ಹುರುಳಿಕಾಳು

– ಶ್ಯಾಮಲಶ್ರೀ.ಕೆ.ಎಸ್.

ನಿತ್ಯದ ಆಹಾರ ತಯಾರಿಕೆಗೆ ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿ ಇಲ್ಲವೇ ಸೊಪ್ಪುಗಳ ಬಳಕೆ ಸದಾ ನಮ್ಮ ಆಯ್ಕೆಯಾಗಿರುತ್ತದೆ. ಹಿಂದಿನ ಕಾಲದಲ್ಲಿ ಹಿರಿಯರು ಹಿತ್ತಲಿನಲ್ಲಿ ತಾವೇ ಬೆಳೆದ ತರಕಾರಿ, ಸೊಪ್ಪುಗಳನ್ನು ಮಾತ್ರ ಬಳಸುತ್ತಿದ್ದರಂತೆ. ‌ಉಳಿದಂತೆ ಬಹುತೇಕ ಕಾಳುಕಡ್ಡಿಗಳಿಗೆ ಒತ್ತು ನೀಡುತ್ತಿದ್ದರು. ಕೆಲವು ಒಣಗಾಳುಗಳಾದ ಹೆಸರು, ಕಡಲೆ, ಹುರುಳಿಕಾಳುಗಳಿಂದ ಸಮ್ರುದ್ದವಾದ ಪ್ರೋಟೀನ್ ಯುಕ್ತ ಮೊಳಕೆಕಾಳುಗಳನ್ನು ತಯಾರಿಸಿ ಅಡುಗೆಗೆ ಬಳಸುತ್ತಿದ್ದರು. ಈ ಮೊಳಕೆಕಾಳುಗಳಲ್ಲಿ ಪೋಶಕಾಂಶಗಳು ಹೆಚ್ಚಾಗಿರುವುದನ್ನು ತುಂಬಾ ಹಿಂದೆಯೇ ನಮ್ಮ ಹಿರಿಯರು ಅರಿತಿದ್ದರು. ಅಂದಿಗಿಂತ ಇಂದು ‌ಇವುಗಳ ಬಳಕೆ ತುಸು ಕಮ್ಮಿಯಾದಂತೆ ತೋರುತ್ತದೆ.

ಹುರುಳಿ ಮೊಳಕೆಕಾಳಿನ ಸಾರಿನ ಆ ಗಮ ಎಲ್ಲರನ್ನೂ ಸೆಳೆಯುವಂತಹುದು. ದಿನವಿಡೀ ಹುರುಳಿಕಾಳುಗಳನ್ನು ನೆನೆಸಿಟ್ಟು ನಂತರ ನೀರು ಬಸಿದು ತೆಳ್ಳನೆಯ ಬಟ್ಟೆಯ ಮೇಲೆ ಹರಡಿ ತೇವಾಂಶ ಹೀರುವ ತನಕ ನೆರಳಲ್ಲಿ ಇಡಬೇಕು ನಂತರ ಒಂದು ಸ್ವಚ್ಚವಾದ ಬಟ್ಟೆಯಲ್ಲಿ ಹಾಕಿ ಬಿಗಿಯಾಗಿ ಕಟ್ಟಿಡಬೇಕು. ಕೆಲ ತಾಸುಗಳ ಬಳಿಕ ಮೊಳಕೆ ಬಂದಿರುವುದನ್ನು ಗಮನಿಸಬಹುದು. ಈ ರೀತಿ ಮೊಳಕೆ ಬರಿಸಿದ ಕಾಳಿನಿಂದ ರುಚಿಯಾದ ಮಸಾಲೆ ಸಾರು, ಹುಳಿ, ಉಪ್ಸಾರು, ಬಸ್ಸಾರು, ಪಲ್ಯ ಗಳನ್ನು ತಯಾರಿಸಿ ಸವಿಯಬಹುದು. ಹುರುಳಿ ಮೊಳಕೆ ಕಾಳಿನ ಸಾರು ನಮ್ಮ ಸಾಂಪ್ರದಾಯಿಕ ಅಡುಗೆಗಳಲ್ಲಿ ಅಂದಿನಿಂದಲೂ ಪ್ರತ್ಯೇಕವಾದ ಸ್ತಾನವನ್ನು ಪಡೆದಿದೆ. ಅಶ್ಟೇ ಅಲ್ಲದೆ ಹುರುಳಿ ಕಾಳಿನ ಮೊಳಕೆಕಾಳುಗಳಿಂದ ಸ್ವಾದಬರಿತವಾದ ಹಪ್ಪಳವನ್ನು ತಯಾರಿಸಬಹುದಾಗಿದೆ.

ಹುರುಳಿ ಅನಾದಿ ಕಾಲದಿಂದಲೂ ದಕ್ಶಿಣ ಬಾರತದಲ್ಲಿ ವ್ಯಾಪಕವಾಗಿ ಬೆಳೆಯುವಂತಹ ದ್ವಿದಳ ದಾನ್ಯ. ದಕ್ಶಿಣ ಏಶ್ಯಾದಲ್ಲಿ ಕ್ರುಶಿ ಪರಿಚಯವಾದ ಕಾಲದಿಂದಲೂ ಹುರುಳಿ ಅಸ್ತಿತ್ವದಲ್ಲಿದೆ. ಇದೊಂದು ಪ್ರಾಚೀನ ಬೆಳೆ. ಗ್ರಾಮೀಣ ಬಾಗಗಳಲ್ಲಿ ಇದರ ಬಳಕೆ ಸರ‍್ವೇ ಸಾಮಾನ್ಯ. ವೈಜ್ನಾನಿಕವಾಗಿ ಮ್ಯಾಕ್ರೋಟೈಲೋಮ ಯೂನಿಪ್ಲೋರಮ್ (Macrotyloma uniflorum) ಎಂದು ಕರೆಸಿಕೊಳ್ಳುವ ಹುರುಳಿಕಾಳನ್ನು, ಇಂಗ್ಲಿಶ್ ಬಾಶೆಯಲ್ಲಿ ಹಾರ‍್ಸ್ ಗ್ರಾಮ್ (Horse gram) ಎಂದು ಕರೆಯಲಾಗುತ್ತದೆ. ಹಿಂದೆ ಬ್ರಿಟೀಶರು ಹಾಗೂ ಕೆಲವು ಶ್ರೀಮಂತ ವರ‍್ಗದ ಮನೆತನದವರು ಹುರುಳಿಕಾಳುಗಳನ್ನು ಕುದುರೆಗಳಿಗೆ ತಿನ್ನಿಸುತ್ತಿದ್ದರಂತೆ. ಅಂದಿನಿಂದ ಇದು ಹಾರ‍್ಸ್ ಗ್ರಾಮ್ ಎಂದು ರೂಡಿಯಲ್ಲಿದೆ ಎಂಬ ಅಬಿಪ್ರಾಯವಿದೆ. ಜೊತೆಗೆ ಇವು ಕುದುರೆಗಳಿಗೆ ಪ್ರಿಯವಾದ ಆಹಾರ ಕೂಡ. ರೇಸ್ ಕುದುರೆಗಳಿಗೆ ಬಲ ನೀಡಲು ಈಗಲೂ ಇವು ಆಹಾರವಾಗಿವೆ. ಆಗೆಲ್ಲಾ ರೈತರು ಸಹ ದನಗಳಿಗೆ ಹುರುಳಿಕಾಳುಗಳನ್ನು ನೆನೆಸಿ ಮೇವಾಗಿ ನೀಡುತ್ತಿದ್ದರು.

ಹುರುಳಿಕಾಳುಗಳು ಅತೀ ಪೋಶಕಾಂಶಯುಕ್ತ, ಅಗ್ಗದ ಬೆಲೆಗೆ ಸಿಗುವಂತಹುದು ಹಾಗೂ ಇದರ ಕ್ರುಶಿ ಕೂಡ ಸರಳವಾದದ್ದು. ಈ ಕಾರಣಗಳಿಂದಾಗಿಯೇ ಇದು ಬಡವರ ಕಾಳು ಎಂದು ಹೆಸರುಪಡೆದಿರಬಹುದು. ಸಾಮಾನ್ಯವಾಗಿ ಮಳೆ ಹೋದ ಮೇಲೆ ಯಾವುದೇ ಬೆಳೆ ಬೆಳೆಯದಿದ್ದಾಗ ಇದನ್ನು ಬೆಳೆಯುವ ಕೆಲಸ ಆರಂಬವಾಗುತ್ತದೆ. ಬೆಳೆ ಬೆಳೆಯಲು ಅನಾನುಕೂಲವಾಗಿರುವ ದಿಣ್ಣೆ ಬೂಮಿಯಲ್ಲೂ ಹುರುಳಿಕಾಳುಗಳನ್ನು ಬೆಳೆಯುತ್ತಾರೆ. ಈ ಬೆಳೆಗೆ ನೀರಿನ ಅವಶ್ಯಕತೆ ಬಹಳ ಕಡಿಮೆ, ಸ್ವಲ್ಪ ತೇವಾಂಶವಿದ್ದರೆ ಸಾಕು. ಮಳೆ ನೀರನ್ನು ಮಾತ್ರ ಆಶ್ರಯಿಸುವ ಬೆಳೆಯಾದರೂ ಜೋರಾಗಿ ಸುರಿಯುವ ಮಳೆಗೆ ಸಸಿಗಳು ಬದುಕಲಾರವು. ಮುಂಜಾನೆ ಬೀಳುವ ಇಬ್ಬನಿಯ ಒದ್ದೆಯು ಹುರುಳಿ ಬೆಳೆಗೆ ಬಹಳ ಸೂಕ್ತವಾದುದು. ಸುಮಾರು 4 ತಿಂಗಳಿಗೆ ಪಸಲು ನೀಡುವ ಹುರುಳಿ ಗಿಡಗಳನ್ನು ಕಟಾವು ಮಾಡಿ ಚೆನ್ನಾಗಿ ಒಣಗಿಸಿದ ನಂತರ ಬಡಿದು ಕಾಳುಗಳನ್ನು ಬೇರ‍್ಪಡಿಸಿ ಬಳಸುತ್ತಾರೆ.

ನಾವು ನಿತ್ಯ ಬಳಸುವ ಹುರುಳಿ ಕಾಯಿ (ಬೀನ್ಸ್) ಗಿಡಗಳ ನಡುವೆ ಬಿನ್ನತೆ ಇದೆಯಾದರೂ ಹೆಸರು ಮಾತ್ರ ಒಂದೇ ಎನಿಸುತ್ತದೆ. ಇದು ಬಡವರ ಕಾಳು ಎಂದೆನಿಸಿದರೂ ಬೇರೆಲ್ಲಾ ಸೊಪ್ಪು, ತರಕಾರಿ, ಹಸಿಕಾಳುಗಳಿಗಿಂತ ಅತ್ಯದಿಕ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಕನಿಜಾಂಶ, ನಾರಿನಾಂಶಗಳು ಹುರುಳಿ ಕಾಳುಗಳಲ್ಲಿ ಸಮ್ರುದ್ದವಾಗಿವೆ. ಹುರುಳಿಕಾಳು ಯಾವುದೇ ವ್ಯಾದಿಗಳಿಂದ ದೂರವಿರಲು ಉತ್ತಮ ರೋಗ ನಿರೋದಕವಾಗಿದೆ. ದೇಹದ ಸದ್ರುಡತೆಯನ್ನು ನಿರಂತರವಾಗಿ ಕಾಯುವ ಗುಣ ಇದರಲ್ಲಿದೆ. ಕಿಡ್ನಿಯಲ್ಲಿರುವ ಹರಳುಗಳನ್ನು ಕರಗಿಸುವ ಅತ್ಯುತ್ತಮ ಗುಣ ಹುರುಳಿಕಾಳುಗಳಲ್ಲಿರುವುದು ತಜ್ನರಿಂದ ದ್ರುಡಪಟ್ಟಿದೆ. ಈ ಕಾಳುಗಳು ಸ್ತೂಲಕಾಯದವರಿಗೆ ತೂಕ ಇಳಿಸಲು ರಾಮಬಾಣವಾಗಿದೆ. ಕೆಮ್ಮು, ಶೀತ, ಕಾಮಾಲೆ, ಮೂತ್ರಪಿಂಡ ದ ಸೋಂಕು ಇತರೆ ಯಾವುದೇ ರೋಗಗಳಾಗಲಿ ಬೇಗ ಹರಡದಂತೆ ರಕ್ಶಣೆ ಒದಗಿಸುವ ಹುರುಳಿಕಾಳು ಪರಿಪೂರ‍್ಣ ಪೌಶ್ಟಿಕ ಆಹಾರ ಪದಾರ‍್ತ ಎಂಬ ಹೊಗಳಿಕೆಗೆ ಪಾತ್ರವಾಗಿದೆ.

(ಚಿತ್ರ ಸೆಲೆ: kn.wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. mahesha cc says:

    ಸೊಗಸಾದ ವಿವರಣೆ..👌

ಅನಿಸಿಕೆ ಬರೆಯಿರಿ: