ಮಲೆನಾಡಿನ‌ ಶಿಕಾರಿ ಸಂಸ್ಕ್ರುತಿ: ಕಂತು-2

– ಅಮ್ರುತ್ ಬಾಳ್ಬಯ್ಲ್.

ಕಂತು-1

 

ಹಿಂದಿನ ಬರಹದಲ್ಲಿ ಮಲೆನಾಡಿನ ಬೇಟೆಯ ಹಿನ್ನೆಲೆ ಮತ್ತು ಶಿಕಾರಿಯ ಹಲವು ಬಗೆಗಳ ಬಗೆಗೆ ತಿಳಿದುಕೊಂಡಿದ್ದೆವು. ಈ ಬರಹದಲ್ಲಿ ಬೇಟೆಯು ನಡೆಯುವ ಬಗೆ ಮತ್ತು ಬೇಟೆಯಲ್ಲಿ ಬಳಸಲಾಗುವ ಬಗೆ ಬಗೆಯ ಕೋವಿಗಳ ಕುರಿತಾದ ಕುತೂಹಲಕಾರಿ ವಿಶಯಗಳನ್ನು ತಿಳಿದುಕೊಳ್ಳೋಣ.

ಬೇಟೆ ಹೇಗೆ ನಡೆಯುತ್ತಿತ್ತು?

ಮಲೆನಾಡಿಗರು ಹೆಚ್ಚಾಗಿ ಹಬ್ಬಗಳ ಕಾಲದಲ್ಲಿ ಅಂದರೆ ದೀಪಾವಳಿ, ಗವ್ರಿ ಹಬ್ಬ, ಮದುವೆ ಅತವಾ ಇನ್ನಿತರ ಸಮಾರಂಬಗಳಿಗೆ ಮಾಂಸದಡುಗೆ ಬೇಕಾದಾಗ ದೊಡ್ಡ ಬೇಟೆ ಮಾಡುತ್ತಿದ್ದರು. 7-8 ಕೋವಿಗಳು, 15-20 ಜನರು, ಒಂದಿಶ್ಟು ಬೇಟೆ ನಾಯಿಗಳ ಜೊತೆ ಮದ್ಯಾನದ ಬುತ್ತಿಯನ್ನು(ಊಟ) ಕಟ್ಟಿಕೊಂಡು ಬೆಳಿಗ್ಗೆಯೇ ಕಾಡಿನೊಳಗೆ ನುಗ್ಗುತ್ತಿದ್ದರು. ಸರಿಯಾದ ಸಮಯಕ್ಕೆ ಎಲ್ಲರೂ ಶಿಕಾರಿಗೆ ಬರಬೇಕಿತ್ತು. ಬೇಟೆಗೆ ಬತ್ತಿ ಕೋವಿ (ಬಂದೂಕು), ಕೇಪಿನ(ತುಪಾಕಿಯ ಗುಂಡುಗಳಿಗೆ ಹಾಕಿರುವ ಹಿಂಬದಿಯ ಟೋಪಿ) ಕೋವಿ, ತೋಟಾ ಕೋವಿ ಬಳಸುತ್ತಿದ್ದರು. ಬತ್ತಿ ಕೋವಿ ಬಹಳ ಹಳೆಯ ಕಾಲದ್ದು. ತೋಟಾ ಕೋವಿ ತೀರಾ ಇತ್ತೀಚಿನದು. ಪ್ರತಿ ಕೋವಿಯವರು ಒಂದು ಕೋವಿ ಚೀಲ/ಮಸಿ ಚೀಲ ಇಟ್ಟುಕೊಳ್ಳುತ್ತಿದ್ದರು. ಅದರಲ್ಲಿ ಕೋವಿಗೆ ಸಂಬಂದಪಟ್ಟ ಗುಂಡು, ಮಸಿ (ರಂಜಕದ ಪುಡಿ), ಕೇಪು, ತೆಂಗಿನ ಕತ್ತ (ಸುಲಿದ ಒಣಕಾಯಿಯ ನಾರು) ಮುಂತಾದವುಗಳು ಇರುತ್ತಿದ್ದವು. ಬೇಟೆ ತಂಡದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರ ಶಕ್ತಿ ಮತ್ತು‌ ನ್ಯೂನ್ಯತೆಗಳು ಗೊತ್ತಿರುತ್ತಿದ್ದವು. ಅದಕ್ಕೆ ತಕ್ಕಂತೆ ಪ್ರತಿಯೊಬ್ಬರಿಗೂ ಕೆಲಸಗಳನ್ನು ಒಪ್ಪಿಸಲಾಗುತ್ತಿತ್ತು. ಪ್ರತಿ ಊರಿಗೂ ಅವರದ್ದೇ ಆದ ಸಾಂಪ್ರದಾಯಿಕ ಬೇಟೆ ಕಾಡುಗಳು ಇರುತ್ತಿದ್ದವು. ಅವುಗಳಿಗೆ ವಿಶಿಶ್ಟ ಹೆಸರುಗಳೂ ಇರುತ್ತಿದ್ದವು.

ಉದಾಹರಣೆಗೆ ಕಾಡಿನ ಮದ್ಯೆ ಒಂದು ಜಮೀನು, ಸುತ್ತಲೂ ಕಾಡು/ಗುಡ್ಡ ಇದೆ ಎಂದರೆ; ಒಂದು ಬದಿಯಿಂದ ಬೇಟೆ ಕಟ್ಟುತ್ತಿದ್ದರು. ಕಾಡಿನಿಂದ ಬಯಲಿಗೆ ಇರುವ ಕಂಡಿಗಳಲ್ಲಿ( ಕಿಂಡಿ/Opening) ಕೋವಿ ಹಿಡಿದು ಬಿಲ್ಲಿನವರು ನಿಲ್ಲುತ್ತಿದ್ದರು. 6 ಕಂಡಿಗಳಿದ್ದರೆ 6 ಕೋವಿದಾರರು ನಿಲ್ಲುತ್ತಿದ್ದರು. ಉಳಿದ ಹಳುವಿನವರು ಕಯ್ಯಲ್ಲಿ ದೊಣ್ಣೆ, ಕತ್ತಿ ಹಿಡಿದು ನಾಯಿಗಳ ಜೊತೆ‌ ಕಾಡು ನುಗ್ಗಿ‌ ಹಳು (ಕುರುಚಲು ಗಿಡಗಳ ಪೊದೆ/ಕಳೆ ) ಸೋಯುತ್ತಾ (ಸವರುತ್ತಾ/ಕುಯ್ಯುವುದು – to cut) ಕೂಗುಕಾಕು ಹಾಕುತ್ತಾ ಪ್ರಾಣಿಗಳನ್ನು ಓಡಿಸಿಕೊಂಡು ಬಂದು ಪ್ರಾಣಿಗಳನ್ನು‌ ಕಂಡಿಗೆ ಹಾರಿಸುತ್ತಿದ್ದರು. ಆಗ ಬಿಲ್ಲಿನವರು ಪ್ರಾಣಿಯನ್ನು ಹೊಡೆಯುತ್ತಿದ್ದರು. ಕೆಲವು ಪ್ರಾಣಿಗಳು ಒಂದೇ ಹೊಡೆತಕ್ಕೆ ಬಿದ್ದರೆ, ಕೆಲವು ಓಡಿ ಹೋಗುತ್ತಿದ್ದವು. ಆಗ ಬಿಲ್ಲಿನವರು ನಾಯಿಗಳ ಜೊತೆ ಬೇಟೆಯನ್ನು ಹಿಂಬಾಲಿಸಿ ಹೋಗಿ ಹೊಡೆದು ಹಾಕುತ್ತಿದ್ದರು. ಅಲ್ಲಿಗೆ ಒಂದು ಬೇಟೆ ಕಟ್ಟು ಮುಗಿಯುತ್ತಿತ್ತು. ಹೀಗೆ 5-6 ಕಟ್ಟುಗಳನ್ನು ಒಂದು ದಿನಕ್ಕೆ ಕಟ್ಟುತ್ತಿದ್ದರು. ಶಿಕಾರಿ ಹೊತ್ತಾರೆಯಿಂದ (ಬೆಳಿಗ್ಗೆ) ಬಯ್ಗಿನವರೆಗೂ (ಸಂಜೆ) ನಡೆಯುತ್ತಿತ್ತು.

ಶಿಕಾರಿಯಲ್ಲಿ ಕೋವಿ ಬಳಕೆ

ಶಿಕಾರಿಗೆ ಬತ್ತಿಕೋವಿ, ಕೇಪಿನಕೋವಿ ಮತ್ತು ತೋಟಾಕೋವಿ ಎನ್ನುವ ಮೂರು ಬಗೆಯ ಕೋವಿಗಳನ್ನು ಬಳಸುತ್ತಿದ್ದರು. ಇದರಲ್ಲಿ ಬತ್ತಿಕೋವಿ ಬಹಳ ಹಿಂದಿನದು. ಇವಗಳ ಉದ್ದ ಜಾಸ್ತಿ, ಇದಕ್ಕೆ ಈಡು ಮಾಡಲು ಅಂದರೆ ಮಸಿಗೆ ಬೆಂಕಿಯ ಕಿಡಿ ತಾಗಿಸಲು ಒಂದು ಬತ್ತಿಗೆ ಬೆಂಕಿ ಹಚ್ಚಿ ಉಪಯೋಗಿಸುತ್ತಿದ್ದರು. ಬತ್ತಿಯನ್ನು ಹೆಬ್ಬಲಸಿನ ಮರದ ತೆನೆಯನ್ನು ಒಣಗಿಸಿ ಮಾಡುತ್ತಿದ್ದರು. ಅದು‌ ಬಹಳ ಕಾಲ ಸಣ್ಣಗೆ ಉರಿಯುತ್ತಿರುತ್ತಿತ್ತು. ಬತ್ತಿಕೋವಿಯನ್ನು ಕೆಲ ಸಮಾರಂಬಗಳಲ್ಲಿ ಅಂದರೆ ಮಗುವಿನ ನಾಮಕರಣ, ಸಾವಿನ ಸುದ್ದಿಯನ್ನು ತಿಳಿಸಲು, ಹೀಗೆ ಗುಂಡು ಹಾರಿಸಲು ಸಹ ಬಳಸುತ್ತಿದ್ದರು.

ಕೇಪಿನ ಕೋವಿ ಬತ್ತಿಕೋವಿಯ ನಂತರ ಚಾಲ್ತಿಗೆ ಬಂದದ್ದು. ಇದರಲ್ಲಿ ಈಡು ಮಾಡಲು ರಂಜಕದ ಕೇಪನ್ನು ಉಪಯೋಗಿಸುತ್ತಾರೆ. ಕೋವಿಯ ಕುದುರೆಯನ್ನು ಹಿಡಿದು ಎಳೆದು ಬಿಟ್ಟಾಗ ಗರ‍್ಶಣೆಯಿಂದ ಬೆಂಕಿ ಕಿಡಿ ಮಸಿಗೆ ತಾಗಿ ಗುಂಡು ಹಾರುತ್ತದೆ. ಈಗಲೂ ಸಹ ಕೇಪಿನ ಕೋವಿಗಳು ಚಾಲ್ತಿಯಲ್ಲಿದೆ. ಪ್ರಾಣಿಯ ಗಾತ್ರದ ಮೇಲೆ ಕೇಪಿನ ಕೋವಿಗೆ ಗುಂಡುಗಳನ್ನು‌ ಹಾಕಿಕೊಳ್ಳುತ್ತಿದ್ದರು. ಅಂದರೆ ಚಿಕ್ಕ ಪ್ರಾಣಿ-ಹಕ್ಕಿಗಳಿಗೆ‌ ಸಣ್ಣ ಚರೆ (ಸಣ್ಣ ಗುಂಡು/balls). ಹಂದಿಯಂತಹ ದೊಡ್ಡ ಪ್ರಾಣಿಗಳಿಗೆ ದೊಡ್ಡ ಸೀಸದ ಗುಂಡು. ತೋಟಾಕೋವಿಗಳು ತೀರಾ ಇತ್ತೀಚಿನವು. ಇವುಗಳಲ್ಲಿ ಒಂಟಿ ನಳಿಗೆ ಮತ್ತು ಜೋಡಿ ನಳಿಗೆ ಬಗೆಗಳು ಇವೆ. ಕೋವಿಗಳಿಗೆ ಸುಲಬವಾಗಿ ತೋಟಾಗಳನ್ನು ಬದಲಾಯಿಸಿ ಗುಂಡು ಹಾರಿಸಬಹುದು.

ಹಂದಿ, ಕಾನುಕುರಿ, ಮೊಲ, ಬರ್‍ಕ (Indian spotted Mouse deer), ಕಣಂದಿ (ಮುಳ್ಳುಹಂದಿ), ಕಬ್ಬೆಕ್ಕು (ಪುನುಗಿನ ಬೆಕ್ಕು/ Asian palm civet), ಬುಕ್ಕ (ಮಂಗನ ತರದ ಪ್ರಾಣಿ) ಹೀಗೆ ಅನೇಕ ಬಗೆಯ ಪ್ರಾಣಿಗಳು ಶಿಕಾರಿಯಾಗುತ್ತಿದ್ದವು. ನಂತರ ನೀರಿನ ಹಳ್ಳ/ಕೆರೆಯ ಬಳಿ ಇರುವ ಒಂದು ಸಮತಟ್ಟಾದ ಜಾಗದಲ್ಲಿ ಹಸಿಗೆ(ಮಾಂಸದ ಚರ್‍ಮ ಸುಲಿದು ಶುಚಿ ಮಾಡುವ ಬಗೆ) ಮಾಡುತ್ತಿದ್ದರು. ಆ ಜಾಗಕ್ಕೆ ಹಂಪು ಎನ್ನುತ್ತಿದ್ದರು. ಹಂಪಿನ ಮದ್ಯಬಾಗದಲ್ಲಿ ದೊಡ್ಡ ಬಾಳೆಎಲೆಗಳನ್ನು ಹಾಸಿ ಅದರ ಮೇಲೆ ಹಸಿಗೆ ಮಾಡಿದ ಮಾಂಸವನ್ನು ಹಾಕಿ ಕೊಚ್ಚು ಕೊರಟೆಯ(ಮೂಳೆ/ಮಾಂಸದ ತುಂಡುನ್ನು ಕೊಚ್ಚಿ ಸಣ್ಣ ತುಂಡುಗಳನ್ನು ಮಾಡಲು ಬಳಸುವ ಮೂರು ಕಾಲಿನ ಮರದ ತುಂಡು) ಸಹಾಯದಿಂದ ಕೊಚ್ಚಿ ಗುಡ್ಡೆ ಹಾಕುತ್ತಿದ್ದರು. ಇದೆಲ್ಲಾ ಮುಗಿದ ಮೇಲೆ ಮಾಂಸವನ್ನು ಪಾಲು ಮಾಡಿ ಹಂಚಿಕೊಳ್ಳುತ್ತಿದ್ದರು.

ಹುರ್‍ತುಂಡು:

ದೊಡ್ಡ ಬೇಟೆಯಲ್ಲಿ ದೊಡ್ಡ ಪ್ರಾಣಿಗಳ ಜೊತೆ ಸಣ್ಣ ಪ್ರಾಣಿಗಳಾದ ಮೊಲ, ಬರ್‍ಕ ಮುಂತಾದವುಗಳು ಸಹ‌ ಶಿಕಾರಿ ಆಗುತ್ತಿದ್ದವು. ಅವುಗಳನ್ನು‌ ಬಹು ಬೇಗನೆ ಹಸಿಗೆ ಮಾಡಿ ಅವು ಇಲ್ಲದಿದ್ದರೆ ದೊಡ್ಡ ಪ್ರಾಣಿಯ ಮಾಂಸವನ್ಜು ಪಾತ್ರೆಯಲ್ಲಿ ಹಾಕಿ ಅದಕ್ಕೆ ಬರಿ ಉಪ್ಪು, ಅರಿಸಿನ ಹುಡಿ(ಪುಡಿ), ಕಾರದ ಪುಡಿ ಹಾಕಿ ಹುರಿಯುತ್ತಿದ್ದರು. ಅದನ್ನು, ಮೊದಲು ಬೇಟೆ ದೇವರಿಗೆ ಎಡೆ ಇಟ್ಟು ಎಲ್ಲರೂ ಬೇಡಿಕೊಂಡು ನಂತರ ತಿನ್ನುತ್ತಿದ್ದರು. ಹುರ್‍ತುಂಡು ಎಂದರೆ ಹುರಿದ ತುಂಡು. ಬೇಟೆಯ ಹೊತ್ತಲ್ಲಿ ಸುಸ್ತಾಗಿ, ಹಸಿದು ತಿನ್ನುತ್ತಿದ್ದರಿಂದ ಇದು ಬಹಳ ರುಚಿಯಾಗಿ ಇರಲಿದ್ದು, ಸಾಮಾನ್ಯವಾಗಿ ಯಾರೂ ಸಹ ಹುರ್‍ತುಂಡು ಸವಿಯದೆ ಹಂಪಿನಿಂದ ಕದಲುವುದಿಲ್ಲ.

ಮುಂದಿನ ಕಂತಿನಲ್ಲಿ ಬೇಟೆ ಮಾಡಿದ ನಂತರ, ಆ ಬೇಟೆಯ ಮಾಂಸವನ್ನು ಪಾಲು ಮಾಡಿಕೊಳ್ಳುವಾಗ ಕೊಡಬೇಕಾದ ಬಗೆ ಬಗೆಯ ಪಾಲುಗಳ ಬಗೆಗಿನ ಕುತೂಹಲಕಾರಿ ವಿಶಯದ ಬಗೆಗೆ ತಿಳಿದುಕೊಳ್ಳೋಣ.

(ಚಿತ್ರ ಸೆಲೆ:creazilla.com)

ಕಂತು-1

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks