ಕವಿತೆ: ವನಮಾತೆ

– ಸವಿತಾ.

ಯಾರೋ ತಿಂದೆಸೆದ ಬೀಜ
ಉಪಚರಿಸು ಎನ್ನಲಿಲ್ಲ
ಪೋಶಿಸು ಎಂದು ಕೇಳಲಿಲ್ಲ

ಮಳೆ ಗಾಳಿ ಬಿಸಿಲಿಗೂ
ಬಗ್ಗಲಿಲ್ಲ ಕುಗ್ಗಲಿಲ್ಲ
ಬದಲಿಗೆ ಮೊಳಕೆಯೊಡೆದು ಚಿಗುರಿತು

ಬೆಳೆಯುವ ಹಂಬಲಕೆ
ಬಿದ್ದ ಕಸವೇ ಗೊಬ್ಬರ
ಸಸಿಗೋ, ಮುಗಿಲು ಮುಟ್ಟುವ ತವಕ

ಎಲೆ ಕಾಂಡವರಳಿಸಿ ಹೂವು ಕಾಯಾಗಿ
ಹಣ್ಣಾಗಿ ಬಿದ್ದು ಕೊಳೆತು ಹಾಳಾದವೆಶ್ಟೋ
ಪಶು ಪಕ್ಶಿಯ ಹಸಿವು ನೀಗಿಸಿತೆಶ್ಟೋ
ಹುಳು ಹುಪ್ಪಡಿಗಳಿಗೆ ಆಹಾರವಾದುದೆಶ್ಟೋ

ನಿಲುಕುವ ಲೆಕ್ಕಾಚಾರವೇ ಈ ವನಮಾತೆ?
ಮತ್ತದೇ ಪುನರಾವರ‍್ತನೆ, ಪಲವೋ ಏನೋ
ಮರವೊಂದು ಹಬ್ಬಿ ನಿಂತಾಗಿದೆ
ಪಶು ಪಕ್ಶಿಗಳ ಕರೆಯುತಿದೆ

(ಚಿತ್ರ ಸೆಲೆ: aliexpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks