ಬಾರತದ ಕ್ರಿಕೆಟ್ ತಂಡದ ಕೋಚ್ ಗಳ ಇತಿಹಾಸ – ಕಂತು 1
ಬಾರತದಲ್ಲಿ ಈಗ ಕ್ರಿಕೆಟ್ ಈಗ ಕೇವಲ ಒಂದು ಆಟವಾಗಿ ಉಳಿಯದೆ ದೇಶದ ನಾನಾ ಬಾಶೆ-ರಾಜ್ಯಗಳ ಮಂದಿಯನ್ನು ಒಗ್ಗೂಡಿಸುವ ದೈತ್ಯ ಶಕ್ತಿಯಾಗಿ ಬೆಳೆದಿದೆ ಎಂದರೆ ಅತಿಶಯವೇನಲ್ಲ. ಕಳೆದ ಮುಕ್ಕಾಲು ಶತಮಾನದಲ್ಲಿ ಕ್ರಿಕೆಟ್ ಬಾರತೀಯರ ಬದುಕಿನ ಅವಿಬಾಜ್ಯ ಅಂಗವಾಗಿಯೇ ಬೆಸೆದು ಹೋಗಿದೆ ಎಂಬುದಕ್ಕೆ ಎತ್ತುಗೆ ತಂಡ ಕಣಕ್ಕಿಳಿದಾಗಲೆಲ್ಲಾ ಸಿಗುತ್ತದೆ. 1930ರ ದಶಕದಲ್ಲಿ ಬಾರತ ಟೆಸ್ಟ್ ಮಾನ್ಯತೆ ಪಡೆದರೂ 1990ರ ದಶಕದ ಆರಂಬಕ್ಕೂ ಮುನ್ನ ತಂಡಕ್ಕೆ ಒಬ್ಬ ಅದಿಕ್ರುತ ಕೋಚ್ ನ ಅಗತ್ಯತೆಯನ್ನು ಬಾರತವೂ ಸೇರಿ ಯಾವುದೇ ಅಂತರಾಶ್ಟ್ರೀಯ ಕ್ರಿಕೆಟ್ ತಂಡವೂ ಮನಗಂಡಿರಲಿಲ್ಲ ಎಂಬುದು ಇಂದಿಗೆ ಅಚ್ಚರಿ ಎನಿಸಬಹುದು. ಆದರೆ ಆಗೆಲ್ಲಾ ತಂಡದೊಂದಿಗೆ ಪ್ರಯಾಣದ ಉಸ್ತುವಾರಿ ನೋಡಿಕೊಳ್ಳುವ ಮ್ಯಾನೇಜರೇ ಅನದಿಕ್ರುತ ಕೋಚ್ ಆಗಿ ಕಾರ‍್ಯ ನಿರ‍್ವಹಿಸುತ್ತಿದ್ದದ್ದು ವಾಡಿಕೆಯಾಗಿತ್ತು. ಕಡೆಗೆ ಬದಲಾವಣೆ ಜಗದ ನಿಯಮವೆಂಬಂತೆ ಕ್ರಿಕೆಟ್ ಕೂಡ ಹಲವಾರು ಬಗೆಯಲ್ಲಿ ಮಾರ‍್ಪಾಡು ಹೊಂದಿತು. ಕಾಲಾನುಸಾರವಾಗಿ ಆಟದ ಬೇಡಿಕೆಗಳೊಂದಿಗೆ ವ್ರುತ್ತಿಪರತೆಯೂ ಹೆಚ್ಚಾದಂತೆ ಇತರೆ ಅಂತರಾಶ್ಟ್ರೀಯ ತಂಡಗಳಂತೆ ಬಾರತವೂ ಅದಿಕ್ರುತ ಕೋಚ್ ಗೆ ಮಣೆಹಾಕಿತು. ಆ ವೇಳೆ, 1990 ರಲ್ಲಿ ಬಾರತದ ಚೊಚ್ಚಲ ಅದಿಕ್ರುತ ಕೋಚ್ ನ ಗೌರವ ಪಡೆದವರೇ ಮಾಜಿ ನಾಯಕ ಹಾಗೂ ಸ್ಪಿನ್ ದಿಗ್ಗಜ ಬಿಶನ್ ಸಿಂಗ್ ಬೇಡಿ.
ಬಿಶನ್ ಸಿಂಗ್ ಬೇಡಿ (1990)
ಮೊಹಮ್ಮದ್ ಅಜರುದ್ದೀನ್ ತಂಡದ ನಾಯಕನಾಗಿದ್ದಾಗ 1990ರ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ಪ್ರವಾಸಗಳಿಗೆ ಬೇಡಿ ಕೋಚ್ ಆಗಿದ್ದರು. ಎರಡೂ ಪ್ರವಾಸಗಳಲ್ಲಿ 0-1 ರ ಅಂತರದಿಂದ ಟೆಸ್ಟ್ ಸರಣಿ ಸೋತರೂ ಇಂಗ್ಲೆಂಡ್ ನಲ್ಲಿ 2-0 ಇಂದ ಒಂದು ದಿನದ ಪಂದ್ಯಗಳ ಸರಣಿ ಗೆದ್ದು ತಂಡ ಕೊಂಚ ಮರ‍್ಯಾದೆ ಕಾಪಾಡಿಕೊಂಡಿತ್ತು. ಆದರೆ ಸದಾ ಶಿಸ್ತು, ನೇರನುಡಿಗೆ ಹೆಸರುವಾಸಿಯಾಗಿದ್ದ ಬೇಡಿ, ಆಟಗಾರರ ಪ್ರದರ‍್ಶನವು ನಿರೀಕ್ಶಿತ ಮಟ್ಟಕ್ಕೆ ಇರಲಿಲ್ಲ ಎಂದು ಸಿಡಿಮಿಡಿಗೊಂಡಿದ್ದರು. ಆ ಕಾಲದ ಕೆಲವು ಹಿರಿಯ ಆಟಗಾರರಿಂದ ಹೆಚ್ಚು ವ್ರುತ್ತಿಪರತೆ ಹಾಗೂ ಮುಂದಾಳ್ತನದ ಗುಣಗಳನ್ನು ಕೋಚ್ ಬೇಡಿ ಎದುರು ನೋಡುತ್ತಿದ್ದರು. ಆದರೆ ತಂಡದ ಸಾದನೆ ಅವರಿಗೆ ಯಾವ ಬಗೆಯಲ್ಲೂ ತ್ರುಪ್ತಿ ನೀಡುತ್ತಿರಲಿಲ್ಲ. ಅವರ ಕೆಲವು ಹೊಸ ತರಬೇತಿಯ ಪ್ರಯೋಗಗಳು ಕೂಡ ಪಲ ನೀಡದೆ ನಿರಾಸೆ ಅನುಬವಿಸದರು. ಇದೇ ವೇಳೆ ವರದಿಗಾರರೊಬ್ಬರ ಕೇಳ್ವಿಗೆ ಉತ್ತರಿಸುತ್ತಾ, “ನಮ್ಮ ಆಟಗಾರರಿಗೆ ತಮ್ಮ ಪ್ರದರ‍್ಶನದ ಬಗ್ಗೆ ಅಸಮಾದಾನವಿದ್ದು ತವರಿಗೆ ಮರಳುವ ವೇಳೆ ವಿಮಾನದಿಂದ ಪೆಸಿಪಿಕ್ ಸಾಗರಕ್ಕೆ ದುಮುಕುತ್ತೇವೆ ಎಂದರೆ ಕಂಡಿತ ನಾನವರನ್ನು ತಡೆಯುವುದಿಲ್ಲ” ಎಂದು ಹೇಳಿಕೆ ನೀಡಿ ಬಾರತದಾದ್ಯಂತ ಸಂಚಲನ ಮೂಡಿಸಿದ್ದರು. ಬೇಡಿರ ಕಟೋರ ಯೋಜನೆಗಳು ಹಾಗೂ ಕೆಲಸ ಮಾಡುವ ಪರಿ ಆಗಿನ ಕೆಲವು ಹಿರಿಯ ಆಟಗಾರರ ಸಿಟ್ಟಿಗೆ ಕಾರಣವಾಗಿದ್ದು ಈಗ ಇತಿಹಾಸ.
ಅಬ್ಬಾಸ್ ಅಲಿ ಬೇಗ್ (1991/92)
ಆಸ್ಟ್ರೇಲಿಯಾದಲ್ಲಿ ಐದು ಟೆಸ್ಟ್ ಗಳು, ತ್ರಿಕೋನ ಸರಣಿ ಹಾಗೂ ಅದೇ ಸಾಲಿನಲ್ಲಿ ನಡೆದ 1992ರ ವಿಶ್ವಕಪ್ ಗೆ ಹೈದರಾಬಾದ್ ನ ಅಬ್ಬಾಸ್ ಅಲಿ ಬೇಗ್ ತಂಡದ ಕೋಚ್ ಆಗಿದ್ದರು. ಸೌಮ್ಯ ಸ್ವಬಾವದ ಬೇಗ್ ರ ಕಾಲಾವದಿಯಲ್ಲಿ ಬಾರತ ತಂಡ ಆಡಿದ ಟೆಸ್ಟ್ ಸರಣಿಯಲ್ಲಿ 0-4 ಸೋಲುಂಡರೆ, ಬಲಿಶ್ಟ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾದೊಂದಿಗಿನ ತ್ರಿಕೋನ ಸರಣಿಯ ಪೈನಲ್ ತಲುಪಿ ಸಾದಾರಣ ಯಶಸ್ಸು ಕಂಡಿತ್ತು. ಈ ಸರಣಿಯಲ್ಲಿ ಆಸ್ಟ್ರೇಲಿಯಾದ ಬದ್ರ ಕೋಟೆ ಪೆರ‍್ತ್ ನಲ್ಲಿ ಬಾರತ 107 ರನ್ ಗಳಿಂದ ನಿರಾಯಾಸವಾಗಿ ಗಳಿಸಿದ ದೊಡ್ಡ ಗೆಲುವು ಸೋಜಿಗವನ್ನುಂಟು ಮಾಡಿತ್ತು. ಆ ಬಳಿಕ ತಂಡ ವಿಶ್ವಕಪ್ ನಲ್ಲಿ ಸೆಮಿಪೈನಲ್ ತಲುಪಲಾಗದೆ ನಿರಾಸೆ ಅನುಬವಿಸಿತ್ತು. ಆದರೆ ಅಂತಹ ಕಟಿಣ ಪ್ರವಾಸದಲ್ಲೂ ಎಲ್ಲೂ ಕಳಪೆ ಆಟವೆಂದು ಮೂಗು ಮುರಿಯುವಂತೆ ತಂಡ ಆಡಲಿಲ್ಲವೆಂಬುದು ಗಮನಿಸಬೇಕಾದ ಅಂಶ. ವಿಶ್ವಕಪ್ ನಲ್ಲಿ ಕೆಲವು ಪಂದ್ಯಗಳನ್ನು ಕೂದಲೆಳೆಯಲ್ಲಿ ಸೋತದ್ದೇ ತಂಡಕ್ಕೆ ಮುಳುವಾಗಿತ್ತು. ಬೇಗ್ ತಮ್ಮ ಸೀಮಿತ ಅವಕಾಶದಲ್ಲಿ ಹೆಚ್ಚು ಗೆಲುವು ಸಾದಿಸಲಾಗದಿದ್ದರೂ ಒಳ್ಳೆಯ ಪೈಪೋಟಿ ನೀಡುವಂತ ತಂಡವನ್ನು ಕಟ್ಟಿದ್ದರು ಎಂಬುದು ಡಾಳಾಗಿ ಕಾಣುತ್ತದೆ.
ಅಜಿತ್ ವಾಡೇಕರ್ (1992-96)
ಮೊದಲ ಬಾರಿಗೆ ಕೆಲವು ಸರಣಿಗಳಿಗೆ ಮಾತ್ರವಲ್ಲದೆ ಪೂರ‍್ಣಪ್ರಮಾಣದ ಕೋಚ್ ಆಗಿ ನೇಮಕಗೊಂಡವರೇ ಬಾರತದ ಮಾಜಿ ನಾಯಕರಾದ ಮುಂಬೈನ ಅಜಿತ್ ವಾಡೇಕರ್. ಅಜರುದ್ದೀನ್-ವಾಡೇಕರ್ ರ ಜೋಡಿ ತವರಲ್ಲಿ ಬಾರತ ತಂಡವನ್ನು ಯಾರೂ ಮಣಿಸಲಾಗದ ಒಂದು ದೊಡ್ಡ ಶಕ್ತಿಯಾಗಿ ರೂಪಿಸಿತು. ಕುಂಬ್ಳೆ ಅವರೊಟ್ಟಿಗೆ ರಾಜು, ರಾಜೇಶ್ ಚೌಹಾನ್ ರನ್ನು ಸೇರಿಸಿ ಸ್ಪಿನ್ ಪಡೆಯನ್ನು ಕಟ್ಟಿ ಎದುರಾಳಿಗಳು ಬೇದಿಸಲಾಗದ ಚಕ್ರವ್ಯೂಹವನ್ನು ರಚಿಸಿದ ಶ್ರೇಯ ವಾಡೇಕರ್ ರಿಗೆ ಸಲ್ಲಬೇಕು. 1992-94ರ ವರೆಗೂ ತವರಲ್ಲಿ ನಡೆದ ಒಟ್ಟು 14 ಟೆಸ್ಟ್ ಗಳಲ್ಲಿ ಬಾರತ ಒಂದೂ ಪಂದ್ಯ ಸೋಲದೆ ಪ್ರಾಬಲ್ಯ ಮೆರೆದದ್ದು ಮಾತ್ರವಲ್ಲದೆ ಇಂಗ್ಲೆಂಡ್ ಮತ್ತು ಶ್ರೀಲಂಕಾವನ್ನು 3-0 ಇಂದ ಸೋಲಿಸಿ ಹೊಸ ದಾಕಲೆ ಮಾಡಿತು. ಅದಲ್ಲದೆ ತವರಲ್ಲಿ ನಾಲ್ಕು ವರ‍್ಶಗಳಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ತಂಡ ಸೋಲಲಿಲ್ಲ. ಜೊತೆಗೆ ಬಹು ದೇಶಗಳು ಪಾಲ್ಗೊಂಡಿದ್ದ ಒಂದು ದಿನದ ಪಂದ್ಯಗಳ ಹೀರೋ ಕಪ್ ಪಂದ್ಯಾವಳಿ ಗೆಲುವು ವಾಡೇಕರ್ ರ ಮೈಲಿಗಲ್ಲುಗಳಲ್ಲೊಂದು. ಆದರೂ ಈ ಬಗೆಯ ಯಶಸ್ಸನ್ನು ಹೊರದೇಶಗಳಲ್ಲಿ ಕಾಣಲು ಸಾದ್ಯವಾಗಲಿಲ್ಲ. ಬಳಿಕ 1996 ರ ವಿಶ್ವಕಪ್ ಸೆಮಿಪೈನಲ್ ಸೋಲಿನ ಬೆನ್ನಲ್ಲೇ ವಾಡೇಕರ್ ತಂಡದಿಂದ ದೂರ ಸರಿದರು.
ಸಂದೀಪ್ ಪಾಟೀಲ್ (1996)
ಬಾರತದ 1996 ರ ಇಂಗ್ಲೆಂಡ್ ಪ್ರವಾಸಕ್ಕೆ ಕೋಚ್ ಆಗಿ ನೇಮಕಗೊಂಡ ಮುಂಬೈನ ಸಂದೀಪ್ ಪಾಟೀಲ್ ರಿಗೆ ನೆಲೆ ನಿಲ್ಲಲೂ ಅವಕಾಶ ನೀಡದೆ ಆ ದುರಂತಮಯ ಪ್ರವಾಸದ ನಂತರ ಅವರನ್ನು ಹುದ್ದೆಯಿಂದ ಉಚ್ಚಾಟಿಸಲಾಯಿತು. ನವಜೋತ್ ಸಿದ್ದು ಪ್ರವಾಸದ ಮದ್ಯೆ ತಂಡವನ್ನು ತೊರೆದದ್ದು ಕೂಡ ಪಟೇಲ್ ರ ಕಾರ‍್ಯವಿದಾನದ ಬಗ್ಗೆ ಹಲವಾರು ಕೇಳ್ವಿಗಳು ಏಳುವಂತೆ ಮಾಡಿತು. ಟೆಸ್ಟ್ ಸರಣಿಯಲ್ಲಿ 0-1 ರಿಂದ ಹಾಗೂ ಒಂದು ದಿನದ ಪಂದ್ಯಗಳಲ್ಲಿ 0-2 ರಿಂದ ತಂಡ ಸೋಲುಂಡದ್ದೇ ಪಾಟೀಲ್ ರ ಬವಿಶ್ಯಕ್ಕೆ ಮುಳುವಾಯಿತು.
ಮದನ್ ಲಾಲ್ (1996-97)
ವಾಡೇಕರ್ ರಂತೆ ಕೋಚ್ ಮದನ್ ಲಾಲ್ ರ ಕಾಲಾವದಿಯಲ್ಲೂ ಬಾರತ ತವರಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಶಿಣ ಆಪ್ರಿಕಾದಂತಹ ಬಲಾಡ್ಯ ತಂಡಗಳನ್ನು ಎರಡೂ ಮಾದರಿಯ ಪಂದ್ಯಗಳಲ್ಲಿ ಸೋಲಿಸಿತು. ಹೊಸ ನಾಯಕ ಸಚಿನ್ ತೆಂಡೂಲ್ಕರ್ ರೊಂದಿಗೆ ಮದನ್ ರ ಅನುಬವ ತಂಡವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದೇ ಕ್ರಿಕೆಟ್ ವಲಯ ನಂಬಿಕೆಯಿಟ್ಟಿತ್ತು. ಆದರೆ ವೆಸ್ಟ್ ಇಂಡೀಸ್ ಹಾಗೂ ದಕ್ಶಿಣ ಆಪ್ರಿಕಾ ಪ್ರವಾಸಗಳಲ್ಲಿ ಪೋಟಿಯೂ ನೀಡದೆ ತಂಡದ ಪ್ರದರ‍್ಶನ ಇನ್ನಿಲ್ಲದಂತೆ ಕುಸಿಯಿತು. ಹಾಗಾಗಿ ಒಂದೇ ವರ‍್ಶದಲ್ಲಿ ಮದನ್ ಲಾಲ್ ರ ಸೇವೆಯನ್ನು ಬಿ.ಸಿ.ಸಿ.ಐ ರದ್ದು ಮಾಡಿತು.
ಅಂಶುಮನ್ ಗಾಯೆಕ್ವಾಡ್ (1997-99, 2000)
ಎರಡು ಪ್ರತ್ಯೇಕ ಅವದಿಗಳಿಗೆ ಕೋಚ್ ಆದ ಹೆಗ್ಗಳಿಕೆ ಬರೋಡಾದ ಅಂಶುಮನ್ ಗಾಯೆಕ್ವಾಡ್ ರದು. 1998 ರಲ್ಲಿ ಡಾಕಾದಲ್ಲಿ ಗೆದ್ದ ಇಂಡಿಪೆಂಡೆನ್ಸ್ ಕಪ್, ಶಾರ‍್ಜಾ ಕಪ್ (ಸಚಿನ್ ರ ಡೆಸರ‍್ಟ್ ಸ್ಟಾರ‍್ಮ್ ಕ್ಯಾತಿ) ಹಾಗೂ ತವರಲ್ಲಿ ಆಸ್ಟ್ರೇಲಿಯಾ ಎದುರು 2-1 ರಿಂದ ಟೆಸ್ಟ್ ಸರಣಿ ಗೆದ್ದದು ಇವರ ಕಾಲದ ಪ್ರಮುಕ ಗೆಲುವುಗಳು. ಇದೇ ವೇಳೆ ಅಜರುದ್ದೀನ್ ನಾಯಕರಾಗಿ ಮರಳಿದರು. 1999ರ ವಿಶ್ವಕಪ್ ನ ನೀರಸ ಪ್ರದರ‍್ಶನದ ಬಳಿಕ ತಮ್ಮ ಸ್ತಾನ ತೊರೆದ ಗಾಯೆಕ್ವಾಡ್, ಬಿ.ಸಿ.ಸಿ.ಐ ಅದ್ಯಕ್ಶ ಮುತ್ತಯ್ಯರ ಕೋರಿಕೆಯ ಮೇರೆಗೆ 2000 ದಲ್ಲಿ ಮತ್ತೊಮ್ಮೆ ಕೆಲ ಕಾಲ ಕೋಚ್ ಹೊಣೆ ಹೊತ್ತರು. ಆ ಅವದಿಯಲ್ಲಿ ಕೂಡ ಬಾರತ ತಂಡ ಕೀನ್ಯಾದಲ್ಲಿ ನಡೆದ ಚಾoಪಿಯನ್ಸ್ ಟ್ರೋಪಿಯಲ್ಲಿ ಮೇಲ್ಪಂತಿಯ ತಂಡಗಳಾದ ಆಸ್ಟ್ರೇಲಿಯಾ ಮತ್ತು ದಕ್ಶಿಣ ಆಪ್ರಿಕಾವನ್ನು ಸೋಲಿಸಿ ಪೈನಲ್ ವರೆಗೂ ತಲುಪಿದ್ದು ವಿಶೇಶ.
ಕಪಿಲ್ ದೇವ್ (1999-2000)
1983ರ ವಿಶ್ವಕಪ್ ಗೆಲುವಿನ ರೂವಾರಿ, ಬಾರತದ ಕ್ರಿಕೆಟ್ ದಂತಕತೆ ಕಪಿಲ್ ದೇವ್ 1999 ರಲ್ಲಿ ಕೋಚ್ ಹೊಣೆ ಹೊತ್ತಾಗ ಇಡೀ ದೇಶವೇ ಬರವಸೆಯ ಕಣ್ಣುಗಳಿಂದ ಅವರೆಡೆಗೆ ನೋಡಿತ್ತು. ಜೊತೆಗೆ ಅದೇ ಹೊತ್ತಿನಲ್ಲಿ ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿ ಸಚಿನ್ ತೆಂಡೂಲ್ಕರ್ ರ ಹೆಗಲೇರಿದಾಗ, ಈ ಇಬ್ಬರು ದಿಗ್ಗಜರ ಜುಗಲ್ಬಂದಿಯಿಂದ ತಂಡ ಉತ್ತುಂಗ ತಲುಪಲಿದೆ ಎಂದು ಸಾಕಶ್ಟು ನಿರೀಕ್ಶೆಗಳು ಹುಟ್ಟುಕೊಂಡಿದ್ದವು. ಇದಕ್ಕೆ ಇಂಬು ನೀಡುವಂತೆಯೇ ಮೊದಲಿಗೆ ಬಾರತದ ನೆಲದಲ್ಲಿ ನ್ಯೂಜಿಲ್ಯಾನ್ಡ್ ಎದುರು 1-0 ರಿಂದ ಟೆಸ್ಟ್ ಸರಣಿ ಗೆಲುವು ಮತ್ತು 3-2 ರಿಂದ ಒಂದು ದಿನದ ಪಂದ್ಯಗಳ ಸರಣಿ ಗೆಲುವು ದಾಕಲಿಸಿ ತಂಡ ಮತ್ತೆ ಗೆಲುವಿನ ಹಳಿಗೆ ತಲುಪಿತು. ಆದರೆ 1999/2000 ರುತುವಿನ ಆಸ್ಟ್ರೇಲಿಯಾ ಪ್ರವಾಸ ತಂಡದ ಬೆನ್ನ ಮೂಳೆ ಮುರಿಯಿತು. ಟೆಸ್ಟ್ ಸರಣಿಯನ್ನು 0-3 ರಿಂದ ಸೋತರೆ, ಪಾಕಿಸ್ತಾನ, ಆಸ್ಟ್ರೇಲಿಯಾದೊಂದಿಗಿನ ತ್ರಿಕೋನ ಸರಣಿಯ 8 ಒಂದು ದಿನದ ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದು ಪೈನಲ್ ಕೂಡ ತಲುಪದೆ ತೀವ್ರ ಮುಜುಗರಕ್ಕೆ ಒಳಗಾಯಿತು. ಇದು ಸಾಲದು ಎಂಬಂತೆ 2000 ದಲ್ಲಿ ತವರಲ್ಲೇ ದಕ್ಶಿಣ ಆಪ್ರಿಕಾ ಎದುರು 0-2 ರಿಂದ ಟೆಸ್ಟ್ ಸರಣಿ ಸೋತು ಶರಣಾಯಿತು. ಇದು 13 ವರ‍್ಶಗಳ ಬಳಿಕ ತವರಲ್ಲಿ ಬಾರತದ ಮೊದಲ ಟೆಸ್ಟ್ ಸರಣಿ ಸೋಲಾಗಿದ್ದದು ಆಟಗಾರರಿಗೂ, ಅಬಿಮಾನಿಗಳಿಗೂ ದೊಡ್ಡ ಆಗಾತವಾಗಿ ಪರಿಣಮಿಸಿತು.
ಸಾಲು ಸಾಲು ಪೆಟ್ಟುಗಳಿಂದ ಕಂಗೆಟ್ಟ ತೆಂಡೂಲ್ಕರ್ ನಾಯಕತ್ವ ತೊರೆದರು. ಒಡನೆಯೇ ಗಂಗೂಲಿ ನಾಯಕರಾಗಿ ದಕ್ಶಿಣ ಆಪ್ರಿಕಾ ಎದುರು ಒಂದು ದಿನದ ಪಂದ್ಯಗಳ ಸರಣಿಯನ್ನು 3-2 ರಿಂದ ಗೆದ್ದರೂ ಆ ವೇಳೆ ಮೋಸದಾಟ ಪ್ರಕರಣದ ಕರಿ ಚಾಯೆ ಕ್ರಿಕೆಟ್ ಜಗತ್ತನ್ನು ಆವರಿಸಿತು. ಕೋಚ್ ಕಪಿಲ್ ದೇವ್ ರ ಮೇಲೂ ಆರೋಪಗಳು ಕೇಳಿಬಂದಾಗ, ವಿಪರೀತ ಒತ್ತಡ ಹಾಗೂ ಅವಮಾನದ ನಡುವೆ ಬಾರತದ ಶ್ರೇಶ್ಟ ಕ್ರಿಕೆಟಿಗ ಕಪಿಲ್ ದೇವ್ ರಾಜೀನಾಮೆ ನೀಡಿ ತಂಡದೊಂದಿಗೆ ತಮ್ಮ ಸಂಬಂದವನ್ನು ಕಡೆದುಕೊಂಡರು. ಆ ಬಳಿಕ ಈ ಆರೋಪಗಳು ಸುಳ್ಳೆಂದು ಸಾಬೀತಾಗಿ ಕಪಿಲ್ ರ ಪ್ರತಿಶ್ಟೆ ಮತ್ತೆ ಮರಳಿದರೂ ಮತ್ತೆಂದೂ ಅವರು ಕೋಚ್ ಆಗಲು ಬಯಸದೆ ತಂಡದಿಂದ ದೂರವೇ ಉಳಿದರು. ಒಂದು ಬಗೆಯಲ್ಲಿ ಬಾರತದ ಕೋಚ್ ಆಗಿ ಅತ್ಯಂತ ನೋವಿನ ಗಳಿಗೆಗಳನ್ನು ಅಂಗಳದ ಒಳಗೂ ಹೊರಗೂ ಕಂಡವರು ಕಪಿಲ್ ದೇವ್ ಅನ್ನುವುದೇ ನಮ್ಮ ದೌರ‍್ಬಾಗ್ಯ.
(ಚಿತ್ರ ಸೆಲೆ: sportskeeda.com,espncricinfo.com, cricketcountry.com, espncricinfo.com, espncricinfo.com, espncricinfo.com, wikipedia.org, wikipedia.org)
ಇತ್ತೀಚಿನ ಅನಿಸಿಕೆಗಳು