ಮಾಡಿ ಸವಿಯಿರಿ ಮಸಾಲೆ ಪಡ್ಡು
ಬೇಕಾಗುವ ಸಾಮಾನುಗಳು
ಅಕ್ಕಿ – 2 ಬಟ್ಟಲು
ಉದ್ದಿನ ಬೇಳೆ – ¾ ಬಟ್ಟಲು
ಗಟ್ಟಿ ಅವಲಕ್ಕಿ – ¾ ಬಟ್ಟಲು
ಕಡಲೆಬೇಳೆ – 4-5 ಟೀ ಚಮಚ
ಮೆಂತ್ಯ ಕಾಳು – ½ ಟೀ ಚಮಚ
ಸಾಸಿವೆ – 2 ಚಮಚ
ಜೀರಿಗೆ – 2 ಚಮಚ
ಈರುಳ್ಳಿ – 2
ಮಸಾಲೆ ಪಡ್ಡು ಮಾಡುವ ಬಗೆ
ಅಕ್ಕಿ, ಉದ್ದಿನ ಬೇಳೆ, ಅವಲಕ್ಕಿ, 2 ಚಮಚ ಕಡಲೆಬೇಳೆ ಮತ್ತು ಮೆಂತ್ಯ ಕಾಳುಗಳನ್ನು ಒಂದು ಪಾತ್ರೆಗೆ ಹಾಕಿ ನೀರಿನಿಂದ ಚೆನ್ನಾಗಿ ತೊಳೆದು 5 ರಿಂದ 6 ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಬಿಡಬೇಕು. ನೆನೆದ ನಂತರ ಮಿಕ್ಸರ್ ನಲ್ಲಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಟ್ಟು, 8 ರಿಂದ 9 ಗಂಟೆಗಳ ಕಾಲ ಪಾತ್ರೆಯಲ್ಲಿ ಹಾಗೆಯೇ ಇಡಬೇಕು.
ರುಬ್ಬಿದ ಹಿಟ್ಟು ಹುದುಗು ಬಂದ ನಂತರ, ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸ್ವಲ್ಪ ಸಾಸಿವೆ, ಜೀರಿಗೆ, ಮೂರ‍್ನಾಲ್ಕು ಚಮಚ ಕಡಲೆಬೇಳೆ, ಸಣ್ಣಗೆ ಕತ್ತರಿಸಿದ ಸ್ವಲ್ಪ ಈರುಳ್ಳಿಯ ಚೂರುಗಳನ್ನು ಹಾಕಿ ಬಾಡಿಸಿಕೊಳ್ಳಿ. ಇದನ್ನು ಹಿಟ್ಟಿಗೆ ಸುರಿದು ಮೇಲೆ ಸ್ವಲ್ಪ ಕ್ಯಾರೆಟ್ ತುರಿ, ಕತ್ತರಿಸಿದ ಸಬ್ಬಕ್ಕಿ ಸೊಪ್ಪು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಶ್ಟು ಉಪ್ಪು ಇವಿಶ್ಟನ್ನು ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ಎಣ್ಣೆ ಸವರಿದ ಪಡ್ಡಿನ ಕಾವಲಿಗೆ ತಯಾರಿಸಿಕೊಂಡ ಹಿಟ್ಟನ್ನು ಹಾಕಿ ಮದ್ಯಮ ಉರಿಯಲ್ಲಿ ಬೇಯಿಸಿದರೆ, ರುಚಿಯಾದ ಮಸಾಲೆ ಪಡ್ಡು ತಯಾರು. ಕಾಯಿ ಚಟ್ನಿ ಅತವಾ ಶೇಂಗಾ ಚಟ್ನಿಯೊಂದಿಗೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು