ಉಶಾ ಸುಂದರ್ ರಾಜ್ – ‘ಪಿಂಗ್ ಪಾಂಗ್ ರಾಣಿ’

– ರಾಮಚಂದ್ರ ಮಹಾರುದ್ರಪ್ಪ.

ಕರ‍್ನಾಟಕ ರಾಜ್ಯ ದಶಕಗಳಿಂದಲೂ ಕ್ರಿಕೆಟ್ ಒಂದರಲ್ಲಿ ಮಾತ್ರವಲ್ಲದೆ ಅತ್ಲೆಟಿಕ್ಸ್, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಸೇರಿ ಹಲವಾರು ಆಟಗಳಲ್ಲಿ ಪ್ರಾಬಲ್ಯ ಸಾದಿಸುತ್ತಲೇ ಬಂದಿದೆ. ರಾಶ್ಟ್ರ ಮಟ್ಟದ ಪೋಟಿಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಕರ‍್ನಾಟಕ ಒಂದು ಬಗೆಯಲ್ಲಿ ಆಟೋಟಗಳ ತವರೂರು ಎಂದೇ ಹೇಳಬಹುದು. ಪ್ರತೀ ಆಟದಲ್ಲೂ ಒಬ್ಬರ ಹಿಂದೊಬ್ಬರಂತೆ ದಿಗ್ಗಜರನ್ನು ನಮ್ಮ ನಾಡು ಹುಟ್ಟುಹಾಕಿರುವುದು ಅಚ್ಚರಿಯೇನಲ್ಲ. ಆದರೆ ಇಂತಹ ಸಾಲು ಸಾಲು ದಿಗ್ಗಜರ ನಡುವೆ, ಎಲ್ಲಾ ಬಗೆಯ ಆಟಗಳಲ್ಲಿ ಮೊದಲ ಅಡಿಪಾಯ ಹಾಕಿ ಮುಂದಿನ ಬವಿಶ್ಯಕ್ಕೆ ನಾಂದಿ ಹಾಡಿದ ಆಟಗಾರರನ್ನು ನಾವೆಲ್ಲರೂ ವಿಶೇಶವಾಗಿ ನೆನೆಯಲೇಬೇಕು. ಹೀಗೆ ಟೇಬಲ್ ಟೆನ್ನಿಸ್ (ಪಿಂಗ್ ಪಾಂಗ್) ಆಟದಲ್ಲಿ ಯಾರೂ ಮಾಡದ ಸಾದನೆಯನ್ನು ಮಾಡಿ, ನಮ್ಮ ನಾಡಿಗೆ ರಾಶ್ಟ್ರಮಟ್ಟದಲ್ಲಿ ಕೀರ‍್ತಿ ತಂದ ಆಟಗಾರ‍್ತಿಯೇ ಪಿಂಗ್ ಪಾಂಗ್ ರಾಣಿ ಎಂದು ಅಕ್ಕರೆಯಿಂದ ಕರೆಯಲ್ಪಡುವ ಬೆಂಗಳೂರಿನ ಉಶಾ ಸುಂದರ್ ರಾಜ್ ಅವರು. ಕರ‍್ನಾಟಕದಲ್ಲಿ ಟೇಬಲ್ ಟೆನ್ನಿಸ್ ನ trailblazer ಎಂದೇ ಇಂದಿಗೂ ಅವರು ಹೆಸರುವಾಸಿ!

ಹುಟ್ಟು- ಎಳವೆಯಿಂದಲೇ ಆಟದ ಗೀಳು

1940 ರ ದಶಕದಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ ಉಶಾ ಅವರು ನಗರದ ಮಲ್ಲೇಶ್ವರದಲ್ಲಿ ಬೆಳೆದರು. ವಕೀಲರಾಗಿದ್ದ ಅವರ ತಂದೆ ಸುಂದರ್ ರಾಜ್ ಅವರು ತಮ್ಮ ಮಕ್ಕಳಾದ ರಮಾ ಮತ್ತು ಉಶಾ ಇಬ್ಬರಿಗೂ ಎಳೆವಯಿಂದಲೇ ಆಟೋಟಗಳಲ್ಲಿ ತೊಡಗಿಕೊಳ್ಳಲು ಬೇಕಾದ ಪ್ರೋತ್ಸಾಹ ಹಾಗೂ ಬೆಂಬಲ ನೀಡಿದರು. ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸುವುದೇ ದುಸ್ತರವಾಗಿದ್ದ ಕಾಲದಲ್ಲಿ ಸುಂದರ್ ರಾಜ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳ ಬೆನ್ನಿಗೆ ನಿಂತು ಚಲದಿಂದ ಅವರನ್ನು ಆಟಗಾರ‍್ತಿಯರನ್ನಾಗಿ ಮಾಡಲು ಸಾಕಶ್ಟು ಶ್ರಮ ಪಟ್ಟರು. ಉಶಾ ಅವರು ಎಂಟು ವರ‍್ಶದವರಾಗಿದ್ದಾಗ ಮೊದಲಿಗೆ ಅವರ ತಂದೆ ಮಲ್ಲೇಶ್ವರ ಅಸೋಶಿಯೇಶನ್ ನಲ್ಲಿ ವೇಟ್ ಲಿಪ್ಟಿಂಗ್ ತರಬೇತಿಗಾಗಿ ಕರೆದೊಯ್ಯುತ್ತಾರೆ. ಕೆಲ ದಿನಗಳ ಬಳಿಕ ಮಕ್ಕಳಿಬ್ಬರಿಗೂ ವೇಟ್ ಲಿಪ್ಟಿಂಗ್ ಹಿಡಿಸದಿದ್ದನ್ನು ಮನಗಂಡು ತಾವೇ ಕುದ್ದು ಉಶಾ ಹಾಗೂ ರಮಾ ಇಬ್ಬರಿಗೂ ಟೇಬಲ್ ಟೆನ್ನಿಸ್ ಆಡುವಂತೆ ಪ್ರೇರೇಪಿಸುತ್ತಾರೆ. ಮಲ್ಲೇಶ್ವರ ಅಸೋಶಿಯೇಶನ್‌ನಲ್ಲಿ ವ್ರುತ್ತಿಪರ ಟೇಬಲ್ ಟೆನ್ನಿಸ್ ಕೋಚ್ ಇಲ್ಲದಿದ್ದರೂ ಆಗಿನ ಕಾಲದ ರಾಜ್ಯದ ಉನ್ನತ ಆಟಗಾರರಾಗಿದ್ದ ಕೆ. ನಾಗರಾಜ್ ಅವರು ಅಕ್ಕ-ತಂಗಿಯರಿಗೆ ಆಟದ ಮೊದಲ ಪಟ್ಟುಗಳನ್ನು ಕಲಿಸುತ್ತಾರೆ. ರಕ್ಶಣಾತ್ಮಕ ತಂತ್ರಗಾರಿಕೆಯ (Defensive technique) ಮೇಲೆ ತಮ್ಮ ಆಟವನ್ನು ಬಲಗೊಳಿಸಿಕೊಂಡ ಉಶಾ ವರುಶದಿಂದ ವರುಶಕ್ಕೆ ಆಟಗಾರ‍್ತಿಯಾಗಿ ಪಕ್ವಗೊಳ್ಳುತ್ತಾ ಹೋಗುತ್ತಾರೆ. ನಂತರ ಬೆಂಗಳೂರಿನ ವೈ.ಎಮ್.ಸಿ.ಎ ಯಲ್ಲಿಯೂ ಬೆವರು ಹರಿಸಿದ ಉಶಾ ವ್ರುತ್ತಿಪರ ಟೇಬಲ್ ಟೆನ್ನಿಸ್ ಗೆ ಬೇಕಾದ ಎಲ್ಲಾ ಚಳಕಗಳನ್ನೂ ಮೈಗೂಡಿಸಿಕೊಳ್ಳುತ್ತಾರೆ. ಇನ್ನೂ ಹದಿಹರೆಯದಲ್ಲೇ ಹೆಚ್ಚುವರಿ ತರಬೇತಿ ಇಲ್ಲದೆಯೇ ಅವರು ತಮ್ಮ ಆಟವನ್ನು ಸುದಾರಿಸಿಕೊಂಡು ಮುಂದಿನ ಹಂತಕ್ಕೆ ಮುನ್ನುಗ್ಗಲು ಅಣಿಯಾಗಿದ್ದ ಪರಿ ನಿಜಕ್ಕೂ ಮೆಚ್ಚುವಂತಿತ್ತು. ಆಗಲೇ ಕರ‍್ನಾಟಕದ ಕ್ರೀಡಾವಲಯ ಉಶಾರ ಅಳವನ್ನು ಅರಿತು ಬರವಸೆಯ ಕಣ್ಣುಗಳಿಂದ ಅವರತ್ತ ನೋಡಲಾರಂಬಿಸಿತ್ತು.

ಉಶಾರ ವ್ರುತ್ತಿಬದುಕು

ತಮ್ಮ ವ್ರುತ್ತಿಬದುಕಿನ ಮೊದಲ್ಲೇ ಸಿಂಗಲ್ಸ್ ಪೋಟಿಯಲ್ಲಿ ಆಗಿನ ದೇಶದ ನಾಲ್ಕನೇ ಶ್ರೇಯಾಂಕಿತ ಆಟಗಾರ‍್ತಿ ಸಿ.ಕೆ.ಕೆ ಪಿಳ್ಳೈ ಅವರನ್ನು ಮಣಿಸಿ ಉಶಾ ತಮ್ಮ ಚೊಚ್ಚಲ ಪ್ರಶಸ್ತಿ ಗೆದ್ದರು. ಈ ದೊಡ್ಡ ಗೆಲುವು ಸಹಜವಾಗಿಯೇ ಕರ‍್ನಾಟಕದಲ್ಲಶ್ಟೇ ಹೆಸರುವಾಸಿಯಾಗಿದ್ದ ಉಶಾರಿಗೆ ರಾಶ್ಟ್ರಮಟ್ಟದಲ್ಲಿ ಪ್ರಕ್ಯಾತಿ ತಂದುಕೊಟ್ಟಿತು. ಈ ಗೆಲುವಿನ ಬುನಾದಿಯ ಮೇಲೆ ಅವರು ಯಶಸ್ಸಿನ ಒಂದೊಂದೇ ಮೆಟ್ಟಿಲು ಏರುತ್ತಾ ಹೋದರು. ಆ ಬಳಿಕ ಅವರು ಮೈಸೂರು ರಾಜ್ಯ ಸಿಂಗಲ್ಸ್ ಪೋಟಿ ಪ್ರಶಸ್ತಿಯನ್ನು ಸತತ 21 ವರ‍್ಶಗಳ ಕಾಲ ಗೆದ್ದರು! ಅರ‍್ದ ಶತಮಾನದ ನಂತರ ಕೂಡ ಇದು ಇಂದಿಗೂ ಮುರಿಯದ ದಾಕಲೆ. ಹಾಗೆ ಅವರಕ್ಕ ರಮಾರೊಂದಿಗೆ ಉಶಾ ರಾಶ್ಟ್ರ ಮಟ್ಟದಲ್ಲಿ ಡಬಲ್ಸ್ ಪೋಟಿಯಲ್ಲೂ ಸೆಣಸಿ ಹಲವಾರು ಪಂದ್ಯಾವಳಿಗಳನ್ನು ಗೆದ್ದರು. ಅಕ್ಕ-ತಂಗಿ ಒಟ್ಟಿಗೆ ಆಡುವಾಗ ನೋಡಲು ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಿದ್ದದ್ದು ಅವರ ಜನಪ್ರಿಯತೆಗೆ ಸಾಕ್ಶಿಯಾಗಿತ್ತು. ಅಕ್ಕ ರಮಾ ಮದುವೆಯ ಬಳಿಕ ಆಟದಿಂದ ದೂರ ಸರಿದರೂ ಉಶಾರ ಗೆಲುವಿನ ನಾಗಾಲೋಟ ಮುಂದುವರೆಯುತ್ತಲೇ ಹೋಯಿತು. ತಮ್ಮ ವ್ರುತ್ತಿ ಬದುಕಿನಲ್ಲಿ ಮಹಿಳೆಯರ ರಾಶ್ಟ್ರೀಯ ಪಂದ್ಯಾವಳಿಯ ಸಿಂಗಲ್ಸ್ ಪೋಟಿಯಲ್ಲಿ ಒಟ್ಟು ಐದು ಬಾರಿ (1961, 64, 65, 66 ಮತ್ತು 68) ಗೆದ್ದರೆ ಏಳು ಬಾರಿ ರನ್ನರ್ ಅಪ್ ಆದರು. ಇದು ಇಂದಿಗೂ ಟೇಬಲ್ ಟೆನ್ನಿಸ್ ನಲ್ಲಿ ಕರ‍್ನಾಟಕದ ಆಟಗಾರ‍್ತಿಯೊಬ್ಬರ ಶ್ರೇಶ್ಟ ಸಾದನೆ. ಉಶಾರ 1968 ರ ಗೆಲುವಿನ ಬಳಿಕ ಕರ‍್ನಾಟಕದ ಇನ್ನೊಬ್ಬ ಆಟಗಾರ‍್ತಿ ಈ ಪ್ರತಿಶ್ಟಿತ ರಾಶ್ಟ್ರೀಯ ಪ್ರಶಸ್ತಿ ಗೆಲ್ಲಲ್ಲು 51 ವರ‍್ಶ ಹಿಡಿಯಿತು (ಅರ‍್ಚನಾ ಕಾಮತ್ -2019) ಎಂದರೆ ಐದು ಬಾರಿ ಗೆದ್ದ ಉಶಾರ ಸಾದನೆ ಎಂತಹ ವಿಶೇಶ ಮತ್ತು ಅಪರೂಪವಾದದ್ದು ಎಂದು ಯಾರಾದರೂ ಊಹಿಸಬಹುದು.

ಓದಲ್ಲೂ ಮುಂದಿದ್ದ ಉಶಾ ಆಟದ ದೆಸೆಯಿಂದ ಎಂದೂ ಕಲಿಕೆಯಲ್ಲಿ ಹಿಂದೆ ಬೀಳಲಿಲ್ಲ. ಎಸ್.ಎಸ್.ಎಲ್.ಸಿ ಯಲ್ಲಿ 68% ಪಡೆದು ತೇರ‍್ಗಡೆಯಾದ ಅವರು ಮೌಂಟ್ ಕಾರ‍್ಮಲ್ ಕಾಲೇಜ್ ನಲ್ಲಿ ಪದವಿ ಪಡೆದು ಆ ಬಳಿಕ ಸೆಂಟ್ರಲ್ ಕಾಲೇಜ್ ನಲ್ಲಿ ಇಂಗ್ಲಿಶ್ ಸಾಹಿತ್ಯದಲ್ಲಿ ನಲ್ಲಿ ಸ್ನಾತಕೋತ್ತರ ಪದವಿ ಕೂಡ ಪಡೆದರು. ಆಟದ ದಿನಗಳಲ್ಲಿಯೇ ಮೊದಲಿಗೆ ಅಕೌಂಟಂಟ್ ಜನರಲ್ ಕಚೇರಿಯಲ್ಲಿ (AG’s Office) ಸೇವೆ ಆರಂಬಿಸಿದ ಅವರು ನಂತರ ಮೈಸೂರು ಬ್ಯಾಂಕ್ ನಲ್ಲಿ ಪ್ರೊಬೇಶನರಿ ಅದಿಕಾರಿಯಾಗಿ ವ್ರುತ್ತಿ ಬದಲಾಯಿಸಿ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಏರಿದರು. ಆಟ ಮತ್ತು ವ್ರುತ್ತಿ ಎರಡನ್ನೂ ಅಡ್ಡಪರಿಣಾಮಗಳಿಲ್ಲದೆ ಒಂದೇ ಕಾಲದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿದ್ದ ಅವರ ಚಾಕಚಕ್ಯತೆ ಎಲ್ಲರನ್ನು ಬೆಕ್ಕಸ ಬೆರಗಾಗಿಸಿದ್ದು ಸುಳ್ಳಲ್ಲ. ಈ ಬಗೆಯ ವ್ರುತ್ತಿಪರತೆ ತಮಗೆ ವಕೀಲರಾದ ತಂದೆಯಿಂದ ಬಂದ ಬಳುವಳಿ ಎಂದು ಉಶಾ ಅವರು ಸದಾ ನೆನೆಯುತ್ತಿದ್ದರು. ರಾಶ್ಟ್ರೀಯ ಮಟ್ಟದಲ್ಲದೆ ಅಂತರಾಶ್ಟ್ರೀಯ ಪಂದ್ಯಾವಳಿಗಳಾದ ಏಶಿಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ವರ‍್ಲ್ಡ್ ಚಾಂಪಿಯನ್ಶಿಪ್ ಗಳಲ್ಲಿಯೂ ಉಶಾ ಬಾರತದ ಪರ ಕಣಕ್ಕಿಳಿದಿದ್ದು ಅವರ ಕಿರೀಟಕ್ಕೆ ಇನ್ನೊಂದು ಗರಿ ಸೇರಿಸಿತು. ಬಾರತದಲ್ಲಿ ಟೇಬಲ್ ಟೆನ್ನಿಸ್ ಕಲಿಕೆಗೆ ಹೇಳಿಕೊಳ್ಳುವಂತಹ ಉನ್ನತ ಮಟ್ಟದ ತರಬೇತಿಯ ಏರ‍್ಪಾಡುಗಳಿಲ್ಲದೆಯೇ ಅಂತರಾಶ್ಟ್ರೀಯ ಮಟ್ಟದಲ್ಲಿ ಉಶಾ ದೊಡ್ಡ ಆಟಗಾರರಿಗೆ ಸರಿಸಮಾನವಾಗಿ ಪೋಟಿ ನೀಡಿದ್ದು ಅವರ ಅಳವಿಗೆ ಎತ್ತುಗೆಯಾಗಿತ್ತು. ಪಾದರಸದಂತೆ ಕೋರ‍್ಟ್ ನ ಎಲ್ಲಾ ಕಡೆ ಓಡಾಡುತ್ತಾ ತಮ್ಮ ರಾಕೆಟ್ ಚಳಕದಿಂದ ಉಶಾ ಆಟದ ಒಲವಿಗರ ನೆಚ್ಚಿನ ಆಟಗಾರ‍್ತಿಯಾಗಿದ್ದರು. ಸೆರ‍್ವ್ ಅನ್ನು ಅವರು ಆಕ್ರಮಣಕಾರಿಯಾಗಿ ಹಿಂದಿರುಗಿಸುತ್ತಿದ್ದ ಬಗೆ ಸೊಗಸಾಗಿತ್ತಲ್ಲದೆ ವಿಮರ‍್ಶಕರ ಮೆಚ್ಚುಗೆಯನ್ನೂ ಗಳಿಸಿತ್ತು. 1965 ರಲ್ಲಿ ಶ್ರೇಶ್ಟ ಆಟಗಾರ‍್ತಿ ಪ್ರಶಸ್ತಿ ಪಡೆದ ಬಳಿಕ ಉಶಾರ ಸಾದನೆಯನ್ನು ಗಮನಿಸಿ ಬಾರತ ಸರ‍್ಕಾರ 1966 ರಲ್ಲಿ ಪ್ರತಿಶ್ಟಿತ ಅರ‍್ಜುನ ಪ್ರಶಸ್ತಿ ನೀಡಿ ಗೌರವಿಸಿತು. ಇದು ಉಶಾರ ಅನಿಯಮಿತ ಕೊಡುಗೆಗೆ ಸರ‍್ಕಾರದಿಂದ ದೊರೆತ ಮನ್ನಣೆ ಎಂದೇ ಹೇಳಬೇಕು.

ನಿವ್ರುತ್ತಿ ನಂತರದ ಬದುಕು

1976 ರಲ್ಲಿ ಟೇಬಲ್ ಟೆನ್ನಿಸ್ ಕೋರ‍್ಟ್ ನಿಂದ ದೂರ ಸರಿದ ಬಳಿಕ ಕೂಡ ಉಶಾ ಆಟದೊಂದಿಗೆ ತಮ್ಮ ನಂಟನ್ನು ಬಹುಕಾಲ ಉಳಿಸಿಕೊಂಡಿದ್ದರು. ಮೊದಲಿಗೆ ತಮ್ಮ ನೆಚ್ಚಿನ ಮಲ್ಲೇಶ್ವರ ಅಸೋಶಿಯೇಶನ್ ನ ಸಕ್ರಿಯ ಸದಸ್ಯೆಯಾಗಿ ದುಡಿದ ಅವರು ಬಳಿಕ 1988 ರ ಸಿಯೋಲ್ ಏಶಿಯನ್ ಗೇಮ್ಸ್ ನಲ್ಲಿ ಬಾರತದ ಕೋಚ್ ಆಗಿ ಸೇವೆ ಸಲ್ಲಿಸಿದರು. ನಂತರ 1996 ರ ಅಟ್ಲಾಂಟಾ ಒಲಂಪಿಕ್ಸ್ ಗೆ ಸರ‍್ಕಾರಿ ಅದಿಕಾರಿಯಾಗಿ ಆಟಗಾರರ ಉಸ್ತುವಾರಿ ವಹಿಸಿದರು. ಅದಲ್ಲದೆ ಯುವ ಆಟಗಾರರು ಮತ್ತು ಆಟಗಾರ‍್ತಿಯರು ಸಹಾಯ ಕೋರಿ ಬಂದಾಗ ತಮ್ಮ ಅನುಬವವನ್ನು ದಾರೆ ಎರೆದು ಉಶಾ ಆಟದ ತಾಂತ್ರಿಕ ಪಟ್ಟುಗಳನ್ನು ಕಲಿಸುತ್ತಿದ್ದರು. ತಮಗೆ ಬೇಕಾದ್ದನ್ನೆಲ್ಲ ನೀಡಿದ ಆಟಕ್ಕೆ ನಾನು ಹಿಂದುರಿಗಿಸಬಹುದಾದ್ದು ಇದೇ ಎಂಬುದು ಅವರ ಅಂಬೋಣವಾಗಿತ್ತು.

ಉಶಾ ಎಂಬ ಅಪರೂಪದ ಪ್ರತಿಬೆ!

ತಮ್ಮ ಆಟದ ದಿನಗಳ ಬಗೆಗಾಗಲಿ ತಮಗೆ ದೊರಕದ ಒಳ್ಳೆ ಗುಣಮಟ್ಟದ ಸೌಕರ‍್ಯಗಳ ಬಗೆಗಾಗಲಿ ಎಂದಿಗೂ ಬೇಸರ ಪಟ್ಟುಕೊಳ್ಳದ ಉಶಾ ತಮ್ಮನ್ನು ಆಡುವಂತೆ ಪ್ರೋತ್ಸಾಹಿಸಿದ ತಂದೆ ಹಾಗೂ ತಾಯಿಯನ್ನು ಸದಾ ನೆನೆಯುತ್ತಿದ್ದರು. ಅದರಲ್ಲಿಯೂ ಆಟಕ್ಕಾಗಿ ಹೊರರಾಜ್ಯ ಅತವಾ ಬೇರೆ ಊರುಗಳಿಗೆ ಹೋಗಬೇಕಾದ ಸಂದರ‍್ಬ ಎದುರಾದಾಗ ಅವರ ತಾಯಿ ಅತವಾ ತಂದೆ ತಮ್ಮ ಕೆಲಸಗಳನ್ನು ಬದಿಗಿಟ್ಟು ಮಗಳೊಂದಿಗೆ ಪ್ರಯಾಣ ಬೆಳೆಸುತ್ತಿದ್ದನ್ನು ಉಶಾ ಇಂದಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. 1950-60 ರ ದಶಕದಲ್ಲಿ ಮಗಳಿಗಾಗಿ ಹೆತ್ತವರ ಆ ಬಗೆಯ ತ್ಯಾಗ ವಿಶೇಶ ಎನಿಸದೆ ಇರದು! ಈಗಿನ ಆಟದ ಸೌಕರ‍್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ, ಬಾರತದ ಆಟಗಾರರು ಈಗ ಹೊರದೇಶಗಳಿಗೂ ಹೋಗಿ ತರಬೇತಿ ಪಡೆಯುವಂತಹ ವ್ಯವಸ್ತೆ ಹಾಗೂ ವಾತಾವರಣ ಸ್ರುಶ್ಟಿಯಾಗಿರುವುದರ ಬಗ್ಗೆ ಉಶಾ ಸಂತಸ ಪಡುತ್ತಿದ್ದರು.

ಒಳ್ಳೆ ಅಡಿಪಾಯ ದೊರೆತು ಆಟದ ಸಲಕರಣೆ ಇಂದ ಹಿಡಿದು ಎಲ್ಲಾ ಬಗೆಯ ಉನ್ನತ ಸೌಕರ‍್ಯ ಹಾಗೂ ಶ್ರೇಶ್ಟ ಕೋಚ್ ಗಳು ನಮ್ಮಲ್ಲಿಯೂ ಸಿಕ್ಕರೆ ಅಂತರಾಶ್ಟ್ರೀಯ ಪೋಟಿಗಳಲ್ಲಿಯೂ ಟೇಬಲ್ ಟೆನ್ನಿಸ್ ಆಟದಲ್ಲಿ ಬಾರತ ಪದಕ ಗೆಲ್ಲಬಹುದು ಎಂಬುದು ಉಶಾರ ನಿಚ್ಚಳ ನಂಬಿಕೆಯಾಗಿತ್ತು! ಹೀಗೆ ದಶಕಗಳ ಕಾಲ ಟೇಬಲ್ ಟೆನ್ನಿಸ್ ಗೆ ತಮ್ಮ ಬದುಕನ್ನು ಮುಡುಪಾಗಿಟ್ಟು ಕರ‍್ನಾಟಕ ಹಾಗೂ ಬಾರತಕ್ಕೆ ಕೀರ‍್ತಿ ತಂದಿದ್ದ ಹೆಮ್ಮೆಯ ಕನ್ನಡತಿ ಉಶಾ ಎಲೆ ಮರೆಕಾಯಿಯಂತೆ ಬೆಂಗಳೂರಿನಲ್ಲಿ ತಮ್ಮ ಕಡೇ ದಿನಗಳನ್ನು ಕಳೆದು 80ರ ಹರೆಯದಲ್ಲಿ, ಇದೇ 2022ರ ಸೆಪ್ಟೆಂಬರ್ 5 ರಂದು ನಮ್ಮನ್ನೆಲ್ಲಾ ಅಗಲಿದರು. ಅಂದಿಗೆ ಬಾರತದ ಟೇಬಲ್ ಟೆನ್ನಿಸ್ ಇತಿಹಾಸದ ಒಂದು ದೊಡ್ಡ ಕೊಂಡಿ ಕಳಚಿದಂತಾಯಿತು. ಉಶಾರ ವ್ರುತ್ತಿಬದುಕಿನ ಸಾದನೆ ಹಾಗೂ ಕೊಡುಗೆಯನ್ನು ಎಂದಿಗೂ ಮರೆಯದೆ ತಪ್ಪದೆ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಹೊಣೆ ಕನ್ನಡಿಗರಾದ ನಮ್ಮ ಮೇಲಿದೆ. ಇಂತಹ ಅಪರೂಪದ ಪ್ರತಿಬೆಯ ಹೆಸರು ಇತಿಹಾಸದ ಪುಟಗಳಲ್ಲಿ ಸದಾ ರಾರಾಜಿಸುವಂತೆ ನೋಡಿಕೊಳ್ಳೋಣ. ಇದೇ ಉಶಾರಂತಹ ದಿಗ್ಗಜೆಗೆ ನಾವು ತೋರಬಹುದಾದ ಗೌರವ.

(ಚಿತ್ರ ಸೆಲೆ: timesofindia, Book: Sporting Legends of Bangalore)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: