ಹೋದ ನಿಃಕಳಂಕ ಮಲ್ಲಿಕಾರ್ಜುನ” ಎಂಬ ನುಡಿಗಳು ಸೂಚಿಸುತ್ತಿವೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: