ಎರಡು ವಚನಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣೆ ಗೊಗ್ಗವೆ ಮತ್ತು ಶಿವಶರಣ ಜೇಡರ ದಾಸಿಮಯ್ಯನ ಈ ಎರಡು ವಚನಗಳು “ಹೆಣ್ಣು-ಗಂಡು ಜೀವಿಗಳಲ್ಲಿ ಯಾವುದೇ ಒಂದು ಮೇಲು ಅಲ್ಲ; ಕೀಳು ಅಲ್ಲ. ಮಾನವ ಸಮುದಾಯ ಒಲವು ನಲಿವು ನೆಮ್ಮದಿಯಿಂದ ಬೆಳೆದು ಉಳಿದು ಬಾಳಬೇಕಾದರೇ ಎರಡು ಜೀವಿಗಳು ಒಂದಕ್ಕೆ ಮತ್ತೊಂದು ಪೂರಕ” ಎಂಬ ಲಿಂಗ ಸಮಾನತೆಯ ಸಂಗತಿಯನ್ನು ಹೇಳುತ್ತಿವೆ.

1. ಗೊಗ್ಗವ್ವೆ ವಚನ:

ಊರು: ಕೇರಳದ ಆವಲೂರು
ಕಸುಬು: ಶಿವಶರಣರಿಗೆ ದೂಪ ನೀಡುವುದು
ಅಂಕಿತನಾಮ: ನಾಸ್ತಿನಾಥ
ದೊರೆತಿರುವ ವಚನಗಳು: 6

ಮೊಲೆ ಮುಡಿ ಬಂದಡೆ
ಹೆಣ್ಣೆಂಬರು
ಮೀಸೆ ಕಾಸೆ ಬಂದಡೆ
ಗಂಡೆಂಬರು
ಈ ಉಭಯದ ಜ್ಞಾನ
ಹೆಣ್ಣೊ ಗಂಡೊ ನಾಸ್ತಿನಾಥಾ

ಮೊಲೆ=ಹುಟ್ಟಿದ ಮಗುವಿಗೆ ಎದೆಹಾಲನ್ನು ಉಣಿಸಲು ಹೆಣ್ಣಿನ ದೇಹದಲ್ಲಿರುವ ಇರುವ ಅಂಗ ; ಮುಡಿ=ಉದ್ದನೆಯ ತಲೆಗೂದಲು/ಜಡೆ ; ಬಂದಡೆ=ಬಂದರೆ ; ಹೆಣ್+ಎಂಬರು; ಎಂಬರು=ಎನ್ನುವರು;

ಮೊಲೆ ಮುಡಿ ಬಂದಡೆ ಹೆಣ್ಣೆಂಬರು=ಮೊಲೆ ಮುಡಿಯನ್ನುಳ್ಳ ಜೀವಿಯನ್ನು ‘ಹೆಣ್ಣು’ ಎಂದು ಜನರು ಕರೆಯುತ್ತಾರೆ;

ಮೀಸೆ=ಗಂಡಸಿನ ಮೂಗಿನ ಕೆಳಗಡೆಯ ಜಾಗದಲ್ಲಿ ಬೆಳೆಯುವ ಕೂದಲು ; ಕಾಸೆ=ಹುಟ್ಟಿದ ಮಗು ಗಂಡು ಎಂಬುದನ್ನು ಸೂಚಿಸುವ ಅಂಗ/ಶಿಶ್ನ; ಗಂಡ್+ಎಂಬರು;

ಮೀಸೆ ಕಾಸೆ ಬಂದಡೆ ಗಂಡೆಂಬರು=ಮೀಸೆ ಮತ್ತು ಶಿಶ್ನವನ್ನುಳ್ಳ ಜೀವಿಯನ್ನು ‘ಗಂಡು’ ಎಂದು ಜನರು ಕರೆಯುತ್ತಾರೆ;

ಉಭಯ=ಎರಡು ; ಜ್ಞಾನ=ಅರಿವು/ತಿಳುವಳಿಕೆ ; ನಾಸ್ತಿನಾಥ=ಶಿವನ ಮತ್ತೊಂದು ಹೆಸರು/ವಚನಕಾತಿ ಗೊಗ್ಗವ್ವೆಯ ವಚನಗಳ ಅಂಕಿತನಾಮ;

ಈ ಉಭಯದ ಜ್ಞಾನ ಹೆಣ್ಣೊ ಗಂಡೊ=ಮಾನವ ಸಮುದಾಯದಲ್ಲಿ ದೇಹದ ಅಂಗಗಳ ಚಹರೆಯನ್ನು ಗುರುತಿಸಿ ಹೆಣ್ಣು/ಗಂಡು ಎಂದು ಹೇಳಬಹುದಲ್ಲದೆ, ಈ ಎರಡು ಬಗೆಯ ಜೀವಿಗಳು ಹೊಂದಿರುವ ಅರಿವಿನಲ್ಲಿ ಅಂದರೆ ಮನದಲ್ಲಿ ಮಿಡಿಯುವ ಒಳಿತು ಕೆಡುಕಿನ ಒಳಮಿಡಿತಗಳು ಮತ್ತು ಲೋಕದ ಜೀವನದಲ್ಲಿ ಪಡೆಯುವಂತಹ ಒಲವು ನಲಿವು ನೋವಿನ ಸಂಗತಿಗಳು ಇಬ್ಬರಿಗೂ ಒಂದೇ ಬಗೆಯಲ್ಲಿರುತ್ತವೆ;

2. ಜೇಡರ ದಾಸಿಮಯ್ಯ ವಚನ:

ಊರು: ಮುದನೂರು, ಗುಲ್ಬರ‍್ಗಾ ಜಿಲ್ಲೆ.
ಕಸುಬು: ನೆಯ್ಗೆ
ಅಂಕಿತನಾಮ: ರಾಮನಾಥ
ದೊರೆತಿರುವ ವಚನಗಳು: 176

ಮೊಲೆ ಮುಡಿ ಬಂದಡೆ
ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ
ಗಂಡೆಂಬರು
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ
ಗಂಡೂ ಅಲ್ಲ
ಕಾಣಾ ರಾಮನಾಥ

ಸುಳಿವ=ನೆಲೆಗೊಂಡಿರುವ ; ಆತ್ಮ=ಜೀವ/ಪ್ರಾಣ/ಉಸಿರು; ಕಾಣ್=ನೋಡು/ತಿಳಿ; ಕಾಣಾ=ತಿಳಿದುನೋಡು; ರಾಮನಾಥ=ಶಿವನ ಮತ್ತೊಂದು ಹೆಸರು/ಜೇಡರ ದಾಸಿಮಯ್ಯನ ವಚನಗಳ ಅಂಕಿತನಾಮ;

ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ=ದೇಹದ ಚಹರೆಗಳಲ್ಲಿ ಹೆಣ್ಣು-ಗಂಡು ಬೇರೆ ಬೇರೆಯಾಗಿ ಕಂಡು ಬಂದರೂ, ಇಬ್ಬರಲ್ಲಿಯೂ ನೆಲೆಸಿರುವ “ಜೀವ” ಎಂಬುದು ಒಂದೇ ಆಗಿದೆ. ಅಂದರೆ ವಾಸ್ತವವನ್ನು ಒರೆಹಚ್ಚಿ ನೋಡಿದಾಗ ನಿಸರ‍್ಗದ ನೆಲೆಯಲ್ಲಿ ಹೆಣ್ಣು-ಗಂಡು ಸಮಾನ ಜೀವಿಗಳಾಗಿದ್ದಾರೆ ಎಂಬುದು ತಿಳಿದುಬರುತ್ತದೆ;

ನಿಸರ‍್ಗದ ನೆಲೆಯಲ್ಲಿ ಹೆಣ್ಣು-ಗಂಡು “ಅದು ಒಂದು ಜೀವಿ – ಇದು ಒಂದು ಜೀವಿ” ಎಂಬ ಸಮಾನತೆಯನ್ನು ಹೊಂದಿದ್ದರೂ, ಸಾಮಾಜಿಕ ನೆಲೆಯಲ್ಲಿ ಗಂಡು ಮೊದಲ ಮನ್ನಣೆಗೆ ಪಾತ್ರನಾದರೆ, ಹೆಣ್ಣು ಎರಡನೆಯ ನೆಲೆಯನ್ನು ಹೊಂದಿದ್ದಾಳೆ. ಜಗತ್ತಿನಲ್ಲಿರುವ ಎಲ್ಲಾ ಸಮಾಜಗಳಲ್ಲಿಯೂ “ಗಂಡು ಮೇಲು; ಹೆಣ್ಣು ಕೀಳು” ಎಂಬ ತಾರತಮ್ಯದ ನಿಲುವು ಜನಮನದಲ್ಲಿದೆ. ಇಂತಹ ನಿಲುವಿಗೆ ಕಾರಣ ಏನೆಂಬುದನ್ನು ತಿಳಿಯಬೇಕಾದರೆ ಮಾನವ ಸಮಾಜ ರೂಪುಗೊಂಡ ಸಾಮಾಜಿಕ ಇತಿಹಾಸವನ್ನು ನೋಡಬೇಕು.

ಶಿಲಾಯುಗದಲ್ಲಿ ಇತರ ಪ್ರಾಣಿಗಳಂತೆಯೇ ಅಲೆಮಾರಿಯಾಗಿದ್ದ ಮಾನವ ಗುಂಪುಗಳು ಕಾಲಕ್ರಮೇಣ ಒಂದೆಡೆ ನಿಂತು ಬೇಸಾಯವನ್ನು ಮಾಡತೊಡಗಿದಾಗ ಕುಟುಂಬಗಳು ರಚನೆಗೊಂಡವು. ಈ ಕುಟುಂಬಗಳಲ್ಲಿ ತಾಯಿಯೇ ಮೇಟಿಯಾಗಿದ್ದಳು. ಹುಟ್ಟುವ ಮಕ್ಕಳು ಮತ್ತು ಉಳುಮೆ ಮಾಡುವ ಬೂಮಿಯು ಸಮುದಾಯದ ಒಟ್ಟು ಆಸ್ತಿಯಾಗಿತ್ತು. ತಾಯಿಯ ಹೆಸರಿನ ಕುಲಕ್ಕೆ ಮಕ್ಕಳು ಸೇರಿದವರಾಗಿದ್ದು, ಆ ಕುಲದ ಹೆಸರನ್ನು ಮಕ್ಕಳು ಪಡೆಯುತ್ತಿದ್ದರು. ಮಕ್ಕಳು ಹುಟ್ಟುವಲ್ಲಿ ತಂದೆಯು ಯಾರು ಎಂಬುದು ದೊಡ್ಡ ಸಂಗತಿಯಾಗಿರಲಿಲ್ಲ. ಹೆಣ್ಣು-ಗಂಡಿನ ಕಾಮದ ನಂಟಿಗೆ ಯಾವುದೇ ಬಗೆಯ ಕಟ್ಟುಪಾಡುಗಳು ಇರಲಿಲ್ಲ.

ಅನಂತರದ ಸಾವಿರಾರು ವರುಶಗಳ ಜನಜೀವನದಲ್ಲಿ ಅನೇಕ ಪಲ್ಲಟಗಳು ಉಂಟಾಗಿ, ಉಳುವ ಬೂಮಿಯ ಒಡೆತನವು ಒಟ್ಟು ಸಮುದಾಯದಿಂದ ಕಯ್ ತಪ್ಪಿಹೋಗಿ, ಗಂಡಸರ ಹಿಡಿತಕ್ಕೆ ಸಿಲುಕಿದಾಗ, ಆಸ್ತಿಯ ಮೇಲೆ ಗಂಡಿನ ಒಡೆತನ ಉಂಟಾಯಿತು. ಗಂಡು ತನ್ನ ಬೀಜದಿಂದ ಹುಟ್ಟುವ ಮಕ್ಕಳಿಗೆ ಆಸ್ತಿಯ ಒಡೆತನದ ಹಕ್ಕು ದೊರೆಯಬೇಕೆಂಬ ಉದ್ದೇಶಕ್ಕೆ ಒಳಗಾಗಿ, ಹೆಣ್ಣಿಗೆ ಶೀಲದ ಚವುಕಟ್ಟನ್ನು ಹಾಕಿ, ಹೆಣ್ಣನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ. ಹೆಣ್ಣಿನ ಕಾಮದ ನಂಟಿಗೆ ಬಹುಬಗೆಯ ಕಟ್ಟುಪಾಡುಗಳನ್ನು ಹಾಕಿ, ಹೆಣ್ಣಿನ ಚಲನವಲನಗಳನ್ನು ನಿಯಂತ್ರಿಸಿ, ಹೆಣ್ಣಿಗೆ ಯಾವುದೇ ಬಗೆಯ “ಮಾತಿನ ಸ್ವಾತಂತ್ರ್ಯ-ಚಲನ ಸ್ವಾತಂತ್ರ್ಯ-ಇಚ್ಚಾ ಸ್ವಾತಂತ್ರ್ಯ” ಇಲ್ಲದಂತೆ ಮಾಡಿ, ಹೆಣ್ಣನ್ನು ತನ್ನ ಅಡಿಯಾಳನ್ನಾಗಿ ಮಾಡಿಕೊಂಡ. ಈ ರೀತಿ ಆಸ್ತಿ ಹಾಗೂ ಹೆಣ್ಣಿನ ಮೇಲಿನ ವ್ಯಕ್ತಿಗತ ಒಡೆತನ ಮತ್ತು ಗಂಡು ಮೇಲುಗಯ್ ಆಗಿರುವ ಕುಟುಂಬದ ರಚನೆಯ ಕಾರಣದಿಂದಾಗಿ, ಸಾಮಾಜಿಕ ನೆಲೆಯಲ್ಲಿ ಗಂಡು-ಹೆಣ್ಣಿನಲ್ಲಿ ಲಿಂಗ ತಾರತಮ್ಯ ಉಂಟಾಯಿತು.

(ಚಿತ್ರ ಸೆಲೆ:  sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: