ಹಬೆ ಯಂತ್ರದ ಪರಿಣಾಮ
ಕರೋನ ಕಾಲದಲ್ಲಿ ಇಡೀ ಮನೆಮಂದಿಯೆಲ್ಲ ಹೆಚ್ಚು ಸಮಯ ಕಳೆದಿದ್ದು ಟಿವಿ ಅತವಾ ಮೊಬೈಲ್ ಮುಂದೆ ಅಲ್ಲವೇ ಅಲ್ಲ, ನನ್ನ ಪ್ರಕಾರ, ಯಾವ ವಯೋಮಾನದ ಇತಿಮಿತಿಯಿಲ್ಲದೆ ಹೆಚ್ಚು ಜನರು ಕೂತಿದ್ದೆ ಹಬೆ ಯಂತ್ರದ ಮುಂದೆ! ಅದೇ ಸ್ಟೀಮರ್! ಅವತ್ತೊಂದು ದಿನ ಈ ಪುಟ್ಟ ಹಬೆಯುಗುಳುವ ಯಂತ್ರ ನನ್ನನ್ನು ಉಗುಳು ನುಂಗುವಂತೆ ಮಾಡುತ್ತದೆ ಎಂದು ನಾನು ಹದಿಮೂರು ವರ‍್ಶದ ಹಿಂದೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸೀಟ್ ತೆಗೆದುಕೊಳ್ಳುವಾಗಲಂತೂ ಊಹಿಸಿಯೇ ಇರಲಿಲ್ಲ. ಆಗಿದ್ದಿಶ್ಟು, ಸತತ ಎರಡು ವರ‍್ಶಗಳಶ್ಟು ಕಾಲ ಕರೋನದ ರಣಕೇಕೆ (ಯಾವುದೋ ಟಿವಿ ಚಾನೆಲ್ಲಿನ ಪದಗಳನ್ನು ಬಳಸ್ತಾ ಇದ್ದೇನೆ) ಇದ್ದುದರಿಂದ ಯಾವ ಸಮಾರಂಬಗಳೂ ರಾಜಾರೋಶವಾಗಿ ನಡೆಯುತ್ತಲೇ ಇರಲಿಲ್ಲ. ಆಹ್ವಾನ ಬಂದ ಕೆಲ ಚಿಕ್ಕ ಪುಟ್ಟ ಕಾರ‍್ಯಕ್ರಮಕ್ಕೆ ಹೋಗುವುದೆಂದು ನಿಗದಿಯಾಗಿದ್ದೇ ತಡ ಮನೆಯಲ್ಲಿನ ನಾವೆಲ್ಲ ಹೆಣ್ಣು ಮಕ್ಕಳು ಸಿಕ್ಕಿದ್ದೇ ಚಾನ್ಸು ಅಂತ ಇದ್ದ ಬದ್ದ ರೇಶ್ಮೆ ಸೀರೆ, ಮೇಕಪ್ಪು, ಒಡವೆಗಳನ್ನೆಲ್ಲ ಮೈ ಮೇಲೆ ಹೇರಿಕೊಂಡು ಸಮಾರಂಬದ ಊಟ ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬಂದ ಮೇಲೆಯೇ ಕರೋನದ ಮುನ್ನೆಚ್ಚರಿಕೆಗಳು ಇದ್ದಕ್ಕಿದ್ದಂತೆ ಎಲ್ಲರಿಗೂ ನೆನಪಾದವು. ಕೆಲವರು ಎರಡು-ಮೂರು ಬಾರಿ ಕೈ ಉಜ್ಜಿ ತೊಳೆದುಕೊಳ್ಳಹತ್ತಿದರೆ ಇನ್ನುಳಿದವರು ಸ್ನಾನವನ್ನೇ ಮಾಡೋಣವೆಂದು ನೀರು ಕಾಯಿಸತೊಡಗಿದರು. ಹಿರಿಯರು ರೇಶ್ಮೆ ಸೀರೆಯನ್ನು ಹೇಗೆ ಸ್ಟೆರಿಲೈಜ್ ಮಾಡುವುದೆಂದು ಚರ‍್ಚೆ ಮಾಡತೊಡಗಿದರು!
ಇದನ್ನೆಲ್ಲಾ ನಾನು ತಮಾಶೆ ಎಂಬಂತೆ ಅತ್ತಿತ್ತ ನೋಡುತ್ತಾ, ಅದ್ಹೇಗೆ ಶೀಲಾ ಕಾಕು ತನ್ನ 35 ವರ‍್ಶ ಹಳೆಯ ರೇಶ್ಮೆ ಸೀರೆಯನ್ನು ಸ್ಟೆರಿಲೈಜ್ ಮಾಡುತ್ತಾಳೆ ಎಂದು ಕುತೂಹಲದಿಂದ ನೋಡುತ್ತಿದ್ದಾಗ ದುತ್ತನೆ ನಾನೊಬ್ಬ ತಾಯಿ ಎಂದು ನೆನಪಾಯಿತು! ನನ್ನ ಪಟಿಂಗ ಮಗ ತಾನು ಮಾಸ್ಕ ಹಾಕಿಕೊಳ್ಳುವುದಿರಲಿ, ನಾನು ಹಾಕಿಕೊಂಡದ್ದನ್ನೂ ಕಿತ್ತೆಸಿದಿದ್ದ. ಎಲ್ಲ ಉಡುಪುಗಳಿಗೆ ಮ್ಯಾಚಿಂಗ್ ಆಗುವಂತೆ ಅದೇ ಬಣ್ಣದ ಮಾಸ್ಕನ್ನು ಹುಡುಕಿ ತೆಗೆದುಕೊಂಡಿದ್ದಲ್ಲದೆ ಅದರ ಮೇಲೆ ಕಸೂತಿ ಕೂಡ ಹಾಕಿಸಿದ್ದೆ. ಈ ಕೋತಿ ಅದನ್ನೆಲ್ಲಿ ಎಸೆದು ಬಂದಿತೋ ಏನೋ. ಮೊದಲೇ ಚಿಕ್ಕವ, ಮೇಲಾಗಿ ಎಲ್ಲೆಲ್ಲಿ ಕೈ ಹಚ್ಚಿ ಆಟವಾಡಿದ್ದನೋ? ಮೊದಲು ಅವನ ಕೈ ತೊಳೆಯಬೇಕೆಂದು ಅವನನ್ನು ಹುಡುಕಿ ತಂದು ಶುಚಿಗೊಳಿಸಿ, ಮುಂಜಾಗ್ರುತಾ ಕ್ರಮವಾಗಿ ಸ್ಟೀಮ್ ಕೊಡಬೇಕೆಂದು ಸ್ಟೀಮರ್ ಮುಂದೆ ಕೂರಿಸಿದೆ. ಅದು ಹಬೆ ತಯಾರಿಸುವ ತನಕ, ಅವನಿಗೆ ಉಪ್ಪು ನೀರಿನಿಂದ ಗುಳುಗುಳು (ಗಾರ‍್ಗ್ಲಿಂಗ್) ಮಾಡಬೇಕೆಂದು ತಿಳಿಸಿ ಹೇಳುತ್ತಿದ್ದೆ. ಅಶ್ಟೊತ್ತು ಒಂದು ಕಡೆ ಕೂತಿದ್ದೆ ಹೆಚ್ಚು ಅಂತಿದ್ದ ನನ್ನ ಮಗನಿಗೆ ನಾನು ಹೇಳುವ ಗುಳುಗುಳು ಬಾಶಣ ಇನ್ನೂ ಬೀಕರವೆನಿಸಿರಬೇಕು! ತನ್ನ ಪ್ರಶ್ನೆಗಳ ಬಾಣಗಳನ್ನು ಬಿಡಲಾರಂಬಿಸಿದ. ಅದೂ ಕೂಡ ತಾರ‍್ಕಿಕವಾದ ತನ್ನ ವಿಶಿಶ್ಟ ಉಪಮೆಗಳೊಂದಿಗೆ! “ಅವ್ವಾ, ಇಲ್ಲಿ ಕೇಳಿಲ್ಲಿ. ಅಜ್ಜಿ , ದಿನಾ ಮುಂಜಾನೆ ಒಲಿ ಮ್ಯಾಲ್ ನೀರ್ ಕಾಯಿಸ್ತಾಳ್. ಹೆಂಗ್ ಗೊತ್ತೈತೇನು! ನಾಲ್ಕ್ ಕಟ್ಟಿಗಿ ತಗೋತಾಳ್ , ಸ್ವಲ್ಪ ಒಲಿಯೊಳಗ್ ಹಾಕ್ತಾಳ್ , ಒಂದು ಕುಳ್ ಇಡ್ತಾಳ್, ಸ್ವಲ್ಪ್ ಅಂದ್ರ ಅಗದಿ ಸ್ವಲ್ಪ ಚುಮಣಿ ಎಣ್ಣಿ ಹಾಕ್ತಾಳ್ … ” ಇನ್ನೂ ಹೇಳುವವನಿದ್ದ. ಅಶ್ಟೊತ್ತಿಗಾಗಲೇ ನನಗೆ ಸುತ್ತಮುತ್ತಲಿನ ಪ್ರಪಂಚದ ಆಗುಹೋಗುಗಳು ಗಮನಕ್ಕೆ ಬಂದಿದ್ದವು. ಇಶ್ಟೊತ್ತಿನ ತನಕ ರೇಶ್ಮೆ ಸೀರಿ ಗುಂಗಿನೊಳಗಿದ್ದವರ ಮಾತು ಕಡಿಮೆಯಾಗಿ ನಮ್ಮತ್ತ ಕಿವಿ ನೆಟ್ಟಿದ್ದವು. ಉಳಿದ ಬಳೆಗಳ ಸದ್ದು ಕೂಡ ಕಮ್ಮಿಯಾಗಿತ್ತು. ಇನ್ನು ನನ್ನ ಮಗ ಬಿಟ್ಟರೆ ನಾಳೆ ತನಕ ಬೆಂಕಿ ಕಡ್ಡಿ ಗೀರುವುದನ್ನೇ ವರ‍್ಣಿಸ್ತಾ ಇರ‍್ತಾನೆ ಅಂತ ಯೋಚನೆ ಮಾಡಿ “ನಿನಗೇನ್ ಕೇಳೋದ್ ಅದ, ಅದನ್ನ ಮೊದ್ಲ ಕೇಳ್ (‘ನಿಮ್ಮಜ್ಜಿ ಬೆಂಕಿ ಹಚ್ಚೊದ್ರಾಗ್ ನಂಬರ್ ಒನ್’ ಅಂತ ಬಾಯಿಗೆ ಬಂದಿದ್ರೂ ಹೇಳಲಿಲ್ಲ ) ” ಅಂತ ದಮಕಿ ಕೊಡುವಂತೆಯೇ ಹೇಳಿದೆ. ಅವನ ಪ್ರಶ್ನೆ ಸರಳವಿತ್ತು “ನೀ ನಂಗ ಹಬೆ ಹೆಂಗ್ ಕೊಡ್ತಿ? ಟೇಬಲ್ ಕುರ‍್ಚಿ ಮ್ಯಾಲ್ ಕುಂತ ನೀರ್ ಹೆಂಗ್ ಕಾಯ್ಸಕ್ಕಿ??” ಅಂತ ಕೇಳಿದ. ಅವನ ಮುಗ್ದ ಪ್ರಶ್ನೆಗೆ ಮಂದಹಾಸ ಮೂಡಿದರೂ, ಒಳಗಿನ ಕೋಣೆಯಿಂದ ಯಾರೋ ಕಿಸಕ್ಕನೆ ನಕ್ಕಿದ್ದು ಕೂಡ ಕೇಳಿಸಿತ್ತು. ಟಿವಿಯಲ್ಲಿ ಟಿ ಎನ್ ಸೀತಾರಾಮರ ಕೋರ‍್ಟ್ ದ್ರುಶ್ಯ ಬಂದಾಗ ಇರುವಂತ ಮೌನ ಎಲ್ಲೆಡೆಯೂ ಇತ್ತು. ಇವನಿಗೆ ತಿಳಿಯುವ ಹಾಗೆ ಹೇಗೆ ಹೇಳುವುದು ಅಂತ ಯೋಚಿಸಿ ತುಂಬಾ ಸರಳವಾಗಿ, ವಿದ್ಯುತ್ ನಿಂದ ಒಂದು ಹೀಟಿಂಗ್ ಎಲಿಮೆಂಟ್ ನ್ನು ಕಾಯಿಸಿ ಅದರ ಮುಕಾಂತರ ನೀರು ಕಾಯಿಸಿದಾಗ ಹಬೆ ಉಂಟಾಗುತ್ತದೆ. ಅದನ್ನೇ ನೀನು ಮೂಗಿನಿಂದ ಒಳಗೆಳೆದುಕೊಳ್ಳುತ್ತಿ ಎಂದು ಹೇಳಿದೆ. ‘ಹಂಗಂದ್ರೆ?’ ಅಂತ ಮತ್ತೆ ಕೇಳಿದ. ಆಗ ಮತ್ತೆ ಮೊದಲಿನದನ್ನೆ ಸ್ಟೀಮರ್ ನ್ನು ಬಿಚ್ಚಿ ಒಳಗಿರುವ ನೀರು, ಎಶ್ಟು ನೀರಿನ ಪ್ರಮಾಣವಿರಬೇಕು, ಹೀಟಿಂಗ್ ಎಲಿಮೆಂಟ್ ಇರುವ ಜಾಗ ತೋರಿಸಿದೆ. ‘ಹೀಟಿಂಗ್ ಎಲಿಮೆಂಟ್ ಅಂದ್ರೆ ?’ ಅಂತಂದ. ಯಾವ ವಸ್ತುವನ್ನು ಕಾಯಿಸಿ ಅದರ ಮುಕಾಂತರ ಪರೋಕ್ಶವಾಗಿ ನೀರನ್ನು ಕಾಯಿಸುವೆವೋ ಆ ವಸ್ತುವಿಗೆ ಹೀಟಿಂಗ್ ಎಲಿಮೆಂಟ್ ಅಂತ ಕರೀತೇವೆ ಅಂತ ತಿಳಿಸಿದೆ. ‘ಹಂಗಾದ್ರ ಒಳಗ್ ಕಟ್ಟಿಗಿ ಹಾಕಿರ‍್ತಾರು? ಕರೆ ನಂಗ ಎಲ್ಲೂ ಬೆಂಕಿ ಕಾಣಿಸಲೇ ಇಲ್ಲಾ ?’ ಅಂತ ಸ್ಟೀಮರ್ ಒಳಗೆ ಇಣುಕಿ ನೋಡಿದ. ಇನ್ನು ಇವನಿಗೆ ವಿದ್ಯುತ್ , ವಾಹಕಗಳು, ಅರೆವಾಹಕಗಳು, ಅವಾಹಕಗಳು, ಬಾಯ್ಲಿಂಗ್ ಪಾಯಿಂಟ್, ವ್ಯಾಟ್ಟೆಜ್ ಎಲ್ಲವನ್ನೂ ವಿವರಿಸಬೇಕಲ್ಲ ! ಮೇಲಾಗಿ ಒಳಗೆ ಕುಳಿತ ಪುಕ್ಸಟ್ಟೆ ಕಿವಿಗಳಿಗೆ ಸುಮ್ಮನೆ ಮನೋರಂಜನೆ ಯಾಕೆ ನೀಡಬೇಕು? ಒಂದು ವೇಳೆ ನಾನು ಉತ್ತರ ಹೇಳಲಿಲ್ಲವೆಂದರೆ ಇದನ್ನೇ ಕಾದು ಕುಳಿತಿರುವ ಕರಿ ನಾಲಿಗೆಗಳು ‘ಅಯ್ಯ! ಇಕಿ ಇಂಜಿನಿಯರಿಂಗ್ ಮಾಡಿದ್ದ ಸಾರ‍್ತಕ ಆಯ್ತ್ ನೋಡ್ !’ ಅಂತ ಹೇಳಲು ಹೆಚ್ಚು ಸಮಯ ಹಿಡಿಯುವುದಿಲ್ಲ ಅಂತಲೂ ಯೋಚಿಸಿದೆ. ಆದರೆ ಈ ನನ್ಮಗ ‘ವಿದ್ಯುತ್ ತೋರಿಸು ನನಗೆ’ ಅಂತ ಕೇಳಿದರೆ ಏನು ಮಾಡುವುದು ಎಂದು ಯೋಚಿಸಿಯೇ ಬೆಚ್ಚಿ ಬಿದ್ದೆ! ಅಶ್ಟರಲ್ಲಿ ಕೆಳ ಮಹಡಿಯಿಂದ ‘ಅನು ವೈಣಿ, ಮ್ಯಾಲಿನ್ ರೂಮ್ ಒಳಗ್ ಕರೆಂಟ್ ಐತಿ ಏನ್ರಿ? ಊರಾಗ್ ಏನೋ ರಿಪೇರಿ ನಡದೇತ್ ಅಂತ. ಇವತ್ ಸಂಜಿ ಆರರ ನಂತರ ಕರೆಂಟ್ ಹಾಕ್ತಾರ್ ಅಂತ, ಎಂದು ಅಂದಿದ್ದೇ ತಡ, ಬದುಕಿದೆಯಾ ಬಡಜೀವ ಅಂತ ನಾನು ನನ್ನ ಮಗನೊಂದಿಗೆ ಅಲ್ಲಿಂದ ಪರಾರಿಯಾದೆ. ಕೋಣೆಯೊಳಗಿದ್ದ ನಿರಾಶೆಗೊಂಡ ಕರಿನಾಲಿಗೆಗಳು ಲೊಚಗುಟ್ಟುವುದು ಮಾತ್ರ ನನಗೆ ಮಹಡಿ ಮೆಟ್ಟಿಲು ಇಳಿಯುವಾಗ ಸ್ಪಶ್ಟವಾಗಿ ಕೇಳಿಸಿತು.
( ಚಿತ್ರಸೆಲೆ: creazilla.com )
ಇತ್ತೀಚಿನ ಅನಿಸಿಕೆಗಳು