ನಾನು ಮತ್ತು ನನ್ನ ಶಾಲೆ

– ರಾಹುಲ್ ಆರ್. ಸುವರ‍್ಣ.

ಸರಕಾರಿ ಸ್ಕೂಲು, Govt School

ಪ್ರತಿಯೊಬ್ಬರಿಗೂ ಅವರವರ ಶಾಲೆಗಳೆಂದರೆ ಅದೇನೊ ವಿವರಿಸಲಾಗದಂತ ಪ್ರೀತಿ. ನನಗೂ ಹಾಗೆಯೆ.ನನ್ನ ಶಾಲೆ ಎಂದರೆ ನನಗೆ ಮೊದಲು ನೆನಪಾಗುವುದೇ ಆ ಗೋಡೆಯ ಮೇಲಿದ್ದ ಕನ್ನಡಾಂಬೆಯ ಬವ್ಯವಾದ ಚಿತ್ರ ಹಾಗೂ ಸದಾ ಓಡಾಡಿ, ಬಿದ್ದು ನಡೆದ ಶಾಲೆಯಾವರಣ ಮತ್ತು ಅನನ್ಯವಾದ ಸ್ನೇಹಿತರ ಬಳಗ. ಬದುಕಿನ ಯಾವ ಸಂದರ‍್ಬದಲ್ಲೂ ಸಹಾಯಕ್ಕೆ ಕೈ ಜೋಡಿಸುವ ಅವರನ್ನು ನನಗಿತ್ತ ಈ ಶಾಲೆಗೆ ನಾನೆಶ್ಟು ಕ್ರುತಜ್ನನಾದರೂ ಕಡಿಮೆಯೇ. ಅದಿರಲಿ ಆ ದಿನಗಳಲ್ಲಿ ಆಡಿದ ಆಟ, ಕೈ ಹಿಡಿದು ನಡೆದ ದಾರಿ, ಅವರವರ ಪ್ರೀತಿಯ ಮಾಸ್ಟರ್ ಅತವಾ ಟೀಚರ್ ಅನ್ನು ಯಾರಾದರೂ ಮರೆಯಲ್ಲಿಕ್ಕುಂಟೆ!

ಶಾಲೆಯ ಗಂಟೆ ಸರಿಯಾಗಿ ಒಂಬತ್ತು ಗಂಟೆಗೆ ಕೆಲಸಕ್ಕೆ ಸಿದ್ದವಾದರೆ, ಸುಮ್ಮನಾಗುತ್ತಿದ್ದುದು ಸಂಜೆ ನಾಲ್ಕರ ಹೊತ್ತಿಗೆ. ಊರಿನಲ್ಲಂತು ಬಿಸಿಲು ನೆತ್ತಿಗೆ ಕುಕ್ಕುತಿತ್ತು. ಅದಕ್ಕೆ ಏನೋ ಮನೆಯಲ್ಲಿ ಬೆಳ್ಳಂಬೆಳಗ್ಗೆ ತೆಂಗಿನ ಎಣ್ಣೆ ನೆತ್ತಿಗೆ ಹಾಕಿ ಮೆತ್ತಿ ಕಳುಹಿಸುತ್ತಿದ್ದರು. ಶಾಲೆಗೆ ಬರುವಾಗ ಅದು ನೆತ್ತಿಯಿಂದ ಕೆಳಗಿಳಿದು ಮುಕದವರೆಗೂ ಬಂದರೂ ಮಾರನೆ ದಿನ ಮತ್ತೆ ಅಶ್ಟೆ ಎಣ್ಣೆ ಮೆತ್ತಿಸಿಕೊಂಡು ಬರಬೇಕಿತ್ತು ಇಲ್ಲದಿದ್ದರೆ, ನೇರವಾಗಿ ಮನೆಯಿಂದ ಶಾಲೆಗೆ ಕಾಲ್ ಹೋಗುತಿತ್ತು. ಮುಂದೆ ಏನಾಗುತ್ತಿತ್ತು ಎಂದು ನಿಮಗೂ ಗೊತ್ತು. ವಾರದ ಕೊನೆಯಲ್ಲಿ ಅಪ್ಪ ತಂದು ಕೊಡುತ್ತಿದ್ದ ಹೊಸ ಪೆನ್ಸಿಲ್, ಪೆನ್ನುಗಳು ನೀಡುತಿದ್ದ ಕುಶಿ ಅಂತಿಂತದ್ದೇನಲ್ಲ. ಬಾನುವಾರ ಕಳೆದು ಸೋಮವಾರ ಶಾಲೆಗೆ ಹೋಗುವುದೆಂದರೆ ಆಗಾಗ ಜ್ವರ ಬರುತಿತ್ತು, ಕೆಲವೊಮ್ಮೆ ಹೊಟ್ಟೆ ನೋವು ಬಂದಿದ್ದು ಕೂಡಾ ಉಂಟು, ನೆಪ ಮಾತ್ರ ಬೇರೆ, ಆದರೆ ಮುಕ್ಯ ಕಾರಣ ಒಂದೆ.

ಈಗಿನ ರೀತಿ ಸ್ಕೂಲ್ ಡೇ ಎಲ್ಲ ಆಗ ನಮಗಿರಲಿಲ್ಲ, ಶಾಲೆಯಲ್ಲಿ ಪ್ರತಿಬಾ ಕಾರಂಜಿಯಾದರೆ ಅದೇ ಹೆಚ್ಚು. ನಾವು ಶಾಲೆಯಲ್ಲಿ ಎಶ್ಟೇ ಕೀಟಲೆ ಮಾಡಿದ್ದೆವೋ ಆ ಶಾಲೆಯಿಂದ ಅದಕ್ಕಿಂತ ಹೆಚ್ಚಿನ ಶಿಸ್ತು, ಸಮಯ ಪ್ರಜ್ನೆಯನ್ನು ಕಲಿತೇ ಹೊರಬಂದಿದ್ದೇವೆ. ಶಾಲೆಯ ಶಿಕ್ಶಕ ವ್ರುಂದವನ್ನು ಮರೆಯುವಂತಿಲ್ಲ, ಏಕೆಂದರೆ ತಮ್ಮ ತಮ್ಮ ಜವಾಬ್ದಾರಿಗೂ ಮೀರಿ ಶ್ರಮವಹಿಸಿ ಒಂದೇ ದ್ಯೇಯದೊಂದಿಗೆ ದುಡಿಯುವ ಅವರನ್ನು ನಾ ಮರೆತರೆ ಈ ಬರಹ ಅರ‍್ತಪೂರ‍್ಣವಾಗಲಾರದು. ನಾವಿಂದು ಈ ರೀತಿ ಶಿಸ್ತಿನಿಂದಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ತಂದೆ-ತಾಯಿ ಮತ್ತು ಅವರನ್ನು ಹೊರತು ಪಡಿಸಿದರೆ ಈ ಶಾಲೆಯ ಶಿಕ್ಶಕರೇ ಆಗಿದ್ದಾರೆ. ಏನೇ ಆಗಲಿ ಇಂತಹ ಶಾಲೆಯನ್ನು ಪಡೆದ ನಾವೇ ದನ್ಯರು. ನಮ್ಮ ಶಾಲೆ ನಮ್ಮ ಹೆಮ್ಮೆ.

(ಚಿತ್ರ ಸೆಲೆ:  klp )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: