ಆಕ್ವಾಡಾಮ್: ವಿಶ್ವದ ಅತಿ ದೊಡ್ಡ ಸಿಲಂಡರಿನಾಕಾರದ ಆಕ್ವೇರಿಯಂ.

– .

ಅನೇಕರು ತಮ್ಮ ಮನೆಯ ಹಾಲಿನಲ್ಲಿ ಆಕ್ವೇರಿಯಂ ಹೊಂದಿರುತ್ತಾರೆ. ಇದು ಅವರುಗಳ ಪ್ರತಿಶ್ಟತೆಯ ಸಂಕೇತವೂ ಹೌದು. ಮತ್ತೆ ಕೆಲವರಿಗೆ ನಿಜಕ್ಕೂ ಆಕ್ವೇರಿಯಂ ಬಗ್ಗೆ ಅಸಾದಾರಣ ಆಸಕ್ತಿ ಇರುತ್ತದೆ. ಅಂತಹವರಿಗೆ ಬರ‍್ಲಿನ್ ನಗರದಲ್ಲಿರುವ ಆಕ್ವಾಡಮ್ ಕಂಡಿತ ನಿರಾಶೆಗೊಳಿಸುವುದಿಲ್ಲ. ಏಕೆಂದರೆ ಇದು ವಿಶ್ವದ ಅತಿ ದೊಡ್ಡ ಸಿಲಂಡರಿನಾಕಾರದ ಆಕ್ವೇರಿಯಂ.

ಬರ‍್ಲಿನ್ ನಗರದ ರ‍್ಯಾಡಿಸನ್ ಬ್ಲೂ ಹೋಟೇಲಿನಲ್ಲಿರುವ ಈ ದೊಡ್ಡ ಆಕ್ವಾಡಮ್ಮಿನ ಎತ್ತರ ಹದಿನಾರು ಮೀಟರ್. ಇದರ ದುಂಡಗಲ ಹನ್ನೊಂದು ಮೀಟರ್. ಇದರಲ್ಲಿ ಸುಮಾರು ಹತ್ತು ಲಕ್ಶ ಲೀಟರ್ ಉಪ್ಪು ನೀರನ್ನು ಕೂಡಿಟ್ಟು, ಕಡಲಿನ ವಾತಾವರಣವನ್ನು ಹುಟ್ಟುಹಾಕಿದ್ದಾರೆ. ಇಲ್ಲಿ ಐವತ್ತಾರು ವಿವಿದ ಜಾತಿಯ ಮೀನುಗಳ ಸಂಗ್ರಹವಿದೆ. ಅದರೊಂದಿಗೆ 1500 ಉಶ್ಣವಲಯದ ಮೀನುಗಳಿವೆ. ಈ ಆಕ್ವಾಡಾಮಿನ ಮದ್ಯ ಬಾಗದಲ್ಲಿ ಗಾಜಿನ ಎಲಿವೇಟರ್ ಇದೆ. ಇದರಲ್ಲಿ ಕೆಳಗೆ ಇಳಿಯುತ್ತಿದ್ದಂತೆ ಅದರ ಸುತ್ತ ವಿವಿದ ಜಾತಿಯ 2000 ಕ್ಕೂ ಹೆಚ್ಚು ಮೀನುಗಳು ಸುತ್ತುವರೆಯುತ್ತವೆ. ಆಕ್ವೇರಿಯಂನ ಕೆಳ ಬಾಗದಲ್ಲಿ ವರ‍್ಣರಂಜಿತ ಹವಳದ ಕಲ್ಲುಗಳ ರಚನೆಯಿದೆ. ಇದು ಮೀನುಗಳಿಗೆ ಸಾಗರದ ವಾತಾವರಣವನ್ನು ಹುಟ್ಟುಹಾಕುತ್ತದೆ. ಇದರಲ್ಲಿನ ಮೀನುಗಳಿಗೆ ಆಹಾರವನ್ನು ನೀಡಲು, ಪೂರ‍್ಣ ಪ್ರಮಾಣದ ಇಬ್ಬರು ಸ್ಕೂಬಾ ಡೈವರ್ ಗಳಿದ್ದಾರೆ. ಇಲ್ಲಿನ ಮೀನುಗಳಿಗೆ ದಿನವೊಂದಕ್ಕೆ 8 ಕೆ.ಜಿ. ಆಹಾರ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಸ್ಕೂಬಾ ಡೈವರ್ ಗಳು ಮೀನುಗಳಿಗೆ ಆಹಾರ ಒದಗಿಸುವ ಜೊತೆ ಜೊತೆಗೆ, ಆಕ್ವಾಡಮ್ಮಿನ ನಿರ‍್ವಹಣೆ ಮತ್ತು ಶುಚಿತ್ವದ ಜವಾಬ್ದಾರಿಯನ್ನೂ ನಿರ‍್ವಹಿಸಬೇಕಿರುತ್ತದೆ.

ಪ್ರವಾಸಿಗರು ಗಾಜಿನ ಎಲಿವೇಟರ‍್ನಲ್ಲಿ ಆಕ್ವಾಡಾಮ್ ನ ತಳದವರೆಗೂ ಹೋಗಿ ಬರಬಹುದು. ಗಾಜಿನ ಎಲಿವೇಟರ‍್ನಲ್ಲಿ ಕೆಳಗಿಳಿದು, ಮೇಲೆಕ್ಕೆ ಬಂದರೆ, ಆ ಆಕ್ವಾಡಾಮ್ ಟ್ಯಾಂಕಿನ ಅಗಾದತೆ, ಅದರ ವಿನ್ಯಾಸ, ಹೋಟೇಲಿನ ಲಾಬಿ ಪ್ರದೇಶದ ಸಂಪೂರ‍್ಣ ಅರಿವು ಮೂಡುತ್ತದೆ. ಆಕ್ವಾಡಮ್ಮಿನ ಅತ್ಯಂತ ವಿಸ್ಮಯಕಾರಿ ನೋಟದ ಜೊತೆಗೆ, ಆಕ್ವೇರಿಯಂನಲ್ಲಿ ಸದಾಕಾಲ ಸ್ರುಶ್ಟಿಯಾಗುವ ಕ್ರುತಕ ಬಣ್ಣದ ಬೆಳಕಿನ ಅದ್ಬುತತೆಯನ್ನು ಕಣ್ಣಾರೆ ಕಂಡು ಅನುಬವಿಸಬಹುದು.

ಈ ಅಕ್ವಾಡಾಮ್ ‘ಸೀ ಲೈಪ್ ಬರ‍್ಲಿನ್ ಆಕ್ವೇರಿಯಮ್’ ಸಂಸ್ತೆಯ ಒಡೆತನದಲ್ಲಿದೆ. ಇದರ ನಿರ‍್ವಹಣೆ ಸಹ ಅದರದೇ ಜವಾಬ್ದಾರಿಯಾಗಿರುತ್ತದೆ. ಈ ಸಂಸ್ತೆ ರ‍್ಯಾಡಿಸನ್ ಬ್ಲೂ ಹೋಟೇಲಿನ ಪಕ್ಕದಲ್ಲೇ ಇದೆ. ಈ ಆಕ್ವಾಡಾಮ್ ಇಲ್ಲಿನ ಪ್ರಮುಕ ಪ್ರವಾಸಿಗರ ಆಕರ‍್ಶಣೆಯಾಗಿದೆ. ಬರ‍್ಲಿನ್ ನಗರಕ್ಕೆ ಬೇಟಿ ನೀಡಿದಾಗ, ಇದೇ ಹೋಟೇಲಿನಲ್ಲಿನ ನೀರಿನೊಳಗಿನ ಪ್ರಪಂಚವನ್ನು ನೋಡಲು, ಉಳಿಯುವ ಪ್ರಸಂಗ ಬಂದಲ್ಲಿ, ಪ್ರತಿ ರಾತ್ರಿಗೆ 180 ಯೂರೋಗಳನ್ನು ಪಾವತಿಸಬೇಕಾಗುತ್ತದೆ. ಇಂದು ಒಂದು ಯೂರೋಗೆ ಎಂಬತ್ತೆರೆಡು ರೂಪಾಯಿಗಳು. ಅಂದರೆ ಒಂದು ರಾತ್ರಿಗೆ ರು. 14750/-.

ಸಂಪೂರ‍್ಣ ಪಾರದರ‍್ಶಕವಾದ ಈ ಆಕ್ವಾಡಾಮ್ ನಿರ‍್ಮಾಣ ಸುಲಬದ ಮಾತಲ್ಲ. ಏಕೆಂದರೆ ಇದರಲ್ಲಿ ಸರಿಸುಮಾರು ಹತ್ತು ಲಕ್ಶ ಲೀಟರ್ ನೀರನ್ನು ತುಂಬಿದಾಗ ಅದರ ಒತ್ತಡವನ್ನು ನಿಬಾಯಿಸುವ ಶಕ್ತಿ ಆ ಸಿಲಿಂಡಿನಾಕಾರದ ಅಕ್ರಿಲಿಕ್ ಪದರಕ್ಕಿರಬೇಕು. ನಾಲ್ಕು ಬಾಗಗಳಾಗಿ ವಿಂಗಡಿಸಿದ ಈ ಇಪ್ಪತ್ತು ಸೆಂಟಿಮೀಟರ್ ದಪ್ಪದ ಆಕ್ರಿಲಿಕ್ ಪದರಗಳನ್ನು, ಮೂವತ್ತು ಅಡಿ ಕಾಂಕ್ರೀಟ್ ಅಡಿಪಾಯದ ಮೇಲಿಟ್ಟು ನಿರ‍್ಮಿಸಲಾಗಿದೆ. ಈ ಹೋಟೇಲಿನ ನಿರ‍್ಮಾಣದ ಸಮಯದಲ್ಲೇ ಈ ಆಕ್ವಾಡಮ್ ಸಹ ನಿರ‍್ಮಾಣವಾಯಿತು. ಅಕ್ರಿಲಿಕ್ ನ ನಾಲ್ಕು ಬಾಗಗಳನ್ನು, ಕ್ರೇನುಗಳ ಮೂಲಕ ಎತ್ತಿ ಅದರದರ ಸ್ತಾನದಲ್ಲಿ ಜೋಡಿಸಲಾಯಿತು. ಹೋಟೇಲಿನ ಉಳಿದ ಬಾಗವನ್ನು ಇದರ ಸುತ್ತಲೂ ನಂತರ ನಿರ‍್ಮಾಣ ಮಾಡಲಾಯಿತು. ಈ ಆಕ್ವಾಡಾಮ್ ನ ಮೇಲ್ಬಾಗದ ಸುತ್ತಲೂ ಊಟದ ಟೇಬಲ್‍ಗಳ ವ್ಯವಸ್ತೆ ಕೂಡ ಅಚ್ಚುಕಟ್ಟಾಗಿ ಮಾಡಲಾಗಿದೆ. ಈ ರ‍್ಯಾಡಿಸನ್ ಹೋಟೇಲ್ ವಿಶ್ವದ ಅತ್ಯಂತ ಆಸಕ್ತಿದಾಯಕ ಮತ್ತು ಸಂಕೀರ‍್ಣವಾದ ನಿರ‍್ಮಾಣಗಳಲ್ಲಿ ಒಂದಾಗಿದೆ. ಆಕ್ವೇರಿಯಂನಲ್ಲಿ ಲಿಪ್ಟ್ ವ್ಯವಸ್ತೆ ಹೊಂದಿರುವ ಮೊಟ್ಟ ಮೊದಲ ಆಕ್ವಾಡಾಮ್ ಇದು. ಈ ಆಕ್ವಾಡಾಮ್ ನಿರ‍್ಮಾಣಕ್ಕೆ ತಗುಲಿದ ವೆಚ್ಚ 12.8 ಮಿಲಿಯನ್ ಯುರೋಗಳು. 2004ರಲ್ಲಿ ಅಮೇರಿಕಾದ ಸಂಸ್ತೆಯೊಂದು ಇದರ ನಿರ‍್ಮಾಣವನ್ನು ಪೂರ‍್ಣಗೊಳಿಸಿತು.

(ಮಾಹಿತಿ ಮತ್ತು ಚಿತ್ರ ಸೆಲೆ: boredpanda.com, domaquaree.de, interestingengineering.com, ap7am.com, en.wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: