ಆದಯ್ಯನ ವಚನಗಳ ಓದು – 3ನೆಯ ಕಂತು

ಸಿ.ಪಿ.ನಾಗರಾಜ.

ವಚನಗಳು, Vachanas

ಸತ್ಯವೆ ಜಲ ಸಮತೆಯೆ ಗಂಧ
ಅರಿವೆ ಅಕ್ಷತೆ ಭಾವ ಕುಸುಮ
ಸ್ವತಂತ್ರ ಧೂಪ ನಿರಾಳ ದೀಪ
ಸ್ವಾನುಭಾವ ನೈವೇದ್ಯ
ಸಾಧನ ಸಾಧ್ಯ ಕರ್ಪುರ ವೀಳೆಯ
ಇವೆಲ್ಲವ
ನಿಮ್ಮ ಪೂಜೆಗೆಂದೆನ್ನಕರಣಂಗಳು ಪಡೆದಿರಲು
ಹೃದಯ ಮಧ್ಯದಲ್ಲಿದ್ದು ಗಮ್ಮನೆ ಕೈಕೊಂಡೆಯಲ್ಲಾ
ಸೌರಾಷ್ಟ್ರ ಸೋಮೇಶ್ವರಾ.

ದೇವರನ್ನು ಪೂಜಿಸಲೆಂದು ಮಾಡುವ ಆಚರಣೆಗಳಿಗಿಂತ ಮತ್ತು ದೇವರಿಗೆ ಸಲ್ಲಿಸುವ ವಸ್ತುಗಳಿಗಿಂತ, ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳುವುದು ದೊಡ್ಡದು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ದೇವರ ವಿಗ್ರಹವನ್ನು ತೊಳೆಯುವ ನೀರು; ಲೇಪಿಸುವ ಗಂದ; ಎರಚುವ ಅರಿಶಿನದ ಅಕ್ಕಿ; ಮುಡಿಸುವ ಹೂವು; ಎತ್ತುವ ದೂಪದ ಆರತಿ; ಬೆಳಗುವ ದೀಪ; ಮುಂದೆ ಇಡುವ ಹಣ್ಣು, ಹಾಲು, ತಿಂಡಿ, ತಿನಸು; ಉರಿಸುವ ಕರ‍್ಪೂರ; ಎಲೆ ಮತ್ತು ಅಡಕೆ ಮುಂತಾದುವುಗಳಿಂದ ದೇವರನ್ನು ಪೂಜಿಸುವ ಬದಲು, ವ್ಯಕ್ತಿಯು ತನ್ನ ದಿನನಿತ್ಯದ ಜೀವನದಲ್ಲಿ ನಿಜವನ್ನೇ ಆಡುವ; ಸಹಮಾನವರನ್ನು ಸಮಾನವಾಗಿ ಕಾಣುವ; ಒಳ್ಳೆಯ ಅರಿವನ್ನು ಪಡೆಯುವ; ಮನದಲ್ಲಿ ಒಳ್ಳೆಯ ಒಳಮಿಡಿತಗಳನ್ನು ಹೊಂದುವ; ಯಾರಿಗೂ ಅಡಿಯಾಳಾಗಿ ಬಾಳದಿರುವ; ತಾಳ್ಮೆ ಮತ್ತು ನೆಮ್ಮದಿಯಿಂದ ಕೂಡಿರುವ; ನಿಜ ಜೀವನದ ನೋವು ನಲಿವುಗಳಿಂದಲೇ ಒಳ್ಳೆಯದು ಯಾವುದು-ಕೆಟ್ಟದ್ದು ಯಾವುದು ಎಂಬುದನ್ನು ಅರಿಯುವ; ಕಾರ‍್ಯ ಕಾರಣಗಳನ್ನು ಒರೆಹಚ್ಚಿ ನೋಡುವ, ಒಳ್ಳೆಯ ಕಾಯಕದಲ್ಲಿ ತನ್ನ ಅಯ್ದು ಇಂದ್ರಿಯಗಳನ್ನು ತೊಡಗಿಸಿಕೊಳ್ಳುವ ನಡೆನುಡಿಗಳನ್ನು ಹೊಂದಿದ್ದರೆ, ಅಂತಹ ವ್ಯಕ್ತಿಯ ಮಯ್ ಮನದಲ್ಲಿ ದೇವರು ನೆಲೆಸಿರುತ್ತಾನೆ ಎಂಬ ನಿಲುವನ್ನು ಹನ್ನೆರಡನೆಯ ಶತಮಾನದ ವಚನಕಾರರು ತಳೆದಿದ್ದರು. ಏಕೆಂದರೆ ಅವರಿಗೆ ದೇವರು ಎನ್ನುವ ಕಲ್ಪನೆಯು ಮಾನವರ ಒಳ್ಳೆಯ ನಡೆನುಡಿಗಳನ್ನು ಅವಲಂಬಿಸಿತ್ತೇ ಹೊರತು ಕಲ್ಲು/ಮಣ್ಣು/ಮರ/ಲೋಹದಿಂದ ಮಾಡಿದ ವಿಗ್ರಹರೂಪಿಯಾದ ದೇವರನ್ನಲ್ಲ.

ಸತ್ಯ=ದಿಟ/ಸತ್ಯ; ಜಲ=ನೀರು; ಸಮತೆ=ಸಮಾನ; ಗಂಧ=ಚಂದನ ಮರದ ಕೊರಡಿಗೆ ನೀರನ್ನು ಹಾಕಿಕೊಂಡು ತೇಯ್ದಾಗ ಬರುವ ಸುವಾಸನೆಯ ವಸ್ತು. ಇದನ್ನು ದೇವರ ವಿಗ್ರಹಕ್ಕೆ ಬಳಿಯುತ್ತಾರೆ; ಅರಿವು=ತಿಳುವಳಿಕೆ; ಅಕ್ಷತೆ=ಅರಿಶಿನ ಸವರಿದ ಅಕ್ಕಿಯ ಕಾಳು. ಇದನ್ನು ಪೂಜೆಯ ಸಮಯದಲ್ಲಿ ದೇವರ ವಿಗ್ರಹದ ಮೇಲೆ ಎರಚುತ್ತಾರೆ; ಭಾವ=ವ್ಯಕ್ತಿಯ ಮನದೊಳಗೆ ತುಡಿಯುವ ಒಳಮಿಡಿತಗಳು; ಕುಸುಮ=ಹೂವು; ಸ್ವತಂತ್ರ=ಯಾರಿಗೂ ಅಡಿಯಾಳಾಗದೆ ಇರುವುದು; ಧೂಪ=ಹಾಲುಮಡ್ಡಿ, ಸಾಂಬ್ರಾಣಿ ಮುಂತಾದ ವಸ್ತುಗಳಿಂದ ಮಾಡಿದ ಪುಡಿಯನ್ನು ಕೆಂಡದ ಮೇಲೆ ಹಾಕಿದಾಗ ಹೊರಹೊಮ್ಮುವ ಹೊಗೆ. ದೇವರನ್ನು ಪೂಜಿಸುವಾಗ ದೂಪದ ಆರತಿಯನ್ನು ಎತ್ತುತ್ತಾರೆ;

ನಿರಾಳ=ನೆಮ್ಮದಿ/ಶಾಂತಿ; ದೀಪ=ಬೆಳಕಿನ ಕುಡಿ;

ಸ್ವಾನುಭಾವ=ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಪಡೆದ ನೋವು ನಲಿವು; ನೈವೇದ್ಯ=ದೇವರ ವಿಗ್ರಹದ ಮುಂದೆ ಜೋಡಿಸಿಡುವ ಉಣಿಸು ತಿನಸು; ಸಾಧನ=ಸಲಕರಣೆ/ಉಪಕರಣ; ಸಾಧ್ಯ=ಕಾರ‍್ಯರೂಪಕ್ಕೆ ತರಬಹುದಾದುದು; ಕರ‍್ಪುರ=ಒಂದು ಬಗೆಯ ಸುವಾಸನೆಯ ವಸ್ತು. ಇದಕ್ಕೆ ಬೆಂಕಿ ಸೋಕಿದಾಗ ಉರಿಯತೊಡಗುತ್ತದೆ. ದೇವರಿಗೆ ಮಂಗಳಾರತಿಯನ್ನು ಮಾಡುವಾಗ ಕಪ್ಪುರವನ್ನು ಹಚ್ಚುತ್ತಾರೆ; ವೀಳೆಯ=ಎಲೆ ಅಡಕೆ ಸುಣ್ಣ ಮೊದಲಾದುವುಗಳನ್ನು ಒಳಗೊಂಡ ತಾಂಬೂಲ; ಇವು+ಎಲ್ಲವ; ಪೂಜೆಗೆ+ಎಂದು+ಎನ್ನ+ಕರಣಂಗಳು; ಕರಣ=ಮಾನವ ದೇಹದಲ್ಲಿರುವ ಕಣ್ಣು-ಕಿವಿ-ಮೂಗು-ನಾಲಗೆ-ತೊಗಲು ಎಂಬ ಅಯ್ದು ಅಂಗಗಳು. ಈ ಅಯ್ದು ಬಗೆಯ ಕರಣಗಳಿಂದಲೇ ವ್ಯಕ್ತಿಯು ಎಲ್ಲಾ ಬಗೆಯ ಅರಿವನ್ನು ಮತ್ತು ನೋವು ನಲಿವನ್ನು ಹೊಂದುತ್ತಾನೆ; ಪಡೆದು+ಇರಲು; ಹೃದಯ=ಎದೆ; ಮಧ್ಯದಲ್ಲಿ+ಇದ್ದು; ಮಧ್ಯ=ನಡುವೆ; ಗಮ್ಮನೆ=ಸುಮ್ಮನೆ/ಮೌನವಾಗಿ; ಕೈಕೊಂಡೆ+ಅಲ್ಲಾ; ಕೈಕೊಂಡೆ=ಅಂಗೀಕರಿಸು/ಸಮ್ಮತಿಸು; ಅಲ್ಲಾ=ಅಲ್ಲವೇ;

ನಿಮ್ಮ ಪೂಜೆಗೆಂದೆನ್ನಕರಣಂಗಳು ಪಡೆದಿರಲು ಹೃದಯ ಮಧ್ಯದಲ್ಲಿದ್ದು ಗಮ್ಮನೆ ಕೈಕೊಂಡೆಯಲ್ಲಾ=ಯಾವ ವ್ಯಕ್ತಿಯು ತನ್ನ ಅಯ್ದು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುತ್ತಾನೆಯೋ, ಅಂತಹ ವ್ಯಕ್ತಿಯ ಎದೆಯಲ್ಲಿಯೇ ದೇವರು ನೆಲೆಗೊಳ್ಳುತ್ತಾನೆ ಎಂಬ ರೂಪಕದ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;

ಸೌರಾಷ್ಟ್ರ=ಇಂದಿನ ಗುಜರಾತ್ ರಾಜ್ಯದಲ್ಲಿ ಹನ್ನೊಂದು ಜಿಲ್ಲೆಗಳಿಂದ ಕೂಡಿರುವ ಒಂದು ದೊಡ್ಡ ಪ್ರಾಂತ್ಯವನ್ನು ಸೂರತ್ ಎಂದು ಕರೆಯುತ್ತಾರೆ. ಇದಕ್ಕೆ ಮೊದಲು ಸೌರಾಶ್ಟ್ರ ಎಂಬ ಹೆಸರಿತ್ತು; ಸೋಮೇಶ್ವರ=ಶಿವ/ಈಶ್ವರ; ಸೌರಾಷ್ಟ್ರ ಸೋಮೇಶ್ವರ=ಆದಯ್ಯನವರ ವಚನಗಳ ಅಂಕಿತನಾಮ.

( ಚಿತ್ರ ಸೆಲೆ:  sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: