ಉಲುರು ಜಲಪಾತ – ಅಪರೂಪದ ಅದ್ಬುತ

– .

ಉಲುರು ದೊಡ್ಡ ಮರಳುಗಲ್ಲಿನ ಬಂಡೆಯ ರಚನೆಯಾಗಿದೆ. ಇದನ್ನು ಆಯರ‍್ಸ್ ರಾಕ್ ಎಂದೂ ಕರೆಯುತ್ತಾರೆ. ಹಾಗಾದಲ್ಲಿ ದೊಡ್ಡ ಬಂಡೆಗೂ ಜಲಪಾತಕ್ಕೂ ಎಲ್ಲಿಗೆಲ್ಲಿಯ ನಂಟು ಎಂಬ ಅನುಮಾನ ಹುಟ್ಟಬಹುದು. ಮದ್ಯ ಆಸ್ಟ್ರೇಲಿಯಾದಲ್ಲಿರುವ ಉಲುರು ಮರಳುಗಲ್ಲಿನ ಬಂಡೆ, ಪ್ರಸಿದ್ದಿ ಪಡೆದ ನೈಸರ‍್ಗಿಕ ಹೆಗ್ಗುರುತುಗಳಲ್ಲಿ ಒಂದಾಗಿದೆ. ಇದರ ಎತ್ತರ 348 ಮೀಟರ್, ಸೂರ‍್ಯೋದಯ ಮತ್ತು ಸೂರ‍್ಯಾಸ್ತದ ಸಮಯದಲ್ಲಿ ಸೂರ‍್ಯನ ಬೆಳಕು ಇದರ ಮೇಲ್ಮೈಯಿಂದ ಪ್ರತಿಪಲಿಸಿದಾಗ ಅತ್ಯಂತ ಅದ್ಬುತ ರಮಣೀಯ ದ್ರುಶ್ಯವಾಗಿ ಮಾರ‍್ಪಾಡಾಗುತ್ತದೆ. ಈ ವಿದ್ಯಮಾನವನ್ನು ನೋಡಲು ಪ್ರವಾಸಿಗರು ಹಂಬಲಿಸುತ್ತಾರೆ.

ಇದೇ ಬಂಡೆಯಿಂದ ಮತ್ತೊಂದು ಅದ್ಬುತ, ಚಮತ್ಕಾರಿಕ ದ್ರುಶ್ಯ ಕಂಡು ಬರುವುದು ಈ ಪ್ರದೇಶದಲ್ಲಿ ಬಾರಿ ಮಳೆ ಸುರಿದಾಗ. ಉಲುರು ಮರಳುಗಲ್ಲಿನ ಬಂಡೆಯಿರುವುದು ಮದ್ಯ ಆಸ್ಟ್ರೇಲಿಯಾದ ಉತ್ತರ ಬೂ ಪ್ರದೇಶದ ದಕ್ಶಿಣ ಬಾಗದಲ್ಲಿರುವ ಮರುಬೂಮಿಯಲ್ಲಿ. ಇಲ್ಲಿ ಸರಾಸರಿ ವಾರ‍್ಶಿಕ 300 ಮಿ.ಮೀ ಮಳೆಯಾಗುತ್ತದೆ. ಆದರೂ ಇಶ್ಟೇ ಮಳೆ ಬರುತ್ತದೆ ಎಂದು ನಿಕರವಾಗಿ ಹೇಳಲಾಗುವುದಿಲ್ಲ. ನವೆಂಬರ್ ಮತ್ತು ಮಾರ‍್ಚ್ ನಡುವೆ ಕೆಲವೊಮ್ಮೆ ಬಾರಿ ಮಳೆಯಾಗುವ ಸಾದ್ಯತೆಯಿದೆ. ಹೆಚ್ಚು ಮಳೆಯಾದ ಸಮಯದಲ್ಲಿ ಈ ಪ್ರಸಿದ್ದ ಮರಳುಗಲ್ಲಿನ ಬಂಡೆಯ ಮೇಲೆ ನೀರಿನ ತೊರೆಗಳು ಹರಿಯುವುದನ್ನು ಕಾಣಬಹುದು. ಬಂಡೆಯ ಮೇಲೆ ಹರಿಯುವ ತೊರೆಯ ನೀರು, ಈ ಬಂಡೆಯ ಬಣ್ಣವನ್ನು ಅಪರೂಪದ ನೇರಳೆ ಬಣ್ಣಕ್ಕೆ ಬದಲಾಯಿಸುತ್ತದೆ. ಈ ದ್ರುಶ್ಯ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

ಪ್ರತಿ ಚಂಡಮಾರುತದ ನಂತರ, ಅಲ್ಲೆಲ್ಲೂ ಇಂಗಲು ಸ್ತಳವಿಲ್ಲದ ಕಾರಣ, ಬಂಡೆಯ ಮೇಲ್ಬಾಗದಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ. ದೂರದಿಂದ ನೋಡುವವರಿಗೆ ಇದು ಜಲಪಾತಗಳಂತಹ ಬ್ರಮೆಯನ್ನು ಸ್ರುಶ್ಟಿಸುತ್ತದೆ. ಇದರೊಂದಿಗೆ ಮಳೆಯ ನೀರಿನಿಂದ ಒದ್ದೆಯಾದ ಬಂಡೆಯ ಬಣ್ಣ ಬೂದು ಬಣ್ಣದಿಂದ ಕೆಂಪು, ಕಡುಕೆಂಪು ಮತ್ತು ಕಂದು ಬಣ್ಣದ ವಿವಿದ ಚಾಯೆಗಳಿಗೆ ತಿರುಗುತ್ತದೆ. ಅದ್ರುಶ್ಟವಿದ್ದವರಿಗೆ ಮಾತ್ರ ಇದು ನೋಡಲು ಸಿಗುತ್ತದೆ.

ಉಲುರು ಮರಳುಗಲ್ಲಿನ ದೊಡ್ಡ ಬಂಡೆಯಿರುವುದು ಉಲುರು-ಕಟಾ-ಟ್ಜುಟಾ ರಾಶ್ಟ್ರೀಯ ಉದ್ಯಾನವನದಲ್ಲಿ. ಉಲುರು 600 ಮಿಲಿಯನ್ ವರ‍್ಶಗಳಶ್ಟು ಹಳೆಯ ಬಂಡೆ ಎಂದು ವರ‍್ಗೀಕರಿಸಿದ್ದಾರೆ. ಅಸ್ತಿತ್ವದಲ್ಲಿರುವ ಅತಿ ಪುರಾತನ ಬಂಡೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಮಳೆ ಸುರಿದಾಗ ಈ ಬಂಡೆಯ ಮೇಲಿಂದ ಸುರಿಯುವ ನೀರು ಸಣ್ಣ ಸಣ್ಣ ಜಲಪಾತಗಳಾಗುವ ದ್ರುಶ್ಯ ಬಾಗ್ಯಶಾಲಿಗಳಿಗೆ ಮಾತ್ರ ಸಿಗುತ್ತದೆ. ಈ ದ್ರುಶ್ಯ ಸಹ ಹೆಚ್ಚು ಕಾಲ ಉಳಿಯುವುದಿಲ್ಲ. ಈ ಗಟನೆ ಸಂಬವಿಸಿದಾಗ ಪ್ರವಾಸಿಗರು ಸಾವಿರಾರು ಪೋಟೋಗಳನ್ನು ತರಾತುರಿಯಲ್ಲಿ ತೆಗೆದು ಬೀಗುತ್ತಾರೆ. ಪ್ರತಿ ಕ್ಶಣವನ್ನೂ ಆಸ್ವಾದಿಸುತ್ತಾ, ಆನಂದಿಸುತ್ತಾರೆ.

ಉಲುರು-ಕಟಾ-ಟ್ಜುಟಾ ರಾಶ್ಟ್ರೀಯ ಉದ್ಯಾನವನದ ವ್ಯವಸ್ತಾಪಕರಾದ ಕೆರ‍್ರಿ ಬೆನ್ನಿಸನ್ ಕಳೆದ ಹತ್ತಾರು ವರ‍್ಶಗಳಿಂದ ಅಲ್ಲಿ ಕೆಲಸ ನಿರ‍್ವಹಿಸುತ್ತಿದ್ದಾರೆ. ಅವರ ಹೇಳಿಕೆಯಂತೆ ಸಾಮಾನ್ಯವಾಗಿ ಈ ದ್ರುಶ್ಯ ಎಲ್ಲರಿಗೂ ಕಾಣಸಿಗುವುದಿಲ್ಲ. ವರ‍್ಶದಲ್ಲಿ ಎರಡರಿಂದ ಮೂರು ಬಾರಿ ಮಾತ್ರ ಇದು ಸಂಬವಿಸುವುದರಿಂದ, ಅದ್ರುಶ್ಟವಿದ್ದವರಿಗೆ ಮಾತ್ರ ಕಾಣುತ್ತದೆ ಎನ್ನುತ್ತಾರೆ ಆಕೆ. ಒಂದು ಅಂದಾಜಿನ ಪ್ರಕಾರ ಉಲುರುವಿಗೆ ಬೇಟಿ ನೀಡುವ ಪ್ರವಾಸಿಗರಲ್ಲಿ ಕೇವಲ ಶೇಕಡಾ ಒಂದರಶ್ಟು ಮಂದಿಗೆ ಮಾತ್ರ ಈ ಅದ್ಬುತವನ್ನು ನೋಡುವ ಅದ್ರುಶ್ಟ ಲಬ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ. ಉಲುರುಗೆ ತಲುಪಲು ಹತ್ತಿರದ ನಗರವಾದ ಆಲಿಸ್ ಸ್ಟ್ರಿಂಗ್‍ನಿಂದ 300 ಕಿಲೋಮೀಟರ್ ಪ್ರಯಾಣಿಸಬೇಕಿದೆ. ಮಳೆಯಿದ್ದಾಗ ಈ ಪ್ರದೇಶದ ವಾತಾವರಣ ತಂಪಾಗಿರುತ್ತದೆ. ಉಳಿದಂತೆ ಇಲ್ಲಿನ ವಾತಾವರಣದ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ತಲುಪುತ್ತದೆ. ಇಶ್ಟೆಲ್ಲಾ ಅನಾನುಕೂಲಗಳಿದ್ದರೂ, ಪ್ರತಿ ವರ‍್ಶ ಇಲ್ಲಿಗೆ ಬರುವ ಪ್ರವಾಸಿಗರ ಸಂಕ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಮತ್ತೊಂದು ಕಾರಣ ಈ ಪ್ರದೇಶದಲ್ಲಿ ಕಂಡುಬರುವ ಸ್ತಳೀಯ ಪ್ರಾಣಿಗಳಾದ ರಾಕ್-ವಾಲ್ಟಿ, ವಿಶಿಶ್ಟ ಸಸ್ಯಗಳು ಮತ್ತು ಅನನ್ಯ ಶಿಲಾಕ್ರುತಿಗಳು.

(ಮಾಹಿತಿ ಮತ್ತು ಚಿತ್ರ ಸೆಲೆ: pixabay.com, amusingplanet.com, quizzclub.com, nature.new7wonders.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: