ಏಲೇಶ್ವರ ಕೇತಯ್ಯನವರ ವಚನದ ಓದು – 2 ನೆಯ ಕಂತು

ಸಿ.ಪಿ.ನಾಗರಾಜ.

ವಚನಗಳು, Vachanas

ಮನಕ್ಕೆ ವ್ರತವ ಮಾಡಿ
ತನುವಿಗೆ ಕ್ರೀಯ ಮಾಡಬೇಕು
ಇಂದ್ರಿಯಂಗಳಿಗೆ ಕಟ್ಟನಿಕ್ಕಿ
ಆತ್ಮನ ಸಂದೇಹವ ಬಿಡಿಸಿ
ಕ್ರೀಯ ಮಾಡಬೇಕು
ಹೀಂಗಲ್ಲದೆ ವ್ರತಾಚಾರಿಯಲ್ಲ
ಮನಕ್ಕೆ ಬಂದಂತೆ ಹರಿದು
ಬಾಯಿಗೆ ಬಂದಂತೆ ನುಡಿದು
ಇಂತೀ ನಾ ವ್ರತಿಯೆಂದರೆ
ಮೂಗನರಿಯದೆ ಮಾಣ
ಏಲೇಶ್ವರಲಿಂಗನು

ಜಪ ತಪ ಉಪವಾಸ ಮುಂತಾದ ಹಲವು ಬಗೆಯ ಕಟ್ಟುನಿಟ್ಟಿನ ಆಚರಣೆಗಳಿಂದ ದೇವರನ್ನು ಪೂಜಿಸುವವನು ವ್ರತಾಚಾರಿಯಲ್ಲ. ತನ್ನ ನಿತ್ಯ ಜೀವನದಲ್ಲಿ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳುವವನು ವ್ರತಾಚಾರಿಯೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ವ್ರತಾಚಾರಿ=ವ್ರತವನ್ನು ಮಾಡುವವನು; ಮನ=ಮನಸ್ಸು; ವ್ರತ=ವ್ಯಕ್ತಿಯು ಮಿಂದು , ಮಡಿಯುಟ್ಟು, ಉಪವಾಸವಿದ್ದು, ದೇವರ ಹೆಸರನ್ನು ಜಪಿಸುತ್ತ, ಹೂ ಹಣ್ಣು ಕಾಯಿ ಅನ್ನ ಪಾನಗಳನ್ನು ದೇವರ ಮುಂದೆ ಎಡೆಯಾಗಿ ಇಟ್ಟು, ದೀಪ ದೂಪಗಳಿಂದ ಬೆಳಗುತ್ತ, ದೇವರ ಅನುಗ್ರಹವನ್ನು ಪಡೆಯಲು ಮತ್ತು ದೇವರನ್ನು ಒಲಿಸಿಕೊಳ್ಳಲು ಮಾಡುವ ನಿಯಮಿತವಾದ ಆಚರಣೆಗಳು/ನೋಂಪಿ/ನೇಮ;

ಮನಕ್ಕೆ ವ್ರತ=ವ್ಯಕ್ತಿಯ ಮನದಲ್ಲಿ ಸದಾಕಾಲ ಮೂಡಿಬರುವ ಒಳ್ಳೆಯ ಮತ್ತು ಕೆಟ್ಟ ಒಳಮಿಡಿತಗಳಲ್ಲಿ, ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ಮಾತ್ರ ನಡೆನುಡಿಗಳಲ್ಲಿ ಆಚರಣೆಗೆ ತರಬೇಕೆಂಬ ಅರಿವು ಮತ್ತು ಎಚ್ಚರವನ್ನು ಹೊಂದಿರುವುದು; ಜೀವನದ ಕೊನೆಯ ಉಸಿರು ಇರುವ ತನಕ ವ್ಯಕ್ತಿಯು ತನ್ನ ಮನಸ್ಸಿಗೆ ನೀಡುವ ತರಬೇತಿ; ಇದನ್ನು ಗವುತಮ ಬುದ್ದರು ‘ಮಾನಸಿಕ ತರಬೇತಿ’ ಎಂದು ಕರೆದಿದ್ದಾರೆ.

ತನು=ದೇಹ; ಕ್ರೀ=ಕ್ರಿಯೆ/ಕೆಲಸ/ದುಡಿಮೆ;

ಮನಕ್ಕೆ ವ್ರತವ ಮಾಡಿ, ತನುವಿಗೆ ಕ್ರೀಯ ಮಾಡಬೇಕು=ವ್ಯಕ್ತಿಯು ತನ್ನ ಮನದಲ್ಲಿ ಒಳ್ಳೆಯ ಉದ್ದೇಶ ಮತ್ತು ಗುರಿಯನ್ನು ಇಟ್ಟುಕೊಂಡು, ಅದಕ್ಕೆ ಅನುಗುಣವಾಗಿ ತನ್ನ ದೇಹದಿಂದ ಕಾಯಕವನ್ನು ಮಾಡಬೇಕು;

ಕಾಯಕ ಎಂದರೆ ವ್ಯಕ್ತಿಯು ಮಾಡುವ ದುಡಿಮೆಯು ಅವನಿಗೆ, ಅವನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ತರುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವಂತಿರಬೇಕು;

ಇಂದ್ರಿಯಗಳು=ಕಣ್ಣು, ಕಿವಿ, ಮೂಗು, ನಾಲಗೆ, ತೊಗಲು ಎಂಬ ಅಯ್ದು ಬಗೆಯ ಅಂಗಗಳು; ಕಟ್ಟನ್+ಇಕ್ಕಿ; ಕಟ್ಟು=ಹತೋಟಿ/ನಿಯಂತ್ರಣ; ಇಕ್ಕಿ=ಹಾಕುವುದು/ಇಡುವುದು;

ಇಂದ್ರಿಯಂಗಳಿಗೆ ಕಟ್ಟನಿಕ್ಕಿ=ವ್ಯಕ್ತಿಯ ದೇಹ ಮತ್ತು ಮನದಲ್ಲಿ ಒಳಿತು ಕೆಡುಕಿನ ಕಾಮನೆಗಳು ಮೂಡುವುದಕ್ಕೆ ಕಾರಣವಾಗುವ ಕಣ್ಣು,ಕಿವಿ,ಮೂಗು,ನಾಲಗೆ,ತೊಗಲನ್ನು ಹತೋಟಿಯಲ್ಲಿಟ್ಟುಕೊಂಡು; ಅಂದರೆ ಕಣ್ಣಿನಿಂದ ನೋಡುವ ನೋಟ; ಕಿವಿಯಿಂದ ಕೇಳುವ ಮಾತು; ಮೂಗಿನಿಂದ ಗ್ರಹಿಸುವ ವಾಸನೆ; ನಾಲಗೆಯಿಂದ ಸವಿಯುವ ರುಚಿ; ತೊಗಲಿನಿಂದ ಪಡೆಯುವ ನಂಟು–ಇವೆಲ್ಲವೂ ಕೆಟ್ಟದ್ದರ ಕಡೆಗೆ ಹೋಗದಂತೆ ಮನಸ್ಸನ್ನು ತಡೆದಿಟ್ಟುಕೊಂಡು;

ಆತ್ಮ=ಮನಸ್ಸು; ಸಂದೇಹ=ಅನುಮಾನ/ಸಂಶಯ; ಆತ್ಮನ ಸಂದೇಹ=ಮನದಲ್ಲಿ ಮೂಡುವ ಒಳಿತು ಕೆಡುಕಿನ ಒಳಮಿಡಿತಗಳ ಇಬ್ಬಗೆಯ ತಾಕಲಾಟ / ಯಾವುದನ್ನು ಮಾಡಲಿ-ಯಾವುದನ್ನು ಬಿಡಲಿ ಎಂಬ ದ್ವಂದ್ವ;

ಬಿಡಿಸಿ=ನಿವಾರಿಸಿ/ಹೋಗಲಾಡಿಸಿ;

ಆತ್ಮನ ಸಂದೇಹವ ಬಿಡಿಸಿ ಕ್ರೀಯ ಮಾಡಬೇಕು=ಮನದಲ್ಲಿ ಮೂಡುವ ಕೆಟ್ಟ ಒಳಮಿಡಿತಗಳನ್ನು ನಿವಾರಿಸಿಕೊಂಡು, ತನ್ನನ್ನು ಒಳಗೊಂಡಂತೆ ಎಲ್ಲರ ಒಳಿತಿಗೆ ನೆರವಾಗುವಂತಹ ಒಳ್ಳೆಯ ಕಾಯಕವನ್ನು ಮಾಡಬೇಕು;

ಹೀಂಗೆ+ಅಲ್ಲದೆ; ಹೀಂಗೆ=ಈ ರೀತಿ/ಈ ಬಗೆ; ವ್ರತ+ಆಚಾರಿ+ಅಲ್ಲ; ಆಚಾರಿ=ಆಚಾರವುಳ್ಳವನು; ವ್ರತಾಚಾರಿ=ವ್ರತವನ್ನು ಮಾಡುವವನು;

ಹೀಂಗಲ್ಲದೆ ವ್ರತಾಚಾರಿಯಲ್ಲ=ತನು ಮತ್ತು ಮನವನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳದವನು ವ್ರತಾಚಾರಿಯಲ್ಲ;

ಹರಿ=ಸಾಗು/ಚಲಿಸು; ನುಡಿ=ಮಾತಾಡು;

ಮನಕ್ಕೆ ಬಂದಂತೆ ಹರಿದು, ಬಾಯಿಗೆ ಬಂದಂತೆ ನುಡಿದು=ವ್ಯಕ್ತಿಯು ತನ್ನ ಮನದಲ್ಲಿ ಮೂಡಿಬಂದ ಕೆಟ್ಟ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಳ್ಳದೆ ಮತ್ತು ಇತರರೊಡನೆ ಯಾವ ಮಾತುಗಳನ್ನು ಆಡಬೇಕು ಇಲ್ಲವೇ ಆಡಬಾರದು ಎಂಬ ಎಚ್ಚರವಿಲ್ಲದೆ, ಜನರ ಮನಸ್ಸನ್ನು ಗಾಸಿಗೊಳಿಸುವಂತಹ ಹಾಗೂ ಕೇಡನ್ನು ಬಗೆಯುವಂತಹ ಕೆಟ್ಟ ಮಾತನಾಡುವುದು

ಇಂತು+ಈ; ನಾ=ನಾನು; ವ್ರತಿ+ಎಂದರೆ; ವ್ರತಿ=ವ್ರತವನ್ನು ಮಾಡುವವನು;

ಇಂತೀ ನಾ ವ್ರತಿಯೆಂದರೆ=ಈ ರೀತಿಯಲ್ಲಿ ವ್ಯಕ್ತಿಯು ಸಹಮಾನವರ ಬಗ್ಗೆ ಕೆಟ್ಟ ಮಾತನ್ನಾಡುತ್ತ ಮತ್ತು ಸಮಾಜದಲ್ಲಿ ಕೇಡಿನ ಕೆಲಸಗಳನ್ನು ಮಾಡುತ್ತ, “ನಾನು ದೇವರ ವ್ರತವನ್ನು ಕ್ರಮತಪ್ಪದೆ ಮಾಡುವ ವ್ರತಾಚಾರಿ” ಎಂದು ಹೇಳಿಕೊಂಡರೆ; ಅಂದರೆ ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳದೆ, ದೇವರ ಹೆಸರಿನಲ್ಲಿ ದೊಡ್ಡದಾಗಿ ವ್ರತವನ್ನು ಮಾಡುತ್ತ ಮೆರೆಯುತ್ತಿದ್ದರೆ;

ಮೂಗನ್+ಅರಿಯದೆ; ಅರಿ=ಕತ್ತರಿಸು; ಮೂಗನ್ನು ಅರಿಯುವುದು=ಮೂಗನ್ನು ಕತ್ತರಿಸುವುದು. ಇದೊಂದು ನುಡಿಗಟ್ಟು. ಅಹಂಕಾರದಿಂದ ಮೆರೆಯುತ್ತಿರುವ ಇಲ್ಲವೇ ಕಪಟತನದ ನಡೆನುಡಿಗಳಿಂದ ಜನರನ್ನು ವಂಚಿಸುತ್ತಿರುವ ವ್ಯಕ್ತಿಯ ಅಹಂಕಾರವನ್ನು ಅಡಗಿಸುವುದು ಇಲ್ಲವೇ ಅವನ ಕೆಟ್ಟ ನಡೆನುಡಿಗಳಿಗೆ ತಕ್ಕ ದಂಡನೆಯನ್ನು ನೀಡುವುದು ಎಂಬ ರೂಪಕದ ತಿರುಳಿನಲ್ಲಿ ಬಳಕೆಗೊಂಡಿದೆ;

ಮಾಣ್=ಸುಮ್ಮನಿರು; ಮಾಣ=ಅವನು ಸುಮ್ಮನಿರುವುದಿಲ್ಲ/ಅವನು ಬಿಡುವುದಿಲ್ಲ;

ಏಲೇಶ್ವರಲಿಂಗ=ಶಿವನ ಮತ್ತೊಂದು ಹೆಸರು; ಏಲೇಶ್ವರ ಕೇತಯ್ಯನ ವಚನಗಳ ಅಂಕಿತ ನಾಮ;

ಮೂಗನರಿಯದೆ ಮಾಣ ಏಲೇಶ್ವರಲಿಂಗನು=ವ್ರತಾಚಾರಿಯೆಂದು ಹೇಳಿಕೊಂಡು ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುತ್ತಿರುವ ವ್ಯಕ್ತಿಯನ್ನು ಶಿವನು ದಂಡಿಸದೆ ಬಿಡುವುದಿಲ್ಲ ಎಂಬ ರೂಪಕದ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ. ಒಳ್ಳೆಯ ನಡೆನುಡಿಯಿಲ್ಲದ ವ್ಯಕ್ತಿಯು ಮಾಡುವ ಪೂಜೆಯನ್ನು ಶಿವನು ಒಪ್ಪಿಕೊಳ್ಳುವುದಿಲ್ಲವೆಂಬ ನಿಲುವನ್ನು ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಹೊಂದಿದ್ದರು. ಏಕೆಂದರೆ ಅವರ ಕಲ್ಪನೆಯ ಶಿವನು “ಒಳ್ಳೆಯ ನಡೆನುಡಿಗಳ ಸಂಕೇತವಾಗಿದ್ದನು”.

(ಚಿತ್ರ ಸೆಲೆ:  sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications