ಜೇಡರ ದಾಸಿಮಯ್ಯ ವಚನಗಳ ಓದು – 6 ನೆಯ ಕಂತು
– ಸಿ.ಪಿ.ನಾಗರಾಜ.
ಅಗ್ನಿ ಸುಡಲಲ್ಲದೆ
ಸುಳಿಯಲರಿಯದು
ವಾಯು ಸುಳಿವುದಲ್ಲದೆ
ಸುಡಲರಿಯದು
ಆ ಅಗ್ನಿ ವಾಯುವ ಕೂಡಿದಲ್ಲದೆ
ಅಡಿಯಿಡಲರಿಯದು
ಈ ಪರಿಯಂತೆ
ನರರರಿವರೆ ಕ್ರಿಯಾಜ್ಞಾನಭೇದವ
ರಾಮನಾಥ
ಮಾನವರ ಜೀವನವು ಒಳ್ಳೆಯ ರೀತಿಯಲ್ಲಿ ರೂಪುಗೊಳ್ಳಲು ‘ಅರಿವು ಮತ್ತು ಕಾಯಕ’ ಒಂದರೊಡನೊಂದು ಜತೆಗೂಡಿರಬೇಕು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
‘ಅರಿವು’ ಎಂದರೆ “ಮಾನವರ ಜೀವನದಲ್ಲಿ ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು; ಯಾವುದು ವಾಸ್ತವ-ಯಾವುದು ಕಲ್ಪಿತ; ಯಾವುದು ದಿಟ-ಯಾವುದು ಸಟೆ; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು” ಎಂಬ ತಿಳುವಳಿಕೆ;
‘ಕಾಯಕ’ ಎಂದರೆ “ದುಡಿಮೆ/ಕೆಲಸ”. ವ್ಯಕ್ತಿಯು ಮಾಡುವ ದುಡಿಮೆಯು ಅವನಿಗೆ ಮತ್ತು ಅವನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ತರುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವಂತಿರಬೇಕು;
ಅಗ್ನಿ=ಬೆಂಕಿ; ಸುಡಲ್+ಅಲ್ಲದೆ; ಸುಡು=ಬೆಂಕಿಯಲ್ಲಿ ಬೇಯಿಸು; ಅಲ್ಲದೆ=ಹೊರತು; ಸುಳಿಯಲ್+ಅರಿದು; ಸುಳಿ=ಬೀಸು/ತಿರುಗು/ಚಲಿಸು; ಅರಿಯದು=ತಿಳಿಯದು;
ಅಗ್ನಿ ಸುಡಲಲ್ಲದೆ ಸುಳಿಯಲರಿಯದು=ಬೆಂಕಿಯು ತಾನು ಉರಿಯುತ್ತಿರುವ ಎಡೆಯಲ್ಲಿ ಇರುವುದನ್ನು ಸುಡಬಲ್ಲುದೆ ಹೊರತು ಅತ್ತಿತ್ತ ತಾನಾಗಿಯೇ ಚಲಿಸಲಾರದು;
ವಾಯು=ಗಾಳಿ; ಸುಳಿವುದು+ಅಲ್ಲದೆ; ಸುಡಲ್+ಅರಿಯದು;
ವಾಯು ಸುಳಿವುದಲ್ಲದೆ ಸುಡಲರಿಯದು=ಗಾಳಿಯು ಎಲ್ಲ ಕಡೆಯೂ ಬೀಸುತ್ತ ಚಲಿಸಬಲ್ಲುದೆ ಹೊರತು, ಯಾವುದನ್ನೂ ಸುಡಲಾರದು;
ಕೂಡಿದ+ಅಲ್ಲದೆ; ಕೂಡು=ಸೇರು/ಜತೆಯಾಗು; ಅಡಿ+ಇಡಲ್+ಅರಿಯದು; ಅಡಿ=ಹೆಜ್ಜೆ; ಅಡಿಯಿಡು=ಮುಂದಕ್ಕೆ ಹೋಗು;
ಆ ಅಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು=ಉರಿಯುತ್ತಿರುವ ಬೆಂಕಿಯು ಗಾಳಿಯ ಜತೆಗೂಡದಿದ್ದರೆ, ಬೆಂಕಿಯು ಎಲ್ಲ ಕಡೆ ಹರಡುವುದಿಲ್ಲ. ಅಂದರೆ ಬೆಂಕಿಯು ಉರಿಯುತ್ತಿರುವಾಗ ಗಾಳಿಯು ಬೀಸದಿದ್ದರೆ, ಬೆಂಕಿಯು ಇದ್ದ ಎಡೆಯಲ್ಲಿನ ವಸ್ತುಗಳೆಲ್ಲವೂ ಸುಟ್ಟು ಕರಕಲು ಆಗುತ್ತಿದ್ದಂತೆಯೇ, ಬೆಂಕಿಯು ನಂದಿಹೋಗುತ್ತದೆ;
ಪರಿ+ಅಂತೆ; ಪರಿ=ರೀತಿ/ಬಗೆ; ಅಂತೆ=ಹಾಗೆ; ನರರ್+ಅರಿವರೆ; ನರ=ಮಾನವ; ಅರಿವರೆ=ತಿಳಿಯುತ್ತಾರೆಯೇ/ಅರಿಯಬಲ್ಲರೇ; ಕ್ರಿಯಾ+ಜ್ಞಾನ+ಭೇದವ; ಕ್ರಿಯಾ=ದುಡಿಮೆ/ಕಾಯಕ/ಕೆಲಸ; ಜ್ಞಾನ=ಅರಿವು/ತಿಳುವಳಿಕೆ; ಭೇದ=ವ್ಯತ್ಯಾಸ; ರಾಮನಾಥ=ಶಿವನ ಮತ್ತೊಂದು ಹೆಸರು/ಜೇಡರ ದಾಸಿಮಯ್ಯನ ವಚನಗಳ ಅಂಕಿತನಾಮ;
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ=ಸುಡುವ ಕಸುವುಳ್ಳ ಬೆಂಕಿ ಮತ್ತು ಬೀಸುವ ಕಸುವುಳ್ಳ ಗಾಳಿಯು ಜತೆಗೂಡಿದಾಗ ಮಾತ್ರ ಬೆಂಕಿಯು ಎಲ್ಲ ಕಡೆಯೂ ಹತ್ತಿಕೊಂಡು ಉರಿಯುವ ಪ್ರಸಂಗವು ಒಂದು ರೂಪಕದ ತಿರುಳಿನಲ್ಲಿ ಬಳಕೆಗೊಂಡಿದೆ;
ಮಾನವರು ಜೀವನದಲ್ಲಿ ಒಲವು ನಲಿವು ನೆಮ್ಮದಿಯಿಂದ ಬಾಳಬೇಕಾದರೆ, ಅವರಲ್ಲಿ ಅರಿವು ಮತ್ತು ಕ್ರಿಯೆ ಜತೆಗೂಡಿರಬೇಕು . ಜನರು ಕೇವಲ ಅರಿವನ್ನು ಪಡೆದ ಮಾತ್ರದಿಂದಲೇ ಜೀವನಕ್ಕೆ ಅಗತ್ಯವಾದ ‘ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯ’ ದೊರಕುವುದಿಲ್ಲ. ಇವನ್ನೆಲ್ಲಾ ಪಡೆಯಬೇಕಾದರೆ ಅದಕ್ಕೆ ತಕ್ಕಂತೆ ಕಾಯಕವನ್ನು ಮಾಡಬೇಕು;
ಅರಿವಿಲ್ಲದೆ ಮಾಡುವ ಕಾಯಕದಿಂದಾಗಲಿ ಇಲ್ಲವೇ ಕಾಯಕವನ್ನು ಮಾಡದ ಅರಿವಿನಿಂದಾಗಲಿ ಮಾನವ ಸಮುದಾಯಕ್ಕೆ ಒಳಿತಾಗುವುದಿಲ್ಲವೆಂಬ ಎಚ್ಚರವನ್ನು ಈ ರೂಪಕ ಸೂಚಿಸುತ್ತಿದೆ.
(ಚಿತ್ರ ಸೆಲೆ: lingayatreligion.com)
ಇತ್ತೀಚಿನ ಅನಿಸಿಕೆಗಳು