ದೀಪಾವಳಿ ಸಡಗರ
ಹಬ್ಬಗಳಲ್ಲೇ ದೀಪಾವಳಿ ಹಬ್ಬವು ಒಂದು ಬಗೆಯ ವರ್ಣರಂಜಿತವಾದ ಹಬ್ಬ.ಮಕ್ಕಳಿಗೆ ಈ ಹಬ್ಬವೆಂದರೆ ಅಚ್ಚುಮೆಚ್ಚು. ದೀಪಾವಳಿ ಹಬ್ಬ ಎಂದರೆ ಹಬ್ಬದ ದಿನ ಸಂಜೆಯ ಹೊತ್ತು ಎಲ್ಲರ ಮನೆ ಮುಂದೆ ಪ್ರಜ್ವಲಿಸುವ ಹಣತೆಗಳು, ಕಿವಿಗೆ ಬೀಳುವ ಪಟಾಕಿ ಸದ್ದು ಹಾಗೂ ಅಮ್ಮಂದಿರು ತಯಾರಿಸುವ ಸಿಹಿ ಸಿಹಿ ಕಜ್ಜಾಯ. ಹೀಗೆ ಇವಿಶ್ಟು ಚಿತ್ರಣ ನಮ್ಮ ಮನದಲ್ಲಿ ಮೂಡುವುದು. ಆದರೆ ಈ ವರ್ಣರಂಜಿತ ಹಬ್ಬದ ಆಚರಣೆಯಲ್ಲಿ ಪೌರಾಣಿಕ ಹಿನ್ನೆಲೆಯೂ ಅಡಗಿದೆ ಎನ್ನುವುದು ವಿಶೇಶ. ತ್ರೇತಾಯುಗದಲ್ಲಿಯೇ ಈ ಹಬ್ಬವನ್ನು ಆಚರಿಸುತ್ತಿದ್ದರೆಂಬ ಉಲ್ಲೇಕಗಳಿವೆ. ಲಂಕಾದಿಪತಿ ರಾವಣಾಸುರನನ್ನು ವದಿಸಿದ ಅಯೋದ್ಯೆಯ ಪ್ರಬು ಶ್ರೀ ರಾಮನು 14ವರ್ಶಗಳ ಕಾಲ ವನವಾಸ ಮುಗಿಸಿ ಅಯೋದ್ಯೆಗೆ ಹಿಂದಿರುಗಿದಾಗ, ಆತನನ್ನು ಸ್ವಾಗತಿಸಿ ಅಲ್ಲಿನ ಪ್ರಜೆಗಳು ದಾರಿಯುದ್ದಕ್ಕೂ ದೀಪಗಳನ್ನು ಅಂಟಿಸಿ ಸಾಲು ಸಾಲು ದೀಪಗಳೊಂದಿಗೆ ದೀಪಾವಳಿಯನ್ನು ಸಂಬ್ರಮಿಸಿದರಂತೆ.
ದೀಪಾವಳಿಯ ಹಬ್ಬದ ಸಮಯದಲ್ಲಿ ಮೊದಲಿಗೆ ಅಬ್ಯಂಜನ ಸ್ನಾನ ಮಾಡುವ ಸಂಪ್ರದಾಯ ನಮ್ಮಲ್ಲಿದೆ. ಕಾರಣ ಪುರಾಣದಲ್ಲಿ ತಿಳಿಸಿರುವಂತೆ ಸಮುದ್ರ ಮಂತನದ ವೇಳೆ ವಿಶ್ಣುವು ಅಮ್ರುತ ಕಲಶದೊಡನೆ ದನ್ವಂತರಿಯಾಗಿ ಅವತಾರವೆತ್ತಿದ. ಈ ದಿನ ಬಳಸುವ ಸ್ನಾನದ ನೀರಿನಲ್ಲಿ ಗಂಗೆಯೂ ಹಾಗೂ ಎಣ್ಣೆಯಲ್ಲಿ ಲಕ್ಶ್ಮಿಯೂ ಇದ್ದು ಸಕಲ ಸಂಪತ್ತು, ಆರೋಗ್ಯ ಅಬ್ಯುದಯಗಳು ಕರುಣಿಸುವುದೆಂಬ ಪ್ರತೀತಿಯಿದೆ. ನರಕಾಸುರನನ್ನು ಕೊಂದ ನಂತರ ಪಾಪ ಪರಿಹಾರಕ್ಕಾಗಿ ಶ್ರೀ ಕ್ರಿಶ್ಣನು ಸಹ ಅಬ್ಯಂಜನ ಸ್ನಾನ ಮಾಡಿದನಂತೆ. ಹಿಂದಿನಿಂದಲೂ ಕಾರ್ತಿಕ ಮಾಸದಲ್ಲಿ ಐದು ದಿನಗಳ ಕಾಲ ದೀಪಾವಳಿ ಹಬ್ಬವನ್ನು ಆಚರಿಸುವುದಾದರೂ, ಪ್ರಮುಕವಾಗಿ ಮೂರು ದಿನಗಳು ಮಾತ್ರ ತಪ್ಪದೇ ಎಲ್ಲೆಡೆ ಇದರ ಆಚರಣೆ ಜರುಗುವುದು.
ಮೊದಲನೆಯ ದಿನವಾದ ನರಕಚತುರ್ದಶಿಯು, ಶ್ರೀ ಕ್ರಿಶ್ಣನು ನರಕಾಸುರನನ್ನು ವದೆ ಮಾಡಿ ಬಲಿ ಪಡೆದ ದಿನ. ಬೂಲೋಕದಲ್ಲಿ ದೈತ್ಯ ರಕ್ಕಸನಾದ ನರಕಾಸುರನ ಅಟ್ಟಹಾಸವನ್ನು ತಡೆಯಲಾಗದೇ ತಾಯಿ ಬೂದೇವಿಯು ಮಗನಿಗೆ ಬುದ್ದಿ ಕಲಿಸುವಂತೆ ಶ್ರೀ ಕ್ರಿಶ್ಣನು ಮೊರೆಯಿಟ್ಟಳಂತೆ. ಆಕೆಯ ಕೋರಿಕೆಯಂತೆ ಆಶ್ವಯುಜ ಕ್ರಿಶ್ಣನು ಚತುರ್ದಶಿಯಂದು ಕಗ್ಗತ್ತಲಿನಲ್ಲಿ ನರಕಾಸುರನನನ್ನು ಸಂಹರಿಸಿ ಆತನ ಸೆರೆಯಲ್ಲಿದ್ದ ಸಹಸ್ರಾರು ಸಂಕ್ಯೆಯ ಕನ್ಯೆಯರನ್ನು ಬಿಡಿಸಿ ಮುಕ್ತಿ ನೀಡಿದನಂತೆ.
ಹಾಗೆಯೇ ಈಗಿನ ಕಲಿಯುಗದಲ್ಲೂ ಕನ್ಯಾಸೆರೆಯನ್ನು ಬಿಡಿಸಿದ ಕ್ರಿಶ್ಣನು ರೂಪದಲ್ಲಿರುವ ಅಳಿಯನನ್ನು ಅತ್ತೆಮಾವಂದಿರು ಈ ಹಬ್ಬದ ಆಚರಣೆಯಲ್ಲಿ ಮಗಳೊಂದಿಗೆ ಮನೆಗೆ ಆಹ್ವಾನಿಸಿ ನೂತನ ವದುವರರನ್ನು ಸಂತೈಸಿ ಉಡುಗೊರೆ ನೀಡಿ ಆಶೀರ್ವದಿಸುವ ಸಂಪ್ರದಾಯ ಈಗಲೂ ಇದೆ. ಶ್ರೀ ಕ್ರಿಶ್ಣನು ದುಶ್ಟ ನರಕಾಸುರನನ್ನು ಸದೆಬಡಿದು ಬೂಮಿಯಲ್ಲಿ ಸುಟ್ಟಾಗ ಅನೇಕ ಬಣ್ಣ ಬಣ್ಣದ ರಾಸಾಯನಿಕಗಳು ಸಿಡಿಯಲ್ಪಟ್ಟವಂತೆ. ಇದರ ಕುರುಹಾಗಿ ಪಟಾಕಿಗಳನ್ನು ಸಿಡಿಸುವ ಪದ್ದತಿಯು ರೂಡಿಯಲ್ಲಿದೆ ಎಂಬ ನಂಬಿಕೆ.
ನರಕಚತುರ್ದಶಿಯ ಮಾರನೇ ದಿನ ದೀಪಾವಳಿಯ ಅಮವಾಸ್ಯೆಯಂದು ವಿಶ್ಣುವಿನ ಸತಿ ಮಹಾಲಕ್ಶ್ಮಿಯನ್ನು ನೆನೆಯುವ ಪುಣ್ಯ ದಿನ. ಅದುವೇ ದನಲಕ್ಶ್ಮೀ ಪೂಜೆ. ಸಾಮಾನ್ಯವಾಗಿ ಉತ್ತರ ಬಾರತದಲ್ಲಿ ಇದು ಹೆಚ್ಚು ಪ್ರಚಲಿತ. ಈಗೀಗ ದಕ್ಶಿಣ ಬಾರತದಲ್ಲಿ ಕೂಡ ಇದರ ಆಚರಣೆಯಿದೆ. ಎಲ್ಲಾ ವ್ಯಾಪಾರಿಗಳು ತಮ್ಮ ವಾಣಿಜ್ಯ ಕೇಂದ್ರಗಳಲ್ಲಿ ವ್ಯಾಪಾರ ಸುಗಮವಾಗಲೆಂದು ದನಲಕ್ಮೀ ಪೂಜೆ ಮಾಡುವ ದಿನ. ಈ ಮಹಾದಿನದಂದು ಮನೆಗಳಲ್ಲಿಯೂ ಸಹ ಸಂಪತ್ತು ಮತ್ತು ಆರೋಗ್ಯ ವ್ರುದ್ದಿಗಾಗಿ ದೀಪಾರಾದನೆಯನ್ನು ಮಾಡಿ ಲಕ್ಶ್ಮೀದೇವಿಯ ಆರಾದನೆಯನ್ನು ನೆರವೇರಿಸುತ್ತಾರೆ.
ದೀಪಾವಳಿಯ ಮೂರನೆಯ ದಿನ ಬಲಿಪಾಡ್ಯಮಿ. ಪುರಾಣದ ಪ್ರಕಾರ ಮಹಾವಿಶ್ಣುವಿನ ಪರಮಬಕ್ತನಾದ ದಾನಶೂರ, ಮಹಾವೀರ ಬಲಿಚಕ್ರವರ್ತಿಗೆ ವಾಮನ ರೂಪದಲ್ಲಿ ವಿಶ್ಣುವು ದರ್ಶನ ನೀಡುತ್ತಾನೆ.ನಂತರ ಮೂರು ಹೆಜ್ಜೆ ಊರುವಶ್ಟು ಬೂಮಿಯನ್ನು ಪಡೆದು, ಎರಡು ಹೆಜ್ಜೆಗಳಲ್ಲಿ ಆಕಾಶ ಬೂಮಿಯನ್ನು ಅಳೆದು ತ್ರಿವಿಕ್ರಮನಾಗಿ ಬೆಳೆದು, ಬಲಿಚಕ್ರವರ್ತಿಯ ಮೊರೆಯಂತೆ ಆತನ ತಲೆಯ ಮೇಲೆ ಮೂರನೆಯ ಹೆಜ್ಜೆಯನ್ನಿಟ್ಟು ಬಲಿಯನ್ನು ಪಾತಾಳಕ್ಕೆ ತುಳಿದುಬಿಟ್ಟನಂತೆ. ಅವನ ಬಕ್ತಿಗೆ ಒಲಿದ ಮಹಾವಿಶ್ಣುವು ಕಾರ್ತಿಕ ಮಾಸದ ಒಂದು ದಿನ ಅಂದರೆ ಶುಕ್ಲ ಪಕ್ಶದ ಪಾಡ್ಯದ ದಿನ ಬಲಿಚಕ್ರವರ್ತಿಯನ್ನು ನೆನೆದು ಆರಾದನೆ ಮಾಡುವ ವರವನ್ನು ದಯಪಾಲಿಸಿದನು. ಆ ದಿನವೇ ಬಲಿಪಾಡ್ಯಮಿ. ಅಂದು ಬಲಿಚಕ್ರವರ್ತಿ ಬೂಸಂಚಾರ ಮಾಡುವನೆಂಬ ನಂಬಿಕೆಯಿಂದ ದೀಪಾವಳಿ ಹಬ್ಬದ ಮೂರನೆಯ ದಿನದಂದು ದೀಪಾರಾದನೆಯೊಂದಿಗೆ ಬಲೀಂದ್ರ ಪೂಜೆಗಳು ನಡೆಯುತ್ತವೆ.
ಹೀಗೆ ಮೂರು ದಿನಗಳ ಕಾಲ ವರ್ಣರಂಜಿತ ದೀಪಗಳ ಅಲಂಕಾರ ಮತ್ತು ಆರಾದನೆಗಳು ನಡೆಯುವ ಆಚರಣೆಯೇ ದೀಪಾವಳಿ ಹಬ್ಬ. ಮನೆಯ ಸುತ್ತ ಮುತ್ತ ದೀಪಗಳನ್ನು ಹಚ್ಚುವುದರಿಂದ ರುಣಾತ್ಮಕ ಶಕ್ತಿಗಳು ಒಳಬರದೆ ದೂರಸರಿಯುವವು. ಜೊತೆಗೆ ಪರಿಸರವು ಶುದ್ದವಾಗುವುದೆಂದು ನಂಬಲಾಗಿದೆ.
( ಚಿತ್ರಸೆಲೆ : pixahive.com )
ಇತ್ತೀಚಿನ ಅನಿಸಿಕೆಗಳು