ಗೂಳೂರು ಮಹಾಗಣಪತಿ ಗುಡಿ
ಕಲ್ಪತರು ನಾಡು ತುಮಕೂರು ಐತಿಹಾಸಿಕ ದೇವಾಲಯಗಳಿರುವ ಒಂದು ಸುಂದರ ಜಿಲ್ಲೆ. ಈ ಹಿಂದೆ ತುಮಕೂರಿನ ಕೈದಾಳದ ಶ್ರೀ ಚೆನ್ನಕೇಶವನ ದೇವಾಲಯದ ಬಗ್ಗೆ ಕಿರುಪರಿಚಯವನ್ನು ನೀಡಲಾಗಿತ್ತು. ಕೈದಾಳಕ್ಕೆ ತಲುಪಲು ತುಮಕೂರಿನಿಂದ ಕುಣಿಗಲ್ ಮಾರ‍್ಗದಲ್ಲಿ ಸಾಗುವಾಗ ಸುಮಾರು 6 ರಿಂದ 8 ಕಿ.ಮೀ. ಅಂತರದಲ್ಲಿ ಗೂಳೂರು ಎಂಬ ಪುಟ್ಟ ಗ್ರಾಮವೊಂದು ಸಿಗುವುದು.ಈ ಗೂಳೂರು ಪುಟ್ಟ ಹಳ್ಳಿಯಾದರೂ ಇಲ್ಲಿ ಪ್ರತಿವರ‍್ಶ ಕಾರ‍್ತಿಕ ಮಾಸದಲ್ಲಿ ಜರುಗುವ ಮಹಾಗಣಪತಿಯ ಜಾತ್ರಾ ಮಹೋತ್ಸವ ಒಂದು ವಿಶೇಶವಾದ ಐತಿಹ್ಯವನ್ನೇ ಹೊಂದಿದೆ.
ಸ್ವತಂತ್ರ ಪೂರ‍್ವದಲ್ಲಿ ಗಣೇಶ ಚತುರ‍್ತಿಯು ಕೇವಲ ಮನೆಗಳಲ್ಲಶ್ಟೇ ಆಚರಣೆಗೆ ಸೀಮಿತವಾಗಿತ್ತು. ಸ್ವಾತಂತ್ರ‍್ಯ ಹೋರಾಟದ ಕಾಲದಲ್ಲಿ ಲೋಕಮಾನ್ಯ ಶ್ರೀ ಬಾಲಗಂಗಾದರ ತಿಲಕ್ ರವರು ಬ್ರಿಟಿಶರ ವಿರುದ್ದ ಬಾರತೀಯರಲ್ಲಿ ಒಗ್ಗಟ್ಟು ಮೂಡಿಸಿ, ಸ್ವಾತಂತ್ರ‍್ಯದ ಕಿಚ್ಚನ್ನು ಹರಡುವ ಸಲುವಾಗಿ ಗಣೇಶೋತ್ಸವವನ್ನು ಸಾರ‍್ವಜನಿಕವಾಗಿ ನೆರವೇರಿಸುವ ಆಚರಣೆಯನ್ನು ಜಾರಿಗೆ ತಂದರು. ಆದರೆ ತುಮಕೂರಿನ ಗೂಳೂರಿನಲ್ಲಿ ಮಾತ್ರ ಸ್ವಾತಂತ್ರ‍್ಯ ಪೂರ‍್ವದ ಕಾಲದಿಂದಲೂ ಗಣೇಶೋತ್ಸವವನ್ನು ಆಚರಿಸಿಕೊಂಡು ಬಂದಿರುವುದಾಗಿ ಉಲ್ಲೇಕಗಳು ಇವೆ.
ಹಿನ್ನೆಲೆ
ಸಹಸ್ರಾರು ವರ‍್ಶಗಳ ಹಿಂದೆ ಸಪ್ತರ‍್ಶಿಗಳಲ್ಲಿ ಒಬ್ಬರಾದ ಬ್ರುಗು ಮಹರ‍್ಶಿಗಳು ಕಾಶಿಯಾತ್ರೆಯನ್ನು ಕೈಗೊಂಡರಂತೆ. ಹೀಗೆ ಸಾಗಿ ಬರುವಾಗ, ಗಣೇಶ ಚತುರ‍್ತಿಯ ದಿನದಂದು ಜಿಲ್ಲೆಯ ಗೂಳೂರು ಆಗಿನ ಗೂಳಿಪಟವನ್ನು ತಲುಪಿದರಂತೆ. ಈ ಪ್ರದೇಶದಲ್ಲಿ ಗಣೇಶನ ವ್ರತವನ್ನು ಮಾಡಲು ಸುತ್ತಲೂ ಎಲ್ಲಿ ಹುಡುಕಿದರೂ ವಿಗ್ನ ನಿವಾರಕ ವಿನಾಯಕನ ಗುಡಿಯಾಗಲಿ, ಪ್ರತಿಮೆಯಾಗಲಿ ಬ್ರಗು ಮಹರ‍್ಶಿಗಳಿಗೆ ಕಾಣಿಸಲಿಲ್ಲವಂತೆ. ಆಗ ಸ್ವತಹ ಮಹರ‍್ಶಿಗಳು ಅಲ್ಲೇ ಊರ ಬಳಿಯಿದ್ದ ಕೆರೆಯಿಂದ ಜೇಡಿ ಮಣ್ಣನ್ನು ತಂದು ತಾವೇ ಕುದ್ದಾಗಿ ಬ್ರುಹದಾಕಾರದ ಗಣೇಶನ ಪ್ರತಿಮೆಯನ್ನು ಮಾಡಿ ವಿಶೇಶ ಪೂಜೆಯನ್ನು ಸಲ್ಲಿಸಿದರಂತೆ. ಇದನ್ನೆಲ್ಲ ವೀಕ್ಶಿಸುತ್ತಿದ್ದ ಅಲ್ಲಿನ ಗ್ರಾಮಸ್ತರು ಅಚ್ಚರಿಗೊಳಗಾಗಿ ಮಹರ‍್ಶಿಗಳ ಬಳಿ ಗಣಪತಿಯ ವಿಗ್ರಹವನ್ನು ಮಾಡುವ ಬಗೆ ಹಾಗೂ ಪೂಜಾವಿದಿ ವಿದಾನಗಳನ್ನು ಕಲಿಸುವಂತೆ ಕೋರಿಕೆ ಇಟ್ಟರಂತೆ. ಕೂಡಲೇ ಮಹರ‍್ಶಿಗಳು ಗಣೇಶನ ಪ್ರತಿಮೆ ಮಾಡುವ ಬಗೆ ಹಾಗೂ ಪೂಜಾಕ್ರಮಗಳನ್ನು ತಿಳಿಸಿಕೊಟ್ಟರಂತೆ. ಅಂದಿನಿಂದ ಈ ಪದ್ದತಿ ಅಸ್ತಿತ್ವಕ್ಕೆ ಬಂದಿದೆಯೆಂಬುದು ಇಲ್ಲಿನ ಗ್ರಾಮಸ್ತರ ಅಬಿಪ್ರಾಯ. ಬ್ರಗು ಮಹರ‍್ಶಿಗಳು ತಮ್ಮ ಕೈಯ್ಯಾರೆ ಮಾಡಿದ ಗಣೇಶನ ಮೂರ‍್ತಿಯು 3 ಮೀ ಉದ್ದ ಮತ್ತು 3 ಮೀ ಅಗಲವಿತ್ತಂತೆ. ಅದೇ ರೀತಿಯಲ್ಲಿ ಅಲ್ಲಿನ ಸ್ತಳೀಯ ಕಲಾವಿದರ ಮನೆತನವೊಂದು ಅನಾದಿ ಕಾಲದಿಂದಲೂ ಅಶ್ಟೇ ಬ್ರುಹತ್ ಗಾತ್ರದ ಗಣಪತಿಯ ಮೂರ‍್ತಿಯನ್ನು ನಿರ‍್ಮಾಣ ಮಾಡುತ್ತಾ ಬರುತ್ತಿದ್ದಾರೆ ಎಂಬುದಾಗಿ ಹೇಳಲಾಗುತ್ತದೆ.
ಸಾಮಾನ್ಯವಾಗಿ ಪ್ರತಿ ವರ‍್ಶ ಬಾದ್ರಪದ ಮಾಸದ ಶುಕ್ಲ ಪಕ್ಶದಲ್ಲಿ ನಾಡಿನೆಲ್ಲೆಡೆ ಗಣೇಶ ಚತುರ‍್ತಿಯ ದಿವಸ ಗಣಪತಿಯ ವಿಗ್ರಹವನ್ನು ಪ್ರತಿಶ್ಟಾಪಿಸಿ ವೈಬವವಾಗಿ ಆಚರಿಸುತ್ತೇವೆ. ಆದರೆ ಗೂಳೂರಿನಲ್ಲಿ ಗಣೇಶ ಚತುರ‍್ತಿಯಂದು ಗಣಪನ ಪ್ರತಿಮೆಯ ನಿರ‍್ಮಾಣದ ಕಾರ‍್ಯ ಆರಂಬಗೊಳ್ಳುತ್ತದೆ. ಗಣೇಶನ ಹಬ್ಬದಂದು ಅಂದರೆ ಗಣೇಶ ಚತುರ‍್ತಿಯಂದು ಗೂಳೂರು ಕೆರೆಯ ಜೇಡಿ ಮಣ್ಣಿನಿಂದ ಚಿಕ್ಕದಾದ ಗಣೇಶನ ಮೂರ‍್ತಿಯನ್ನು ಮಾಡಿ ಅಲ್ಲಿನ ಗಣಪತಿಯ ದೇವಾಲಯದಲ್ಲಿ ಇಟ್ಟು ಪೂಜಿಸಲಾಗುತ್ತದೆ. ಬ್ರುಹದಾಕಾರದ ಗಣೇಶನ ಪ್ರತಿಮೆಯನ್ನು ನಿರ‍್ಮಿಸುವಾಗ ಗಣಪತಿಯ ಉದರದೊಳಗೆ ವಿಜಯದಶಮಿಯಂದು ಆ ಪುಟ್ಟ ಗಣೇಶನನ್ನು ಇಟ್ಟು ಕಡುಬು, ಮುಂತಾದ ನೈವೇದ್ಯಗಳನ್ನು ಇಡಲಾಗುತ್ತದೆ ಎಂಬುದು ಇಲ್ಲಿನ ವಿಶೇಶ.
ಬಾದ್ರಪದ ಮಾಸದ ಶುಕ್ಲ ಪಕ್ಶದ ಚತುರ‍್ತಿಯ ದಿನದಂದು, ಮೊದಲಿಗೆ ಗೂಳೂರು ಕೆರೆಗೆ ಗಂಗೆ ಪೂಜೆಯನ್ನು ಸಲ್ಲಿಸಿ ಗಣಪತಿಯ ಪ್ರತಿಮೆಯ ನಿರ‍್ಮಾಣಕ್ಕೆ ಅಗತ್ಯವಾದಂತಹ ಮಣ್ಣಿನ ಉಂಡೆಗಳನ್ನು ತಂದು ದೇವಾಲಯದಲ್ಲಿ ಇಟ್ಟು ಪೂಜೆ ಸಲ್ಲಿಸಿ, ಅಲ್ಲಿಯೇ ವಿಗ್ರಹ ಮಾಡುವ ಕಾರ‍್ಯವನ್ನು ಬಕ್ತಿ ಪೂರ‍್ವಕವಾಗಿ ಆರಂಬಿಸುತ್ತಾರೆ. ಸುಮಾರು ಎರಡು ತಿಂಗಳುಗಳ ಕಾಲ ಗಣಪನ ನಿರ‍್ಮಾಣದ ಕಾರ‍್ಯ ಸುದೀರ‍್ಗವಾಗಿ ಸಾಗುತ್ತದೆ. ಕಾರ‍್ತಿಕ ಮಾಸದ ದೀಪಾವಳಿಯ ವೇಳೆಗೆ ಪ್ರತಿಮೆ ನಿರ‍್ಮಿಸುವ ಕಾರ‍್ಯವನ್ನು ಪೂರ‍್ಣಗೊಳಿಸಿ, ಬಲಿಪಾಡ್ಯಮಿಯ ದಿನದಂದು ಬ್ರುಹದಾಕಾರದ (ಸುಮಾರು 9ರಿಂದ 10 ಅಡಿ ಉದ್ದದ) ಗಣೇಶನ ವಿಗ್ರಹವನ್ನು ಪ್ರತಿಶ್ಟಾಪಿಸುತ್ತಾರೆಂಬುದಾಗಿ ಹೇಳಲಾಗುತ್ತದೆ. ಈ ಬ್ರುಹತ್ ಗಣಪನಿಗೆ ಬೆಲೆ ಬಾಳುವ ಆಬರಣಗಳನ್ನು ತೊಡಿಸಿ, ಕಾರ‍್ತಿಕ ಮಾಸದ ಒಂದು ತಿಂಗಳ ಕಾಲ ನಿತ್ಯವೂ ವಿಶೇಶವಾದ ಪೂಜಾಕೈಂಕರ‍್ಯಗಳನ್ನು ನೆರವೇರಿಸಲಾಗುವುದು. ಕಾರ‍್ತಿಕ ಮಾಸದ ಅಮವಾಸ್ಯೆಯ ಬಳಿಕ ಊರಿನ ಕೆಲವು ಮುಕ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಡಗರದಿಂದ ಗೂಳೂರು ಕೆರೆಗೆ ಬ್ರುಹತ್ ಮಹಾಗಣಪತಿಯನ್ನು ವಿಸರ‍್ಜಿಸಲಾಗುತ್ತದೆ.
ಕಾರ‍್ತಿಕ ಮಾಸದ ಚಳಿಗಾಲದಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಏಕೈಕ ಗೂಳೂರು ಗಣೇಶೋತ್ಸವಕ್ಕೆ ಇಲ್ಲಿನ ಬಕ್ತಾದಿಗಳು ಮಾತ್ರವಲ್ಲ, ತುಮಕೂರು ಜಿಲ್ಲೆಯ ಸುತ್ತಮುತ್ತ ಮತ್ತು ನಾಡಿನಾದ್ಯಂತ ನಾನಾ ಬಾಗಗಳಿಂದ ಬಕ್ತರು ಇಲ್ಲಿಗೆ ಆಗಮಿಸಿ ಬಕ್ತಿ ಸಮರ‍್ಪಣೆ ಮಾಡಿ ಈ ವಿಶೇಶ ಮಹಾಗಣಪತಿಯ ಕ್ರುಪೆಗೆ ಪಾತ್ರರಾಗಲು ಇಚ್ಚಿಸುತ್ತಾರೆ.
( ಚಿತ್ರಸೆಲೆ: facebook.com )
ಇತ್ತೀಚಿನ ಅನಿಸಿಕೆಗಳು