ಮುರ‍್ಸಿ ಬುಡಕಟ್ಟಿನ ತುಟಿ-ತಟ್ಟೆಗಳು

– .

 

ಆಪ್ರಿಕಾದ ಬುಡಕಟ್ಟು ಜನಾಂಗದಲ್ಲಿ ಹಲವಾರು ಚಿತ್ರ ವಿಚಿತ್ರ ಪದ್ದತಿಗಳು ರೂಡಿಯಲ್ಲಿವೆ. ಈ ಎಲ್ಲಾ ಅನಿಶ್ಟ ಪದ್ದತಿಗಳಿಗೂ ಹೆಂಗಸರೇ ಹರಕೆಯ ಕುರಿಗಳು. ಇಲ್ಲಿನ ಮುರ‍್ಸಿ ಬುಡಕಟ್ಟು ಜನಾಂಗದಲ್ಲಿ ವಿಚಿತ್ರ ಪದ್ದತಿಯೊಂದಿದೆ. ಅದೇ ಹೆಂಗಸರು ಕೆಳ ತುಟಿಗೆ ತೊಡುವ ತಟ್ಟೆಗಳು (ಪ್ಲೇಟ್ಗಳು). ಈ ತಟ್ಟೆಗಳು ಮಣ್ಣಿನಿಂದ ಅತವಾ ಮರದಿಂದ ತಯಾರಾಗಿರುತ್ತವೆ. “ದೆಬಿ ಎ ಟುಗೋಯಿನ್” ಅತವಾ ಲಿಪ್-ಪ್ಲೇಟ್ ಮುರ‍್ಸಿ ಹೆಂಗಸರ ಪ್ರಮುಕ ಲಕ್ಶಣವಾಗಿದೆ.

ಹೆಣ್ಣು ಮಗು ಹದಿನೈದು ಅತವಾ ಹದಿನಾರು ವಯಸ್ಸನ್ನು ತಲುಪಿದಾಗ, ಆ ಮಗುವಿನ ತಾಯಿ ಅತವಾ ಜನಾಂಗದ ಬೇರಾವುದೇ ಹಿರಿಯ ಹೆಂಗಸರಿಂದ, ಮಗುವಿನ ಕೆಳ ತುಟಿಯನ್ನು ಕತ್ತರಿಸಲಾಗುತ್ತದೆ. ಕತ್ತರಿಸುವಾಗ ಆದ ಗಾಯ ಮಾಯುವವರೆಗೂ ಅಲ್ಲಿಗೆ ಮರದ ಬೆಣೆಯನ್ನು ಇರಿಸಲಾಗುತ್ತದೆ (ಕಿವಿ ಅತವಾ ಮೂಗು ಚುಚ್ಚಿದಂತೆ). ಈ ರೀತಿಯಲ್ಲಾದ ಗಾಯ ಪೂರ‍್ಣವಾಗಿ ಗುಣಮುಕವಾಗಲು ಕಡಿಮೆ ಎಂದರೂ ಮೂರ‍್ನಾಲ್ಕು ತಿಂಗಳು ಬೇಕಾಗುತ್ತದೆ. ಇದು ಮೊದಲ ಹಂತದ ಕೆಲಸವಾದರೆ, ಕತ್ತರಿಸಿದ ಜಾಗದಲ್ಲಿದ್ದ ಬೆಣೆಯನ್ನು ತೆಗೆದು, ಹಂತ ಹಂತವಾಗಿ ದೊಡ್ಡ ದೊಡ್ಡ ಮರದ ಬೆಣೆಯನ್ನು ಸೇರಿಸುತ್ತಾ ಹಿಗ್ಗಿಸುವುದು ಎರಡನೆಯ ಹಂತ. ಈ ರೀತಿಯಲ್ಲಿ ತುಟಿಯ ಕತ್ತರಿಸಿದ ಬಾಗವನ್ನು ಎಶ್ಟು ಅಗಲದವರೆಗೂ ಹಿಗ್ಗಿಸಬೇಕು ಎಂಬುದರ ನಿರ‍್ಣಯ ಆ ಹೆಣ್ಣು ಮಗುವಿಗೆ ಬಿಟ್ಟಿದ್ದು. ಹಾಗೆ ಕೆಳ ತುಟಿಯನ್ನು ಕತ್ತರಿಸಿಕೊಳ್ಳುವ ಇಚ್ಚೆ ಸಹ ಹೆಣ್ಣು ಮಕ್ಕಳ ಆಯ್ಕೆಯಾಗಿರುತ್ತದೆ. ಅವರುಗಳು ಇಶ್ಟಪಟ್ಟಲ್ಲಿ ಮಾತ್ರ ಈ ಸಂಪ್ರದಾಯಕ್ಕೆ ಒಳಗಾಗಬಹುದು. ಜನಾಂಗದ ಹಿರಿಯರ ಬಲವಂತ ಒತ್ತಡ ಅವರ ಮೇಲಿರುವುದಿಲ್ಲ. ಆದರೂ ಜನಾಂಗದಲ್ಲಿ ತಲೆತಲಾಂತರಗಳಿಂದ ನಡೆದು ಬಂದ ಸಂಪ್ರದಾಯವನ್ನು ಕೈಬಿಡಲಾಗದ ಹೆಣ್ಣು ಮಕ್ಕಳು, ಮಾನಸಿಕ ಒತ್ತಡದಿಂದ ಇದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಅನೇಕ ಹದಿಹರೆಯದವರು ಕೆಳ ತುಟಿಯನ್ನು ಕತ್ತರಿಸಿಕೊಳ್ಳದೇ ಮದುವೆಯಾದ ಅನೇಕ ಉದಾಹರಣೆಗಳಿವೆ. ಮದುವೆಯಾಗಿ ಒಂದೆರಡು ಮಕ್ಕಳ ತಾಯಂದಿರಾದ ನಂತರವೂ, ಇಶ್ಟಪಟ್ಟಲ್ಲಿ ಕೆಳ ತುಟಿಯನ್ನು ಕತ್ತರಿಸಿಕೊಳ್ಳಲು ಒಪ್ಪಿಗೆ ಸೂಚಿಸಬಹುದಾಗಿದೆ.

ಈ ಸಂಪ್ರದಾಯಕ್ಕೆ ತನ್ನಿಚ್ಚೆಯಿಂದ ಒಳಗಾದ ಹೆಣ್ಣು ಮಕ್ಕಳು, ತಮ್ಮ ತುಟಿಯನ್ನು ಕತ್ತರಿಸಿದ ಬಾಗದಲ್ಲಿ 12 ಸೆಂಟಿಮೀಟರ್ ಅತವಾ ಅದಕ್ಕಿಂತ ಹೆಚ್ಚು ವ್ಯಾಸದ (circumference) ತಟ್ಟೆಗಳು ಸೇರುವಶ್ಟು ಹಿಗ್ಗಿಸಲು ಸಾಕಶ್ಟು ಪರಿಶ್ರಮ ಹಾಕುತ್ತಾರೆ. ಮರದಿಂದ ಅತವಾ ಮಣ್ಣಿನಿಂದ ತಯಾರಾದ ಲಿಪ್- ಪ್ಲೇಟುಗಳ ಮೇಲೆ ನಾನಾ ತರಹದ ಚಿತ್ತಾರ ಬಿಡಿಸುವುದು, ಪ್ಲೇಟಿನ ನಡುವೆ ತೂಕ ತಗ್ಗಿಸಲು ದೊಡ್ಡ ತೂತು ಕೊರೆಯುವುದೂ ಸಹ ಚಾಲ್ತಿಯಲ್ಲಿದೆ. ನಿರಾಡಂಬರ ಲಿಪ್-ಪ್ಲೇಟುಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಕೆಳ ತುಟಿಯನ್ನು ಕತ್ತರಿಸಿದ ನಂತರ, ಮೊದಲ ಮೂರ‍್ನಾಲ್ಕು ತಿಂಗಳ ಕಾಲ ಹುಡುಗಿ ಬಹಳ ನೋವನ್ನು ಅನುಬವಿಸಬೇಕಾಗುತ್ತದೆ. ಊಟ ಮಾಡುವುದು ಸಹ ಕಶ್ಟವಾಗುತ್ತದೆ. ಗಾಯವನ್ನು ಬೇಗ ಗುಣಪಡಿಸಲು ಮತ್ತು ನೋವನ್ನು ಕಡಿಮೆಗೊಳಿಸಲು, ಮುರ‍್ಸಿ ಜನಾಂಗದವರು ಗಿಡ ಮೂಲಿಕೆಗಳಿಂದ ತಯಾರಿಸಿದ ಮುಲಾಮನ್ನು ಬಳಸುತ್ತಾರೆ. ತುಟಿಯ ತಟ್ಟೆಗಳನ್ನು ತೊಡುವುದರಿಂದ ಹೆಣ್ಣುಮಕ್ಕಳ ಮಾತಿನ ಸ್ಪಶ್ಟತೆಯ ಮೇಲೆ ಸ್ವಲ್ಪ ಮಟ್ಟಿಗಿನ ಪರಿಣಾಮ ಬೀರುತ್ತದೆ. ಕೆಲವೊಂದು ಅಕ್ಶರಗಳು ಅಪಬ್ರಂಶವಾಗುತ್ತವೆ. ಸಾಮಾನ್ಯ ಮಾತುಕತೆಯಲ್ಲಿ, ಸಂವಹನದಲ್ಲಿ ಅವರುಗಳಿಗೆ ಹೆಚ್ಚು ವ್ಯತ್ಯಾಸ ಕಂಡುಬರುವುದಿಲ್ಲ. ಲಿಪ್-ಪ್ಲೇಟ್ ದರಿಸಿದ ಹೆಂಗಸರು ಬೇರೆಲ್ಲರಂತೆ ಕುಣಿಯುತ್ತಾರೆ. ಇದಕ್ಕೆ ಯಾವುದೇ ತೊಂದರೆಯಿರುವುದಿಲ್ಲ. ಹೈ ಹೀಲ್ಡ್ ಚಪ್ಪಲಿ ತೊಟ್ಟು ನಡೆಯುವ ಹೆಣ್ಣು ಮಕ್ಕಳಂತೆ, ಲಿಪ್-ಪ್ಲೇಟ್ ತೊಟ್ಟು ನಡೆಯುವ ಹೆಣ್ಣು ಮಕ್ಕಳಲ್ಲೂ ನಡಿಗೆ ನಿದಾನವಾಗುತ್ತದೆ ಮತ್ತು ನಡಿಗೆಯಲ್ಲಿ ಲಾಸ್ಯ ಇಣುಕುತ್ತದೆ.

ಈ ಜನಾಂಗದಲ್ಲಿ ವಯಸ್ಸಾದ ಅತವಾ ಮಕ್ಕಳಿರುವ ಹೆಂಗಸರಿಗಿಂತ ಹೆಚ್ಚಾಗಿ, ಮದುವೆಯಾಗದ ಹೆಣ್ಣು ಮಕ್ಕಳು ಮತ್ತು ಹೊಸದಾಗಿ ಮದುವೆಯಾದವರು ಲಿಪ್-ಪ್ಲೇಟನ್ನು ಹೆಚ್ಚಾಗಿ ತೊಡುತ್ತಾರೆ. ಸಾಮಾನ್ಯವಾಗಿ ಗಂಡಸರಿಗೆ ಊಟ ಬಡಿಸುವಾಗ, ಹಸುವಿನಿಂದ ಹಾಲನ್ನು ಕರೆಯುವಾಗ, ಮದುವೆಯಂತಹ ಸಮಾರಂಬ, ಜನಾಂಗದ ಪ್ರಮುಕ ಹಬ್ಬ ಹರಿದಿನ ಮತ್ತು ಆಚರಣೆಯ ಸಂದರ‍್ಬಗಳಲ್ಲಿ ಲಿಪ್-ಪ್ಲೇಟನ್ನು ತಪ್ಪದೆ ತೊಡುತ್ತಾರೆ. ಮುರ‍್ಸಿ ಜನಾಂಗದವರಲ್ಲಿ ಹಸುವಿನಿಂದ ಹಾಲು ಕರೆಯುವುದು ಅತ್ಯಂತ ಪವಿತ್ರ ಕೆಲಸ.

ಲಿಪ್-ಪ್ಲೇಟ್ ತೊಡುವುದು ಮುರ‍್ಸಿ ಜನಾಂಗದವರಲ್ಲಿ ಹಲವಾರು ಅರ‍್ತಗಳನ್ನು ಹೊಂದಿದೆಯಂತೆ. ಮೊದಲನೆಯದಾಗಿ ಲಿಪ್-ಪ್ಲೇಟ್ ಸೌಂದರ‍್ಯದ ಸಂಕೇತವಂತೆ. ಎರಡನೆಯದಾಗಿ, ಗಂಡನಿಗೆ ಬದ್ದತೆಯನ್ನು ಸೂಚಿಸುತ್ತದಂತೆ. ಗಂಡನ ಅಗಲಿಕೆಯಿಂದ ಹೆಣ್ಣಿನ ಹೊರ ಸೌಂದರ‍್ಯ ಮಸುಕಾಗುತ್ತದೆ ಎಂದು ಹೇಳುವ ಕಾರಣ, ಲಿಪ್-ಪ್ಲೇಟನ್ನು ಗಂಡ ಸತ್ತ ನಂತರ ಶಾಶ್ವತವಾಗಿ ತೆಗೆದುಹಾಕಲಾಗುತ್ತದೆ. ಕೊನೆಯದಾಗಿ ಲಿಪ್-ಪ್ಲೇಟ್ ಮುರ‍್ಸಿ ಜನಾಂಗದವರ ಅತ್ಯಂತ ಪ್ರಬಲ ಗುರುತಿನ ಅಂಗವಾಗಿದೆ. ಇದಿಲ್ಲವಾದಲ್ಲಿ ಬೇರೆ ಬುಡಕಟ್ಟಿನವರೆಂದು ತಪ್ಪಾಗಿ ತಿಳಿಯುವ ತೊಡುಕಿದೆಯಂತೆ.

ಕೊನೆ ಹನಿ: ಅತಿ ದೊಡ್ಡ ಲಿಪ್-ಪ್ಲೇಟ್ ದರಿಸಿ ಗಿನ್ನೆಸ್ ದಾಕಲೆಯಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಾಕೆ ಇತಿಯೋಪಿಯಾದ ಅತೇಯಾ ಎಲಿಗ್ನಾಡೆ. ಈಕೆ 2014ರಲ್ಲಿ 19.5 ಸೆ.ಮಿ. ವ್ಯಾಸದ ಲಿಪ್-ಪ್ಲೇಟ್ ತೊಟ್ಟಿದ್ದಳು.

(ಮಾಹಿತಿ ಮತ್ತು ಚಿತ್ರ ಸೆಲೆ: pixabay.com, mursi.org, icdo.at, mursi.org, jaynemclean.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: