ಬಹು-ಕ್ರೀಡಾ ಪಂದ್ಯಾವಳಿಗಳಲ್ಲಿ ಕ್ರಿಕೆಟ್

– ರಾಮಚಂದ್ರ ಮಹಾರುದ್ರಪ್ಪ.

ಬಾರತದಲ್ಲಿ ಕ್ರಿಕೆಟ್ ಆಟ ಎಶ್ಟೇ ಜನಪ್ರಿಯಗೊಂಡು ಕ್ರಿಕೆಟ್ ಆಟಗಾರರನ್ನು ದಂತಕತೆಗಳಂತೆ ಮಂದಿ ಕಂಡರೂ ಒಲಂಪಿಕ್ಸ್ ನಲ್ಲಿ ದೇಶಕ್ಕೆ ಪದಕ ಗೆಲ್ಲಿಸಿಕೊಟ್ಟ ಒಬ್ಬ ಅತ್ಲೀಟ್ ಗೆ ತನ್ನದೇ ಆದ ಒಂದು ವಿಶಿಶ್ಟವಾದ ಗೌರವ ಹಾಗೂ ಮೇಲಿನ ಎಡೆ ಇದೆ ಎಂಬುದು ಎಲ್ಲರೂ ಒಪ್ಪಲೇಬೇಕು. ಅಬಿನವ್ ಬಿಂದ್ರಾ, ಪಿ.ವಿ ಸಿಂದು ರಂತಹ ಒಲಂಪಿಕ್ಸ್ ಪದಕ ಗೆದ್ದ ಅತ್ಲೀಟ್ ಗಳು ಕ್ರಿಕೆಟಿಗರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದು ಅವರಿಗೆ ಎಲ್ಲಾ ವಲಯಗಳಿಂದ ಸಿಗುತ್ತಿರುವ ಮನ್ನಣೆಯೇ ಜೀವಂತ ಎತ್ತುಗೆ. ಹಾಗಾಗಿ ವರುಶವಿಡೀ ನಡೆಯುವ ಕ್ರಿಕೆಟ್ ನಶ್ಟೇ ನಾಲ್ಕು ವರ‍್ಶಗಳಿಗೊಮ್ಮೆ ನಡೆಯುವ ಒಲಂಪಿಕ್ಸ್, ಏಶಿಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಂತಹ ಅಂತರಾಶ್ಟ್ರೀಯ ಪೋಟಿಗಳೂ ಪ್ರಾಮುಕ್ಯತೆ ಪಡೆದಿವೆ. ಜೊತೆಗೆ ಸರ‍್ಕಾರವೇ ತನ್ನ ಬೊಕ್ಕಸದಿಂದ ಅಂತರಾಶ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿದಿಸುವ ಈ ಅತ್ಲೀಟ್ ಗಳನ್ನು ಪೋಶಿಸುತ್ತಿರುವುದರಿಂದ ಅವರ ಪ್ರದರ‍್ಶನದ ಮೇಲೆ ನಿಗಾ ವಹಿಸುವುದರೊಟ್ಟಿಗೆ ಅವರಿಂದ ಪದಕಗಳನ್ನೂ ಸ್ವಾಬಾವಿಕವಾಗಿ ಎದುರುನೋಡುತ್ತದೆ. ಆದ್ದರಿಂದ ಒಂದು ಬಗೆಯಲ್ಲಿ ಕ್ರಿಕೆಟಿಗರಿಗಿಂತ ಬಹು- ಕ್ರೀಡಾ ಪಂದ್ಯಾವಳಿಗಳಲ್ಲಿ ಕಣಕ್ಕಿಳಿಯುವ ಅತ್ಲೀಟ್ ಗಳ ಮೇಲೆ ಕೊಂಚ ಒತ್ತಡ ಹೆಚ್ಚಿರುತ್ತದೆ ಎನ್ನಬಹುದು. ಒಲಂಪಿಕ್ಸ್, ಕಾಮನ್ ವೆಲ್ತ್ ಗೇಮ್ಸ್ ನಂತಹ ಕೆಲವು ಪಂದ್ಯಾವಳಿಗಳಲ್ಲಿ ಈ ಮೊದಲು ಕ್ರಿಕೆಟ್ ಅನ್ನು ಕೂಡ ಆಡಿಸಲಾಗಿದ್ದು ಇತಿಹಾಸದ ಪುಟಗಳಲ್ಲಿ ದಾಕಲಾಗಿದ್ದರೂ ಬಹುತೇಕರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಂತಹ ಐದು ನಿದರ‍್ಶನಗಳ ಬಗ್ಗೆ ಹೆಚ್ಚಿಗೆ ತಿಳಿಯೋಣ ಬನ್ನಿ!

ಸಮ್ಮರ್ ಒಲಂಪಿಕ್ಸ್ – ಪ್ಯಾರಿಸ್, 1900

ಮೊದಲಿಗೆ 1896 ರ ಅತೆನ್ಸ್ ಒಲಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಸೇರಿಸುವ ಉದ್ದೇಶವಿದ್ದರೂ ಬೇಕಾದ ಕನಿಶ್ಟ ತಂಡಗಳ ಕೊರತೆಯಿಂದಾಗಿ ಕ್ರಿಕೆಟ್ ಆಟ ಒಲಂಪಿಕ್ಸ್ ನಲ್ಲಿ ತನ್ನ ಪಾದಾರ‍್ಪಣೆ ಮಾಡದೇ ಹೋಯಿತು. ಆದರೆ 1900 ರ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಕಡೆಗೂ ಕ್ರಿಕೆಟ್ ಗೆ ಮನ್ನಣೆ ದೊರೆತು ಆಟ ಸಾಗಿತು. ಆರಂಬದಲ್ಲಿ ನಿಗದಿಯಾಗಿದ್ದ ಗ್ರೇಟ್ ಬ್ರಿಟನ್, ಪ್ರಾನ್ಸ್, ಬೆಲ್ಜಿಯಮ್ ಮತ್ತು ನೆದರ್‍‌ಲ್ಯಾಂಡ್ಸ್ ತಂಡಗಳ ಪೈಕಿ ನೆದರ್‍‌ಲ್ಯಾಂಡ್ಸ್ ಹಾಗೂ ಬೆಲ್ಜಿಯಮ್ ಕಡೇ ಗಳಿಗೆಯಲ್ಲಿ ಹಿಂದೆ ಸರಿದುದ್ದರಿಂದ ಗ್ರೇಟ್ ಬ್ರಿಟನ್ ಮತ್ತು ಪ್ರಾನ್ಸ್ ಮಾತ್ರ ಕಣಕ್ಕಿಳಿದವು. ನಾಲ್ಕು ಇನ್ನಿಂಗ್ಸ್ ಗಳ ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ 158 ರನ್ ಗಳ ಬರ‍್ಜರಿ ಗೆಲುವು ಪಡೆದು ಬಂಗಾರದ ಪದಕ ಮುಡಿಗೇರಿಸಿಕೊಂಡರೆ ಸೋತ ಪ್ರಾನ್ಸ್ ಬೆಳ್ಳಿ ಪದಕಕ್ಕೆ ತ್ರುಪ್ತಿ ಪಟ್ಟಿಕೊಂಡಿತು.

ಕಾಮನ್ ವೆಲ್ತ್ ಗೇಮ್ಸ್ – ಕುವಾಲಲಂಪುರ್, 1998

ಕ್ರಿಕೆಟ್ 1998 ರಲ್ಲಿ ಮೊದಲ ಬಾರಿಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸೇರ‍್ಪಡೆಯಾಗಿ ಒಂದು ಹೊಸ ಬಗೆಯ ಮೊದಲಿಗೆ ಸಾಕ್ಶಿಯಾಯಿತು. 16 ತಂಡಗಳು ಪಾಲ್ಗೊಂಡ ಈ ಪಂದ್ಯಾವಳಿಗೆ ಅಂತರಾಶ್ಟ್ರೀಯ ಒಂದು-ದಿನದ ಪಂದ್ಯಗಳ ಮಾನ್ಯತೆ ನೀಡದೆ ಐ.ಸಿ.ಸಿ ಕೇವಲ ಲಿಸ್ಟ್-ಎ ಮಾನ್ಯತೆ ನೀಡಿ ಪಂದ್ಯಾವಳಿಯ ಕಳೆ ಕೊಂಚ ಕುಂದುವಂತೆ ಮಾಡಿದರೂ ಆಟಗಾರರ ಉತ್ಸಾಹಕ್ಕೆ ಚ್ಯುತಿ ಬರಲಿಲ್ಲ. ಈ ಪಂದ್ಯಾವಳಿಯ ವೇಳೆ ಬಾರತ ಮತ್ತು ಪಾಕಿಸ್ತಾನ ಟೊರಾಂಟೊನಲ್ಲಿ ಸಹಾರಾ ಕಪ್ ಸರಣಿ ಆಡಬೇಕಿದ್ದುದ್ದರಿಂದ ಪೂರ‍್ಣಪ್ರಮಾಣದ ತಂಡವನ್ನು ಆರಿಸದೆ, ಬಾರತ ಅಜಯ್ ಜಡೇಜಾರ ನಾಯಕತ್ವದಲ್ಲಿ ಉಪನಾಯಕ ಅನಿಲ್ ಕುಂಬ್ಳೆ ಮತ್ತು ಅನುಬವಿ ಸಚಿನ್ ತೆಂಡೂಲ್ಕರ್ ರನ್ನೊಳಗೊಂಡ ಹೆಚ್ಚು ಯುವ ಆಟಗಾರರಿಂದಲೇ ಕೂಡಿದ್ದ ತಂಡವನ್ನು ಕಳಿಸಿತು. ಆದರೆ ಕುವಾಲಲಂಪುರದಲ್ಲಿ ನಡೆದ ಈ 50 ಓವರ್ ಗಳ ಪೋಟಿಯಲ್ಲಿ ಬಾರತ ತಂಡ ಸೆಮಿಪೈನಲ್ ಕೂಡ ತಲುಪದೇ ಲೀಗ್ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಬವಿಸಿತು. ದಕ್ಶಿಣ ಆಪ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಪೈನಲ್ ನಲ್ಲಿ ದಕ್ಶಿಣ ಆಪ್ರಿಕಾ 4 ವಿಕೆಟ್ ಗಳಿಂದ ಪಂದ್ಯ ಗೆದ್ದು ಬಂಗಾರದ ಪದಕ ಗೆದ್ದರೆ ಆಸ್ಟ್ರೇಲಿಯಾ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. ಇನ್ನು ಮೂರನೇ ಸ್ತಾನಕ್ಕಾಗಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು 51 ರನ್ ಗಳಿಂದ ಮಣಿಸಿ ನ್ಯೂಜಿಲ್ಯಾಂಡ್ ಕಂಚಿನ ಪದಕವನ್ನು ಗೆದ್ದಿತು. ಹಾಗೂ, ಇಲ್ಲಿ ವೆಸ್ಟ್ ಇಂಡೀಸ್ ಒಂದು ತಂಡವಾಗಿ ಪಾಲ್ಗೊಳ್ಳದೆ ದ್ವೀಪ ರಾಶ್ಟ್ರಗಳಾದ ಜಮೈಕಾ, ಬಾರ‍್ಬಡಾಸ್ ಮತ್ತು ಆಂಟಿಗಾ ತಂಡಗಳಾಗಿ ಸೆಣಸಿದ್ದು ವಿಶೇಶವಾಗಿತ್ತು. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 1998 ರ ಈ ಕ್ರಿಕೆಟ್ ಪ್ರಯೋಗದ ಬಳಿಕ ಮತ್ತೆಂದೂ ಕ್ರಿಕೆಟ್ ಗೆ ಮಣೆ ಹಾಕದಿರುವುದು ಕೊಂಚ ಬೇಸರದ ಸಂಗತಿಯೇ ಎನ್ನಬೇಕು.

ಸೌತ್ ಏಶಿಯನ್ ಗೇಮ್ಸ್ – ಡಾಕಾ, 2010

SAF ಗೇಮ್ಸ್ ಎಂದು ಮೊದಲಿಗೆ ಪ್ರಕ್ಯಾತಿಯಾಗಿದ್ದ ಸೌತ್ ಏಶಿಯನ್ ಗೇಮ್ಸ್ ಡಾಕಾದಲ್ಲಿ ನಡೆದ ತನ್ನ 2010 ರ ಅವತರಿಣಿಕೆಯಲ್ಲಿ ಪ್ರಪ್ರತಮ ಬಾರಿಗೆ ಕ್ರಿಕೆಟ್ ಗೂ ಎಡೆ ನೀಡಿತು. ಟೆಸ್ಟ್ ಮಾನ್ಯತೆ ಪಡೆದಿರುವ ಮೂರು ತಂಡಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಒಟ್ಟಿಗೆ ನೇಪಾಳ ಮತ್ತು ಮಾಲ್ಡೀವ್ಸ್ ಕೂಡ ಪದಕಗಳಿಗಾಗಿ ಕ್ರಿಕೆಟ್ ಅಂಗಳದಲ್ಲಿ ಪೋಟಿ ಮಾಡಿದವು. ಪೈನಲ್ ನಲ್ಲಿ ಶ್ರೀಲಂಕಾವನ್ನು 6 ವಿಕೆಟ್ ಗಳಿಂದ ಸೋಲಿಸಿ ಬಂಗಾರದ ಪದಕವನ್ನು ಆತಿತೇಯ ಬಾಂಗ್ಲಾದೇಶ ತೆಕ್ಕೆಗೆ ಹಾಕಿಕೊಂಡರೆ ಶ್ರೀಲಂಕಾ ಬೆಳ್ಳಿ ಪದಕಕ್ಕೆ ಸಮಾದಾನ ಪಟ್ಟಿಕೊಂಡಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೇಪಾಳವನ್ನು 2 ವಿಕೆಟ್ ಗಳಿಂದ ಮಣಿಸಿ ಕಂಚಿನ ಪದಕವನ್ನು ಗೆದ್ದಿತು. ಆದರೆ 2010 ರ ಬಳಿಕ ಮತ್ತೆಂದೂ ಕ್ರಿಕೆಟ್ ಅನ್ನು ಸೌತ್ ಏಶಿಯನ್ ಗೇಮ್ಸ್ ಆಡಿಸಲಾಗಿಲ್ಲ.

ಏಶಿಯನ್ ಗೇಮ್ಸ್ – ಇಂಚಾನ್, 2014

2010 ರಲ್ಲಿ ಚೀನಾದಲ್ಲಿ ನಡೆದ ಏಶಿಯನ್ ಗೇಮ್ಸ್ ಲಿ ಮೊದಲ ಬಾರಿಗೆ ಕ್ರಿಕೆಟ್ ಆಡಿಸಲಾದರೂ 2014 ರಲ್ಲಿ ದಕ್ಶಿಣ ಕೊರಿಯಾದ ಇಂಚಾನ್ ನಲ್ಲಿ ನಡೆದ ಪೋಟಿಯಲ್ಲಿ ಕ್ರಿಕೆಟ್ ಪೂರ‍್ಣಪ್ರಮಾಣವಾಗಿ ಸ್ತಾನ ಪಡೆಯಿತು. ಆದರೆ ಎರಡೂ ಬಾರಿ ಬಾರತ ಮಾತ್ರ ಅಂತರಾಶ್ಟ್ರೀಯ ಪ್ರವಾಸಗಳ ನೆಪವೊಡ್ಡಿ ತನ್ನ ಕ್ರಿಕೆಟ್ ತಂಡವನ್ನು ಏಶಿಯನ್ ಗೇಮ್ಸ್ ಗೆ ಕಳಿಸಲಿಲ್ಲ. 2014 ರಲ್ಲಿ ಇಲ್ಲಿ ಗಂಡಸರ ಪೋಟಿಯಲ್ಲಿ ಶ್ರೀಲಂಕಾ ಬಂಗಾರದ ಪದಕ ಗೆದ್ದು ಅಪ್ಗಾನಿಸ್ತಾನ ಬೆಳ್ಳಿ ಪದಕ ಗೆದ್ದರೆ ಹೆಂಗಸರ ಪೋಟಿಯಲ್ಲಿ ಕ್ರಮವಾಗಿ ಪಾಕಿಸ್ತಾನ ಬಂಗಾರದ ಪದಕ ಮತ್ತು ಬಾಂಗ್ಲಾದೇಶ ಬೆಳ್ಳಿ ಪದಕವನ್ನು ಗೆದ್ದಿತು. ಆದರೆ ಆ ವರ‍್ಶದ ಬಳಿಕ ಇತರೆ ಬಹು-ಕ್ರೀಡಾ ಪಂದ್ಯಾವಳಿಗಳಂತೆಯೇ ಏಶಿಯನ್ ಗೇಮ್ಸ್ ನಲ್ಲಿಯೂ ಕ್ರಿಕೆಟ್ ಮರೆಯಾಗಿದೆ.

ಪೆಸಿಪಿಕ್ ಗೇಮ್ಸ್ – ಸಮೋವಾ, 2019

ನಿರಂತರವಾಗಿ ಕ್ರಿಕೆಟ್ ಗೆ ದಶಕಗಳಿಂದ ಪ್ರೋತ್ಸಾಹ ನೀಡಿ ಮಣೆ ಹಾಕುತ್ತಿರುವ ಒಂದೇ ಒಂದು ಬಹು-ಕ್ರೀಡಾ ಪಂದ್ಯಾವಳಿ ಎಂದರೆ ಅದು ಪೆಸಿಪಿಕ್ ಗೇಮ್ಸ್. ಇಲ್ಲಿ ಮೊದಲ ಬಾರಿಗೆ 1979 ರಲ್ಲಿ ಕ್ರಿಕೆಟ್ ಅನ್ನು ಆಡಿಸಲಾಗಿತ್ತು. ಆ ನಂತರ 1987 ಮತ್ತು 1991 ರಲ್ಲಿ ಕ್ರಿಕೆಟ್ ನಡೆದರೂ ಅದರ ಬೆನ್ನಲೇ 12 ವರ‍್ಶಗಳ ಕಾಲ ಆಟ ನೇಪತ್ಯಕ್ಕೆ ಸರಿದಿತ್ತು. ಆದರೆ 2003 ರಲ್ಲಿ ಮತ್ತೆ ಪೆಸಿಪಿಕ್ ಗೇಮ್ಸ್ ಗೆ ಮರಳಿದ ಕ್ರಿಕೆಟ್ ಅಲ್ಲಿಂದ ನೆಲೆ ಕಂಡುಕೊಂಡಿದೆ. ಕಡೆಯ ಬಾರಿ 2019 ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಗಂಡಸರ ಪೋಟಿಯಲ್ಲಿ ಪಾಪ್ವ-ನ್ಯೂ-ಗಿನಿ ಗೆಲ್ಲುಗರಾದರೆ ಹೆಂಗಸರ ಪೋಟಿಯಲ್ಲಿ ಸಮೋವಾ ಗೆಲುವಿನ ನಗೆ ಬೀರಿದೆ.

ಇತ್ತೀಚಿಗೆ ಕ್ರಿಕೆಟ್ ನ ಟಿ-20 ಮಾದರಿಯನ್ನು ಅದಿಕ್ರುತವಾಗಿ ಒಲಂಪಿಕ್ಸ್ ಗೆ ಸೇರಿಸಬೇಕೆನ್ನುವ ಕೂಗು ಹೆಚ್ಚಾಗುತ್ತಿದ್ದರೂ 2028 ರ ಒಲಂಪಿಕ್ಸ್ ತನಕ ಈ ಬೆಳವಣಿಗೆ ಅಸಾದ್ಯ ಎಂಬುದು ತಿಳಿದುಬಂದಿದೆ. ಐಸಿಸಿ ಹಾಗೂ ಬಹು-ಕ್ರೀಡಾ ಪಂದ್ಯಾವಳಿಯ ಆಯೋಜಕರು ಒಂದು ಒಪ್ಪಂದಕ್ಕೆ ಬಂದು ಕ್ರಿಕೆಟ್ ಅನ್ನು ಎಲ್ಲಾ ಬಗೆಯ ಪೋಟಿಗಳಲ್ಲಿ ಸೇರಿಸಲಿ ಎನ್ನುವುದು ಕ್ರೀಡಾಬಿಮಾನಿಗಳ ಬಯಕೆಯಾದರೂ, ಇದು ನಿಜಕ್ಕೂ ವ್ಯಾವಹಾರಿಕವಾಗಿ ಹಾಗೂ ಪ್ರಾಯೋಗಿಕವಾಗಿ ಸಾದ್ಯವೇ ಎಂಬುದನ್ನು ಒರೆ ಹಚ್ಚಿ ನೋಡಬೇಕಿದೆ. ನಿರಂತರಾಗಿ ನಡೆಯುವ ಅಂತರಾಶ್ಟ್ರೀಯ ಕ್ರಿಕೆಟ್ ಪ್ರವಾಸಗಳ ನಡುವೆ ಈ ಹೊಸ ಸೇರ‍್ಪಡೆ ತುಸು ಕಶ್ಟ ಎನ್ನುವುದು ಮೇಲ್ನೋಟಕ್ಕೇ ತಿಳಿದುಬರುತ್ತದೆ. ಆದರೂ ಪ್ರತಿಶ್ಟಿತ ಒಲಂಪಿಕ್ಸ್ ಒಂದಲ್ಲಾದರೂ ಕ್ರಿಕೆಟ್ ಶಾಶ್ವತ ಎಡೆ ಪಡೆಯಲಿ ಎಂಬುದು ಬಾರತದ ಕ್ರಿಕೆಟ್ ಒಲವಿಗರ ಆಶಯ. ಈ ದಿಸೆಯಲ್ಲಿ ಮುಂದಿನ ದಶಕದಲ್ಲಿ ಯಾವ ಬಗೆಯ ಸಕಾರಾತ್ಮಕ ಮಾರ‍್ಪಾಡುಗಳು ಆಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

(ಚಿತ್ರಸೆಲೆ: sportskeeda.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications