ಜಗತ್ತು ಎಲ್ಲವನ್ನೂ ಕೊಡುತ್ತದೆ
– ವೆಂಕಟೇಶ ಚಾಗಿ.
ಈ ಬೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗೂ ಈ ಬೂಮಿಯು, ಜೀವಿ ಬಯಸುವ ಎಲ್ಲವನ್ನೂ ಕೊಡುತ್ತದೆ. ಆದರೆ ಅದನ್ನು ಪಡೆಯುವ ಮನಸ್ಸು ಅತವಾ ಅದನ್ನು ಪಡೆಯುವ ದಾರಿಯ ಆಯ್ಕೆ ಆ ಜೀವಿಗೆ ಬಿಟ್ಟಿದ್ದು. ಕೆಲವೊಮ್ಮೆ ಸುಲಬವಾಗಿ ಸಿಕ್ಕರೆ ಕೆಲವೊಮ್ಮೆ ಹೋರಾಟ ಮಾಡಬೇಕಾಗುತ್ತದೆ. ಕೆಲವೊಮ್ಮೆ ಕಾಯಬೇಕಾಗುತ್ತದೆ, ಆದರೆ ಹಲವು ಪ್ರಯತ್ನಗಳ ನಂತರ ಬಯಸಿದ್ದು ಸಿಗುವುದಂತೂ ಕಂಡಿತ. ಜೀವಿಗೆ ಬೇಕಾದದ್ದು ಎಲ್ಲವೂ ಬೂಮಿಯ ಮೇಲಿದೆ.
ಹಾಗೆಯೇ ಮನುಶ್ಯನು ಒಂದು ಜೀವಿಯಾಗಿ ತನಗೆ ಬೇಕಾದದ್ದನ್ನು ಪಡೆಯುತ್ತಿದ್ದಾನೆ. ಮನುಶ್ಯ ಪಡೆದಿದ್ದು ಬೇರೆ ಯಾವುದೋ ಒಂದು ಗ್ರಹದಿಂದಲ್ಲ, ನಮ್ಮ ಬೂಮಿಯಿಂದಲೇ. ಆಸ್ತಿ, ಅಂತಸ್ತು, ನಗ-ನಾಣ್ಯ, ಹಲವಾರು ಸೌಕರ‍್ಯಗಳು, ವಿಜ್ನಾನ, ತಂತ್ರಜ್ನಾನ, ವೈದ್ಯಕೀಯ ಹೀಗೆ ಎಲ್ಲಾ ರಂಗಗಳಲ್ಲೂ ಮನುಶ್ಯ ತನಗೆ ಬೇಕಾದದ್ದನ್ನು ಪಡೆಯುತ್ತಿದ್ದಾನೆ. ಮನುಶ್ಯನಲ್ಲದೆ ಬೇರಾವ ಜೀವಿಗಳಿಗೂ ಮನುಶ್ಯನಂತಹ ಸಾದನೆ ಮಾಡಲು ಸಾದ್ಯವಾಗಿಲ್ಲ. ಇತರೆ ಜೀವಿಗಳು ಆಹಾರಕ್ಕಾಗಿ ಹೋರಾಟ ಮಾಡಿದರೂ ಮನುಶ್ಯನ ಬುದ್ದಿವಂತಿಕೆಯ ಮುಂದೆ ಇತರ ಜೀವಿಗಳು ತುಂಬಾ ಹಿಂದೆ ಉಳಿದಿವೆ. ನಮ್ಮ ಬದುಕಿನಲ್ಲೂ ಅಶ್ಟೇ, ನಮಗೆ ಎಲ್ಲವೂ ಸಾದ್ಯವಿದೆ. ನಾವು ಶ್ರೀಮಂತರಾಗಬಹುದು, ಬಡವರೂ ಆಗಬಹುದು. ಒಳ್ಳೆಯವರೂ ಆಗಬಹುದು ಅತವಾ ಕೆಟ್ಟವರೂ ಆಗಬಹುದು. ಅತವಾ ಎಲೆಮರೆಕಾಯಿಯಂತೆ ಸುಮ್ಮನಿದ್ದು ಜಗತ್ತಿಗೆ ಗೊತ್ತಿಲ್ಲದಂತೆ ಬದುಕಿ ಸತ್ತು ಹೋಗಬಹುದು. ಆದರೆ ಜಗತ್ತಿನಲ್ಲಿ ಸಿಗುವಂತಹ ಅವಕಾಶಗಳನ್ನು ಬಳಸಿಕೊಂಡವರು ತಾವು ಅಂದುಕೊಂಡಿದ್ದನ್ನು ಸಾದಿಸುತ್ತಿದ್ದಾರೆ. ಈ ಹಿಂದೆ ಸಾದನೆಗೈದ ಅನೇಕ ಮಹನೀಯರ ಅನೇಕ ಉದಾಹರಣೆಗಳು ಇವೆ. ಕಾಲ ನಮಗೆ ಹಲವಾರು ಅವಕಾಶಗಳನ್ನು, ಆಪರ್‍ಗಳನ್ನು ನೀಡುತ್ತದೆ. ನಮ್ಮ ಬಯಕೆ, ಬೇಡಿಕೆಗಳಿಗೆ ಪರಿಹಾರಗಳನ್ನು ನಮ್ಮ ಮುಂದಿಡುತ್ತದೆ. ಆದರೆ ಅದನ್ನು ಗುರುತಿಸುವ ಅದನ್ನು ಪಡೆಯುವಂತಹ ಜಾಣತನ ನಮಗಿರಬೇಕು ಅಶ್ಟೇ.
ಬಸ್ ನಿಲ್ದಾಣದಲ್ಲಿ ನಿಂತ ಒಬ್ಬ ವ್ಯಕ್ತಿ ತಾನು ಯಾವುದೋ ಸ್ತಳಕ್ಕಾಗಿ ಹೋಗಬೇಕಾದ ಬಸ್ಸಿಗಾಗಿ ಕಾಯುತ್ತಿದ್ದ. ಬೆಳಿಗ್ಗೆಯಿಂದ ಸಂಜೆಯವರೆಗೂ ಹಾಗೆಯೇ ನಿಂತ. ಕೆಲವು ಬಸ್ಸುಗಳು ಹಾಗೆಯೇ ಹೋಗುತ್ತಿದ್ದವು. ಕೆಲವು ನಿಲ್ಲುತ್ತಿದ್ದವು. ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದರಿಂದ ಬಸ್ಸುಗಳು ತಮ್ಮ ಪಾಡಿಗೆ ತಾವು ಹೊರಟು ಹೋಗಿಬಿಡುತ್ತಿದ್ದವು. ಆದರೆ ಅಲ್ಲಿ ನಿಂತ ಬೇರೆ ಬೇರೆ ವ್ಯಕ್ತಿಗಳು ಬಸ್ಸುಗಳು ನಿಂತಾಗ ತಾವು ಹೋಗಬೇಕಾದ ಸ್ತಳಕ್ಕೆ ಹೋಗುವ ಬಸ್ಸಾಗಿದ್ದರೆ ಹತ್ತುತ್ತಿದ್ದರು, ಇಲ್ಲದಿದ್ದರೆ ಮತ್ತೊಂದು ಬಸ್ಸಿಗಾಗಿ ಕಾಯುತ್ತಿದ್ದರು. ಮತ್ತೆ ಕೆಲವರು ತಾವು ಹೋಗುವ ಸ್ತಳಕ್ಕೆ ಬಸ್ಸು ಸಿಗದೇ ಇದ್ದಾಗ ಆ ಸ್ತಳದ ಹತ್ತಿರಕ್ಕೆ ಹೋಗುವ ಬಸ್ಸನ್ನಾದರೂ ಏರಿ ತಾವು ಅಂದುಕೊಂಡ ಸ್ತಳಕ್ಕೆ ಹೋಗುತ್ತಿದ್ದರು. ಕೆಲವರು ತಮಗೆ ನೇರವಾಗಿ ತಮ್ಮ ಸ್ತಳಕ್ಕೆ ಹೋಗುವ ಬಸ್ಸುಗಳು ಸಿಗಲಿಲ್ಲವೆಂದು ಮತ್ತೊಂದು ಬಸ್ಸಿಗಾಗಿ ಕಾಯುತ್ತಿದ್ದರು. ಆದರೆ ಬೆಳಗಿನಿಂದ ಸಂಜೆಯವರೆಗೂ ನಿಂತ ವ್ಯಕ್ತಿ ಬಸ್ಸುಗಳು ನಿಲ್ಲಲು ಕೈ ಅಡ್ಡ ಹಾಕುವುದಾಗಲಿ, ವಿಚಾರಿಸುವುದಾಗಲಿ ಏನನ್ನು ಮಾಡದೆ ಇದ್ದಾಗ ಬಸ್ಸುಗಳು ತಮ್ಮ ಪಾಡಿಗೆ ತಾವು ಮುಂದೆ ಹೋಗಿ ಬಿಡುತ್ತಿದ್ದವು. ವ್ಯಕ್ತಿ ತಾನು ಇರುವ ಸ್ತಳದಲ್ಲಿಯೇ ಇದ್ದ. ಯಾವ ಬಸ್ಸನ್ನು ಏರದೇ ಬಸ್ಸಿಗಾಗಿ ಕಾಯುತ್ತಾ ನಿಲ್ಲಬೇಕಾಯಿತು.
ಹೀಗೆ ನಮ್ಮ ಜೀವನದಲ್ಲಿ ಅನೇಕ ಅವಕಾಶಗಳು ನಮ್ಮೆದರು ಬಂದು ಹೋಗುತ್ತಿರುತ್ತವೆ. ನಾವು ಅವುಗಳನ್ನು ಗುರುತಿಸಬೇಕು. ಅವುಗಳಿಗೆ ಪ್ರತಿಕ್ರಿಯೆ ಕೊಡಬೇಕು. ನಮ್ಮ ಗುರಿಗೆ ಸೂಕ್ತವೆನಿಸಿದಲ್ಲಿ ನಮ್ಮ ಬಯಕೆಗೆ ಸೂಕ್ತವೆನಿಸಿದಲ್ಲಿ ಆ ಅವಕಾಶವನ್ನು ಬಳಸಿಕೊಳ್ಳಬೇಕು. ಹೀಗೆ ಮಾಡಿದಾಗ ಮಾತ್ರ ನಮ್ಮ ಗುರಿ, ಬಯಕೆಗಳನ್ನು ಈಡೇರಿಸಿಕೊಳ್ಳಲು ಸಾದ್ಯವಾಗುತ್ತದೆ. ಹೀಗೆ ಅವಕಾಶಗಳನ್ನು ಸಕಾಲದಲ್ಲಿ ಸದುಪಯೋಗ ಪಡಿಸಿಕೊಂಡು ಹೆಸರುವಾಸಿಯಾದವರು ಇದ್ದಾರೆ. ಜೀವನದಲ್ಲಿ ತ್ರುಪ್ತಿ ಹೊಂದಿ ಬದುಕನ್ನು ಹಸನು ಮಾಡಿಕೊಂಡವರೂ ಇದ್ದಾರೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದೇ ಮನುಶ್ಯನ ಜಾಣತನ.
( ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು