ಅಶ್ಟು ಪ್ರೀತಿ ಇಶ್ಟು ಪ್ರೀತಿ ಎಣಿಸಿ ಕಶ್ಟಪಡದಿರು – ಕಂತು 2

– ಮನು ಗುರುಸ್ವಾಮಿ.

ಒಲವು, ಪ್ರೀತಿ, Love

ಕಂತು1

ಮತ್ತೊಂದು ಕವಿತೆ :

ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
ಇದು ಯಾವ ಊರ ಚದುರು ?

ಪ್ರೀತಿಯಲ್ಲಿ ಅತವಾ ದಾಂಪತ್ಯದಲ್ಲಿ ಗಂಡಾಗಲಿ ಹೆಣ್ಣಾಗಲಿ ಒಬ್ಬರನ್ನೊಬ್ಬರು ಅರ‍್ತಮಾಡಿಕೊಳ್ಳುವುದು ತುಂಬಾ ಮುಕ್ಯ. ಒಬ್ಬರನ್ನೊಬ್ಬರು ಅರ‍್ತೈಸಿಕೊಳ್ಳುವಲ್ಲಿ ವಿಪಲರಾದರೋ ? ಅವರ ಪ್ರೀತಿಯೂ ವಿಪಲವಾದೀತು. ಜೊತೆಗೆ ದಾಂಪತ್ಯವೂ ಕೂಡ. ಇಲ್ಲಿ ಕವಿಯ ಹೆಂಡತಿಯು ದುಕ್ಕವನ್ನು ನಗೆಯ ಹಿಂದೆ ಮರೆಮಾಡಿ ಗಂಡನೆದುರು ಬಂದಿರುವಂತಹ ಸನ್ನಿವೇಶದ ಬಗ್ಗೆ ಮಾತನಾಡುತ್ತಾ, ತಡೆಯಲಾರದ ನೋವನ್ನು ನಗುವಿನ ಹಿಂದೆ ಮರೆಮಾಡಿ ನಸುನಗುತ ಎದುರು ಬಂದಿರುವೆಯಲ್ಲ? ನಿನ್ನ ದುಕ್ಕವನ್ನು ಅತವಾ ನಿನ್ನ ಮನಸ್ತಿತಿಯನ್ನು ಅರ‍್ತಮಾಡಿಕೊಳ್ಳದಶ್ಟೂ ದಡ್ಡನೆ ನಾನು ಎಂದಿದ್ದಾರೆ. ಇಲ್ಲಿ ಒಬ್ಬರನ್ನೊಬ್ಬರು ಅರ‍್ತಮಾಡಿಕೊಳ್ಳುವ ದಾಟಿ ವಿಬಿನ್ನ. ಗಂಡನಿಗೆ ದುಕ್ಕ ತೋರಬಾರದು, ಆತ ನೊಂದುಕೊಳ್ಳಬಹುದೆಂಬುದು ಹೆಣ್ಣಿನ ಮನಸ್ತಿತಿಯಾದರೆ, ತನ್ನ ಹೆಂಡತಿ ನೋವಿನಲ್ಲಿರುವುದನ್ನು ಆಕೆಯ ಮುಕ ನೋಡಿಯೇ ಗ್ರಹಿಸಿಕೊಂಡದ್ದು ಗಂಡನ ಮನಸ್ತಿತಿಯಾಗಿದೆ.

ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು
ಬೆಲೆ ಎಷ್ಟು ಎಂದು ಕೇಳುತಿಹೆಯ ಹುಚ್ಚ
ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆ ವೆಚ್ಚ !

ಈಗಾಗಲೇ ಹೇಳಿದಂತೆ ಒಲವೆಂಬುದು ಹುಡುಗಾಟಿಕೆಯ ವಿಶಯವಲ್ಲ. ಅದೊಂದು ದ್ಯಾನ, ತಪ್ಪಸ್ಸು, ಹೊತ್ತಿಗೆ. ಒಲವಿಗೆ ಬೆಲೆ ಕಟ್ಟಲು ಸಾದ್ಯವೆ? ಸಾದ್ಯವಿಲ್ಲವೆಂಬುದು ಬೇಂದ್ರೆಯವರ ವಿಚಾರ. ಇದನ್ನು ಇಂದಿನ ಯುವ ಜನತೆ ಸಂಪೂರ‍್ಣವಾಗಿ ಅರ‍್ತಮಾಡಿಕೊಳ್ಳುವ ಅಗತ್ಯವಿದೆ. ಸದಾ ಪ್ರೀತಿ ಪ್ರೇಮದ ಗುಂಗಿನಲ್ಲಿರುವ ಯುವಪೀಳಿಗೆ, ಒಲವು ಎಂದರೆ ಏನು? ನೈಜ್ಯ ಪ್ರೀತಿಯ ಲಕ್ಶಣಗಳಾವುವು? ಮೊದಲಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮದುವೆಯಾಗಿ ಮಕ್ಕಳಿರುವವರೇ ವಿಚ್ಚೇದನಕ್ಕೆ ಅರ‍್ಜಿ ಹಾಕುತ್ತಿದ್ದಾರೆ, ಇನ್ನು ಪ್ರೀತಿ ಯಾವ ಮಹಾ ಎಂದು ಬಂಡಪ್ರಶ್ನೆಗಳನ್ನು ಎತ್ತುವ ಮೂಡರಿಗೆ ದಾಂಪತ್ಯ, ಪ್ರೀತಿಯ ಬೆಲೆ ತಿಳಿದಿರುವುದಿಲ್ಲ. ಅಲ್ಲಿ ಪ್ರಾಮಾಣಿಕತೆ ಇರುವುದಿಲ್ಲ. ಆಕರ‍್ಶಣೆಗೋ, ಆಮಿಶಕ್ಕೊ, ಆಸೆಗೋ ಒಳಗಾಗಿ ಬೇಸತ್ತ ಮೇಲೆ ಪ್ರೀತಿ ಸಪ್ಪೆಯೆಂದರೆ ಏನು ಬಂತು? ಒಲವೆಂಬುದು ಬೆಲೆಕಟ್ಟಲಾಗದ ಪುಸ್ತಕದಂತೆ.. ಅದರ ಬೆಲೆ ಎಶ್ಟು ಎಂದು ಕೇಳಿ ಕೊಂಡುಕೊಳ್ಳಲು ಸಾದ್ಯವಿಲ್ಲ. ಏಕೆಂದರೆ ಒಲವಿಗೆ ಬೆಲೆ ಕಟ್ಟಲಾಗದು. ಇಡೀ ಜನುಮ ಪೂರ‍್ತಿ ದುಡಿದರೂ ಎಶ್ಟೇ ಜನುಮವೆತ್ತಿ ಬಂದರೂ ಪ್ರೀತಿಯ ರುಣವನ್ನು ತೀರಿಸಲು ಸಾದ್ಯವೇ ಇಲ್ಲವೆನ್ನುವ ಕವಿ ಮತ್ತೊಂದು ಕವಿತೆಯಲ್ಲಿ

ಅಷ್ಟು ಪ್ರೀತಿ ಇಷ್ಟು ಪ್ರೀತಿ
ಎಣಿಸಿ ಕಷ್ಟಪಡದಿರು
ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೇ ಮಿಗಿಲು
ತಮ್ಮ ಕಿರಣ ತಮಗೆ ಹಗಲು
ಉಳಿದ ಬೆಳಕು ಕತ್ತಲು

ನಮ್ಮ ಪಾಲಿನದೆಶ್ಟಿದೆಯೋ ಅದೇ ನಮಗೆ ಹಿತ. ಅದು ಒಲವಾಗಿರಲಿ, ಚೆಲುವಾಗಿರಲಿ. ನನಗೆ ದಕ್ಕಿರುವ ಪ್ರೀತಿ ಅಶ್ಟು ಇಶ್ಟು ಎಂಬಂತೆ ಮತ್ತೊಂದರ ಜೊತೆ ಹೋಲಿಸಿ, ಎಣಿಸಿ ನಿರಾಶೆಗೆ ಒಳಗಾಗುವುದು ಏತಕೆ? ಎಲ್ಲಿ ಪ್ರೀತಿಯಿದೆಯೋ ಆ ಪ್ರೀತಿಗೆ ಒಲಿದು, ಆ ಪ್ರೀತಿಯನ್ನು ಅಶ್ಟೇ ಪ್ರೀತಿಯಿಂದ ಒಲಿಸಿಕೊಂಡು ಸುಕದ ಜೀವನವನ್ನು ನಡೆಸಬೇಕು. ಆ ಪ್ರೀತಿ ಎಶ್ಟಿರಲಿ, ಹೇಗಿರಲಿ ಅದೇ ನಮಗೆ ಮಿಗಿಲಾಗಿರಬಲ್ಲದು. ನಮ್ಮದೇನಿದೆಯೋ ಅದಶ್ಟೇ ನಮ್ಮ ಪಾಲಿನದು. ಉಳಿದದ್ದು ನಮ್ಮದಲ್ಲವೆಂದು ತಿಳಿದು, ಇರುವ ಪ್ರೀತಿಯನ್ನೇ ಪ್ರೀತಿಸಿಕೊಂಡು ಬದುಕ ದೂಡಬೇಕು. ಅದನ್ನೇ ಕವಿ “ಮರದ ಅಡಿಗೆ ಗುಡಿಸಲಿರಲಿ ಅಲ್ಲೆ ಒಲವು ಮೆರೆಯದೇ ?” ಎಂದಿದ್ದಾರೆ.

ಇನ್ನು ಒಲವಿನಲ್ಲಿ ಮುನಿಸು ಬಂದರೆ ಸಂಬಾಳಿಸುವುದಿದೆಯಲ್ಲಾ ಅದು ಬಾರಿ ತ್ರಾಸದಾಯಕ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದ್ದರೂ ಕೂಡ, ಆ ಕ್ಶಣಿಕ ಮುನಿಸು ಕೂಡ ಒಲವು ಹೆಚ್ಚಾಗಲು ಕಾರಣವಾಗುತ್ತದೆ. ತನ್ನೊಂದಿಗೆ ಮುನಿದು ಹೊರಟ ಇನಿಯನನ್ನು ಆತನ ಮನದನ್ನೆಯೊಬ್ಬಳು ಪ್ರಶ್ನಿಸುತ್ತಾಳೆ.

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಕನಸು
ಪ್ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟಿದ್ದೀಗ ಎಲ್ಲಿಗೆ

ಎಂದೂ ಇಲ್ಲದ ಮುನಿಸು ಇಂದೇಕೆ ನಿನಗೆ ಬಂದಿದೆ? ನೀನು ಮುನಿಸಿಕೊಂಡಿದ್ದಕ್ಕೆ ಕಾರಣವಾದರೂ ಏನು? ಇದನ್ನು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಈ ಬೆಳದಿಂಗಳ ರಾತ್ರಿಯಲ್ಲಿ ನನ್ನ ಜೊತೆ ಮುನಿಸ ತಂದುಕೊಂಡು ಹೊರಟಿದ್ದು ಸರಿಯೆ? ಎಂಬುದಾಗಿ ನಲ್ಲನನ್ನು ಕೇಳುತ್ತಿರುವ ಹೆಣ್ಣೊಬ್ಬಳ ಬಾವನೆಯನ್ನು ಕವಿ ಇಲ್ಲಿ ತಂದಿದ್ದಾರೆ. ಬಹುಶಹ ಇಲ್ಲಿ ಶ್ರುಂಗಾರದಲ್ಲಿ ವಿರಹವಿರುವುದನ್ನು ನಾವು ಗಮನಿಸಬಹುದು. ಆದರೆ ಒಲವಿನಲ್ಲಿ ವಿರಹವೇ ಕಾಡಿದರೆ ಹೇಗೆ? ಅದನ್ನೂ ಕವಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಒಬ್ಬ ಚೆಲುವನ ಪ್ರೀತಿಗೆ ಸಿಲುಕಿದ ಹೆಣ್ಣು ಮಗಳೊಬ್ಬಳು, ಒಂದು ಬಾರಿ ತನ್ನತ್ತ ನಗುವನ್ನು ಬೀರಿ ತಿರುಗಿ ನೋಡದೆಯೂ ಹೊರಟುಹೋದ ಹುಡುಗನನ್ನು ನೆನಪಿಸಿಕೊಳ್ಳುತ್ತಿರುವ ಚಿತ್ರಣ ಇಲ್ಲಿದೆ.

ಒಂದೇ ಬಾರಿ ನನ್ನ ನೋಡಿ
ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ
ಹಿಂದ ನೋಡದ ಗೆಳತಿ
ಹಿಂದ ನೋಡದ

ತನ್ನ ಪ್ರೀತಿಯನ್ನು, ಪ್ರೀತಿಸಲ್ಪಟ್ಟ ಹುಡುಗನನ್ನು ನೆನಪಿಸಿಕೊಳ್ಳುತ್ತಿರುವ ಹುಡುಗಿ ತನ್ನ ಗೆಳತಿಯೊಂದಿಗೆ ತನ್ನ ಮನದಲ್ಲಾಗುತ್ತಿರುವ ತಲ್ಲಣಗಳ ಬಗ್ಗೆ ಹೇಳಿಕೊಳ್ಳುತ್ತಿರುವ ಚಿತ್ರಣ ಇಲ್ಲಿದೆ. ಹೇಳಬೇಕೆಂದರೆ, ಒಲವೆಂಬುದು ಮನುಶ್ಯನಿಗೆ ದಕ್ಕಿರುವ ವಿಶೇಶತೆಗಳಲ್ಲಿ ಒಂದು. ಅದರೆ ಮನುಶ್ಯ ಪ್ರೀತಿಯನ್ನು ಹಂಚುವ ಬದಲು ದ್ವೇಶವನ್ನು ಹಂಚುತ್ತಿದ್ದಾನೆ. ಇಂದು ದಾಂಪತ್ಯದಲ್ಲೂ ಕೂಡ ಸಣ್ಣ ಸಣ್ಣ ವಿಚಾರಕ್ಕೂ ಬಿರುಕು ಮೂಡಿ ವಿಚ್ಚೇದನಗಳು ಹೆಚ್ಚಾಗುತ್ತಿರುವುದನ್ನು ಕಂಡಿದ್ದೇವೆ. ಆಗೇ ಪ್ರೇಮ ವೈಪಲ್ಯದ ಹೆಸರಿನಲ್ಲಿ ಆತ್ಮಹತ್ಯೆಯಂತಹ ದುಡುಕಿನ ವಿಚಾರಗಳ ಬಗ್ಗೆಯೂ ಕೇಳಿದ್ದೇವೆ. ನಮಗೆ ಬೇಕಾಗಿರುವುದು ಒಲವು. ಆ ಒಲವಿಗೆ ಯಾವ ವ್ಯಕ್ತಿ ಬೆಲೆ ನೀಡಬಲ್ಲನೋ ಅಂತಹ ಸರಿಯಾದ ವ್ಯಕ್ತಿಯೊಂದಿಗೆ ಅಮೂಲ್ಯ ಒಲವನ್ನು ವಿನಿಯೋಗಿಸಬೇಕು. ಒಲವಿನ ಬೆಲೆ ತಿಳಿಯಬೇಕು. ಒಲವೆಂದರೇನು ಎಂಬುದನ್ನು ಅರ‍್ತಮಾಡಿಕೊಳ್ಳಬೇಕು. ಮದುವೆ ಆಡಂಬರದಿಂದಾದರೂ, ಮದುವೆಯ ನಂತರ ಅವರ ಬದುಕು ಹೇಗಿರಬಲ್ಲದು ಎಂಬುದೂ ಇಲ್ಲಿ ಮುಕ್ಯವಾಗುತ್ತದೆ. ಅದನ್ನೇ ಪೂರ‍್ಣಚಂದ್ರ ತೇಜಸ್ವಿಯವರೂ ಹೇಳಿರುವುದು “ಮದುವೆ ಮಹತ್ತರವಾದ ವಿಚಾರವಲ್ಲ, ಆ ನಂತರದ ಬದುಕು ಮುಕ್ಯ” ಎಂದು. ಬಡತನವೇ ಇರಲಿ, ಸಿರಿತನವೇ ಇರಲಿ ಗಂಡು ಹೆಣ್ಣು ಹೊಂದಾಣಿಕೆಯಲ್ಲಿ ಹೆಜ್ಜೆ ಇಟ್ಟರೆ ಆ ಬಾಳು ದನ್ಯ. ಬೇಂದ್ರೆ ಅದನ್ನೇ “ಸಪ್ಪೆಬಾಳಿಗಿಂತ ಉಪ್ಪುನೀರು ಲೇಸು” ಎಂದಿದ್ದಾರೆ. ಒಟ್ಟಾರೆಯಾಗಿ ಬಾಳಿನ ಕಡಲನ್ನು ದಾಟಬೇಕಾದರೆ‌ ಒಲವಿನ ಅಗತ್ಯವೆಶ್ಟಿದೆ ಎಂಬುದನ್ನು ತಮ್ಮ ಕಾವ್ಯಗಳಲ್ಲಿ ಹಿಡಿದಿಟ್ಟು ರಸಿಕರ ಮತ್ತು ಸಹ್ರುದಯರ ಮನದಲ್ಲಿ ನಿಜ ಒಲುಮೆಯ ತಿಳಿದೀಪವನ್ನು ಬೇಂದ್ರೆ ಹೊತ್ತಿಸಿದ್ದಾರೆ.

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: